ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನಡಾ-ಜಿಂಬಾಬ್ವೆ ಮುಖಾಮುಖಿ

Last Updated 27 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ನಾಗಪುರ (ಪಿಟಿಐ): ಕೆನಡಾ ಹಾಗೂ ಜಿಂಬಾಬ್ವೆ ಇವೆರಡೂ ವಿಶ್ವಕಪ್‌ನಲ್ಲಿ ಆಡುತ್ತಿರುವ ತಂಡಗಳಲ್ಲಿ ದುರ್ಬಲವೆನಿಸಿದ ಕ್ರಿಕೆಟ್ ಪಡೆಗಳ ಸಾಲಿನಲ್ಲಿವೆ. ‘ಎ’ ಗುಂಪಿನಲ್ಲಿರುವ ಇವೆರಡೂ ತಂಡಗಳಲ್ಲಿ ಯಾವುದು ಹೆಚ್ಚು ಬಲವಾಗಿದೆ ಎನ್ನುವ ನಿರ್ಧಾರ ಸೋಮವಾರ ಸಾಧ್ಯವಾಗಲಿದೆ. ವಿದರ್ಭ ಕ್ರಿಕೆಟ್ ಸಂಸ್ಥೆ (ವಿಸಿಎ) ಕ್ರೀಡಾಂಗಣದಲ್ಲಿನ ಈ ಹಣಾಹಣಿಯು ವಿಶ್ವಕಪ್‌ನ ಲೀಗ್ ಪಟ್ಟಿಯಲ್ಲಿ ಉಭಯ ತಂಡಗಳ ಉತ್ತಮ ಸ್ಥಾನವನ್ನು ನಿರ್ಧರಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ.

ಗುಂಪಿನಲ್ಲಿ ದುರ್ಬಲವಾದ ತಂಡಗಳು ತಮ್ಮಲ್ಲಿಯೇ ಪೈಪೋಟಿ ನಡೆಸುವುದಕ್ಕೆ ವೇದಿಕೆಯಾಗಲಿರುವ ಪಂದ್ಯವಿದು. ಆದ್ದರಿಂದ ಗೆಲ್ಲುವ ತಂಡವು ಪಾಯಿಂಟುಗಳ ಪಟ್ಟಿಯಲ್ಲಿ ಖಾತೆ ತೆರೆಯಲಿದೆ. ಹಂಬಂಟೋಟಾದಲ್ಲಿ ಶ್ರೀಲಂಕಾ ವಿರುದ್ಧ ಆಡಿದ್ದ ಕೆನಡಾ ಪ್ರಭಾವಿ ಎನಿಸಿರಲಿಲ್ಲ. ಶ್ರೀಲಂಕಾಕ್ಕೆ 332 ರನ್‌ಗಳನ್ನು ಗಳಿಸುವುದಕ್ಕೆ ಅವಕಾಶ ನೀಡಿತ್ತು. ಆ ಪಂದ್ಯದಲ್ಲಿ 122 ರನ್‌ಗಳಿಗೆ ಕುಸಿದು 210 ರನ್‌ಗಳ ಅಂತರದ ಸೋಲನುಭವಿಸಿತ್ತು.

ಭಾರತೀಯ ಮೂಲದ ಆಟಗಾರರನ್ನು ಅಧಿಕ ಸಂಖ್ಯೆಯಲ್ಲಿ ಹೊಂದಿರುವ ಕೆನಡಾ ಬಲಾಢ್ಯ ತಂಡವಾಗಿ ಕಾಣಿಸುತ್ತದೆ ಎನ್ನುವ ನಿರೀಕ್ಷೆಯು ಮೊದಲ ಪಂದ್ಯದಲ್ಲಿಯೇ ಹುಸಿಯಾಗಿದೆ.ಜಿಂಬಾಬ್ವೆ ಮಾತ್ರ ಸ್ವಲ್ಪ ಉತ್ತಮ ಸ್ಥಿತಿಯಲ್ಲಿದೆ ಎಂದು ಹೇಳಬಹುದು. ಗುಂಪಿನ ತಮ್ಮ ಮೊದಲ ಪಂದ್ಯದಲ್ಲಿ ಎಲ್ಟಾನ್ ಚಿಗುಂಬುರಾ ನೇತೃತ್ವದ ತಂಡವು ಬೌಲಿಂಗ್ ವಿಭಾಗದಲ್ಲಿ ಗಮನ ಸೆಳೆಯುವ ಪ್ರದರ್ಶನ ನೀಡಿದೆ. ಶಕ್ತಿಯುಳ್ಳ ಆಸೀಸ್ ಬ್ಯಾಟ್ಸ್‌ಮನ್‌ಗಳು ಆಕ್ರಮಣಕಾರಿ ಆಗದಂತೆ ತಡೆದಿದ್ದು ಜಿಂಬಾಬ್ವೆ ಸಾಧನೆ.

ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ಕಷ್ಟಪಟ್ಟು ತನ್ನ ಪಾಲಿನ ಐವತ್ತು ಓವರುಗಳಲ್ಲಿ 262 ರನ್ ಗಳಿಸಿತ್ತು. ಹೀಗೆ ಆಗಿದ್ದು ಜಿಂಬಾಬ್ವೆ ಬೌಲರ್‌ಗಳ ಬಿಗುವಿನ ದಾಳಿಯಿಂದಾಗಿ. ಆದರೆ ಚಿಗುಂಬುರಾ ಪಡೆಯು ಬ್ಯಾಟಿಂಗ್‌ನಲ್ಲಿ ದುರ್ಬಲವಾಗಿದ್ದನ್ನು ಮರೆಯುವಂತಿಲ್ಲ. 171 ರನ್‌ಗಳಿಗೆ ಕುಸಿತ ಕಂಡರೂ ಆಸ್ಟ್ರೇಲಿಯಾದವರು ಚಡಪಡಿಸುವಂತೆ ಮಾಡಿದ್ದು ಈ ತಂಡದ ಹಿರಿಮೆ.

ಮೊದಲ ಪಂದ್ಯಗಳಲ್ಲಿನ ಪ್ರದರ್ಶನದ ಆಧಾರದಲ್ಲಿ ತೂಗಿ ನೋಡಿದಾಗ ಜಿಂಬಾಬ್ವೆ ಹೆಚ್ಚು ಕ್ತಿಯುತವಾಗಿ ಕಾಣಿಸುತ್ತದೆ. ಆದ್ದ ರಿಂದ ಅದು ಸೋಮವಾರದ ಪಂದ್ಯ ದಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿರುವುದೂ ಸಹಜ. ಹಾಗೆಂದು ಕೆನಡಾವನ್ನು ಕಡೆಗಣಿಸಲು ಸಾಧ್ಯವಾಗದು. ಶ್ರೀಲಂಕಾ ವಿರುದ್ಧದ ಸೋಲಿನ ನಂತರ ಕೆನಡಾ ತನ್ನ ಬ್ಯಾಟಿಂಗ್ ಬಲವನ್ನು ಹೇಗೆ ಹಿಗ್ಗಿಸಬೇಕು ಎನ್ನುವ ಕಡೆಗೆ ಗಮನ ನೀಡಿದೆ.

ಲಂಕಾ ತಂಡವನ್ನು ಅದರದೇ ನೆಲದಲ್ಲಿ ಎದುರಿಸಿ ನಿರಾಸೆ ಹೊಂದಿದ್ದು ಕೆನಡಾಕ್ಕೆ ಅಷ್ಟೇನು ಬೇಸರ ತಂದಿಲ್ಲ. ಆದರೆ ಜಿಂಬಾಬ್ವೆ ಎದುರು ಅಂಥ ನಿರಾಸೆ ಅನುಭವಿಸಬಾರದು ಎನ್ನುವುದು ಈ ತಂಡದ ನಾಯಕ ಆಶಿಶ್ ಬಾಗೈ ಉದ್ದೇಶ. ಹರ್ವಿರ್ ಬೈಡ್ವಾನ್ ಹಾಗೂ ಅನುಭವಿ ಜಾನ್ ಡೇವಿಸನ್ ಅವರು ಪ್ರದರ್ಶನ ಮಟ್ಟವನ್ನು ಕಾಯ್ದುಕೊಂಡಿದ್ದಾರೆ. ಆದರೆ ಕೆನಡಾಕ್ಕೆ ಆತಂಕ ಕಾಡುತ್ತಿರುವುದು ಮುಂಚೂಣಿಯ ಬೌಲರ್‌ಗಳು ವಿಫಲವಾಗಿದ್ದರಿಂದ.

ಖುರ್ರಮ್ ಚೋಹಾನ್ ಹಾಗೂ ಹೆನ್ರಿ ಒಸಿಂಡೆ ಅವರು ಹೊಸ ಚೆಂಡಿನೊಂದಿಗೆ ದಾಳಿ ನಡೆಸಿದಾಗ ಬ್ಯಾಟ್ಸ್‌ಮನ್‌ಗಳಲ್ಲಿ ಭಯ ಹುಟ್ಟುವಂತೆ ಮಾಡಲು ಸಾಧ್ಯವಾಗಿಲ್ಲ. ಬ್ಯಾಟಿಂಗ್ ವಿಭಾಗದಲ್ಲಿಯೂ ಆರಂಭದ ಕ್ರಮಾಂಕದವರು ವಿಫಲರಾಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ನಾಯಕ ಆಶಿಶ್ ಬಾಗೈ ಹಾಗೂ ರಿಜ್ವಾನ್ ಚೀಮಾ ಅವರು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

ಆದರೆ ಅವರಿಗಿಂತ ಮೊದಲು ಕ್ರೀಸ್‌ಗೆ ಬರುವವರು ಇನಿಂಗ್ಸ್‌ಗೆ ಭದ್ರ ಬುನಾಧಿ ಹಾಕುತ್ತಿಲ್ಲ ಎನ್ನುವುದೇ ಆತಂಕಕ್ಕೆ ಕಾರಣ. ಈ ಕೊರತೆಯನ್ನು ಜಿಂಬಾಬ್ವೆ ವಿರುದ್ಧ ನೀಗಿಸಿಕೊಳ್ಳಲು ಸಾಧ್ಯವಾಗುತ್ತದೆಯೇ? ಎಂದು ಕಾಯ್ದು ನೋಡಬೇಕು. ಜಿಂಬಾಬ್ವೆ ಕೂಡ ಕೆಲವು ಸಮಸ್ಯೆಗಳನ್ನು ಹೊಂದಿದೆ. ಕ್ರಿಸ್ ಮೊಫು ಹೊರತು ಬಾಕಿ ಬೌಲರ್‌ಗಳು ಅಷ್ಟಾಗಿ ಪರಿಣಾಮ ಮಾಡಿಲ್ಲ. ಬ್ಯಾಟಿಂಗ್ ವಿಭಾಗದಲ್ಲಿ ಅನುಭವಿಗಳಿಂದ ನಿರೀಕ್ಷಿತ ಆಟವೂ ಸಾಧ್ಯವಾಗಿಲ್ಲ. ನಾಯಕ ಎಲ್ಟಾನ್ ಚಿಗುಂಬುರಾ, ತಟೇಂಡ ತೈಬು, ಬ್ರೆಂಡನ್ ಟೇಲರ್ ಹಾಗೂ ರೇ ಪ್ರೈಸ್ ಅವರು ನೈಜ ಆಟವಾಡುವುದು ಇನ್ನೂ ಬಾಕಿ!

ಜಿಂಬಾಬ್ವೆ / ಎಲ್ಟಾನ್ ಚಿಗುಂಬುರಾ (ನಾಯಕ), ರೆಜಿಸ್ ಚಕಾಬ್ವ, ಚಾರ್ಲ್ಸ್ ಕೊವೆಂಟ್ರಿ, ಗ್ರೇಮ್ ಕ್ರೆಮರ್, ಕ್ರೆಗ್ ಇರ್ವಿನ್, ಟೆರಿ ಡಫಿನ್, ಜಾರ್ಜ್ ಲ್ಯಾಂಬ್, ಶಿಂಗಿರೈ ಮಸಕಜ, ಕ್ರಿಸ್ ಮೊಫು, ರೇ ಪ್ರೈಸ್, ತಟೇಂಡ ತೈಬು, ಟಿನೇಶ್ ಪನ್ಯಾಗರ, ಬ್ರೆಂಡನ್ ಟೇಲರ್, ಪ್ರಾಸ್ಪರ್ ಉತ್ಸೇಯ, ಸೀನ್ ವಿಲಿಯಮ್ಸ್.

ಕೆನಡಾ /  ಆಶಿಶ್ ಬಾಗೈ (ನಾಯಕ), ರಿಜ್ವಾನ್ ಚೀಮಾ, ಹರ್ವಿರ್ ಬೈಡ್ವಾನ್, ನಿತೀಶ್ ಕುಮಾರ್, ಹೀರಲ್ ಪಟೇಲ್, ಟೈಸನ್ ಗೊರ್ಡಾನ್, ಹೆನ್ರಿ ಒಸಿಂಡೆ, ಜಾನ್ ಡೇವಿಸನ್, ರವಿಂದು ಗುಣಶೇಕರ, ಪಾರ್ಥ್ ದೇಸಾಯಿ, ಖುರ್ರಮ್ ಚೋಹಾನ್, ಜಿಮ್ಮಿ ಹಂಸ್ರಾ, ಜುಬಿನ್ ಸುಕಾರಿಯಾ ಮತ್ತು ಬಾಲಾಜಿ ರಾವ್.

ಆಟದ ಅವಧಿ: ಮಧ್ಯಾಹ್ನ 2.00ಕ್ಕೆ ಆರಂಭ (ಭಾರತೀಯ ಕಾಲಮಾನ).
ನೇರ ಪ್ರಸಾರ: ಇಎಸ್‌ಪಿಎನ್/ಸ್ಟಾರ್ ಕ್ರಿಕೆಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT