ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

ಯೋಜನೆಗಳ ಕಡೆಗಣನೆ ಆರೋಪ:
Last Updated 27 ಡಿಸೆಂಬರ್ 2012, 8:59 IST
ಅಕ್ಷರ ಗಾತ್ರ

ಬಳ್ಳಾರಿ: ಬಿ.ಎಸ್. ಯಡಿಯೂರಪ್ಪ ಅವರ ಅಧಿಕಾರದ ಅವಧಿಯಲ್ಲಿ ಆರಂಭವಾಗಿರುವ ಯೋಜನೆಗಳನ್ನು ಸ್ಥಗಿತಗೊಸಲಾಗಿದೆ ಎಂದು ಆರೋಪಿಸಿ   ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ಕಾರ್ಯಕರ್ತರು, ವಿವಿಧ ವರ್ಗಗಳ ಜನತೆಗೆ ಸಮಸ್ಯೆಗಳಾಗುತ್ತಿವೆ ಎಂದು ರಾಜ್ಯಪಾಲರ ಗಮನ ಸೆಳೆಯುವ ಮನವಿಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಲ್ಲಿಸಿದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ರೈತರ, ಬಡಜನರ,  ದುರ್ಬಲ ವರ್ಗದವರ ಹಾಗೂ ಮಹಿಳೆಯರ ಏಳ್ಗೆಗಾಗಿ ಅನೇಕ ಯೋಜನೆಗಳನ್ನು ಆರಂಭಿಸಿದ್ದರು. ಆದರೆ, ಇದೀಗ ಸರ್ಕಾರ  ಆ ಯೋಜನೆಗಳನ್ನು ಸ್ಥಗಿತಗೊಳಿಸಿದೆ ಎಂದು ಪಕ್ಷದ ಜಿಲ್ಲಾ ಮುಖಂಡ, ಮಾಜಿ ಶಾಸಕ ಎಚ್.ಡಿ. ಬಸವರಾಜು ಆರೋಪಿಸಿದರು.

ಯಡಿಯೂರಪ್ಪ ಅವರು ಮಹಿಳೆಯ ಸಬಲೀಕರಣಕ್ಕಾಗಿ ಆರಂಭಿಸಿದ ಭಾಗ್ಯಲಕ್ಷ್ಮಿ ಯೋಜನೆ ಅಡಿ  2011ರ ಸೆಪ್ಟೆಂಬರ್‌ನಿಂದ ಫಲಾನುಭವಿಗಳಿಗೆ ಬಾಂಡ್ ವಿತರಣೆ ಮಾಡಿಲ್ಲ. ಸಂಧ್ಯಾಸುರಕ್ಷಾ, ವಿಧವಾ ಹಾಗೂ ಅಂಗವಿಕಲರ ಮಾಸಾಶನವನ್ನು 2012ರ ಮಾರ್ಚ್‌ನಿಂದ ವಿತರಣೆ ಮಾಡಿಲ್ಲ. ಬಜೆಟ್‌ನಲ್ಲಿ ಘೋಷಿಸಿದ್ದ ಬಡ್ಡಿರಹಿತ  ಸಾಲ ವಿತರಣೆ ಆಗಿಲ್ಲ. ಪ್ರತಿ ಲೀಟರ್ ಹಾಲಿಗೆ ರೂ 2ರ ಪ್ರೋತ್ಸಾಹಧನವನ್ನು 2012ರ ಅಕ್ಟೋಬರ್‌ನಿಂದ ಹಾಲು ಒಕ್ಕೂಟಗಳಿಗೆ ಹಂಚಿಕೆ ಮಾಡಿಲ್ಲ ಎಂದು ಅವರು ದೂರಿದರು.

ಈ ಎಲ್ಲ ಯೋಜನೆಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡದ್ದರಿಂದ ಲಕ್ಷಾಂತರ ಜನ ಸಮಸ್ಯೆ ಎದುರಿಸುವಂತಾಗಿದೆ. ವಿಧವೆಯರು, ಅಂಗವಿಕಲರು ಮತ್ತು ವೃದ್ಧರಿಗೆ ಸೂಕ್ತ ವೇಳೆಯಲ್ಲಿ ಮಾಸಾಶನ ದೊರೆಯದೆ ಪರದಾಡುವಂತಾಗಿದೆ. ಹಾಲು ಉತ್ಪಾದಕರಿಗೆ ಆರ್ಥಿಕ ನೆರವು ದೊರೆಯದಿರುವುದು ಸರ್ಕಾರದ ವೈಫಲ್ಯ  ಎಂದು ಅವರು ಹೇಳಿದರು.

ಸರ್ಕಾರ ಈ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಸ್ವರೂಪದ ಹೋರಾಟ ಅನಿವಾರ್ಯ ಎಂದು ಅವರು ಎಚ್ಚರಿಸಿದರು. ಪಕ್ಷದ ಮುಖಂಡರಾದ ಹಂಪೇರು ಆಲೇಶ್ವರಗೌಡ, ಬಸಯ್ಯ ಸ್ವಾಮಿ, ರಾಮದಾಸ್, ಪಾರ್ಥಸಾರಥಿ, ರಾಮನಗೌಡ, ಕಮಲಾ ಬಸವರಾಜ್, ಜಿ.ಪಿ. ರಾವ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT