ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್ಸಿ ಪರೀಕ್ಷಾ ಅವ್ಯವಹಾರ: ಸಿಐಡಿ ತನಿಖೆಗೆ ಹೈಕೋರ್ಟ್ ಆದೇಶ

Last Updated 18 ಡಿಸೆಂಬರ್ 2010, 8:45 IST
ಅಕ್ಷರ ಗಾತ್ರ

ಬೆಂಗಳೂರು: ಗೆಜೆಟೆಡ್ ಪ್ರೊಬೆಷನರ್ಸ್‌ (ಗ್ರೂಪ್ ಎ ಮತ್ತು ಬಿ) ನೇಮಕಾತಿಗೆ ಕರ್ನಾಟಕ ಲೋಕ ಸೇವಾ ಆಯೋಗ 1998, 1999 ಹಾಗೂ 2004ರಲ್ಲಿ ನಡೆಸಿರುವ ಆಯ್ಕೆ ಪ್ರಕ್ರಿಯೆ ತನಿಖೆಯನ್ನು ಸಿಐಡಿಗೆ ವಹಿಸಿ ಹೈಕೋರ್ಟ್ ಗುರುವಾರ ಆದೇಶಿಸಿದೆ.

ಡಿಐಜಿ ಶ್ರೇಣಿ ಅಥವಾ ಅವರಿಗಿಂತ ಉನ್ನತ ಶ್ರೇಣಿಯ ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಹೇಳಿದೆ. ತನಿಖೆಯ ಮೇಲ್ವಿಚಾರಣೆಗೆ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿ ಅಜಿತ್ ಗುಂಜಾಳ್ ಅವರನ್ನು ನೇಮಿಸಲಾಗಿದೆ. ಪ್ರತಿ 15 ದಿನಗಳಿಗೆ ಒಮ್ಮೆ ತನಿಖೆಯ ಪ್ರಗತಿಯ ಬಗ್ಗೆ ತಿಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿರುವ ಪೀಠ, ಬರುವ ಮಾರ್ಚ್ 31ರ ಒಳಗೆ ವರದಿ ನೀಡುವಂತೆ ಆದೇಶಿಸಿದೆ.

ಈ ವಿವಾದವನ್ನು ಸಿಬಿಐ ತನಿಖೆಗೆ ಆದೇಶಿಸುವಂತೆ ಕೋರಿ ಕಲೀಲ್ ಅಹಮ್ಮದ್ ಹಾಗೂ ಇತರ ಹಲವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸಿದರು.

 ಈ ಅವಧಿಯಲ್ಲಿ ನಡೆದ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು 2006ರಲ್ಲಿ ನೇಮಕಾತಿ ಮಾಡಲಾಗಿದೆ. ನೇಮಕಾತಿಯಲ್ಲಿ ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತ ನಡೆದಿದೆ ಎನ್ನುವುದು ಅರ್ಜಿದಾರರ ದೂರು. 1998ರಲ್ಲಿ ಮೊದಲು 415 ಹುದ್ದೆಗಳಿಗೆ ಅರ್ಜಿ ಕರೆದು ನಂತರ ಅದನ್ನು 383ಕ್ಕೆ ಇಳಿಸಲಾಯಿತು. ಅಂತೆಯೇ 1999ರಲ್ಲಿ 190 ಹುದ್ದೆಯನ್ನು 191ಕ್ಕೆ ಏರಿಸಲಾದರೆ, 2004ರಲ್ಲಿ 169 ಹುದ್ದೆಯನ್ನು 152ಕ್ಕೆ ಇಳಿಸುವುದರೊಂದಿಗೆ ಗೊಂದಲಮಯ ವಾತಾವರಣ ನಿರ್ಮಾಣ ಮಾಡಲಾಗಿದೆ ಎಂದು ದೂರಿದ್ದಾರೆ.

ಸಾಮಾನ್ಯ ವರ್ಗದಲ್ಲಿ ಮುಖ್ಯ ಪರೀಕ್ಷೆ ಬರೆದಿರುವ ಮಹಿಳಾ ಅಭ್ಯರ್ಥಿಯೊಬ್ಬರು, ವ್ಯಕ್ತಿತ್ವ ಪರೀಕ್ಷೆಯಲ್ಲಿ 2-ಬಿ ವರ್ಗಕ್ಕೆ ಬದಲಾಯಿಸಿಕೊಂಡು ಆಯ್ಕೆಯಾಗಿದ್ದಾರೆ. ಪರೀಕ್ಷೆ ಬರೆಯದವರಿಗೆ, ವಯೋಮಾನ ಮೀರಿದವರಿಗೆ ನೇಮಕಾತಿ ಮಾಡಲಾಗಿದೆ. ಇದೇ ರೀತಿಯ ಬಹಳಷ್ಟು ಅವ್ಯವಹಾರ ನೇಮಕಾತಿಯಲ್ಲಿ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.

ಅವ್ಯವಹಾರದ ಕುರಿತು ತನಿಖೆಗೆ ಸರ್ಕಾರ ಅಂದಿನ ಮುಖ್ಯ ಕಾರ್ಯದರ್ಶಿ ಕೆ.ಕೆ.ಮಿಶ್ರಾ ನೇತೃತ್ವದ ಸಮಿತಿ ರಚನೆ ಮಾಡಿತ್ತು. ಈ ಸಮಿತಿ ತನಿಖೆ ನಡೆಸುವ ಸಂದರ್ಭದಲ್ಲಿ ಕೆಪಿಎಸ್‌ಸಿ ಸಹಕಾರ ನೀಡಲಿಲ್ಲ. ಇದು ಭ್ರಷ್ಟಾಚಾರ ನಡೆದಿರುವುದಕ್ಕೆ ಸಾಕ್ಷಿಯಾಗಿದೆ. ಸಮಿತಿಯ ವರದಿಯಲ್ಲಿ ಕೂಡ ಅವ್ಯವಹಾರದ ಬಗ್ಗೆ ಸಾಬೀತಾಗಿದೆ. ಆದರೆ ಸರ್ಕಾರ ಮಾತ್ರ ಇದುವರೆಗೆ ಈ ವರದಿಯ ಆಧಾರದ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಅರ್ಜಿದಾರರ ಪರ ವಕೀಲ ಎಂ.ಬಿ.ನರಗುಂದ ತಿಳಿಸಿದರು.

ಗುರುವಾರ ವಿಚಾರಣೆ ವೇಳೆ, ನ್ಯಾಯಮೂರ್ತಿಗಳು, ಸರ್ಕಾರದ ಪರ ವಕೀಲರನ್ನು ಉದ್ದೇಶಿಸಿ ‘ಇದು ಬಹಳ ಗಂಭೀರವಾದ ವಿಷಯ. ತನಿಖೆಯನ್ನು ಸಿಬಿಐಗೆ ವಹಿಸಿಕೊಡಬೇಕೋ ಅಥವಾ ಸಿಐಡಿಗೋ’ ಎಂದು ಪ್ರಶ್ನಿಸಿದರು. ಆಗ ಸರ್ಕಾರಿ ವಕೀಲರು ಸಿಐಡಿಗೆ ವಹಿಸಿಕೊಡಲು ಒಪ್ಪಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT