ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಯುಐಡಿಎಫ್‌ಸಿ ಅಧಿಕಾರಿಗಳ ತರಾಟೆ

Last Updated 1 ಫೆಬ್ರುವರಿ 2011, 8:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅವಳಿ ನಗರದಲ್ಲಿ 144 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಒಳಚರಂಡಿ ಯೋಜನೆಯನ್ನು ಜಾರಿಗೊಳಿಸುವ ಹೊಣೆ ಹೊತ್ತಿರುವ ‘ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಣಕಾಸು ನಿಗಮ’ದ (ಕೆಯುಐಡಿಎಫ್‌ಸಿ) ಅಧಿಕಾರಿಗಳ ವಿರುದ್ಧ ಮಹಾನಗರ ಪಾಲಿಕೆಯ ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರು ಹರಿಹಾಯ್ದ ಘಟನೆ ಸೋಮವಾರ ಜರುಗಿದ ಮಹಾನಗರ ಪಾಲಿಕೆ ಸಭೆಯಲ್ಲಿ ನಡೆಯಿತು.

ಪ್ರಶ್ನೋತ್ತರ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ವೀರಣ್ಣ ಸವಡಿ, ‘ಕೆಯುಐಡಿಎಫ್‌ಸಿ ಅಧಿಕಾರಿಗಳು ಮನತೋಚಿದಂತೆ ವರ್ತಿಸುತ್ತಿರುವುದರಿಂದ ಈ ಯೋಜನೆ ವಿಫಲವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಈ ಯೋಜನೆಯನ್ನೇ ಅವರು ನಾಶ ಮಾಡಲು ಹೊರಟಿದ್ದಾರೆ’ ಎಂದು ಆರೋಪಿಸಿದರು.ಮಹಾನಗರ ಪಾಲಿಕೆ ನೀಡಿದ ದುಡ್ಡಿನಿಂದ ಈ ಯೋಜನೆ ಜಾರಿಗೊಳ್ಳುತ್ತಿದೆ. ಕೆಯುಐಡಿಎಫ್‌ಸಿಯ ಮುಖ್ಯ ಎಂಜಿನಿಯರ್ ಆಗಮಿಸಿ  ಯೋಜನೆ ಕುರಿತು ವಿವರ ನೀಡಬೇಕೆಂದು ಕಳೆದ ಪಾಲಿಕೆ ಸಭೆಯಲ್ಲಿಯೇ ತಿಳಿಸಿದ್ದರೂ ಸಭೆಗೆ ಹಾಜರಾಗಿಲ್ಲ. ಒಳಚರಂಡಿಗೆ ಸಂಬಂಧಿಸಿದಂತೆ ಯಾವ ವಾರ್ಡ್‌ನಲ್ಲಿ ಯಾವ ಸಮಸ್ಯೆ ಇದೆ ಎಂಬುದನ್ನು ಸರಿಯಾಗಿ ತಿಳಿದುಕೊಳ್ಳದೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.

ಈ ಯೋಜನೆ ಜಾರಿಯಲ್ಲಿ ಕೆಯುಐಡಿಎಫ್‌ಸಿ ಹಳೆಯ ತಂತ್ರಜ್ಞಾನವನ್ನೇ ಬಳಕೆ ಮಾಡುತ್ತಿದೆ. ನಾವು ಪಾಲಿಕೆಯಲ್ಲಿ 10 ಲಕ್ಷ ರೂಪಾಯಿಗೂ ಹೆಚ್ಚು ಮೊತ್ತದ ಕಾಮಗಾರಿಗಳನ್ನು ಇ-ಟೆಂಡರ್ ಮೂಲಕ ಕರೆಯುತ್ತೇವೆ. ಆದರೆ, ಈ ಕಾಮಗಾರಿಯಲ್ಲಿ ಇ- ಟೆಂಡರ್ ಕರೆದಿಲ್ಲ. ಈ ಯೋಜನೆ ವಿಫಲವಾದರೆ ತಾವೇ ಹೊಣೆ ಹೊರುತ್ತೇವೆ ಎಂದು ಕೆಯುಐಡಿಎಫ್‌ಸಿ ಅಧಿಕಾರಿಗಳಿಂದ ಪ್ರಮಾಣಪತ್ರ ತೆಗೆದುಕೊಳ್ಳಬೇಕು ಎಂದೂ ಅವರು ಹೇಳಿದರು.

ಏಷ್ಯನ್ ಡೆವಲೆಪ್‌ಮೆಂಟ್ ಬ್ಯಾಂಕ್ (ಎಡಿಬಿ) ಈ ಯೋಜನೆಗೆ ಹಣ ಒದಗಿಸುತ್ತಿದ್ದು, ಎಡಿಬಿಯ ಷರತ್ತಿನ ಅನ್ವಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ವಿವರಗಳನ್ನು ಬಹಿರಂಗಪಡಿಸಲಾಗದು. ಅಲ್ಲದೆ, 35 ಕೋಟಿ ರೂಪಾಯಿ ಮೇಲ್ಪಟ್ಟ ಯೋಜನೆಯನ್ನು ಮಾತ್ರ ಇ- ಟೆಂಡರ್ ಮೂಲಕ ಕರೆಯಬೇಕೆಂಬ ನಿಯಮ ಈ ಬ್ಯಾಂಕ್‌ನದ್ದಾಗಿದೆ ಎಂದು ಸಭೆಯಲ್ಲಿ ಹಾಜರಿದ್ದ ಕೆಯುಐಡಿಎಫ್‌ಸಿ ಎಂಜಿನಿಯರರೊಬ್ಬರು  ಸಭೆಗೆ ತಿಳಿಸಿದರು.

ಒಟ್ಟು ರೂ.144 ಕೋಟಿ ಯೋಜನೆ ಇದಾಗಿದ್ದರೂ ಇ-ಟೆಂಡರ್ ಪ್ರಕ್ರಿಯೆ ನಡೆಸಬಾರದೆಂಬ ಉದ್ದೇಶದಿಂದಲೇ ರೂ. 35 ಕೋಟಿಗೆ ವೆಚ್ಚವನ್ನು ಸೀಮಿತಗೊಳಿಸಿ ಪ್ರತ್ಯೇಕ ಕಾಮಗಾರಿಗಳನ್ನು ರೂಪಿಸಲಾಗಿದೆ. ಇ- ಟೆಂಡರ್ ಮಾಡದಿರುವುದು ಭ್ರಷ್ಟಾಚಾರಕ್ಕೆ ಮುಕ್ತ ಅವಕಾಶ ಒದಗಿಸಿಕೊಟ್ಟಿದೆ ಎಂದು ಕಾಂಗ್ರೆಸ್‌ನ ದೀಪಕ ಚಿಂಚೋರೆ ಟೀಕಿಸಿದರು.

ಹುಬ್ಬಳ್ಳಿಯಲ್ಲಿ ಒಳಚರಂಡಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯು ಕಾರಣಾಂತರಗಳಿಂದ ವಿಳಂಬವಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ. ಈ ಕಾಮಗಾರಿಯ ವಿನ್ಯಾಸದಲ್ಲಿ ಕೆಲವೆಡೆ ದೋಷ ಇರುವುದನ್ನು ಪಾಲಿಕೆ ತೋರಿಸಿಕೊಟ್ಟಿದ್ದು, ಕೆಯುಐಡಿಎಫ್‌ಸಿ ಇದನ್ನು ಸರಿಪಡಿಸಿಕೊಂಡಿದೆ. ಧಾರವಾಡದಲ್ಲಿ ವಾರ್ಡ್ ಪ್ರಕಾರವಾಗಿ ವಿನ್ಯಾಸಗಳನ್ನು ತಯಾರಿಸಿ ಪರಿಶೀಲಿಸಲಾಗಿದ್ದು, ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದು ಆಯುಕ್ತ ಕೆ.ವಿ.ತ್ರಿಲೋಕಚಂದ್ರ ಹೇಳಿದರು.

ಫೆಬ್ರುವರಿ ತಿಂಗಳ ಕೊನೆಯ ವಾರದಲ್ಲಿ ಸಭೆ ಏರ್ಪಡಿಸಿ, ಕೆಯುಐಡಿಎಫ್‌ಸಿ ಮುಖ್ಯ ಎಂಜಿನಿಯರ್ ಅವರಿಂದ ವಿವರಣೆ ಕೊಡಿಸುವ ಏರ್ಪಾಟು ಮಾಡುತ್ತೇನೆ ಎಂದೂ ಅವರು ಹೇಳುವುದರೊಂದಿಗೆ ಈ ವಿಷಯದ ಚರ್ಚೆಗೆ ತೆರೆಬಿದ್ದಿತು.

ಚತುಷ್ಪಥ
ಹುಬ್ಬಳ್ಳಿ- ಧಾರವಾಡ ನಡುವೆ ನಿರ್ಮಿಸಲು ಉದ್ದೇಶಿಸಲಾಗಿರುವ ಚತುಷ್ಪಥ ರಸ್ತೆಯ ಉಸ್ತುವಾರಿಯನ್ನು ರಾಜ್ಯ ರಸ್ತೆ ಅಭಿವೃದ್ಧಿ ನಿಗಮಕ್ಕೆ ವಹಿಸಲಾಗಿದೆ ಎಂದು ತ್ರಿಲೋಕಚಂದ್ರ ಹೇಳಿದರು.ಜೆಡಿಎಸ್ ಸದಸ್ಯ ರಾಜಣ್ಣ ಕೊರವಿ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ರಸ್ತೆ ನಿರ್ಮಾಣ ಸ್ಥಳವನ್ನು ನಿಖರವಾಗಿ ಗುರುತಿಸುವ (ಅಲೈನ್‌ಮೆಂಟ್) ಕಾರ್ಯವನ್ನು ಮಾಡಬೇಕಾಗಿದೆ. ಹುಬ್ಬಳ್ಳಿ- ಧಾರವಾಡದ ನಡುವೆ ಕ್ಷಿಪ್ರ ಬಸ್ ಸಂಚಾರ ವ್ಯವಸ್ಥೆ ರೂಪಿಸಲು ವಿಶ್ವ ಬ್ಯಾಂಕ್ ಆಸಕ್ತಿ ತೋರಿದ್ದು, ಶೀಘ್ರದಲ್ಲಿಯೇ ಬ್ಯಾಂಕ್ ತಂಡವೊಂದು ಪಾಲಿಕೆಗೆ ಭೇಟಿ ನೀಡಲಿದೆ’ ಎಂದರು.

ಉಣಕಲ್ ಕೆರೆ
ಐದು ಕೋಟಿ ರೂಪಾಯಿ ವೆಚ್ಚ ಮಾಡಿ ಉಣಕಲ್ ಕೆರೆಯನ್ನು ಅಭಿವೃದ್ಧಿ ಮಾಡಲಾಗುತ್ತಿದ್ದರೂ ಕೆರೆಯ ನೀರು ಮಾತ್ರ ಹೊಲಸಾಗುತ್ತ ಸಾಗಿದೆ. ಕೆರೆಯ ನೀರಿನ ಕಲ್ಮಶದ ಬಗೆಗೆ ಪರಿಶೀಲನೆ ನಡೆಸಬೇಕು. ತೀರ ಕಲ್ಮಶವಾಗಿದ್ದರೆ ಅದನ್ನು ಹೊರಹಾಕಿ ಹೂಳೆತ್ತುವ ಕೆಲಸವನ್ನು ಮುಂದಿನ ಮಳೆಗಾಲದ ಒಳಗಾಗಿ ನಡೆಸಬೇಕು. ಇದರಿಂದಾಗಿ, ಮಳೆಗಾಲದಲ್ಲಿ ಕೆರೆಯಲ್ಲಿ ಸ್ವಚ್ಛ ನೀರು ಸಂಗ್ರಹವಾಗುತ್ತದೆ ಎಂದು ರಾಜಣ್ಣ ಕೊರವಿ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT