ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜೆಪಿ ಸಮಾವೇಶ: ಬಿಜೆಪಿ ಶಾಸಕರಲ್ಲಿ `ವಿಭಿನ್ನ ಸ್ವರ'

Last Updated 5 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಸುವರ್ಣ ವಿಧಾನಸೌಧ (ಬೆಳಗಾವಿ): ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೇ 9ರಂದು ಹಾವೇರಿಯಲ್ಲಿ ನಡೆಸಲು ಉದ್ದೇಶಿಸಿರುವ ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಸಮಾವೇಶ ಆಡಳಿತಾರೂಢ ಬಿಜೆಪಿ ಶಾಸಕರಲ್ಲಿ `ಭಿನ್ನ ಸ್ವರ'ಗಳನ್ನು ಹೊರಡಿಸಿದೆ.

ಯಡಿಯೂರಪ್ಪ ಪರ ಗುರುತಿಸಿಕೊಂಡಿರುವ ಹರಿಹರ ಶಾಸಕ ಬಿ.ಪಿ.ಹರೀಶ್, ತಾವು ಹಾವೇರಿ ಸಮಾವೇಶಕ್ಕೆ ಹೋಗುವುದು ಖಚಿತ ಎಂದು ಹೇಳಿದ್ದಾರೆ. `ಯಾರು ಬೇಡ ಅಂದರೂ ನಾವು ಕೇಳುವುದಿಲ್ಲ. ಯಡಿಯೂರಪ್ಪ ಅವರ ಹೆಸರು ಹೇಳಿಕೊಂಡು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಸೇರಿದಂತೆ ಪಕ್ಷದ ಎಲ್ಲರೂ ಅವರ ನಾಮಬಲದಿಂದಲೇ ಗೆದ್ದಿರುವುದು.  ಅಭಿಮಾನ ಇರುವವರು ಸಮಾವೇಶಕ್ಕೆ ಹೋದರೆ ತಪ್ಪೇನೂ ಇಲ್ಲ' ಎಂದರು.

ಸುವರ್ಣ ವಿಧಾನಸೌಧದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಅವರು, ಸಮಾವೇಶಕ್ಕೆ ಹೋಗುವವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಬಿಜೆಪಿ ಹೇಳುತ್ತಿದೆ. ಆದರೆ, ಬಿಜೆಪಿಗೆ ಆ ನೈತಿಕ ಹಕ್ಕು ಇಲ್ಲ. ಒಂದು ವೇಳೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎನ್ನುವುದಿದ್ದರೆ ವಿಧಾನಸಭೆಯನ್ನು ವಿಸರ್ಜಿಸಿ, ಶಿಸ್ತು ಕ್ರಮ ತೆಗೆದುಕೊಳ್ಳಲಿ ಎಂದು ಸವಾಲು ಹಾಕಿದರು.

`ಹಾವೇರಿಯಲ್ಲಿ ಐತಿಹಾಸಿಕ ಸಮಾವೇಶ ನಡೆಯಲಿದೆ. ಅದಕ್ಕೆ ಸಾಕ್ಷಿಯಾಗಲು ನಾವೆಲ್ಲ ಹೋಗುತ್ತೇವೆ. ಸಮಾವೇಶಕ್ಕೆ ಶಾಸಕರು ಬರುವುದು ಬೇಡ ಎಂದು ಯಡಿಯೂರಪ್ಪ ಅವರೇ ಹೇಳುತ್ತಿದ್ದಾರೆ. ಅವರ ಮಾತು ಕೇಳುವ ಸ್ಥಿತಿಯಲ್ಲಿ ನಾವಿಲ್ಲ' ಎಂದರು.

`ಸರ್ಕಾರ ಉರುಳಿಸುವ ಇಚ್ಛೆ ನಮಗೆ ಇಲ್ಲ. ಶಾಸಕರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವ ಮೂಲಕ ಇಕ್ಕಟ್ಟಿಗೆ ಸಿಲುಕಿಕೊಂಡರೆ ಮುಂದಿನ ಪರಿಣಾಮಗಳಿಗೆ ಅವರೇ ಹೊಣೆಗಾರರಾಗಬೇಕಾಗುತ್ತದೆ' ಎಂದು  ಎಚ್ಚರಿಕೆ ನೀಡಿದರು.

ಯಾರೂ ಹೋಗಲ್ಲ: `ಹಾವೇರಿ ಸಮಾವೇಶದಲ್ಲಿ 50ರಿಂದ 60 ಮಂದಿ ಶಾಸಕರು ಭಾಗವಹಿಸುತ್ತಾರೆ ಎನ್ನುವುದು ಬರಿ ಭ್ರಮೆ' ಎಂದು ಬಿಜೆಪಿ ಶಾಸಕ ಬೇಳೂರು ಗೋಪಾಲಕೃಷ್ಣ ಬುಧವಾರ ಇಲ್ಲಿ ಲೇವಡಿ ಮಾಡಿದರು.

ವಿಧಾನಸಭೆಯ ಮೊಗಸಾಲೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, `ಸಚಿವರು, ಶಾಸಕರು ಸಮಾವೇಶಕ್ಕೆ ಹೋಗುವುದಿದ್ದರೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಟ್ಟು ಹೋಗಲಿ' ಎಂದು ಹೇಳಿದರು.

ಯಡಿಯೂರಪ್ಪ ಅವರಿಂದ ಸರ್ಕಾರ ಪತನವಾಗುತ್ತದೆ ಎನ್ನುವುದು ಕೂಡ ಸುಳ್ಳು. ಅವರು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದು, ಅದಕ್ಕೆ ಅವಕಾಶ ನೀಡಬಾರದು ಎಂದರು.

ಬಿಜೆಪಿಗೆ ಭವಿಷ್ಯ ಇಲ್ಲ: ಶ್ರೀರಾಮುಲು:
ಬಿಜೆಪಿಗೆ ರಾಜ್ಯದಲ್ಲಿ ಭವಿಷ್ಯ ಇಲ್ಲ ಎಂದು ಬಿಎಸ್‌ಆರ್ ಕಾಂಗ್ರೆಸ್ ಅಧ್ಯಕ್ಷ ಬಿ.ಶ್ರೀರಾಮುಲು ಹೇಳಿದರು.

ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಇದೇ ಮೊದಲು. ಕೊನೆ ಕೂಡ ಆಗಲಿದೆ. ಜನರ ನಿರೀಕ್ಷೆಯನ್ನು ಹುಸಿಗೊಳಿಸಿದ ಕಾರಣ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ಇಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಯಾವ ಪಕ್ಷದ ಜತೆಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದರು.

ಸ್ಪರ್ಧೆ ಖಚಿತ:  ಹೈದರಾಬಾದ್ ಜೈಲಿನಲ್ಲಿರುವ ಜಿ.ಜನಾರ್ದನ ರೆಡ್ಡಿ ಅವರು ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಆರ್ ಕಾಂಗ್ರೆಸ್‌ನಿಂದ ಸ್ಪರ್ಧಿಸುವುದು ಖಚಿತ.

ಯಾವ ಕ್ಷೇತ್ರ ಎಂಬುದು ಇನ್ನೂ ತೀರ್ಮಾನ ಆಗಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT