ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಡಿಪಿ ಸಭೆ: ಹೆಸ್ಕಾಂ ಅಧಿಕಾರಿ ತರಾಟೆಗೆ

Last Updated 8 ಸೆಪ್ಟೆಂಬರ್ 2011, 10:05 IST
ಅಕ್ಷರ ಗಾತ್ರ

ಮುಂಡಗೋಡ: ತಾಲ್ಲೂಕಿನಲ್ಲಿ ವಿದ್ಯುತ್ ಕಿರಿಕಿರಿ ನಿರಂತರವಾಗಿ ಮುಂದುವರೆದಿದ್ದು ಈ ಬಗ್ಗೆ ಇಲಾಖೆಯವರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ತಾ.ಪಂ. ಸದಸ್ಯ ಎಸ್. ಐ.ನಡಗೇರಿ ಹೆಸ್ಕಾಂ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಕೆ.ಡಿ.ಪಿ ಸಭೆಯಲ್ಲಿ ಬುಧವಾರ ನಡೆಯಿತು.

ಇದಕ್ಕೆ ಪ್ರತಿಕ್ರಿಯಿಸಿದ ಹೆಸ್ಕಾಂ ಅಧಿಕಾರಿ ಇಲ್ಲಿನ ಕಚೇರಿಯಿಂದ ವಿದ್ಯುತ್ ಸ್ಥಗಿತ ಆಗುತ್ತಿಲ್ಲ ಬದಲಾಗಿ ಹುಬ್ಬಳ್ಳಿ ಹೆಸ್ಕಾಂನಿಂದ ವಿದ್ಯುತ್ ಸ್ಥಗಿತ ಮಾಡಲಾಗುತ್ತಿದೆ ಎಂದರು.

ಇಲ್ಲಿನ ಬಿ.ಆರ್.ಸಿ ಕಚೇರಿಯ ಶಿಕ್ಷಕಿಯೊಬ್ಬರ ಮೇಲಿರುವ ಆಪಾದನೆಯ ತನಿಖೆ ಎತ್ತ ಸಾಗಿದೆ? ಎಂದು ಸದಸ್ಯರು ಪ್ರಶ್ನಿಸಿದಾಗ ಶಿಕ್ಷಕಿಯ ಮೇಲಿನ ಆರೋಪದ ಕುರಿತು ಮಹಿಳಾ ಅಧಿಕಾರಿಯೊಬ್ಬರಿಂದ ತನಿಖೆ ನಡೆಯುತ್ತಿದ್ದು ಇನ್ನೊಂದು ವಾರದಲ್ಲಿ ವರದಿ ಬರಲಿದೆ. ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವದು ಎಂದು ಬಿ.ಇ.ಓ ವೈ.ಬಿ.ಬಾದವಾಡಗಿ ಉತ್ತರಿಸಿದರು.

ಸತತ ಮಳೆಯಿಂದ ಜಿ.ಪಂ.ಇಂ. ವಿಭಾಗದ ರಸ್ತೆ, ಸಿ.ಡಿ. ಕೆರೆ ಸೇರಿದಂತೆ ಸುಮಾರು 55ಲಕ್ಷ ರೂ.ಹಾನಿಯಾಗಿದೆ. ಮಳೆಗಾಲದ ನಂತರ ಇವುಗಳ ದುರಸ್ತಿ ಕಾರ್ಯ ಮಾಡಲಾಗುವುದು ಎಂದು ಜಿ.ಪಂ. ಎಂಜಿನಿಯರ್ ಆರ್.ಎಚ್.ಕುಲಕರ್ಣಿ ತಿಳಿಸಿದರು.

ನೆಮ್ಮದಿ ಕೇಂದ್ರದಲ್ಲಿ ಸರಿಯಾದ ಸಮಯಕ್ಕೆ ಪ್ರಮಾಣಪತ್ರಗಳು ದೊರೆಯುತ್ತಿಲ್ಲ ಎಂದು ಜನರು ದೂರಿದಾಗ ತಹಸೀಲ್ದಾರ ಎಂ.ವಿ.ಕಲ್ಲೂರಮಠ ಮಾತನಾಡಿ, ಈ ನೆಮ್ಮದಿ ಕೇಂದ್ರದಿಂದ ಎಲ್ಲ ತಹಸೀಲ್ದಾರರ ನೆಮ್ಮದಿ ಕೆಟ್ಟು ಹೋಗಿದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವದು ಎಂದು ಭರವಸೆ ನೀಡಿದರು.

ತಾಲ್ಲೂಕಿನಲ್ಲಿ 186 ಅಂಗನವಾಡಿ ಕೇಂದ್ರಗಳಿದ್ದು ಇವುಗಳಲ್ಲಿ 3 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 8 ಸಹಾಯಕಿಯರ ಹುದ್ದೆ ಖಾಲಿಯಿವೆ. ಅವುಗಳನ್ನು ಶೀಘ್ರದಲ್ಲಿಯೇ ಭರ್ತಿ ಮಾಡಲಾಗುವುದು ಎಂದು ಶಿಶು ಅಭಿವೃದ್ಧಿ ಅಧಿಕಾರಿ ಸಭೆಗೆ ತಿಳಿಸಿದರು.

ಟಿಬೆಟ್ ಕಾಲೋನಿಯ ಕ್ಯಾಂಪ್ ನಂ.3ರಲ್ಲಿ ಚಿಕ್ಕ ನೀರಾವರಿ ಇಲಾಖೆಗೆ ಸೇರಿದ ಕಟ್ಟಡದಲ್ಲಿ ಹೋಟೆಲ್ ನಡೆಸುತ್ತಿರುವ ಬಗ್ಗೆ ಕಳೆದೊಂದು ವರ್ಷದಿಂದ ಹೇಳುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲವೇಕೆ? ಎಂದು ಜನರು ಪ್ರಶ್ನಿಸಿದಾಗ ಟಿಬೆಟನ್ನರು ಹೋಟೆಲ್ ತೆರವುಗೊಳಿಸಲು ಕೆಲದಿನಗಳ ಕಾಲಾವಕಾಶವನ್ನು ಜಿಲ್ಲಾಧಿಕಾರಿಗಳಲ್ಲಿ ಕೇಳಿದ್ದಾರೆ ಎಂದು ಚಿಕ್ಕ ನೀರಾವರಿ ಇಲಾಖೆಯ ಎ.ಎಸ್.ಕಾನಳ್ಳಿ ಹೇಳಿದರು.

ತಾ.ಪಂ.ಅಧ್ಯಕ್ಷೆ ಲಕ್ಷ್ಮೀಬಾಯಿ ಕೊರವರ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಸದಸ್ಯರಾದ ಅಶೋಕ ಸಿರ್ಸಿಕರ, ರತ್ನಕ್ಕ ನಿಂಬಾಯಿ, ಕಾ.ನಿ.ಅ ವಿ.ಆರ್. ಬಸನಗೌಡ್ರ, ತಾ.ಪಂ.ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT