ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಫ್‌ಸಿಎಸ್‌ಸಿಗೆ ಖಾಸಗಿ ಗೋದಾಮುಗಳ ಮೋಹ!?

Last Updated 16 ಫೆಬ್ರುವರಿ 2012, 7:40 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಲ್ಲಿ ಸರ್ಕಾರಿ ಗೋದಾಮುಗಳು ಖಾಲಿ ಇವೆ. ಆದರೂ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (ಕೆಎಫ್‌ಸಿಎಸ್‌ಸಿ)ಗೆ ಖಾಸಗಿ ಗೋದಾಮುಗಳ ಮೇಲೆ ಮೋಹ. 

ಇದು ಜಿಲ್ಲೆಯ ಜಿಲ್ಲಾಧಿಕಾರಿಗೂ ಬಿಡಿಸಲಾಗದ ಒಗಟು. ಜಿಲ್ಲೆಯ ಭಾರತ ಆಹಾರ ನಿಗಮದಲ್ಲಿರುವ ಗೋದಾಮುಗಳು ಖಾಲಿ ಇದ್ದರೂ ಇಲಾಖೆ, ರೈತರಿಂದ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ ಬತ್ತವನ್ನು ಖಾಸಗಿ ಗೋದಾಮುಗಳಲ್ಲಿ ಬತ್ತ ಶೇಖರಿಸುತ್ತದೆ.

ಅಷ್ಟೇ ಅಲ್ಲ, ಅವುಗಳಿಗೆ ಬತ್ತ ಹಲ್ಲಿಂಗ್ ಮಾಡಲು ಅವಕಾಶ ಮಾಡಿಕೊಟ್ಟು, ಅದನ್ನೇ ಪಡಿತರ ವ್ಯವಸ್ಥೆಯಲ್ಲಿ ವಿತರಣೆಗೂ ವ್ಯವಸ್ಥೆ ಮಾಡುತ್ತದೆ. ಇದರ ಒಳ ಮರ್ಮ ಏನು ಎಂದು ಹಿಂದಿನ ಜಿಲ್ಲಾಧಿಕಾರಿ ವಿ. ಪೊನ್ನುರಾಜ್, ಇಲಾಖೆ ಆಯುಕ್ತರಿಗೆ 2011ರ ನವೆಂಬರ್ 18ರಂದು ಪತ್ರ ಬರೆದು ಪ್ರಶ್ನಿಸಿದ್ದಾರೆ.

ಭಾರತ ಆಹಾರ ನಿಗಮದಲ್ಲಿರುವ ತ್ಯಾವರೆಕೊಪ್ಪ ಗೋದಾಮು 15,000 ಮೆಟ್ರಿಕ್ ಟನ್, ಗಾಡಿಕೊಪ್ಪ ಗೋದಾಮು 12,630 ಮೆಟ್ರಿಕ್ ಟನ್ ಹಾಗೂ ಭದ್ರಾವತಿ ಗೋದಾಮು 5,640 ವೆುಟ್ರಿಕ್ ಟನ್ ದಾಸ್ತಾನು ಸಾಮರ್ಥ್ಯ ಹೊಂದಿವೆ.
 
ಕೆಎಫ್‌ಸಿಎಸ್‌ಸಿ ಜಿಲ್ಲಾ ವ್ಯವಸ್ಥಾಪಕರು ಇವುಗಳನ್ನು ಬಾಡಿಗೆಗೆ ಪಡೆಯುವ ಗೋಜಿಗೆ ಹೋಗಿಲ್ಲ. ಬದಲಿಗೆ ಅವೈಜ್ಞಾನಿಕ ಮತ್ತು ಸರಿಯಾದ ಸೌಲಭ್ಯಗಳಲ್ಲಿದ ಖಾಸಗಿ ಗೋದಾಮುಗಳನ್ನು ಬಾಡಿಗೆ ಪಡೆದಿದ್ದಾರೆ. ಇದರ ಹಿಂದೆ  ಅವ್ಯವಹಾರದ ವಾಸನೆ ಇದೆ ಎಂದು ಸ್ವತಃ ಆಗಿನ ಜಿಲ್ಲಾಧಿಕಾರಿಯೇ,ಕೆಎಫ್‌ಸಿಎಸ್‌ಸಿ ಆಯುಕ್ತರಿಗೆ ವರದಿ ಮಾಡಿದ್ದಾರೆ.

ಹೀಗೆ ಬಾಡಿಗೆ ಪಡೆದ ಖಾಸಗಿ ಗೋದಾಮುಗಳ ಸ್ಥಿತಿ ಅಧೋಗತಿ. ಸವಳಂಗ ರಸ್ತೆಯಲ್ಲಿರುವ ಸುರಕ್ಷಾ ಗೋದಾಮು ವೈಜ್ಞಾನಿಕವಾಗಿ ನಿರ್ಮಾಣಗೊಂಡಿಲ್ಲ ಹಾಗೂ ದಾಸ್ತಾನಿನಲ್ಲೂ ವೈಜ್ಞಾನಿಕ ಮಾನದಂಡಗಳನ್ನು ಬಳಸಿಲ್ಲ ಎಂಬುದನ್ನು ಅಲ್ಲಿಗೆ ಭೇಟಿ ನೀಡಿದ ಉಪ ವಿಭಾಗಾಧಿಕಾರಿ ಅವರ ವರದಿ ಆಧರಿಸಿಯೇ ಜಿಲ್ಲಾಧಿಕಾರಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಅಚ್ಚರಿ ಸಂಗತಿ ಎಂದರೆ ತನಿಖೆ ಸಂದರ್ಭದಲ್ಲಿ ಇಲ್ಲಿಯ ದಾಸ್ತಾನು ರಿಜಿಸ್ಟರ್‌ಗೂ ಭೌತಿಕ ಪರಿಶೀಲನೆಗೂ ಹೋಲಿಸಿದಾಗ ಭೌತಿಕ ದಾಸ್ತಾನು ಹೆಚ್ಚಿರುವುದು ಕಂಡಬಂದಿದೆ. 3,698 ಬತ್ತದ ಚೀಲ, 659 ಅಕ್ಕಿಯ ಚೀಲಗಳು ಹೆಚ್ಚು ಇದ್ದುದ್ದು ಪರಿಶೀಲನೆಯಿಂದ ಕಂಡುಬಂದಿದೆ.

ಈ ಹೆಚ್ಚುವರಿ ಬತ್ತದ ಮತ್ತು ಅಕ್ಕಿಯ ಚೀಲಗಳು ಎಲ್ಲಿಂದ ಬಂತು ಎಂಬುದಕ್ಕೆ ಸುರಕ್ಷಾ ಗೋದಾಮು ಮಾಲೀಕರಲ್ಲಿ ಉತ್ತರವೇ ಇಲ್ಲ.  ಈ ಎಲ್ಲಾ ಕಾರಣಗಳಿಂದಾಗಿ ಬೆಂಬಲ ಬೆಲೆ ಅಡಿ ಬತ್ತ ಖರೀದಿ ಪ್ರಕ್ರಿಯೆಯಲ್ಲೂ ಅವ್ಯವಹಾರ ನಡೆದಿದೆ ಎಂಬುದನ್ನು ಜಿಲ್ಲಾಧಿಕಾರಿ ಗುರುತಿಸಿದ್ದಾರೆ.

ಈ ಸಂಬಂಧ ಶಿವಮೊಗ್ಗ ಕೆಎಫ್‌ಸಿಎಸ್‌ಸಿ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದಾಗ, ತಾಲ್ಲೂಕಿನ ಎಲ್ಲಾ ಕೇಂದ್ರಗಳಲ್ಲಿ 2011ರ ಮಾರ್ಚ್‌ನಲ್ಲಿ ಮತ್ತು ಸೊರಬ ಖರೀದಿ ಕೇಂದ್ರದಲ್ಲಿ ಜುಲೈನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಬತ್ತ ಖರೀದಿ ಮಾಡಿರುವುದು ಕಂಡುಬಂದಿದೆ.

ಈ ಅವಧಿಯಲ್ಲಿ ವ್ಯಾಪಾರಸ್ಥರಿಂದಲೂ ಬತ್ತ ಖರೀದಿ ಮಾಡಿರುವ ಸಾಧ್ಯತೆ ಇದೆ. ಅಲ್ಲದೇ ಚೆಕ್ ನೀಡಿದ ರೈತರ ಹೆಸರು ಇಲ್ಲದೇ ಇರುವುದು ಹಾಗೂ ರೈತರ ಹೆಸರಿನ ಬದಲಿಗೆ ಬ್ಯಾಂಕಿನ ಹೆಸರನ್ನು ಬರೆದಿರುವುದು ಹಾಗೂ ಭೂಪರಿರ್ವನೆಯಾಗಿರುವ ಪಹಣಿಯಲ್ಲಿ ಕೂಪನ್ ವಿತರಿಸಿರುವುದು, ಅರಣ್ಯ ಭೂಮಿಯ ಪಹಣಿ ಪಡೆದು ಅದಕ್ಕೆ ಬತ್ತವನ್ನು ಖರೀದಿ ಮಾಡಿರುವುದು ತನಿಖೆ ಸಂದರ್ಭದಲ್ಲಿ ಕಂಡುಬಂದಿದೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಈ ಪ್ರಕರಣದ ಉನ್ನತ ತನಿಖೆ ಅಗತ್ಯ ಎಂದು ಅಭಿಪ್ರಾಯಪಟ್ಟ ಪೊನ್ನುರಾಜ್, ಕೆಎಫ್‌ಸಿಎಸ್‌ಸಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಅವರೀಗ  ವರ್ಗಾವಣೆಗೊಂಡರೂ ಆಯುಕ್ತರಿಂದ ಇನ್ನೂ ಯಾವುದೇ ಉತ್ತರ ಬಂದಿಲ್ಲ.           

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT