ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಐಎಡಿಬಿ ನೆಪ: ದಲ್ಲಾಳಿ ಕಣ್ಣು

Last Updated 7 ಸೆಪ್ಟೆಂಬರ್ 2011, 11:20 IST
ಅಕ್ಷರ ಗಾತ್ರ

ಬಂಟ್ವಾಳ: ತಾಲ್ಲೂಕಿನ ಪಜೀರು, ಕೈರಂಗಳ, ಬಾಳೆಪುಣಿ, ಕರ್ನಾಡು, ಇರಾ ಮೊದಲಾದ ಗ್ರಾಮಗಳಲ್ಲಿ ರೈತರ ಜಮೀನುಗಳನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಹೆಸರಲ್ಲಿ ಖರೀದಿಸಿ ಬಂಡವಾಳಶಾಹಿಗಳ ಕೈಗೆ ನೀಡುವ ವ್ಯವಸ್ಥಿತ ಕೆಲಸ ಕಳೆದ ಕೆಲವು ತಿಂಗಳಿಂದೀಚೆಗೆ ನಡೆಯುತ್ತಿದ್ದು, ರೈತರ ಭೂಮಿ ಬಿಡಿಗಾಸಿಗೆ ಬಿಕರಿಯಾಗುವ ಆತಂಕ ಮನೆ ಮಾಡಿದೆ.

ಮುಡಿಪು ಸಮೀಪದ ಇನ್‌ಫೋಸಿಸ್ ಕಂಪೆನಿಯ ಕ್ಯಾಂಪಸ್ ಸಮೀಪದಲ್ಲೇ ಈ ಜಮೀನು ಇದ್ದು, ಮುಂದಿನ ದಿನಗಳಲ್ಲಿ ಭಾರಿ ಬೇಡಿಕೆಯ ತಾಣಗಳಾಗಿಯೂ ಬದಲಾಗಲಿದೆ. ಹೀಗಾಗಿ ಕೆಐಎಡಿಬಿ ಮತ್ತು ಕೆಲವು ಮಧ್ಯವರ್ತಿಗಳು ರೈತರಿಗೆ ಬಿಡಿಗಾಸು ನೀಡಿ ತಾವು ಭಾರಿ ಪ್ರಮಾಣದಲ್ಲಿ ಲಾಭ ಮಾಡಿಕೊಳ್ಳುವ ಹುನ್ನಾರದಲ್ಲಿದ್ದಾರೆ.

ಪಜೀರು, ಕೈರಂಗಳ, ಬಾಳೆಪುಣಿ ಗ್ರಾಮಗಳಲ್ಲಿ ಈಗಾಗಲೇ ಸುಮಾರು 300 ಎಕರೆಗೂ ಅಧಿಕ ಭೂಸ್ವಾಧೀನ ನಡೆದಿದೆ. ಕುರ್ನಾಡು, ಇರಾ ಗ್ರಾಮಗಳಲ್ಲಿ ಸಾವಿರಾರು ಎಕರೆ ಜಮೀನಿನ ಸ್ವಾಧೀನಕ್ಕೆ ಪ್ರಯತ್ನ ನಡೆದಿದೆ. ಕಳೆದ ವರ್ಷದಿಂದಲೂ ತಾಲ್ಲೂಕು ಪಂಚಾಯಿತಿ ಸಭೆಗಳಲ್ಲಿ ಭೂಸ್ವಾಧೀನ ವಿಚಾರ ಬಿಸಿಬಿಸಿ ಚರ್ಚೆಗೂ ಒಳಗಾಗಿದೆ. ಆದರೂ ರೈತರಿಂದ ಭೂಮಿ ಖರೀದಿಸುವ ದಂಧೆ ಮಾತ್ರ ವ್ಯವಸ್ಥಿತವಾಗಿ ಮುಂದುವರಿದಿದೆ.

ಈ ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿರುವುದು ನಿಜ. ಆದರೆ ಎಷ್ಟು ಜಮೀನಿನ ಸ್ವಾಧೀನ ನಡೆದಿದೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ ಎಂದು ಪಾಣೆಮಂಗಳೂರು ನಾಡ ಕಚೇರಿ ಉಪ ತಹಸೀಲ್ದಾರ್ ಸಾಧು ಅವರು `ಪ್ರಜಾವಾಣಿ~ಗೆ ಮಂಗಳವಾರ ಸಂಜೆ ತಿಳಿಸಿದರು.

ಕೆಐಎಡಿಬಿ, ದಲ್ಲಾಳಿಗಳು ಸೇರಿ ಸ್ಥಳೀಯ ರೈತರಿಗೆ ಜಮೀನು ವಂಚಿಸುತ್ತಿದ್ದಾರೆ. ರೈತರ ಫಲವತ್ತಾದ ಕೃಷಿ ಜಮೀನನ್ನು ಕಡಿಮೆ ಬೆಲೆ ಖರೀದಿಸಿ ಹೆಚ್ಚಿನ ಬೆಲೆಗೆ ಬಂಡವಾಳಶಾಹಿಗಳಿಗೆ ಮಾರಾಟ ಮಾಡುತ್ತಿದ್ದಾರೆ.

ಈಗಾಗಲೇ ರೈತರು ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯದಲ್ಲಿ ಭೂಮಿ ಕಳೆದುಕೊಂಡು ಕೊರಗಬೇಕಾದೀತು ಎಂದು ಭ್ರಷ್ಟಾಚಾರ ವಿರೋಧಿ ವೇದಿಕೆಯ ಸಂಚಾಲಕ ಭಾನುಚಂದ್ರ ಕೃಷ್ಣಾಪುರ ಪ್ರಜಾವಾಣಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT