ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಟಿಸಿಎಲ್ 2000 ಹುದ್ದೆ ಭರ್ತಿ ಶೀಘ್ರ

Last Updated 18 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯ ವಿದ್ಯುತ್ ಪ್ರಸರಣ ನಿಗಮದಲ್ಲಿ (ಕೆಪಿಟಿಸಿಎಲ್) ಖಾಲಿ ಇರುವ 2,000 ಸಹಾಯಕ ಎಂಜಿನಿಯರ್ ಮತ್ತು ಕಿರಿಯ ಎಂಜಿನಿಯರ್‌ಗಳ ನೇಮಕಕ್ಕೆ ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿದೆ. ನೇಮಕಾತಿ ಪ್ರಕ್ರಿಯೆಯನ್ನು ಆದಷ್ಟು ಬೇಗ ಆರಂಭಿಸಲಾಗುವುದು ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಬುಧವಾರ ಇಲ್ಲಿ ಹೇಳಿದರು.

ನೇಮಕ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಮಾಡಿಕೊಡಲು ವೃತ್ತಿಪರ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲು ನಿರ್ಧರಿಸಲಾಗಿದೆ. ಈ ಸಲುವಾಗಿ ಟೆಂಡರ್ ಕರೆಯಲಾಗುವುದು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ) ಕೂಡ ಇದೇ ರೀತಿ 292 ಮಂದಿ ಎಂಜಿನಿಯರ್‌ಗಳನ್ನು ನೇಮಕ ಮಾಡಿದೆ. ಅದೇ ಮಾನದಂಡವನ್ನು ಈ ನೇಮಕಾತಿಯಲ್ಲೂ ಅಳವಡಿಸಲಾಗುವುದು. ಪ್ರತಿಷ್ಠಿತ ಸಂಸ್ಥೆಗಳೇ ಲಿಖಿತ ಪರೀಕ್ಷೆಯನ್ನು ಆಯೋಜಿಸಿ, ಆಯ್ಕೆ ಪಟ್ಟಿಯನ್ನೂ ಸಿದ್ಧಪಡಿಸಲಿವೆ ಎಂದು ಅವರು ಹೇಳಿದರು.

ವಿದ್ಯುತ್ ಸಮಸ್ಯೆ: ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆ ಇರುವ ಕಾರಣ ಮುಂದಿನ ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಅದನ್ನು ಸಮರ್ಥವಾಗಿ ಎದುರಿಸಲು ಈಗಿನಿಂದಲೇ ತಯಾರಿ ನಡೆದಿದೆ.

ಈಗ ಬರಿ 28 ದಶಲಕ್ಷ ಯೂನಿಟ್ ಜಲವಿದ್ಯುತ್ ಉತ್ಪಾದಿಸಲಾಗುತ್ತಿದೆ. ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಜಲವಿದ್ಯುತ್ ಉತ್ಪಾದನೆ ಹೆಚ್ಚಿಸಲಾಗುತ್ತಿದೆ. ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳ ನಿರ್ವಹಣೆ ಕೈಗೆತ್ತಿಕೊಂಡಿದ್ದು ಡಿಸೆಂಬರ್‌ವರೆಗೂ ಅದು ಮುಂದುವರಿಯಲಿದೆ ಎಂದರು.

ಗುಜರಾತ್ ಸರ್ಕಾರ ಈಗ ರಾಜ್ಯಕ್ಕೆ 500 ಮೆಗಾವಾಟ್ ವಿದ್ಯುತ್ ಸರಬರಾಜು ಮಾಡುತ್ತಿದೆ. ಇನ್ನೂ 200 ಮೆಗಾವಾಟ್ ನೀಡುವುದಕ್ಕೆ ಒಪ್ಪಿಗೆ ಸೂಚಿಸಿದೆ. ಕಾರಿಡಾರ್ ಸಮಸ್ಯೆಯಿಂದ ವಿದ್ಯುತ್ ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.

ಎಬಿಸಿ ಕೇಬಲ್ ಹಾಕಲು ಕ್ರಮ: ಗ್ರಾಮೀಣ ಭಾಗದಲ್ಲಿ ಮಾಮೂಲಿ ವಿದ್ಯುತ್ ತಂತಿಗಳ ಬದಲಿಗೆ, ಕೇಬಲ್ ವೈರ್ ಮಾದರಿಯ `ಏರಿಯಲ್ ಬಂಚ್ ಕೇಬಲ್~ (ಎಬಿಸಿ) ಅಳವಡಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಬೆಸ್ಕಾಂನ ಸುಮಾರು 3000 ಕಿ.ಮೀ. ವ್ಯಾಪ್ತಿಯಲ್ಲಿ ಈ ರೀತಿಯ ಕೇಬಲ್ ಅಳವಡಿಸಲಾಗುವುದು. ಇದಕ್ಕೆ ಸುಮಾರು 351 ಕೋಟಿ ರೂಪಾಯಿ ಖರ್ಚಾಗಲಿದ್ದು, ಟೆಂಡರ್ ಮೂಲಕ ಗುತ್ತಿಗೆದಾರರನ್ನು ಆಯ್ಕೆ ಮಾಡಲಾಗುವುದು ಎಂದು ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಎಬಿಸಿ ಕೇಬಲ್‌ನಲ್ಲಿ ಅಲ್ಯೂಮಿನಿಯಂ ವಿದ್ಯುತ್ ತಂತಿಯ ಸುತ್ತ ದಪ್ಪ ಗಾತ್ರದಲ್ಲಿ ಪ್ಲಾಸ್ಟಿಕ್ ಹೊದಿಕೆ ಇರುತ್ತದೆ. ಇದನ್ನು ಅಳವಡಿಸುವುದರಿಂದ ವಿದ್ಯುತ್ ಕಳ್ಳತನ ತಡೆಯಬಹುದು. ಅದನ್ನು ಮುಟ್ಟಿದರೂ ಅಪಾಯ ಇಲ್ಲ. ಮರ-ಗಿಡಗಳಿಗೆ ತಾಕಿದರೂ ಸಮಸ್ಯೆ ಇರುವುದಿಲ್ಲ. ಇದನ್ನು ಹಂತಹಂತವಾಗಿ ರಾಜ್ಯದ ಎಲ್ಲ ಕಡೆಗೂ ವಿಸ್ತರಿಸುವ ಉದ್ದೇಶ ಇದೆ.

ಈಗಿರುವ ಹಾಗೆ ಮೂರು- ನಾಲ್ಕು ವೈರ್‌ಗಳು ಪ್ರತ್ಯೇಕವಾಗಿ ಇರುವುದಿಲ್ಲ. ಎಲ್ಲವನ್ನೂ ಪ್ಲಾಸ್ಟಿಕ್ ಹೊದಿಕೆಯಲ್ಲಿ ಒಂದೇ ಕಡೆ ಸೇರಿಸಲಾಗಿರುತ್ತದೆ ಎಂದು ವಿವರಿಸಿದರು. ಮಂಗಳೂರು ವಿದ್ಯುತ್ ವಿತರಣಾ ಸಂಸ್ಥೆ ಈ ರೀತಿಯ ವೈರ್ ಅಳವಡಿಕೆಗೆ ಟೆಂಡರ್ ಕರೆದಿತ್ತು. ಆದರೆ, ಅದರಲ್ಲಿ ಯಾರೂ ಭಾಗವಹಿಸಿರಲಿಲ್ಲ ಎಂದರು.

ಸಹಾಯಕ ಗ್ಯಾಂಗ್‌ಮನ್: `ವಿದ್ಯುತ್ ಕಂಬ ಹತ್ತುವುದು, ವಿದ್ಯುತ್ ಲೈನ್‌ಗಳಿಗೆ ತಗಲುವ ಮರಗಳನ್ನು ಕಡಿಯುವ ಕೆಲಸಕ್ಕೆ ಸಹಾಯಕ ಗ್ಯಾಂಗ್‌ಮನ್‌ಗಳನ್ನು ನೇಮಕ ಮಾಡುವ ಉದ್ದೇಶ ಇದೆ. ಇದಕ್ಕೆ ಕನಿಷ್ಠ ವಿದ್ಯಾರ್ಹತೆಯಾಗಿ 7ನೇ ತರಗತಿ ಅಥವಾ ಎಸ್ಸೆಸ್ಸೆಲ್ಸಿ ನಿಗದಿಪಡಿಸಲಾಗುವುದು. ಸರ್ಕಾರದ ಒಪ್ಪಿಗೆ ಸಿಕ್ಕ ನಂತರ ಕಾರ್ಯರೂಪಕ್ಕೆ ತರಲಾಗುವುದು~ ಎಂದರು.

ಮಹಿಳೆಗೆ ಲೈನ್‌ಮನ್ ಕೆಲಸ ಕಷ್ಟ
`ರಾಜ್ಯದ ವಿದ್ಯುತ್ ವಿತರಣಾ ಕಂಪೆನಿಗಳಲ್ಲಿ ಶೇ 30 ರಿಂದ 40ರಷ್ಟು ಸಿಬ್ಬಂದಿ ಕೊರತೆ ಇದೆ.
ಮಹಿಳೆಯರಿಗೆ ಮೀಸಲಾತಿ ನೀಡಲಿಲ್ಲ ಎಂಬ ಕಾರಣಕ್ಕೆ 2,000 ಲೈನ್‌ಮನ್‌ಗಳ ನೇಮಕಾತಿ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ. ಇತ್ತೀಚೆಗೆ ಈ ಕುರಿತು ಹೈಕೋರ್ಟ್ ತೀರ್ಪು ನೀಡಿ, ಸರ್ಕಾರವೇ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿ ಎಂದು ಹೇಳಿದೆ.

ಲೈನ್‌ಮನ್ ಕೆಲಸ ಮಹಿಳೆಯರಿಗೆ ಕಷ್ಟ. ಹೀಗಾಗಿ ಇತರ ಎಲ್ಲ ನೇಮಕಾತಿಗಳಲ್ಲಿ ಇರುವ ಹಾಗೆ ಲೈನ್‌ಮನ್ ಹುದ್ದೆಯ್ಲ್ಲಲಿ ಶೇ 30ರಷ್ಟು ಮೀಸಲಾತಿಯನ್ನು ಮಹಿಳೆಯರಿಗೆ ಕೊಡುವುದು ಕಷ್ಟ. ಹೀಗಾಗಿ ಅದನ್ನು ಕಡಿಮೆ ಮಾಡಲು ಸರ್ಕಾರದ ಅನುಮತಿ ಕೋರಲಾಗಿದೆ~.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT