ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜೆಪಿಯಿಂದ ಕೆಚ್ಚೆದೆಯ ಹೋರಾಟ

ಮತದಾರರ ಮನದಂಗಳ
Last Updated 26 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಧಾರವಾಡ: `ಅಧಿಕಾರದಾಗ ಇದ್ದವ್ರ ಅಭಿವೃದ್ಧಿ ಮಂತ್ರ ಜಪಾ ಮಾಡ್ತಾರ. ಹಿಂದ ಸೋತಾವರು, ಈ ಸಲಾ ಗೆಲ್ಲಾಕ ಅನುಕಂಪದ ಹಾದಿ ಹುಡ್ಕತಾರ. ಆದ್ರ ಅದ್ಯಾವುದೂ ಅವರಿಗೆ ಓಟ್ ಕೊಡಸುದಿಲ್ಲ. ಕತ್ತಲ ರಾತ್ರಿ ಮುಗದ ಮ್ಯಾಲ ಹರದಾಡೊ ಶೆರೆ, ರೊಕ್ಕ, ಕುತಂತ್ರ ಅಷ್ಟ ಯಾರ ಗೆಲ್ತಾರ ಅಂತ ನಿರ್ಧರಿಸತೈತಿ...'
-ಹೆಬ್ಬಳ್ಳಿ ಪಂಚಾಯ್ತಿ ಕಟ್ಟೆಯಲ್ಲಿ ಕುಳಿತಿದ್ದ ಗುರುಸಿದ್ದಪ್ಪ ಹಡಪದ ಹೇಳಿದ ಈ ಮಾತು, ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತವರು ಜಿಲ್ಲೆ ಧಾರವಾಡದ ಎಲ್ಲ 7 ವಿಧಾನಸಭಾ ಕ್ಷೇತ್ರಗಳನ್ನು ಸುತ್ತಾಡಿದಾಗ ಕಣ್ಣಿಗೆ ಕಟ್ಟುವ ಚಿತ್ರಣವೂ ಹೌದು.

ಕಳೆದ ಐದು ವರ್ಷಗಳ ಆಡಳಿತಾವಧಿಯಲ್ಲಿ ಅಭಿವೃದ್ಧಿ ಕಾರ್ಯಗಳ ಜೊತೆಗೇ ಭ್ರಷ್ಟಾಚಾರ, ವೈಯಕ್ತಿಕ ಹಗರಣಗಳು, ಮತದಾರರನ್ನು ನಿಕೃಷ್ಟವಾಗಿ ಕಾಣಲಾಗಿದೆ ಎಂಬ ಆರೋಪ ಕ್ಷೇತ್ರದಾದ್ಯಂತ ಬಿಜೆಪಿ ಬಗ್ಗೆ ವಾಕರಿಕೆ ಬರುವಷ್ಟು ಇದ್ದರೂ, ರೊಕ್ಕದ ಹೊಳೆ, ಜಾತಿ ಸಮೀಕರಣದ ಲೆಕ್ಕಾಚಾರದ ಎದುರು ಅದೆಲ್ಲ ಹಿಂದೆ ಸರಿದಿದೆ. 2004ರಲ್ಲಿ ಮೂರು ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ, ಕ್ಷೇತ್ರ ವಿಂಗಡಣೆ ಬಳಿಕ ನಡೆದ 2008ರ ಚುನಾವಣೆಯಲ್ಲಿ ಕಲಘಟಗಿ (ಕಾಂಗ್ರೆಸ್) ಹೊರತುಪಡಿಸಿ ಉಳಿದ ಆರೂ ಕ್ಷೇತ್ರಗಳನ್ನು ಬಗಲಿಗೆ ಹಾಕಿಕೊಂಡಿತ್ತು. ಆದರೆ ಈ ಬಾರಿ ಈ ಕ್ಷೇತ್ರಗಳನ್ನು ಉಳಿಸಿಕೊಳ್ಳುವುದು ಬಿಜೆಪಿಗೆ ಅಷ್ಟು ಸುಲಭವಲ್ಲ.

ಬಿಜೆಪಿ ತೊರೆದು ಕೆಜೆಪಿ ಸೇರಿ ಕಣಕ್ಕಿಳಿದಿರುವ ಎಸ್.ಐ.ಚಿಕ್ಕನಗೌಡ್ರ್ರ, ಸಿ.ಎಂ.ನಿಂಬಣ್ಣವರ, ಡಾ.ಆರ್.ಬಿ. ಶಿರಿಯಣ್ಣವರ, ಮೋಹನ ಲಿಂಬಿಕಾಯಿ ಅವರು ಬಿಜೆಪಿಯ ಗಟ್ಟಿ ಮತಗಳನ್ನು ಛಿದ್ರ ಮಾಡುವ ಸಾಧ್ಯತೆ ಇದೆ.

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್
ಈ ಕ್ಷೇತ್ರದಲ್ಲಿ ಶೆಟ್ಟರ್ ಮತ್ತು ಕಾಂಗ್ರೆಸ್ಸಿನ ಡಾ. ಮಹೇಶ ನಾಲ್ವಾಡ ಮಧ್ಯೆ ನೇರ ಸ್ಪರ್ಧೆ. ಇಬ್ಬರೂ ಲಿಂಗಾಯತ (ಬಣಜಿಗ) ಸಮುದಾಯದವರು. ಗೊಂದಲದ ಮಧ್ಯೆ ಟಿಕೆಟ್ ಗಿಟ್ಟಿಸಿಕೊಂಡ ಕೋಟ್ಯಧಿಪತಿ ವೈದ್ಯರ ಚುಚ್ಚುಮದ್ದು, ಶೆಟ್ಟರ್ `ಸಜ್ಜನಿಕೆ'ಯ ಮುಂದೆ ಅದೆಷ್ಟು ಪರಿಣಾಮ ಬೀರೀತು ಎನ್ನುವುದೇ ಕುತೂಹಲ.

ಸತತ ಐದನೇ ಗೆಲುವಿನ ನಿರೀಕ್ಷೆಯಲ್ಲಿರುವ ಶೆಟ್ಟರ್ ಪ್ರಚಾರದ ಎದುರು ನಾಲ್ವಾಡ ಸಪ್ಪೆಯಾದಂತೆ ಕಾಣಿಸುತ್ತಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಶೆಟ್ಟರ್ ಮುಖ್ಯಮಂತ್ರಿಯಾಗುತ್ತಾರೆ ಎಂಬ ರಂಗಿನ ಮುಂದೆ ನಾಲ್ವಾಡ `ಪ್ರಚಾರ' ಬಣ್ಣ ಕಳೆದುಕೊಂಡಂತೆ ತೋರುತ್ತಿದೆ. ಜೆಡಿಎಸ್ ಹುರಿಯಾಳು `ಬಿಲ್ಡರ್' ತಬ್ರೇಜ್ ಸಂಶಿ, ಕೆಜೆಪಿಯ ಜಿ.ಪಂ. ಮಾಜಿ ಸದಸ್ಯ ಎಸ್.ಎಸ್.ಪಾಟೀಲ ಕೂಡಾ ಕದನ ಕಣದಲ್ಲಿದ್ದಾರೆ.

ಹುಬ್ಬಳ್ಳಿ-ಧಾರವಾಡ ಪೂರ್ವ
ಪರಿಶಿಷ್ಟ ಜಾತಿಗೆ ಮೀಸಲಾದ ಈ ಕ್ಷೇತ್ರದಲ್ಲಿ ಹಾಲಿ ಶಾಸಕ ಬಿಜೆಪಿಯ ವೀರಭದ್ರಪ್ಪ ಹಾಲಹರವಿಗೆ ಹೊಸ ಮುಖ ಕಾಂಗ್ರೆಸ್‌ನ ಪ್ರಸಾದ ಅಬ್ಬಯ್ಯ, ಜೆಡಿಎಸ್‌ನಿಂದ ಮಾಜಿ ಸಚಿವ ಆಲ್ಕೋಡ್ ಹನುಮಂತಪ್ಪ, ಕೆಜೆಪಿಯ ಶಂಕರ ಬಿಜವಾಡ ಸೆಡ್ಡು ಹೊಡೆದಿದ್ದಾರೆ. ತಮ್ಮ ಕಟ್ಟಾ `ಅನುಯಾಯಿ'ಯನ್ನು ಮತ್ತೆ ಗೆಲ್ಲಿಸಿಕೊಳ್ಳುವುದು ಮುಖ್ಯಮಂತ್ರಿಗೂ ಪ್ರತಿಷ್ಠೆಯಾಗಿದೆ. ಮುಸ್ಲಿಂ ಮತಗಳು ನಿರ್ಣಾಯಕವಾಗಿದ್ದರೂ, ಹಿಂದೂ ಮತಗಳು `ಸಂಘಟಿತ'ವಾಗುವ ನಿರೀಕ್ಷೆಯಲ್ಲಿ ಹಾಲಹರವಿ ಬೆಂಬಲಿಗರಿದ್ದಾರೆ.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರನ್ನೇ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಆರೋಪ, ಕಾಂಗ್ರೆಸ್ ಒಳಜಗಳ ಅಬ್ಬಯ್ಯ ಪಾಲಿಗೆ ಗುಮ್ಮ.  ಮುಸ್ಲಿಮರ ಪ್ರಾತಿನಿಧಿಕ ಸಂಸ್ಥೆ ಅಂಜುಮನ್ ಇಸ್ಲಾಂ ಅಧ್ಯಕ್ಷ, ಮಾಜಿ ಸಚಿವ ಜಬ್ಬಾರ್ ಖಾನ್ ಹೊನ್ನಳ್ಳಿ ಬೆಂಬಲದಿಂದ ಮುಸ್ಲಿಂ ಸಮುದಾಯದ ಮತಗಳು ಶಂಕರ ಬಿಜವಾಡ ಪರ ವಾಲುವ ಸಾಧ್ಯತೆ ಇರುವುದರಿಂದ `ಪೈಪೋಟಿ' ಕಾವು ಹೆಚ್ಚಿದೆ.

ಹುಬ್ಬಳ್ಳಿ-ಧಾರವಾಡ ಪಶ್ಚಿಮ
ಇಲ್ಲಿ ಯುವಕರು-ಅನುಭವಿಗಳ ಜುಗಲಬಂದಿ. ರಾಜಕೀಯ ಸನ್ಯಾಸ ತೆಗೆದುಕೊಂಡ ಹಾಲಿ ಶಾಸಕ ಬಿಜೆಪಿಯ ಚಂದ್ರಕಾಂತ ಬೆಲ್ಲದ ಅವರು ಪುತ್ರ ಅರವಿಂದ ಅವರನ್ನು ಕಣಕ್ಕಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವ ಮಾಜಿ ಸಚಿವ ಎಸ್.ಆರ್. ಮೋರೆ 1983, 1994, 2004ರಲ್ಲಿ ಗೆದ್ದಿದ್ದರು. ಮೋರೆಯವರಿಗೆ ಟಿಕೆಟ್ ಸಿಗದಿದ್ದಾಗ ಕಾಂಗ್ರೆಸ್ ಇಲ್ಲಿ ಸೋತಿರುವುದು ವಿಶೇಷ.

ಒಮ್ಮೆ ಬೆಲ್ಲದ ವಿರುದ್ಧ ಸೋತಿರುವ ಮೋರೆ, ಎರಡು ಬಾರಿ ಸೋಲಿಸಿದ್ದಾರೆ. ಅರವಿಂದ, ರಾಜಕಾರಣಿ ಎನ್ನುವುದಕ್ಕಿಂತ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಬೆಲ್ಲದ ಕುಟುಂಬದ ಆಪ್ತ ಗುರುರಾಜ ಹುಣಸಿಮರದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿದ್ದಾರೆ. ಕೆಜೆಪಿಯ ಮೋಹನ ಲಿಂಬಿಕಾಯಿ ಕೂಡಾ ಬಿಜೆಪಿ ಮತಬುಟ್ಟಿಯ ಮೇಲೆ ಕಣ್ಣಿಟ್ಟಿರುವುದು ಸ್ಪಷ್ಟ. ಮೋರೆ ಮರು ಎಂಟ್ರಿಯಿಂದಾಗಿ ಜೆಡಿಎಸ್‌ನ ಇಸ್ಮಾಯಿಲ್ ತಮಟಗಾರ ಹುರುಪು ಕಡಿಮೆಯಾದಂತಿದೆ. ಈ ಎಲ್ಲ `ಲೆಕ್ಕಾಚಾರ'ಗಳನ್ನು ಮರಾಠರು, ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗಗಳ ಮತಗಳ ಮೇಲೆ ಬಲವಾದ ಹಿಡಿತವಿರುವ `ಹಳೆ ಹುಲಿ' ಮೋರೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಧಾರವಾಡ ಗ್ರಾಮೀಣ
ಇಲ್ಲೂ ಈ ಬಾರಿ ತುರುಸಿನ ಸ್ಪರ್ಧೆಯಿದೆ. ಕಳೆದ ಬಾರಿ ಕೇವಲ 723 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಬಿಜೆಪಿಯ ಸೀಮಾ ಮಸೂತಿ ಅವರು ಸಾಂಪ್ರದಾಯಿಕ ಎದುರಾಳಿಗಳಾದ ಕಾಂಗ್ರೆಸ್‌ನ ವಿನಯ ಕುಲಕರ್ಣಿ, ಜೆಡಿಎಸ್‌ನ ಅಮೃತ ದೇಸಾಯಿ ಜೊತೆ ಈ ಬಾರಿ ತಮ್ಮೂರಿನವರೇ (ಉಪ್ಪಿನ ಬೆಟಗೇರಿ) ಆದ ಕೆಜೆಪಿಯ ತವನಪ್ಪ ಅಷ್ಟಗಿ ಅವರಿಂದಲೂ ಸ್ಪರ್ಧೆ ಎದುರಿಸಬೇಕಾಗಿದೆ.

`ಸಜ್ಜನ' ಎಂದೇ ಗುರುತಿಸಿಕೊಂಡಿರುವ ಅಷ್ಟಗಿ, ಕಾಂಗ್ರೆಸ್ ಮತಗಳನ್ನು ಸೆಳೆಯುವ ಸಾಧ್ಯತೆ ಹೆಚ್ಚು ಎನ್ನುವುದು ಹಲವರ ನಿರೀಕ್ಷೆ. ಆದರೆ ಒಳಗುಟ್ಟು ಬೇರೆಯೇ ಇದೆ. ಅಷ್ಟಗಿ - ಮಸೂತಿ ನಡುವಿನ ಕಾದಾಟವನ್ನು ವೀಕ್ಷಿಸುತ್ತಿರುವ ವಿನಯ, ಕಳೆದ ಚುನಾವಣೆಯಲ್ಲಿ ಸೋಲಿಗೆ ಕಾರಣವಾದ ಮತಗಳ ಬೇಟೆಯಲ್ಲಿ ತಲ್ಲೆನರಾಗಿದ್ದಾರೆ.

ಕುಂದಗೋಳ
 

ಕಳೆದ ಬಾರಿ ಬಿಜೆಪಿ ಮಡಿಲಿಗೆ ಈ ಕ್ಷೇತ್ರವನ್ನು ಗಳಿಸಿಕೊಟ್ಟಿದ್ದ ಹಾಗೂ ಬಿ.ಎಸ್. ಯಡಿಯೂರಪ್ಪನವರ ಬೀಗರೂ ಆದ ಎಸ್.ಐ.ಚಿಕ್ಕನಗೌಡ್ರ, ಬದಲಾದ ಪರಿಸ್ಥಿತಿಯಲ್ಲಿ ಕೆಜೆಪಿ ಅಭ್ಯರ್ಥಿ. ಕಾಂಗ್ರೆಸ್‌ನಿಂದ ಸಿ.ಎಸ್.ಶಿವಳ್ಳಿ, ಜೆಡಿಎಸ್‌ನಿಂದ ಮಾಜಿ ಶಾಸಕ ಎಂ.ಎಸ್.ಅಕ್ಕಿ ಅಖಾಡಕ್ಕೆ ಇಳಿದಿದ್ದಾರೆ. ಇವರಿಬ್ಬರೂ ಮಾಜಿ ಶಾಸಕರು. ಹೀಗಾಗಿ ಹಳೆ ಹುಲಿಗಳ ಕಾದಾಟ ಕ್ಷೇತ್ರವನ್ನು ರಂಗಾಗಿಸಿದೆ.

ಯುವ ಮುಖಂಡ ಎಂ.ಆರ್.ಪಾಟೀಲ ಬಿಜೆಪಿ ನೊಗ ಹೊತ್ತಿದ್ದಾರೆ. ಕುರುಬ ಸಮುದಾಯ ಶಿವಳ್ಳಿ ಬೆನ್ನಿಗೆ ನಿಂತರೆ, ಬಹುಸಂಖ್ಯಾತ ಲಿಂಗಾಯತ ಮತಗಳು ಹಂಚಿ ಹೋದರೆ ಶಿವಳ್ಳಿಯವರಿಗೆ ಅನುಕೂಲವಾಗುವ ಸಾಧ್ಯತೆ ಇದೆ. `ಚಿಕ್ಕನಗೌಡರು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾತನಾಡಿದ್ದೇ ಕಂಡಿಲ್ಲ' ಎಂದು ಗುಡಗೇರಿಯ ಕಾರ್ಯಕರ್ತರೊಬ್ಬರು ದೂರುತ್ತಾರೆ. ಆದರೆ, ಬಹುದಿನಗಳ ಬೇಡಿಕೆಯಾಗಿದ್ದ ಗದಗ-ಲಕ್ಷ್ಮೇಶ್ವರ ರಸ್ತೆ ಮಾಡಿಸಿದ್ದಾರೆ ಎಂದು ಅವರ ಬೆಂಬಲಿಗರೊಬ್ಬರು ನೆನಪು ಮಾಡಿಕೊಡುತ್ತಾರೆ.

ಕಲಘಟಗಿ
 

ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಸಂತೋಷ್ ಲಾಡ್, ದೆಹಲಿಯಲ್ಲೇ ವಾಸ್ತವ್ಯ ಹೂಡಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ, ಬಿಎಸ್‌ವೈ ಆಪ್ತ ಸಿ.ಎಂ. ನಿಂಬಣ್ಣವರ ಈ ಬಾರಿ ಕೆಜೆಪಿ ಸ್ಪರ್ಧಿ. ಲಿಂಗಾಯತರೇ ಬಹುಸಂಖ್ಯಾತರಾಗಿರುವ ಈ ಕ್ಷೇತ್ರದಲ್ಲಿ ಮರಾಠಾ ಸಮುದಾಯದ ಮತಗಳು ನಿರ್ಣಾಯಕ. ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದ ನಿಂಬಣ್ಣವರ, ಜೆಡಿಎಸ್‌ನ ಪಿ.ಸಿ.ಸಿದ್ದನಗೌಡರ ಹಾಗೂ ಬಿಜೆಪಿಯ ಹೊಸಮುಖ ವೀರೇಶ ಸಲಗಾರ ಮಧ್ಯೆ `ಜಾತಿ' ಮತಗಳು ವಿಭಜನೆ ಆಗುವ ಬಗ್ಗೆಯೇ ಕ್ಷೇತ್ರದಾದ್ಯಂತ ಮಾತು. ಮರಾಠಾ ಸಮುದಾಯ ಮಾತ್ರ ಲಾಡ್ ಬೆನ್ನಿಗೆ ನಿಲ್ಲುವ ಸಾಧ್ಯತೆ ಹೆಚ್ಚಾಗಿದೆ.

ನವಲಗುಂದ
ಮುಖ್ಯಮಂತ್ರಿ `ಆಪ್ತ', ಮರು ಆಯ್ಕೆ ಬಯಸಿರುವ ಬಿಜೆಪಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ಕೆಜೆಪಿಯಿಂದ ಕಣಕ್ಕಿಳಿದಿರುವ ಮಾಜಿ ಶಾಸಕ ಡಾ.ಆರ್.ಬಿ.ಶಿರಿಯಣ್ಣನವರ ನುಂಗಲಾರದ ಬಿಸಿತುಪ್ಪ. ಮಾಜಿ ಸಚಿವ ಕೆ.ಎನ್.ಗಡ್ಡಿ ಕಾಂಗ್ರೆಸ್ ಹುರಿಯಾಳು. ಮುನೇನಕೊಪ್ಪ ಕೃಪಾಕಟಾಕ್ಷ ಇರುವ ಪಕ್ಷೇತರ ಅಭ್ಯರ್ಥಿ ಶಿವಾನಂದ ಕರಿಗಾರ, ತಮ್ಮದೇ  ಸಮುದಾಯದ (ಕುರುಬ) ಗಡ್ಡಿ ಅವರಿಗೆ ಅಡ್ಡಗಾಲು ಆಗಬಹುದು.

ಈ ಬಾರಿ ಆಯ್ಕೆಯಾಗಲೇಬೇಕು ಎಂಬ ಪಣತೊಟ್ಟಿರುವ ಜೆಡಿಎಸ್‌ನ ಎನ್.ಎಚ್. ಕೋನರೆಡ್ಡಿ ಮತದಾರರ ಎದುರು ಕಣ್ಣೀರಿಡುತ್ತಿದ್ದಾರೆ. ಶಿರಿಯಣ್ಣವರ -ಮುನೇನಕೊಪ್ಪ ಇಬ್ಬರೂ ಲಿಂಗಾಯತ ಪಂಚಮಸಾಲಿ ಪಂಗಡಕ್ಕೆ ಸೇರಿದವರು. ಮುನೇನಕೊಪ್ಪ `ಬಲ' ಪ್ರದರ್ಶನದ ಮುಂದೆ ಇತರರ `ಪೌರುಷ' ಏನಾಗುತ್ತದೋ ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT