ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ ಹಗರಣ: ಹೈಕೋರ್ಟ್ ಚಾಟಿ

Last Updated 30 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ 1998, 1999 ಮತ್ತು 2004ರಲ್ಲಿ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆಸಿದ ತಪ್ಪಿತಸ್ಥರ ವಿರುದ್ಧ ಸರ್ಕಾರ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಕ್ರಮ ಜರುಗಿಸಲು ನಮಗೂ ಅವಕಾಶ ನೀಡುತ್ತಿಲ್ಲ' ಎಂದು ಹೈಕೋರ್ಟ್ ಕಿಡಿಕಾರಿದೆ.

ಖಲೀಲ್ ಅಹಮದ್ ಮತ್ತು ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮಂಗಳವಾರ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ, `ಈ ಪ್ರಕರಣದ ವಿಚಾರಣೆ ಮುಂದೂಡುವಂತೆ ಸರ್ಕಾರ ಪದೇ ಪದೇ ಕೋರುತ್ತಿದೆ' ಎಂದು ಆಕ್ಷೇಪಿಸಿತು.

`ಅವ್ಯವಹಾರದಲ್ಲಿ ಲಾಭ ಮಾಡಿಕೊಂಡಿದ್ದಾರೆ ಎನ್ನಲಾದವರು ಇವತ್ತಿಗೂ ಅಧಿಕಾರ ಅನುಭವಿಸುತ್ತಿದ್ದಾರೆ. ಇದು ಸರಿ ಎಂದು ಸರ್ಕಾರಕ್ಕೆ ಅನಿಸುತ್ತಿದೆಯೇ? ಅಕ್ರಮದ ಕುರಿತು ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೆ ಎಂಬ ಬಗ್ಗೆ ಮಾಹಿತಿಯನ್ನು ಏಪ್ರಿಲ್ 24ರಂದೇ ಕೋರಲಾಗಿದೆ. ಆದರೆ ಇದುವರೆಗೂ ಸರ್ಕಾರ ಹೇಳಿಕೆ ಸಲ್ಲಿಸಿಲ್ಲ. ಅರ್ಜಿದಾರರ ಕಾಯುವಿಕೆ ಮುಗಿದಿಲ್ಲ' ಎಂದು ಪೀಠ ತರಾಟೆಗೆ ತೆಗೆದುಕೊಂಡಿತು.

ಎರಡು ವಾರಗಳ ಕಾಲಾವಕಾಶ ನೀಡಲಾಗುವುದು. ಅಷ್ಟರಲ್ಲಿ ಸರ್ಕಾರದ ನಿಲುವು ಏನೆಂಬುದನ್ನು ತಿಳಿಸಬೇಕು ಎಂದು ಪೀಠ ತಾಕೀತು ಮಾಡಿ ವಿಚಾರಣೆಯನ್ನು ಆಗಸ್ಟ್ 12ಕ್ಕೆ ಮುಂದೂಡಿತು.

ಬೆಂಗಳೂರು:  ರಾಜ್ಯದ ಪೊಲೀಸ್ ದೂರು ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಂ.ಪಿ. ಚಿನ್ನಪ್ಪ ಅವರನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ ಎಂದು ಸರ್ಕಾರ ಮಂಗಳವಾರ ಹೈಕೋರ್ಟ್‌ಗೆ ತಿಳಿಸಿದೆ. ಇದನ್ನು ದಾಖಲು ಮಾಡಿಕೊಂಡ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ನೇತೃತ್ವದ ವಿಭಾಗೀಯ ಪೀಠ, `ಇನ್ನು ಎರಡು ತಿಂಗಳಲ್ಲಿ ರಾಜ್ಯದಲ್ಲಿ ಪೊಲೀಸ್ ದೂರು ಪ್ರಾಧಿಕಾರ ಕಾರ್ಯಾರಂಭ ಮಾಡಬೇಕು' ಎಂದು ನಿರ್ದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT