ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜೆಪಿಯಿಂದ ಅಲ್ಪಸಂಖ್ಯಾತರ ಭವಿಷ್ಯ ಉಜ್ವಲ

Last Updated 5 ಡಿಸೆಂಬರ್ 2012, 5:35 IST
ಅಕ್ಷರ ಗಾತ್ರ

ಹರಿಹರ:  ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕೆಜೆಪಿ ಪಕ್ಷದಿಂದ ಅಲ್ಪ ಸಂಖ್ಯಾತರ ಭವಿಷ್ಯ ಉಜ್ವಲವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಡಾ.ಮುಮ್ತಾಜ್ ಅಲಿಖಾನ್ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ ಮುಸ್ಲಿಂ ಬಂಧುಗಳಿಗೆ ಬಿಜೆಪಿ ಕೋಮುವಾದಿ ಎಂಬ ಹೆದರಿಕೆ ಇತ್ತು. ಯಡಿಯೂರಪ್ಪ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಮುಸ್ಲಿಂ ಸಮಾಜಕ್ಕೆ ಅತಿ ಹೆಚ್ಚು ಅನುದಾನ ನೀಡುವ ಮೂಲಕ ಭಯ ಹೋಗಲಾಡಿಸಿದರು. ಶಾದಿ ಮಹಲ್, ಸಮುದಾಯ ಭವನ, ದರ್ಗಾ, ಮಸೀದಿಗಳ ಅಭಿವೃದ್ಧಿಗಾಗಿರೂ.. 400 ಕೋಟಿ, ಹಜ್ ಯಾತ್ರಿಗಳಿಗಾಗಿ `ಹಜ್ ಘರ್' ನಿರ್ಮಾಣಕ್ಕಾಗಿರೂ.  60 ಕೋಟಿ ಅನುದಾನ ನೀಡಿದ್ದಾರೆ. ಉರ್ದು ಅಕಾಡೆಮಿಗೆ ಪ್ರತ್ಯೇಕ ಸ್ಥಾನ ದೊರೆತಿದೆ. ಕ್ರೈಸ್ತ, ಬೌದ್ಧ, ಜೈನ ಮೊದಲಾದ ಅಲ್ಪಸಂಖ್ಯಾತ ಧರ್ಮಗಳಿಗೂ ಸಾಕಷ್ಟು ಅನುದಾನ ನೀಡಿದ್ದಾರೆ ಎಂದರು.

ಗಡ್ಕರಿಗೆ ಒಂದು ನ್ಯಾಯ...
ಈ ವಿಷಯಗಳು ಯಡಿಯೂರಪ್ಪ ಅವರಿಗೆ ಅಲ್ಪ ಸಂಖ್ಯಾತರ ಬಗ್ಗೆ ಇರುವ ಅಪಾರ ಕಾಳಜಿಗೆ ಸಾಕ್ಷಿಯಾಗಿದೆ ಎಂದು ನಗರ ಬಿ.ಕೆ. ಸೈಯದ್ ರೆಹಮಾನ್ ಜನಸಂಪರ್ಕ ಕಚೇರಿಯಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

ಕೇವಲ ಆರೋಪಗಳ ಕಾರಣ, ಪಕ್ಷದ ವರಿಷ್ಠರ ಮಾತಿಗೆ  ಕಟ್ಟು ಬಿದ್ದು  ಅವರು ಮುಖ್ಯಮಂತ್ರಿ  ಸ್ಥಾನಕ್ಕೆ  ರಾಜೀನಾಮೆ  ನೀಡಿದರು. ಬಿಜೆಪಿ  ರಾಷ್ಟ್ರೀಯ ಅಧ್ಯಕ್ಷ  ನಿತಿನ್ ಗಡ್ಗರಿ  ವಿರುದ್ಧರೂ. 400 ಕೋಟಿ ಹಗರಣದ ಆರೋಪವಿದ್ದರೂ, ಅವರು ರಾಜಿನಾಮೆ ನೀಡಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಮುಸ್ಲಿಂ ಮತದಾರರನ್ನು ಮತಬ್ಯಾಂಕ್ ಆಗಿ ಬಳಸಿಕೊಂಡಿದ್ದಾರೆ. ಕೆಜೆಪಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಬದ್ಧವಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿಯಿಂದ 150 ಸದಸ್ಯರು ಚುನಾಯಿತರಾಗುತ್ತಾರೆ. ಹಾವೇರಿಯಲ್ಲಿ ನಡೆಯುವ ಡಿ. 9ರ ಕೆಜೆಪಿ ಸಮಾವೇಶ ಭವಿಷ್ಯದ ಚುನಾವಣೆಗೆ ದಿಕ್ಸೂಚಿ ಆಗಲಿದೆ ಎಂದರು.

ನಗರಸಭೆ ಸದಸ್ಯ ಸೈಯದ್ ರೆಹಮಾನ್ ಮಾತನಾಡಿ, ಡಿ. 9ರ ಕೆಜೆಪಿ ಸಮಾವೇಶದಲ್ಲಿ ತಾಲ್ಲೂಕಿನಿಂದ 25ಸಾವಿರ ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ನಗರಸಭೆ ಸದಸ್ಯ ಕೊಂಡಜ್ಜಿ ವೀರಣ್ಣ, ವಕ್ಫ್ ಬೋರ್ಡ್ ಜಿಲ್ಲಾ ಘಟಕದ ಅಧ್ಯಕ್ಷ ಮಜೀದ್ ಖಾನ್, ಸೈಯದ್ ಜಾಕೀರ ಹಾಗೂ 100ಕ್ಕೂ ಹೆಚ್ಚು ಅಭಿಮಾನಿಗಳು ಉಪಸ್ಥಿತರಿದ್ದರು.

ಪಠ್ಯೇತರ ಚಟುವಟಿಕೆ ಅಗತ್ಯ
ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರಹೊಮ್ಮಿಸಲು ಪಠ್ಯೇತರ ಚಟುವಟಿಕೆಗಳು ಅಗತ್ಯ ಎಂದು ತಹಶೀಲ್ದಾರ್ ಜಿ. ನಜ್ಮಾ ಅಭಿಪ್ರಾಯಪಟ್ಟರು.

ತಾಲ್ಲೂಕು ಕಸಾಪ ವತಿಯಿಂದ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ `ಚಿತ್ರಕಲಾ ಸ್ಪರ್ಧೆ' ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಚಿತ್ರಕಲೆಯಿಂದ ವಿದ್ಯಾರ್ಥಿಗಳಲ್ಲಿ ಕಲ್ಪನಾಶಕ್ತಿ ಹಾಗೂ ಏಕಾಗ್ರತೆ ದೃಢಗೊಳ್ಳುತ್ತದೆ. ಚಿತ್ರ ಬಿಡಿಸುವುದು ಸೃಜನಶೀಲತೆ, ಜ್ಞಾಪಕಶಕ್ತಿಯನ್ನು ವೃದ್ಧಿಗೊಳಿಸುತ್ತದೆ. ಕೇವಲ ಪಠ್ಯಗಳಿಂದ ಎಲ್ಲಾ ಜ್ಞಾನ ಸಿಗುತ್ತದೆ ಎಂಬುದು ಕಲ್ಪನೆ ಮಾತ್ರ. ಚಿತ್ರಕಲೆಗೆ ಭಾಷೆಯಗೊಡವೆ ಇಲ್ಲ. ಚಿತ್ರ ವೀಕ್ಷಕರು ಅನಕ್ಷರಸ್ಥರು ಅಥವಾ ಅನ್ಯಭಾಷಿಗರಾದರೂ, ಚಿತ್ರದ ಅಂತರಾಳ ಹಾಗೂ ಭಾವನೆ ಅರ್ಥವಾಗುತ್ತವೆ. ಸಾವಿರ ಶಬ್ದಗಳಲ್ಲೂ ವಿವರಿಸಲಾಗದ ಒಂದು ಘಟನೆಯನ್ನು ಕೇವಲ ಒಂದು ಚಿತ್ರ ವಿವರಿಸುತ್ತದೆ. ಚಿತ್ರಕಲೆಗೆ ತನ್ನದೇ ಆದ  ಗೌರವವಿದೆ. ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಂಡಿರುವ ಕಸಾಪದ ಕಾರ್ಯ ಶ್ಲಾಘನಾರ್ಹ ಎಂದು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ತಾಲ್ಲೂಕು ಪಂಚಾಯ್ತಿ ಇಒ ಡಾ.ಎಸ್. ರಂಗಸ್ವಾಮಿ ಮಾತನಾಡಿ, ಕನ್ನಡ ನಾಡಿನ ನೆಲ, ಜಲ, ಭಾಷೆಗೆ ಸಂಬಂಧಿಸಿದ ಚಿತ್ರಗಳು ಅಥವಾ ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಧೀಮಂತ ಸಾಹಿತಿ, ಕವಿ ಹಾಗೂಬರಹಗಾರರ ಚಿತ್ರಗಳನ್ನೂ ಬಿಡಿಸಬಹುದು. ನಿಮ್ಮ ಚಿತ್ರಗಳಲ್ಲಿ ಕರ್ನಾಟಕದ ಸೊಗಡು ಎದ್ದು ಬರಲಿ ಎಂದು ಆಶಿಸಿದರು.

ಕ್ರಿಯಾಶೀಲ ಘಟಕ
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಎ.ಆರ್. ಉಜ್ಜನಪ್ಪ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲೇ ಹರಿಹರ ತಾಲ್ಲೂಕು ಘಟಕ ಅತ್ಯಂತ ಕ್ರಿಯಾಶೀಲವಾಗಿ ಗುಣಮಟ್ಟದ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಬಾ.ಮ. ಬಸವರಾಜಯ್ಯ, ಕೋಶಾಧ್ಯಕ್ಷ ಎಂ.ಪಿ. ಚಂದ್ರಪ್ಪ, ಅಂಬಣ್ಣ ಮಹಿಪತಿ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಕೆ. ಭೂಮೇಶ್, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪರಮೇಶ್ವರಪ್ಪ, ತಾಲ್ಲೂಕು ಕಸಾಪ ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ, ಗೌರವ ಕಾರ್ಯದರ್ಶಿ ರಿಯಾಜ್ ಅಹಮದ್, ಪಿ. ನಾಗರಾಜ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT