ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಟ್ಟ ಹುಡುಗಿ ಆಗಬೇಕು...!

Last Updated 4 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

`ಮಿಲನ'ದ ಅಂಜಲಿ, `ಮಳೆ ಬರಲಿ ಮಂಜೂ ಇರಲಿ' ಎಂದ ಸ್ನೇಹಾ, `ಪೃಥ್ವಿ'ಯ ಪ್ರಿಯಾ, `ಅಂದರ್ ಬಾಹರ್'ನ ಸುಹಾಸಿನಿ... ಹೇಗೆ ಕರೆದರೂ ಅವರು ಪಾರ್ವತಿ.

ಮೀನುಗಣ್ಣಿನ ಈ ಚೆಲುವೆ ಮಾತಿಗಿಳಿದರೆ ಸಾಕು ಕೇರಳ, ತಮಿಳುನಾಡು, ಕರುನಾಡಿನಲ್ಲಿ ಒಂದು ಸುತ್ತು ಬಂದ ಅನುಭವ. ಈಚೆಗಷ್ಟೇ ಅವರು ಅಭಿನಯಿಸಿದ್ದ ತಮಿಳು ಚಿತ್ರ `ಚೆನ್ನೈಯಿಲ್ ಒರು ನಾಳ್' ತೆರೆಕಂಡಿದೆ. ಅದರ ಬೆನ್ನಿಗೆ `ಅಂದರ್ ಬಾಹರ್' ಬಿಡುಗಡೆಯಾಗುತ್ತಿದೆ. ಲೇಖಕಿ ಕಮಲಾದಾಸ್ ಅವರ ಕಥೆ ಆಧರಿಸಿದ ಮಲಯಾಳಂ ಚಿತ್ರಕ್ಕೆ ಅಂಕಿತ ಹಾಕಿದ್ದಾಗಿದೆ. ಧನುಷ್ ಜೋಡಿಯಾಗಿ ಕಾಣಿಸಿಕೊಂಡಿರುವ ತಮಿಳು ಚಿತ್ರ `ಮಾರಿಯಾನ್' ಬರುವ ತಿಂಗಳು ತೆರೆಗೆ ಬರಲಿದೆ. ಈ ಮಧ್ಯೆ ಅವರು ಕನ್ನಡವನ್ನು `ಸುಲಿದ ಬಾಳೆಯ ಹಣ್ಣಿನಂದದಿ' ಸಲೀಸಾಗಿ ಕಲಿತಿದ್ದಾರೆ. ಜೊತೆಗೆ ಚಿತ್ರರಂಗದ ಬೇರೆ ಬೇರೆ ಸಾಧ್ಯತೆಗಳ ಹುಡುಕಾಟದಲ್ಲಿದ್ದಾರೆ. ಪಾರ್ವತಿ ಕನಸುಗಳೇನು? ಇಲ್ಲಿದೆ ಉತ್ತರ.

 ನಿಮ್ಮ ಚಿತ್ರ ಬದುಕಿನಲ್ಲಿ `ಅಂದರ್ ಬಾಹರ್'ಗೆ ಯಾವ ಸ್ಥಾನ?
ತಮಿಳು, ಮಲಯಾಳಂ ಕನ್ನಡ ಸೇರಿದಂತೆ ನಾನು ಅಭಿನಯಿಸಿರುವುದು ಕೇವಲ ಹನ್ನೊಂದು ಚಿತ್ರಗಳಲ್ಲಿ. ಏಳೆಂಟು ವರ್ಷಗಳ ಹಿಂದೆ ಚಿತ್ರರಂಗಕ್ಕೆ ಅಡಿಯಿಟ್ಟರೂ ಪಾತ್ರಗಳನ್ನು ಎಚ್ಚರದಿಂದ ಆಯ್ದುಕೊಳ್ಳುತ್ತಿದ್ದೆ. ಭಿನ್ನತೆಯನ್ನು ಅರಸುತ್ತಿದ್ದೆ. `ಅಂದರ್ ಬಾಹರ್' ಕತೆ ಕೂಡ ಹೀಗೆ ಭಿನ್ನ ಅನ್ನಿಸಿತು. ಇದು ಹಾಲು ಜೇನಿನಂಥ ದಾಂಪತ್ಯಗೀತೆ. ಶಿವರಾಜ್‌ಕುಮಾರ್ ಅವರಂಥ ಅನುಭವಿ ನಟರು ಚಿತ್ರದಲ್ಲಿದ್ದಾರೆ. 72 ದಿನಗಳ ಚಿತ್ರೀಕರಣವಿದ್ದರೂ ಒಂದಿಡೀ ವರ್ಷ ಚಿತ್ರಕ್ಕಾಗಿ ದುಡಿದಿದ್ದೇವೆ. ಜನರ ನಿರೀಕ್ಷೆಯನ್ನು ಮುಟ್ಟಬಲ್ಲೆವು ಎಂಬ ವಿಶ್ವಾಸವಿದೆ. ಸಹಜವಾಗಿಯೇ ಚಿತ್ರಕ್ಕೆ ಮಹತ್ವದ ಸ್ಥಾನವಿದೆ.

ಚಿತ್ರೀಕರಣದ ಅನುಭವಗಳು?
ಚಿತ್ರದ ಸಂಭಾಷಣೆಗಳು ಸ್ಕ್ರಿಪ್ಟ್‌ನಲ್ಲಿದ್ದಂತೆಯೇ ಇರುತ್ತಿರಲಿಲ್ಲ. ನಿರ್ದೇಶಕ ಫಣೀಶ್ ರಂಗಭೂಮಿ, ಸಾಹಿತ್ಯದ ಹಿನ್ನೆಲೆ ಉಳ್ಳವರು. ಹೀಗಾಗಿ ಅವರ ಮಾತನ್ನು ಯಾರೂ ತೆಗೆದು ಹಾಕುತ್ತಿರಲಿಲ್ಲ. ಪದೇ ಪದೇ ಬದಲಾಗುತ್ತಿದ್ದ ಸಂಭಾಷಣೆಗಳು ನನ್ನ ಪಾತ್ರವನ್ನು ಮೊನಚುಗೊಳಿಸುತ್ತಿದ್ದವು. ಎರಡು ಮೂರು ಪುಟದ ಸಂಭಾಷಣೆ ಹೇಳುವಾಗ ಕಣ್ಣಲ್ಲಿ ನೀರೇ ಬಂದಿತ್ತು. ಆಗ ಚಿತ್ರತಂಡ ಸಹಕರಿಸಿದ ರೀತಿಯನ್ನು ಮರೆಯುವಂತಿಲ್ಲ. ಚಿತ್ರೀಕರಣದ ಸಂದರ್ಭದಲ್ಲಿಯೇ ನಾನು ರಾಜ್‌ಕುಮಾರ್, ಪುಟ್ಟಣ್ಣ ಕಣಗಾಲ್ ಅವರಂಥ ಪ್ರತಿಭೆಗಳ ಬಗ್ಗೆ ಹೆಚ್ಚು ತಿಳಿದುಕೊಂಡೆ.

`ಚೆನ್ನೈಯಿಲ್ ಒರು ನಾಳ್' ಚಿತ್ರದಲ್ಲಿ ನಿಮ್ಮದು ಮಾಗಿದ ಪಾತ್ರ. `ಪೃಥ್ವಿ', `ಮಿಲನ'ದಲ್ಲಿಯೂ ಇಂಥದ್ದೇ ನಟನೆ. ಈಗ `ಅಂದರ್‌ಬಾಹರ್' ಅಭಿನಯವೂ ಹಾಗೆಯೇ ತೋರುತ್ತಿದೆ. ಈ ಪಾತ್ರಗಳು ನಿಮ್ಮ ವಯಸ್ಸಿಗೆ ಮೀರಿದ್ದು ಅನ್ನಿಸುವುದಿಲ್ಲವೇ?
ಪತ್ನಿಯ ಪಾತ್ರಗಳನ್ನೇ ಮಾಡಲು ವಿಶೇಷ ಕಾರಣಗಳೇನೂ ಇಲ್ಲ. ಚೆಲ್ಲುಚೆಲ್ಲಾದ, ಗ್ಲಾಮರಸ್ ಪಾತ್ರಗಳಿಗೇ ಸೀಮಿತವಾಗಬಾರದು ಎನ್ನುವ ಆಸೆ ಇದೆ. ಅಲ್ಲದೆ ಚಿತ್ರದಲ್ಲಿ ಪಾತ್ರ ಎಷ್ಟು ಹೊತ್ತು ಜೀವಿಸುತ್ತದೆ ಎಂಬುದರತ್ತ ನನ್ನ ಗಮನ. ಹಾಗೆ ನೋಡಿದರೆ ಮಳೆ ಬರಲಿ ಮಂಜೂ ಇರಲಿ ಚಿತ್ರದಲ್ಲಿ ಕನಸು ಕಾಣುವ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ.

ನಿಮ್ಮ ಕನಸಿನ ಪಾತ್ರ ಯಾವುದು?
ಒಂದು ಕೆಟ್ಟ ಹುಡುಗಿಯ ಪಾತ್ರ ಮಾಡಬೇಕು ಎಂದು ಬಹಳ ದಿನದಿಂದ ಅನ್ನಿಸುತ್ತಿದೆ. ಹಿರಿಯ ನಟಿಯರಾದ ಲಕ್ಷ್ಮೀ, ಸುಹಾಸಿನಿ ಹೀಗೆ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸುತ್ತಿದ್ದರು.

ಚೆಲ್ಲುಚೆಲ್ಲಾದ ನಟಿ, ಗ್ಲಾಮರಸ್ ನಟಿ, ಕಡಿಬಡಿ ನಟಿ, ಅಳುಮುಂಜಿ ನಟಿ ಇತ್ಯಾದಿ ಹಣೆಪಟ್ಟಿಗಳಿಂದ ನಾಯಕಿಯರು ಹೊರಬರಬೇಕಿದೆ. ಹೆಣ್ಣಿನ ನಿಜವಾದ ಆತ್ಮವನ್ನು ಬಿಂಬಿಸುವಂತಹ ಕತೆಗಳು ಹುಟ್ಟಬೇಕಿದೆ. ಸಿನಿಮಾ ಇನ್ನೂ ನಿರ್ದೇಶಕರ ಸುತ್ತಲೇ ಗಿರಕಿ ಹೊಡೆಯುತ್ತಿದೆ. ಹಾಗೆಂದು ನನ್ನದು ಸ್ತ್ರೀವಾದಿ ಹಾದಿಯಲ್ಲ. ಎಲ್ಲ ಪಾತ್ರಗಳಿಗೂ ಒತ್ತು ನೀಡಬೇಕು ಎಂದು ಪ್ರತಿಪಾದಿಸುವವಳು.

ಅಂಥ ಚಿತ್ರಗಳನ್ನು ತರಲು ಬಹುಶಃ ನೀವೇ ನಿರ್ದೇಶಕರಾಗಬೇಕಾದೀತು?
ಯಾಕಾಗಬಾರದು?! ನಾನು ಗಂಭೀರವಾಗಿ ಆ ಪ್ರಯತ್ನದಲ್ಲಿದ್ದೇನೆ. ನಿರ್ದೇಶನದ ಬೇರೆ ಬೇರೆ ಮಜಲುಗಳನ್ನು ಅರಿಯುತ್ತಿದ್ದೇನೆ. ಮೂರು ನಾಲ್ಕು ಕತೆಗಳನ್ನು ಬರೆದಿದ್ದೇನೆ. ನನ್ನ ಕತೆಗಳು ಮಲಯಾಳಿ ಪರಿಸರಕ್ಕೆ ಹತ್ತಿರವಾಗಿವೆ. ಸ್ಕ್ರಿಪ್ಟ್ ಕುರಿತಂತೆ ಶಿವರಾಜ್‌ಕುಮಾರ್ ಅವರೊಂದಿಗೂ ಚರ್ಚಿಸಿದ್ದೇನೆ.

ಬಾಲಿವುಡ್‌ನತ್ತ ಎಂದು ಮುಖ ಮಾಡುವಿರಿ?
ನನಗೆ ಕೇವಲ ಒಂದು ವಸ್ತುವಾಗಲು ಇಷ್ಟವಿಲ್ಲ. ಬರೀ ಸಾಧನವಾಗಿ ಕಾಣುವ ಕಡೆಗೆ ನಾನು ಹೋಗುವುದಿಲ್ಲ. ನನ್ನ ನೆಲದಲ್ಲಿ ಮಾಡಬೇಕಾದ ಕೆಲಸಗಳು ಸಾಕಷ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT