ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಮ್ತೂರು, ಚೇರ್ಕಾಡಿ ಕಿಂಡಿ ಅಣೆಕಟ್ಟು ಸಿದ್ಧ

Last Updated 25 ಜನವರಿ 2011, 11:10 IST
ಅಕ್ಷರ ಗಾತ್ರ

ಕೆಮ್ತೂರು/ಚೇರ್ಕಾಡಿ (ಉಡುಪಿ):  ಉಡುಪಿ ತಾಲ್ಲೂಕಿನಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸಿದ್ಧಗೊಂಡಿರುವ ಉದ್ಯಾವರದ ಕೆಮ್ತೂರಿನ ಕಿಂಡಿ ಅಣೆಕಟ್ಟು ಹಾಗೂ ಬ್ರಹ್ಮಾವರ ಚೇರ್ಕಾಡಿಯ ಕಿಂಡಿ ಅಣೆಕಟ್ಟುಗಳನ್ನು ಸ್ಥಳೀಯ ಶಾಸಕರು ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಸೋಮವಾರ ವೀಕ್ಷಿಸಲಾಯಿತು.

ಮಣಿಪುರ ಕೆಮ್ತೂರು ಕಿಂಡಿ ಅಣೆಕಟ್ಟು: ಮಣಿಪುರ ಗ್ರಾಮದ ಕೆಮ್ತೂರಿನಲ್ಲಿ ಉದ್ಯಾವರ ನದಿಗೆ ರೂ. 1.05 ಕೋಟಿ ವೆಚ್ಚದಲ್ಲಿ ಉಪ್ಪು ನೀರು ತಡೆ ಕಿಂಡಿ ಅಣೆಕಟ್ಟನ್ನು ರಾಜ್ಯ ಬಜೆಟ್ ಯೋಜನೆಯಡಿಯಲ್ಲಿ ನಿರ್ಮಿಸಲಾಗಿದೆ. ಕಿಂಡಿ ಅಣೆಕಟ್ಟು ಸುಮಾರು 65 ಮೀಟರ್ ಉದ್ದ, 8 ಅಡಿ ಅಗಲ, 1.15 ಮೀಟರ್ ಎತ್ತರವಿದೆ. 26 ಕಿಂಡಿಗಳಿವೆ. ಈ ಅಣೆಕಟ್ಟಿನ ಮೇಲೆ ಸಣ್ಣ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಕೆಮ್ತೂರು ಮತ್ತು ಮಣಿಪುರ ಗ್ರಾಮಗಳ ನಡುವೆ ಸುಲಭವಾಗಿ ಹಾದು ಹೋಗಲು ನೇರ ಸಂಪರ್ಕ ಕಲ್ಪಿಸಿದಂತಾಗಿದೆ.

ಅಕ್ಕಪಕ್ಕದ ಗ್ರಾಮಗಳಾದ ಮಣಿಪುರ, ಅಲೆವೂರು, ಉದ್ಯಾವರ, ಬೆಳ್ಳೆ ಸೇರಿದಂತೆ ಇನ್ನು ಸುತ್ತಮುತ್ತಲ ಕೆಲ ಗ್ರಾಮಗಳಿಗೆ ಇದರಿಂದ ನೀರು ದೊರೆಯಲಿದೆ. ಸ್ಥಳೀಯರ ಪ್ರಕಾರ ಸುಮಾರು 250 ಎಕರೆ ಕೃಷಿ ಭೂಮಿಗೆ ನೀರು ಸಿಗಲಿದೆ. ಸ್ಥಳೀಯ ನಿವಾಸಿ ದಿನೇಶ್ ಮಣಿಪುರ ಮಾತನಾಡಿ, ಇಲ್ಲಿ ನಿರ್ಮಾಣಗೊಂಡ ಕಿಂಡಿ ಅಣೆಕಟ್ಟಿನಿಂದಾಗಿ ಇಲ್ಲಿ ನದಿ ದಾಟಲಿಕ್ಕೆ ಸೇತುವೆಯೊಂದು ಗ್ರಾಮಸ್ಥರಿಗೆ ದೊರಕಿದಂತಾಗಿದೆ. ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಇತ್ತು. ಅಣೆಕಟ್ಟಿನಿಂದಾಗಿ ಉಪ್ಪು ನೀರಿನ ಸಮಸ್ಯೆ ಬಗೆ ಹರಿದಿದೆ, ಕೃಷಿಗೂ ಅನುಕೂಲವಾಗುತ್ತದೆ ಎಂದರು.

ಕೆಮ್ತೂರು ಕೃಷ್ಣ ಜತ್ತನ್ನ ಮಾತನಾಡಿ, ಈ ಭಾಗದಲ್ಲಿ ಸುಮಾರು 3000 ಜನಸಂಖ್ಯೆಯಿದ್ದು ಅವ–ರಿಗೆಲ್ಲ ಈ ಅಣೆಕಟ್ಟು/ಸೇತುವೆಯಿಂದಾಗಿ ಅನುಕೂಲವಾಗಿದೆ. ತೋಟ, ಗದ್ದೆಗಳಿಗೆ, ಕುಡಿಯುವ ನೀರಿಗೆ ಇದು ಉಪಯುಕ್ತವಾದಂತಾಗಿದೆ ಎಂದರು.ಚೇರ್ಕಾಡಿ-ಹಿಂಕ್ಲಾಡಿ ಕಿಂಡಿ ಅಣೆಕಟ್ಟು: ಬ್ರಹ್ಮಾವರದ ಚೇರ್ಕಾಡಿ ಗ್ರಾ.ಪಂ. ವ್ಯಾಪ್ತಿಯ ಚೇರ್ಕಾಡಿ-ಹಿಂಕ್ಲಾಡಿ ಬಳಿ ಮಡಿಸಾಲು ಹೊಳೆಗೆ ರೂ.1.15 ಕೋಟಿ ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ.

ಈ ಅಣೆಕಟ್ಟಿನಿಂದಾಗಿ ಕಾಪು ಹಾಗೂ ಉಡುಪಿ ಕ್ಷೇತ್ರದ ನಡುವೆ ಸಂಪರ್ಕ ಸೇತುವೆ ನಿರ್ಮಾಣಗೊಂಡಂತಾಗಿದೆ. ಸುತ್ತಮುತ್ತಲ ಹಳ್ಳಿಗಳಾದ ಚೇರ್ಕಾಡಿ, ಕುಕ್ಕೆಹಳ್ಳಿ, ಪೆರ್ಡೂರು, ಹಲುವಳ್ಳಿ ಮತ್ತು ಹೊಸೂರು ಗ್ರಾಮಗಳ ಸುಮಾರು 210 ಎಕರೆ ಕೃಷಿ ಭೂಮಿಗೆ ನೀರುಣಿಸಬಹುದು. ಕಿಂಡಿ ಅಣೆಕಟ್ಟಿನ ಮೇಲ್ಭಾಗದಲ್ಲಿ  ಸುಮಾರು 5 ಕಿಮೀ ಉದ್ದಕ್ಕೆ ನೀರು ಸಂಗ್ರಹ ಮಾಡಲಾಗುತ್ತಿದೆ. ಈ ರೀತಿಯಾಗಿ ನೀರು ಸಂಗ್ರಹ ಮಾಡುವುದರಿಂದ ಸುತ್ತಮುತ್ತಲಿನ ಅಂತರ್ಜಲ ಮಟ್ಟವೂ ಕೂಡ ಏರಿಕೆಯಾಗುತ್ತದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

ಈ ಕಿಂಡಿ ಅಣೆಕಟ್ಟಿನ ಮೇಲೆ 2.75 ಮೀಟರ್ ಅಗಲದ ಘನಛಾವಣಿ ನಿರ್ಮಿಸಲಾಗಿದೆ. ಸಣ್ಣ ವಾಹನಗಳು ಓಡಾಡಬಹುದು. ಈ ಅಣೆಕಟ್ಟು/ಸೇತುವೆಯಿಂದಾಗಿ ಸದ್ಯ ಕುಕ್ಕೆಹಳ್ಳಿ ಮತ್ತು ಚೇರ್ಕಾಡಿ ಗ್ರಾಮಗಳ ನಡುವೆ ಹೊಸದಾಗಿ ನೇರ ಸಂಪರ್ಕದ ವ್ಯವಸ್ಥೆ ಇಲ್ಲಿನ ಜನರಿಗೆ ದೊರಕಿದಂತಾಗಿದೆ. ಉಪ್ಪುನೀರಿನ ಬಾವಿಗಳಲ್ಲಿ ಸಿಹಿ ನೀರು ಸಿಗುವಂತಾ–ಗಿದೆ ಎಂದು ಚೇರ್ಕಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಣ್ಣಾರು ಕಮಲಾಕ್ಷ ಹೆಬ್ಬಾರ್ ಸಂಭ್ರಮಿಸಿದರು.

ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿ, ತಮ್ಮ ಕ್ಷೇತ್ರದಲ್ಲಿ ಇನ್ನೂ ಹಲವು ಕಿಂಡಿ ಅಣೆಕಟ್ಟೆ ನಿರ್ಮಾಣ ಮಾಡುವ ಉದ್ದೇಶವಿದೆ ಎಂದರು. ಕೊಕ್ಕರ್ಣೆಯ ಹಂದಿಕಲ್ಲು, ಆರೂರಿನ ಎಗ್ಗೆಲುಬೆಟ್ಟು ಎಂಬಲ್ಲಿ ತಲಾ ರೂ.1.34 ಕೋಟಿ ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ ಎಂದರು. ಸಣ್ಣನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ಜಗದೀಶ್, ಸಹಾಯಕ ಎಂಜಿನಿಯರ್‌ಗಳಾದ ಕೃಷ್ಣಮೂರ್ತಿ ಹಾಗೂ ಶೇಷಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT