ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜೆಪಿಯ ಇಬ್ಬರು ಶಾಸಕರು ಬಿಜೆಪಿ ಸೇರಲ್ಲ?

Last Updated 6 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸುವರ್ಣಸೌಧ (ಬೆಳಗಾವಿ): ಕರ್ನಾಟಕ ಜನತಾ ಪಕ್ಷದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ಸೇರುವುದು ಬಹುತೇಕ ಖಚಿತವಾಗುತ್ತಿದ್ದಂತೆ ಕೆಜೆಪಿ ಶಾಸಕರಲ್ಲಿ ತಳಮಳ ಉಂಟಾಗಿದೆ. ಕೆಜೆಪಿಯ ೬ ಶಾಸಕರ ಪೈಕಿ ಬಿ.ಆರ್.ಪಾಟೀಲ (ಆಳಂದ) ಮತ್ತು ಗುರುಪಾದಪ್ಪ ನಾಗಮಾರಪಳ್ಳಿ (ಬೀದರ್‌) ಅವರು ತಮ್ಮ ವೈಯಕ್ತಿಕ ಕಾರಣಗಳಿಗಾಗಿ ಬಿಜೆಪಿಯತ್ತ ಸಾಗುವುದಿಲ್ಲ.

ಕೆಜೆಪಿಯ ನಾಲ್ಕು ಶಾಸಕರು ಬಿಜೆಪಿ ಸೇರಿದರೆ ಪಕ್ಷಾಂತರ ನಿಷೇಧ ಕಾಯ್ದೆ ಪ್ರಕಾರ ಅವರ ಸದಸ್ಯತ್ವ ರದ್ದಾಗುವುದಿಲ್ಲ. ಆದರೆ ಬಿಜೆಪಿ ಸೇರಿದರೆ ಯಡಿಯೂರಪ್ಪ ಅವರಿಗೆ ಅಲ್ಲಿ ಯಾವುದೇ ಸಂವಿಧಾನಾತ್ಮಕ ಸ್ಥಾನವನ್ನು ಪಡೆಯಲು ಈ ಕಾಯ್ದೆ ಅವಕಾಶ ನೀಡುತ್ತದೆಯೇ ಇಲ್ಲವೇ ಎನ್ನುವುದನ್ನು ಈಗ ಪರಿಶೀಲಿಸಲಾಗುತ್ತಿದೆ. ಅದೇ ರೀತಿ ಬಿಜೆಪಿ ಜೊತೆ ಹೋಗದೇ ಇರುವ ಇಬ್ಬರು ಶಾಸಕರು ವಿಧಾನಸಭೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳಾಗಿರುತ್ತಾರೋ ಅಥವಾ ಯಾವುದಾದರೂ ಪಕ್ಷದ ಸಹ ಸದಸ್ಯರಾಗಿರಬೇಕೋ ಎನ್ನುವುದರ ಬಗ್ಗೆಯೂ ಕಾನೂನು ತಜ್ಞರ ಜೊತೆ ಪರಿಶೀಲನೆ ನಡೆಸಬೇಕಾಗಿದೆ ಎಂದು ಕೆಜೆಪಿ ಶಾಸಕರೊಬ್ಬರು ಹೇಳಿದರು.

ಬಿ.ಆರ್.ಪಾಟೀಲ ಮತ್ತು ನಾಗಮಾರಪಳ್ಳಿ ಅವರಿಗೆ ಬಿಜೆಪಿ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ಆದರೆ ಈಗ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿಯಾಗಿರುವುದರಿಂದ ಬಿಜೆಪಿ ಸೇರಿದರೆ ತಮ್ಮ ಕ್ಷೇತ್ರದಲ್ಲಿರುವ ಮುಸ್ಲಿಮರು ವಿರೋಧಿಸ­ಬಹುದು ಎಂಬ ಆತಂಕ ಕಾಡುತ್ತಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಎರಡನ್ನೂ ವಿರೋಧಿಸುತ್ತಲೇ ಬಂದ ಬಿ.ಆರ್.ಪಾಟೀಲರು ಅನಿವಾರ್ಯ ಕಾರಣಗಳಿಂದ ಕೆಜೆಪಿಗೆ ಸೇರ್ಪಡೆಯಾಗಿದ್ದರು. ಗುರು ಪಾಟೀಲ (ಶಹಾಪುರ), ಯು.ಬಿ.ಬಣಕಾರ (ಹಿರೇಕೆ­ರೂರು), ವಿಶ್ವನಾಥ ಪಾಟೀಲ (ಬೈಲಹೊಂಗಲ) ಅವರು ಯಡಿಯೂರಪ್ಪರನ್ನು ಹಿಂಬಾಲಿಸುವುದರಲ್ಲಿ ಅನುಮಾನವಿಲ್ಲ. ಈಗಾಗಲೇ ಅವರು ಅದನ್ನು ಸ್ಪಷ್ಟಪಡಿಸಿದ್ದಾರೆ.

ಡಿ.೯ರಂದು ಬೆಂಗಳೂರಿನಲ್ಲಿ ಕೆಜೆಪಿ ಕಾರ್ಯಕಾರಣಿ ಸಭೆ ನಡೆಯಲಿದ್ದು ಅಲ್ಲಿ ಯಡಿಯೂರಪ್ಪ ಅವರು ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನಗೊಳಿಸುವ ನಿರ್ಧಾರ ಪ್ರಕಟಿಸುವಸಾಧ್ಯತೆ ಇದೆ. ಲೋಕಸಭಾ ಚುನಾವಣೆ ಬಗ್ಗೆ ಚಿಂತಿತವಾಗಿ­ರುವ ಬಿಜೆಪಿ, ಯಡಿಯೂರಪ್ಪ ವಾಪಸು ಬರುವುದನ್ನು ಕಾಯು­ತ್ತಿದೆ. ಅದಕ್ಕಾಗಿ ಹೆಚ್ಚಿನ ಷರತ್ತು ವಿಧಿಸುವ ಸಾಧ್ಯತೆಗಳಿಲ್ಲ.

ಪಕ್ಷಾಂತರ ನಿಷೇಧ ಕಾಯ್ದೆ ಪ್ರಕಾರ ಬಿಜೆಪಿಯಲ್ಲಿ ಯಡಿ­ಯೂರಪ್ಪ ಅವರಿಗೆ ವಿಧಾನಸಭೆಯಲ್ಲಿ ಯಾವುದೇ ಪ್ರಮುಖ ಸ್ಥಾನ ನೀಡಲು ತೊಂದರೆಯಾಗುತ್ತದೆ ಎಂದಾದರೆ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಗೆದ್ದು ಬರುವ ಸಾಹಸವನ್ನೂ ಮಾಡಬಹುದು ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT