ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ:ಬಂಜಾರ ಸಮುದಾಯದ ನಿರ್ಲಕ್ಷ್ಯ

Last Updated 7 ಮೇ 2012, 20:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ (ಕೆಪಿಸಿಸಿ) ಪದಾಧಿಕಾರಿಗಳನ್ನು ನೇಮಕ ಮಾಡುವಾಗ ಬಂಜಾರ ಸಮುದಾಯವನ್ನು ನಿರ್ಲಕ್ಷಿಸಲಾಗಿದೆ. ಪದಾಧಿಕಾರಿಗಳ ಪಟ್ಟಿಯಲ್ಲಿ ಸಮುದಾಯದ ಪ್ರತಿನಿಧಿಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದು ಕೋರಿ ಎಐಸಿಸಿ ಸದಸ್ಯ ಪ್ರಕಾಶ್ ರಾಥೋಡ್ ಅವರು ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.

ದಲಿತ ಸಮುದಾಯದ ಎಡಗೈ ಮತ್ತು ಬಲಗೈ ಪಂಗಡಗಳ ನಾಯಕರಿಗೆ ಪದಾಧಿಕಾರಿಗಳ ನೂತನ ಪಟ್ಟಿಯಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಲಾಗಿದೆ. ಆದರೆ, ಬಂಜಾರ ಸಮುದಾಯವನ್ನು ಪ್ರತಿನಿಧಿಸುವ ಮಾಜಿ ಸಚಿವರಾದ ಶಂಕರ ನಾಯ್ಕ, ಬಾಬುರಾವ್ ಚೌಹಾಣ್, ಎಚ್.ಡಿ. ಲಮಾಣಿ, ಮಾಜಿ ಶಾಸಕ ರುದ್ರಪ್ಪ ಲಮಾಣಿ ಮತ್ತಿತರ ನಾಯಕರಿದ್ದರೂ, ಸೂಕ್ತ ಸ್ಥಾನಮಾನ ನೀಡಲಾಗಿಲ್ಲ ಎಂದು ರಾಥೋಡ್ ಅವರು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

`ನಿಮ್ಮ ರಾಜಕೀಯ ಕಾರ್ಯದರ್ಶಿಯಾದ ಅಹ್ಮದ್ ಪಟೇಲ್ ಅವರನ್ನು ಸಮುದಾಯದ ಮುಖಂಡರು ಈ ಹಿಂದೆ ಭೇಟಿ ಮಾಡಿ, ರಾಜ್ಯಸಭೆಯಲ್ಲಿ ಒಂದು ಸ್ಥಾನ, ಎಐಸಿಸಿ ಕಾರ್ಯದರ್ಶಿ ಸ್ಥಾನ, ಎಲ್ಲ ಪ್ರದೇಶ ಕಾಂಗ್ರೆಸ್ ಸಮಿತಿಗಳ ಮಟ್ಟದಲ್ಲಿ ಒಂದು ಉಪಾಧ್ಯಕ್ಷರ ಸ್ಥಾನ, ತಲಾ ಎರಡು ಕಾರ್ಯದರ್ಶಿ ಹಾಗೂ ಪ್ರಧಾನ ಕಾರ್ಯದರ್ಶಿಗಳ ಸ್ಥಾನ ನೀಡುವಂತೆ ಕೋರಲಾಗಿತ್ತು~ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

2008ರಲ್ಲಿ ನಡೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಮುದಾಯದ ಎಂಟು ಮುಖಂಡರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಅವರ ಪೈಕಿ ಏಳು ಮಂದಿ ಚುನಾಯಿತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಆಸ್ಕರ್ ಫರ್ನಾಂಡಿಸ್, ರಾಹುಲ್ ಗಾಂಧಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಮಧುಸೂದನ ಮಿಸ್ತ್ರಿ, ಉಸ್ತುವಾರಿ ಕಾರ್ಯದರ್ಶಿ ಶಾಂತಾರಾಮ್ ನಾಯ್ಕ ಅವರಿಗೂ ಪತ್ರದ ಪ್ರತಿಯನ್ನು ರವಾನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT