ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಎ.ಎಸ್ ಪೂರ್ವಭಾವಿ ಪರೀಕ್ಷೆಗೆ ಹೊಸ ಪಠ್ಯ

Last Updated 25 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಪತ್ರಾಂಕಿತ ಅಧಿಕಾರಿಗಳ ನೇಮಕಾತಿ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು 2011ರಿಂದ ಬದಲಾಗಲಿವೆ.

ಈ ಸಂಬಂಧವಾಗಿ ಕರ್ನಾಟಕ ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಕಾರ್ಯಾಲಯವು ಸೂಚಿಸಿದ್ದ ಬದಲಾವಣೆಗಳಿಗೆ ಕಳೆದ ಆಗಸ್ಟ್ ಕೊನೆಯ ವಾರದಲ್ಲಿ ರಾಜ್ಯ ಸಚಿವ ಸಂಪುಟದ ಅನುಮೋದನೆ ದೊರೆತಿದೆ. 

ಪೂರ್ವಭಾವಿ ಪರೀಕ್ಷೆಯ ಪಠ್ಯಕ್ರಮದ ಕರಡನ್ನು ಸಾರ್ವಜನಿಕರ ಮಾಹಿತಿಗಾಗಿ ಮತ್ತು ಸಲಹೆ ಸೂಚನೆ ನೀಡುವ ಸಲುವಾಗಿ 2011 ಸೆಪ್ಟೆಂಬರ್ 15ರ ಕರ್ನಾಟಕ ರಾಜ್ಯಪತ್ರದ (ಸಂಪುಟ:146 - ಸಂಚಿಕೆ:37) ವಿಶೇಷ ರಾಜ್ಯಪತ್ರಗಳು ವಿಭಾಗದ ಭಾಗ ಐ್ಖಅ, ನಂ 764, 2011 ಆಗಸ್ಟ್ 29 ರ ವಿಶೇಷ ಪತ್ರಿಕೆ ಮೂಲಕ ಪ್ರಕಟಿಸಲಾಗಿದೆ.

ಇನ್ನು ಮುಂದೆ ಪೂರ್ವಭಾವಿ ಪರೀಕ್ಷೆಯ ಒಂದು ಐಚ್ಛಿಕ ವಿಷಯ ಮತ್ತು ಒಂದು ಸಾಮಾನ್ಯ ಅಧ್ಯಯನ ಪತ್ರಿಕೆಗಳ ಬದಲಾಗಿ ಬಹು ಆಯ್ಕೆ ಮಾದರಿ ವಸ್ತುನಿಷ್ಠ ಪ್ರಶ್ನೆಗಳ ಎರಡು ಕಡ್ಡಾಯ ಪತ್ರಿಕೆಗಳು ಇರುತ್ತವೆ. ಪ್ರತಿ ಪತ್ರಿಕೆಯಲ್ಲಿ 100 ಪ್ರಶ್ನೆಗಳಿದ್ದು ಪ್ರತಿ ಪ್ರಶ್ನೆಗೆ 2 ಅಂಕಗಳಿರುತ್ತವೆ. ಪರೀಕ್ಷಾ ಅವಧಿ 2 ಗಂಟೆಗಳು.

ಇತ್ತೀಚೆಗೆ ಕೇಂದ್ರ ಲೋಕಸೇವಾ ಆಯೋಗವು ಜಾರಿಗೆ ತಂದ ಪರೀಕ್ಷಾ ಸುಧಾರಣೆಯ ಹಾದಿಯಲ್ಲಿಯೇ ಕರ್ನಾಟಕ ಲೋಕಸೇವಾ ಆಯೋಗವು ಈ ಬದಲಾವಣೆಗಳನ್ನು ಅಳವಡಿಸುತ್ತಿದೆ.

ಪತ್ರಿಕೆ - 1 ರಲ್ಲಿ  ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳನ್ನು ಒಳಗೊಂಡಂತೆ ಸಾಮಾನ್ಯ ಅಧ್ಯಯನದ 40 ಪ್ರಶ್ನೆಗಳು (80 ಅಂಕಗಳು) ಹಾಗೂ ಮಾನವಿಕ ವಿಷಯಗಳನ್ನು ಕುರಿತಂತೆ 60 ಪ್ರಶ್ನೆಗಳು (120 ಅಂಕಗಳು) ಇರುತ್ತವೆ. 

ಪತ್ರಿಕೆ - 2 ರಲ್ಲಿ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಪ್ರಮುಖ ವಿಷಯಗಳ ಸಾಮಾನ್ಯ ಅಧ್ಯಯನದ 40 ಪ್ರಶ್ನೆಗಳು (80 ಅಂಕಗಳು), ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಪರಿಸರ ವಿಜ್ಞಾನಕ್ಕೆ ಸಂಬಂಧಿಸಿದ 30 ಪ್ರಶ್ನೆಗಳು (60 ಅಂಕಗಳು) ಹಾಗೂ ಸಾಮಾನ್ಯ ಬೌದ್ಧಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ 30 ಪ್ರಶ್ನೆಗಳು (60 ಅಂಕಗಳು) ಇರುತ್ತವೆ.

ಇದೇ ಆಗಸ್ಟ್ 29ರಂದು  ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ತರಬೇತಿ ಕಾರ್ಯಾಲಯವು  ಹೊರಡಿಸಿರುವ ಆದೇಶದನ್ವಯ ಕರ್ನಾಟಕ ಲೋಕಸೇವಾ ಆಯೋಗದ ಪೂರ್ವಭಾವಿ ಪರೀಕ್ಷೆ 2011ಕ್ಕೆ ನಿಗದಿಪಡಿಸಲಾಗಿರುವ ಪಠ್ಯಕ್ರಮ ಹೀಗಿದೆ:

ಪತ್ರಿಕೆ 1: ಸಾಮಾನ್ಯ ಅಧ್ಯಯನ - 200 ಅಂಕಗಳು - ಅವಧಿ 2 ಗಂಟೆ
*
 ಪ್ರಸ್ತುತ ವಿದ್ಯಮಾನ - ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಸಂಗತಿಗಳು.

* ಮಾನವಿಕ ವಿಷಯಗಳು - ಭಾರತದ ಇತಿಹಾಸ ಮತ್ತು ಭಾರತೀಯ ಸ್ವಾತಂತ್ರ್ಯ ಸಂಗ್ರಾಮ - ಸಾಮಾಜಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಜೊತೆ ಕರ್ನಾಟಕದ ಮಹತ್ವವನ್ನು ಒತ್ತಿ ಹೇಳುವಂತಹ ಸಮಗ್ರ ಅಧ್ಯಯನ.

* ಭಾರತ ಮತ್ತು ಪ್ರಪಂಚದ ಭೂಗೋಳಶಾಸ್ತ್ರ - ಭೌಗೋಳಿಕ, ಸಾಮಾಜಿಕ, ಆರ್ಥಿಕ ಅಂಶಗಳನ್ನೊಳಗೊಂಡಂತೆ  ಕರ್ನಾಟಕದ ಮಹತ್ವವನ್ನು ಒತ್ತಿ ಹೇಳುವಂತಹ ಸಮಗ್ರ ಅಧ್ಯಯನ.

* ಭಾರತದ ರಾಜಕೀಯ, ಆಡಳಿತ ಮತ್ತು ಆರ್ಥಿಕ ವ್ಯವಸ್ಥೆ - ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ - ಗ್ರಾಮೀಣ ಅಭಿವೃದ್ಧಿ, ಬಡತನ ನಿರ್ಮೂಲನೆ, ಜನಸಂಖ್ಯೆ, ಸಾಮಾಜಿಕ ಕ್ಷೇತ್ರದ ವಿವಿಧ ಯೋಜನೆಗಳು ಇತ್ಯಾದಿ

ಪತ್ರಿಕೆ 2 : ಸಾಮಾನ್ಯ ಅಧ್ಯಯನ - 200 ಅಂಕಗಳು - ಅವಧಿ 2 ಗಂಟೆ
*
ರಾಜ್ಯದ  ಪ್ರಸ್ತುತ ವಿದ್ಯಮಾನ ಮತ್ತು ರಾಜ್ಯ ಸರ್ಕಾರದ ಪ್ರಮುಖ ಕಾರ್ಯಕ್ರಮಗಳು

* ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಪರಿಸರ ವಿಜ್ಞಾನ ಕ್ಷೇತ್ರದಲ್ಲಿನ ಸಮಕಾಲೀನ ಬೆಳವಣಿಗೆಗಳು, ಆರೋಗ್ಯ, ಜೀವಿ ಪರಿಸರ, ಜೈವಿಕ ವೈವಿಧ್ಯ, ಹವಾಮಾನ ವೈಪರೀತ್ಯ ಇತ್ಯಾದಿಗಳಿಗೆ ಸಂಬಂಧಿಸಿದ ಸಂಗತಿಗಳು, ಸಮಸ್ಯೆಗಳು ಇತ್ಯಾದಿ. 

ಸಾಮಾನ್ಯ ಸುಶಿಕ್ಷಿತ ಪದವೀಧರ ಅಭ್ಯರ್ಥಿಯ ಸಾಮಾನ್ಯ ನಿರೀಕ್ಷಣೆಯ ಮಟ್ಟದಲ್ಲಿ ಕೇಳಲಾಗುವ ಈ ಪ್ರಶ್ನೆಗಳಿಗೆ ವಿಜ್ಞಾನ ವಿಷಯದ ಆಳವಾದ ಅಧ್ಯಯನ ಮಾಡಿರಲೇಬೇಕಾದ ಅಗತ್ಯವೇನಿಲ್ಲ. 

* ಸಾಮಾನ್ಯ ಬೌದ್ಧಿಕ ಸಾಮರ್ಥ್ಯ, ಗ್ರಹಣ ಸಾಮರ್ಥ್ಯ, ತಾರ್ಕಿಕ ಆಲೋಚನೆ ಮತ್ತು ತುಲನಾತ್ಮಕ ಸಾಮರ್ಥ್ಯ, ತೀರ್ಮಾನ ಕೈಗೊಳ್ಳುವಿಕೆ / ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ಸಮಸ್ಯಾ ನಿರ್ವಹಣಾ ಸಾಮರ್ಥ್ಯ,  ಸಂಖ್ಯಾ ಮೂಲಾಂಶಗಳು (ಸಂಖ್ಯೆಗಳು ಮತ್ತು ಅವುಗಳಿಗಿರುವ ಸಂಬಂಧ, ಏರಿಕೆ ಮತ್ತು ಇಳಿಕೆ ಕ್ರಮ, ಇತ್ಯಾದಿ), ದತ್ತಾಂಶ ವಿಶ್ಲೇಷಣೆ (ಚಾರ್ಟ್, ಗ್ರಾಫ್, ಟೇಬಲ್, ನಕ್ಷೆಗಳು, ರೇಖಾ ಚಿತ್ರಗಳು, ದತ್ತಾಂಶ ಇತ್ಯಾದಿ - ಹತ್ತನೇ ತರಗತಿಯ ಮಟ್ಟದ ಕಠಿಣತೆಗೆ ತಕ್ಕಂತೆ.)  
ಹೆಚ್ಚಿನ ಮಾಹಿತಿಗಾಗಿ ಈ ಜಾಲತಾಣಗಳನ್ನು ಸಂಪರ್ಕಿಸಬಹುದು:
http://gazette.kar.nic.in/15-09-2011/Part-EOG-(Page-4745-4896).pdf
http://gazette.kar.nic.in
www.kar.nic./gazette.
 
2011 ರ ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ ಪ್ರಶ್ನೆಪತ್ರಿಕೆಯ ಮಾದರಿ ಬದಲಾಗಿದೆ.  ಕರ್ನಾಟಕ ಲೋಕಸೇವಾ ಆಯೋಗವು ಅಧಿಕೃತ ಪ್ರಕಟಣೆಯ ಮೂಲಕ ಸದ್ಯದಲ್ಲೇ ಅರ್ಜಿಗಳನ್ನು ಆಹ್ವಾನಿಸುವ ಸಾಧ್ಯತೆಗಳಿವೆ.  ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳೇ, ಈಗಲೇ ಸಿದ್ಧರಾಗಿ.  ಗುಡ್‌ಲಕ್!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT