ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನೆಪದರ ನಿಯಮಕ್ಕೇಕೆ ಒತ್ತಾಯವಿಲ್ಲ?

Last Updated 21 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಜಾತಿ ಕುರಿತ ಸಂವಾದದಲ್ಲಿ ಮೀಸಲಾತಿಯ ಪರಿಕಲ್ಪನೆಯ ಚರ್ಚೆ ಸಹಜವಾಗಿ ಬಂದೇ ಬರುತ್ತದೆ. ಈ ಬಗ್ಗೆ ಬರೆಯುತ್ತಾ ಗೋಪಾಲ್‌ಗುರು ಹಾಗೂ ಸುಂದರ ಸರುಕ್ಕೈ ಅವರು, ಭಾರತದಲ್ಲಿ ಇವತ್ತಿನ ಕಂಪೆನಿಗಳು ಹೇಗೆ ಮೀಸಲಾತಿಯನ್ನೇ ಆಧರಿಸಿವೆ ಮೊದಲಾದ ವಿಷಯ ಗಳನ್ನು ಸರಿಯಾಗಿಯೇ ಮಂಡಿಸಿದ್ದಾರೆ.

ಆರ್ಥಿಕವಾಗಿ ದುರ್ಬಲ ನಾದ ಒಬ್ಬ ದಲಿತನು ಆರ್ಥಿಕವಾಗಿ ಅಷ್ಟೇ ದುರ್ಬಲನಾದ ಬ್ರಾಹ್ಮಣನಿಗಿಂತ ಎಷ್ಟೋ ಹೆಚ್ಚು ಅಸಹನೀಯ ಮತ್ತು ಅಸಹಾಯಕ ಸ್ಥಿತಿಯಲ್ಲಿ ಇರುತ್ತಾನೆ ಎಂಬ ವಾದವೂ ಸರಿಯೇ. ಹೀಗಾಗಿ ಹಿಂದುಳಿದ ಜಾತಿಗಳಿಗೆ ಹಾಗೂ ಪರಿಶಿಷ್ಟ ಜಾತಿಗಳಿಗೆ, ಪಂಗಡಗಳಿಗೆ ಉದ್ಯೋಗ, ಶಿಕ್ಷಣ ಮೊದಲಾದ ಕ್ಷೇತ್ರಗಳಲ್ಲಿ ಮೀಸಲಾತಿ ಇರಬೇಕೆನ್ನುವುದು ಸಮರ್ಥನೀಯವೇ ಹೌದು. ಅಂಥ ಮೀಸಲಾತಿಯ ಪ್ರಮಾಣ ಇನ್ನಷ್ಟು ಏರಿದರೂ ತಪ್ಪಿಲ್ಲ.

ಮೀಸಲಾತಿ ನೀಡುವುದರಿಂದ ಅಂಥ ಹಿಂದುಳಿದವರ ಆರ್ಥಿಕ ಸ್ಥಿತಿ ಮಾತ್ರ ಸುಧಾರಿಸುತ್ತದೆ; ಆದರೆ ಸಾಮಾಜಿಕವಾಗಿ ಅವರಿಗೆ ಸಮಾನವಾದ ಸ್ಥಾನಮಾನ ಸಿಗುವುದಿಲ್ಲ ಎಂದು ವಾದಿಸು ವವರಿದ್ದಾರೆ. ಆದರೆ, ಸರ್ಕಾರಿ ಉದ್ಯೋಗ ಇತ್ಯಾದಿಗಳು ಏನಿಲ್ಲದಿದ್ದರೂ ವಿವಿಧ ಜಾತಿಗಳ ನಡುವೆ ಹೊಕ್ಕು ಬಳಕೆಯನ್ನು ಹೆಚ್ಚಿಸುತ್ತವೆ. ಹೀಗಾಗಿ ಜಾತಿಯ ಕಾರಣದಿಂದಾಗುವ ತಾರತಮ್ಯ ಅಷ್ಟರಮಟ್ಟಿಗೆ ಕಡಿಮೆಯಾಗುತ್ತದೆ ಎಂಬುದನ್ನು ಒಪ್ಪಬೇಕು. ಹೀಗಲ್ಲದೆ, ಸಾಮಾಜಿಕ ಸಮಾನತೆಯ ಯಾವ ಆಶಯವೂ ಮೀಸಲಾತಿಯಿಂದ ಈಡೇರುವುದಿಲ್ಲ ಎಂದಾದರೆ, ಅದರಿಂದ ಆಗಬೇಕಾದ ಪರಿಣಾಮ ಏನೂ ಆಗುವುದಿಲ್ಲ ಎಂದಂತಾಗುತ್ತದೆ.

ಈ ತನಕ ಮೀಸಲಾತಿ ಬಗ್ಗೆ ಚರ್ಚಿಸಿದವರು ಎತ್ತದ ಕೆನೆಪದರದ ಪ್ರಶೆಯನ್ನು ಇಲ್ಲಿ ಎತ್ತಬೇಕಾಗಿದೆ. ಆರ್ಥಿಕವಾಗಿ ಸದೃಢರಾಗಿರುವ ದಲಿತರು ಯಾರೂ ಈ ಬಗ್ಗೆ ಚಕಾರ ಎತ್ತುವುದಿಲ್ಲ. ಶಿವಸುಂದರ್ ಅವರು ನೀಡುವ ಸರ್ಕಾರಿ ಉದ್ಯೋಗದ ಉದಾಹರಣೆಯನ್ನೇ ಗಮನಿಸಿ. ಲಭ್ಯವಿರುವ ನೂರು ಅವಕಾಶಗಳಲ್ಲಿ ದಲಿತರಿಗೆ ಇಪ್ಪತ್ತೈದು ಹುದ್ದೆಗಳನ್ನು ಮೀಸಲಾಗಿ ನೀಡಿದರೆ, ಅಷ್ಟು ಹುದ್ದೆಗಳಿಗೂ ಪ್ರಬಲ ಸ್ಪರ್ಧಿಗಳೆಂದರೆ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಉತ್ತಮ ಕೌಟುಂಬಿಕ ಹಿನ್ನೆಲೆ ಹೊಂದಿದ ದಲಿತ ಅಭ್ಯರ್ಥಿಗಳೇ ಆಗಿರುತ್ತಾರೆ. ಮತ್ತು ಇಂಥ ಎಷ್ಟೋ ಪ್ರಬಲ ಸ್ಪರ್ಧಿಗಳು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗಿಂತ ಹೆಚ್ಚು ಅಂಕಗಳನ್ನು ಹೊಂದಿ, ಸಾಮಾನ್ಯ ವರ್ಗದಲ್ಲಿಯೇ ಆಯ್ಕೆಯಾಗುವುದೂ ಇದೆ. ಇದು ಸಂತಸ ಪಡಬೇಕಾದ ಸಂಗತಿಯೇ. ಮೀಸಲಾತಿ ನಿಜವಾಗಿ ಸಾಧಿಸಬೇಕಾದದ್ದೇ ಇದನ್ನು.

ಆದರೆ, ಆರ್ಥಿಕವಾಗಿ, ಸಾಮಾಜಿಕವಾಗಿ ಮೇಲೇರಲು ಯಾರಿಗೆ ಮೀಸಲಾತಿ ಹೆಚ್ಚು ಅವಶ್ಯಕವೋ ಅಂಥವರಿಗೆ ನಿಜವಾಗಿ ಅವಕಾಶ ಸಿಗುವುದಿಲ್ಲ. ಅಂಥ ದಲಿತರಿಗೆ ಮೀಸಲಾತಿಯ ಹಕ್ಕು ಸಿಗಬೇಡವೇ?

ಸುಶಿಕ್ಷಿತರಾದ ಹಾಗೂ ಆರ್ಥಿಕವಾಗಿ ಸದೃಢರಾದ ಎಷ್ಟೋ ದಲಿತರು ಇಂದು ತಮ್ಮ ದಲಿತೀಯ ಅಸ್ತಿತ್ವದ ಬಗ್ಗೆ ಕೀಳರಿಮೆಯನ್ನು ಹೊಂದಿಲ್ಲ. ಹೀಗಾಗಿಯೇ ದಲಿತತ್ವ ಸೂಚಕವಾದ ತಮ್ಮ ಉಪನಾಮಗಳನ್ನು ಸಹಜವಾಗಿಯೇ ಹೆಸರಿನ ಜೊತೆ ಸೇರಿಸುತ್ತಾರೆ. ಹೀಗೆ ಆತ್ಮವಿಶ್ವಾಸವನ್ನು ಹೊಂದಿದ ಒಂದು ತಲೆಮಾರಿನವರು ಈಗ ಮಧ್ಯವಯಸ್ಸನ್ನು ದಾಟಿದ್ದಾರೆ. ಹೀಗಿರುವಾಗ ಇನ್ನೊಂದೆರಡು ತಲೆಮಾರುಗಳು ಕಳೆದ ನಂತರವಷ್ಟೇ ಕೆನೆಪದರದ ನಿಯಮವನ್ನು ತಂದರೆ ಸಾಕು ಎಂದರೆ, ಬಡವರಾದ ದಲಿತರ ಸ್ಥಿತಿ ಮತ್ತಷ್ಟು ಶೋಚನೀಯವಾಗುತ್ತದೆ.

ಕೆನೆಪದರ ನಿಯಮ ತರುವುದೆಂದರೆ, ದಲಿತರನ್ನು ಒಡೆಯುವ ತಂತ್ರ ಎಂಬ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸುವುದಿದೆ. ಆದರೆ, ಹುಟ್ಟಿನಿಂದ ಬರುವ ಜಾತಿ ಕಾರಣದಿಂದ ಉಂಟಾಗುವ ಅಥವಾ ಉಂಟು ಮಾಡುವ ಭೇದ ಮತ್ತು ವರ್ಗೀಕರಣದಿಂದ ಉಂಟಾಗುವ ದೂರಗಾಮಿ ದುಷ್ಪರಿಣಾಮಕ್ಕಿಂತ, ಕಾಲಕಾಲಕ್ಕೆ ಬದಲಾಗಬಹುದಾದ ಆರ್ಥಿಕ ಸ್ಥಿತಿಯ ಕಾರಣದಿಂದ ಉಂಟಾಗುವ ಭೇದ ಮತ್ತು ವರ್ಗೀಕರಣ ಕಡಿಮೆ ಅಪಾಯಕರ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು.

ಮುಂದುವರಿದ ದಲಿತರು ಅಥವಾ ರಾಜಕೀಯದಲ್ಲಿರುವ ದಲಿತ ನಾಯಕರು ಹಿಂದುಳಿದ ದಲಿತರ ಏಳಿಗೆಗಾಗಿ ಶ್ರಮಿಸುವುದಿಲ್ಲ ಎಂಬ ಆರೋಪವನ್ನು ಎಲ್ಲೆಡೆ ಕೇಳಿರುತ್ತೇವೆ. ಇದರಲ್ಲಿ ಸತ್ಯ ಇಲ್ಲದೆ ಇಲ್ಲ. `ಒಬ್ಬನೇ ಒಬ್ಬ ದಲಿತ ಪ್ರತಿನಿಧಿ ಎಂದೂ ಕೂಡ, ದಲಿತ ವಿರೋಧಿ ನಿಲುವಿನ ವಿರುದ್ಧ ಅಥವಾ ದಲಿತರ ಮೇಲೆ ಹೆಚ್ಚುತ್ತಿರುವ ದುಷ್ಕೃತ್ಯಗಳ ಬಗ್ಗೆ ದನಿಯೆತ್ತಿಲ್ಲ .... ಹೀಗಾಗಿ ದಲಿತರಿಗೆ ಮೀಸಲಾತಿಯನ್ನು ತೆಗೆದು ಹಾಕಬೇಕು' ಎಂದು ಸಿಟ್ಟಿನಿಂದ ಬಾಬಾಸಾಹೇಬ್ ಅಂಬೇಡ್ಕರರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಈಚೆಗೆ ಅಭಿಪ್ರಾಯಪಟ್ಟುದನ್ನು ಇಲ್ಲಿ ನೆನೆಯಬಹುದು.

ಕೆನೆಪದರದ ಬಗ್ಗೆ ದಲಿತ ಬುದ್ಧಿಜೀವಿಗಳು ಹಾಗೂ ದಲಿತೇತರ ಪ್ರಗತಿಪರರು ಮಾತನಾಡುವುದಿಲ್ಲ ಎಂಬುದನ್ನು ಕೂಡ ಮೇಲಿನ ಪ್ರಕಾಶ್ ಅಂಬೇಡ್ಕರ್ ಮಾತಿನ ಹಿನ್ನೆಲೆಯೊಂದಿಗೆ ಅರ್ಥ ಮಾಡಿಕೊಳ್ಳಬಹುದು. ದಲಿತರ ಪೈಕಿ ಧ್ವನಿಯಿರುವ ಮುಂದುವರಿದ ದಲಿತರ ಅವಕೃಪೆಗೆ ಒಳಗಾಗಲು ದಲಿತೇತರ ಪ್ರಗತಿಪರರು ಸಿದ್ಧರಿಲ್ಲ!

ಇತರ ಹಿಂದುಳಿದ ಜಾತಿಗಳಿಗೆ (ಓಬಿಸಿ) ಸಂಬಂಧಿಸಿ ಕೆನೆಪದರದ ಆದಾಯ ಮಿತಿಯನ್ನು ವಾರ್ಷಿಕ ಎಂಟು ಲಕ್ಷ ರೂಪಾಯಿಗಳಿಗೆ ಏರಿಸಬೇಕು ಎಂಬಿತ್ಯಾದಿ ಪ್ರಸ್ತಾವನೆಗಳು ಕೂಡ ಈ ಕೆನೆಪದರದ ಪರಿಕಲ್ಪನೆಗೇ ಅಪಚಾರ ಉಂಟು ಮಾಡುವಂಥವು. ಇಷ್ಟು ಹೆಚ್ಚಿನ ಆದಾಯ ಮಿತಿಯನ್ನು ನಿಗದಿ ಪಡಿಸುವುದಾದರೆ, ಅದರಿಂದ, ಮುಂದುವರಿದ ಬಹಳ ಮಂದಿಯನ್ನು ಹೊರಗಿಟ್ಟಂತಾಗುವುದಿಲ್ಲ.

ತಮ್ಮ ತಮ್ಮ ಸ್ವಂತ ಹಿತಾಸಕ್ತಿಗಳನ್ನು ಕಾಯುವುದು ಮೇಲು ಜಾತಿಯವರಿಗೆ ಎಂತೋ ಅಂತೆಯೇ ಉತ್ತಮ ಸ್ಥಿತಿಯಲ್ಲಿರುವ ದಲಿತ ಅಥವಾ ಹಿಂದುಳಿದ ಜಾತಿಗಳ ನಾಯಕರಿಗೂ ಮುಖ್ಯ ಎಂಬುದು ಮೇಲಿನ ಅಂಶಗಳಿಂದ ಸ್ಪಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ, ನಾವು ಪ್ರತಿಪಾದಿಸುತ್ತಿರುವ ಸಿದ್ಧಾಂತಗಳನ್ನು ಹಾಗೂ ದಲಿತ - ಬಂಡಾಯ ಚಳವಳಿಗಳು ಸೃಷ್ಟಿಸಿದ ಸಾಹಿತ್ಯವನ್ನು ಸಮಾಜಶಾಸ್ತ್ರದ ಒಳನೋಟಗಳಿಂದ ನೋಡುವುದರ ಜೊತೆಗೆ ಹೆಚ್ಚು ಹೆಚ್ಚು ಆತ್ಮನಿರೀಕ್ಷಣೆಯ ಮೂಲಕ ಮತ್ತು ತತ್ವಶಾಸ್ತ್ರೀಯ ಒಳನೋಟಗಳ ಮೂಲಕ ಪರಿಶೀಲಿಸುವುದು ಕೂಡ ಅಗತ್ಯವೆಂದು ತೋರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT