ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರಿಬಿಯನ್ನರಿಗೆ ಹರಿಣಗಳ ಸವಾಲು

Last Updated 23 ಫೆಬ್ರುವರಿ 2011, 18:00 IST
ಅಕ್ಷರ ಗಾತ್ರ

ನವದೆಹಲಿ: ಒಂದು ತಂಡ ಮಾಜಿ ವಿಶ್ವ ಕಪ್ ಚಾಂಪಿಯನ್. ಇನ್ನೊಂದು ತಂಡ ಇನ್ನೂ ಒಮ್ಮೆಯೂ ಕಪ್ ಗೆದ್ದಿಲ್ಲ. ವೆಸ್ಟ್‌ಇಂಡೀಸ್ ತಂಡ ಮೊದಲ ಎರಡು (1975 ಮತ್ತು 1979) ವಿಶ್ವ ಕಪ್‌ಗಳಲ್ಲಿ ಜಯಭೇರಿ ಬಾರಿಸಿದ ನಂತರ ಹಿಂದೆ ಬಿದ್ದಿದೆ. 1992 ರಲ್ಲಿ ವಿಶ್ವ ಕಪ್‌ಗೆ ಕಾಲಿಟ್ಟ ದಕ್ಷಿಣ ಆಫ್ರಿಕ ತಂಡ ‘ಗೆಲುವಿನ ಬಾಗಿಲಲ್ಲಿ ಮುಗ್ಗರಿಸುವ ತಂಡ’ ಎಂಬ ಹಣೆಪಟ್ಟಿ ಹೊತ್ತಿದೆ.

ಹತ್ತನೇ ವಿಶ್ವ ಕಪ್ ಕ್ರಿಕೆಟ್‌ನ ‘ಬಿ’ ಗುಂಪಿನ ಲೀಗ್‌ನಲ್ಲಿ ಈಗ ಈ ಎರಡೂ ತಂಡಗಳು ಎದುರಾಳಿಗಳು. ಗುರುವಾರ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಇವರಿಬ್ಬರ ನಡುವೆ ಹಗಲು-ರಾತ್ರಿ ಸೆಣಸಾಟ ನಡೆಯಲಿದೆ. ಈ ಗುಂಪಿನಲ್ಲಿರುವ ಇನ್ನೆರಡು ಪ್ರಮುಖ ತಂಡಗಳಾದ ಭಾರತ ಮತ್ತು ಇಂಗ್ಲೆಂಡ್ ತಮ್ಮ ಮೊದಲ ಲೀಗ್ ಪಂದ್ಯವನ್ನು ಗೆದ್ದಿವೆ. ಅದೇ ರೀತಿ ವೆಸ್ಟ್‌ಇಂಡೀಸ್ ಮತ್ತು ದಕ್ಷಿಣ ಆಫ್ರಿಕ ತಂಡಗಳಿಗೆ ಗೆಲುವಿನೊಂದಿಗೇ ವಿಶ್ವ ಕಪ್ ಸಮರವನ್ನು ಆರಂಭಿಸುವ ಗುರಿ. ಉತ್ತರ ಗುರುವಾರ ರಾತ್ರಿ ಲಭಿಸಲಿದೆ.

ವೆಸ್ಟ್‌ಇಂಡೀಸ್ ತಂಡ 1983 ರಲ್ಲಿ ಲಾರ್ಡ್ಸ್‌ನಲ್ಲಿ ನಡೆದ ಫೈನಲ್‌ನಲ್ಲಿ ಕಪಿಲ್ ದೇವ್ ನಾಯಕತ್ವದ ಭಾರತ ತಂಡಕ್ಕೆ ಸೋತ ಮೇಲೆ ಫೈನಲ್ ತಲುಪಿಯೇ ಇಲ್ಲ. ಒಂದು ದಿನದ ನಿಗದಿಯ ಓವರುಗಳ ಕ್ರಿಕೆಟ್‌ಗೆ ಜೀವ ತುಂಬಿದ ತಂಡವೇ ನಂತರ ಟೂರ್ನಿಗಳಲ್ಲಿ ಪರದಾಡಿದೆ. ವೆಸ್ಟ್‌ಇಂಡೀಸ್ ಕ್ರಿಕೆಟ್‌ನಲ್ಲೂ ರಾಜಕೀಯ ಜಾಸ್ತಿ. ಅಲ್ಲಿಯ ಕ್ರಿಕೆಟ್ ಮಂಡಳಿ ಹಾಗೂ ಆಟಗಾರರ ನಡುವೆ ಯಾವಾಗಲೂ ತಿಕ್ಕಾಟ. ಬ್ರಯಾನ್ ಲಾರಾನಂಥ ಸರ್ವಶ್ರೇಷ್ಠ ಆಟಗಾರನೂ ರಾಜಕೀಯಕ್ಕೆ ಬಲಿಯಾದವರೇ. ಈಗ ನಾಯಕರಾಗಿರುವ ಆಲ್‌ರೌಂಡರ್ ಡರೆನ್ ಸ್ಯಾಮಿ ಅವರು ತಂಡದಲ್ಲಿ ಮೂವರು ಮಾಜಿ ನಾಯಕರನ್ನು ಸಂಭಾಳಿಸಬೇಕಾಗಿದೆ. ಕ್ರಿಸ್ ಗೇಯ್ಲಿ, ಶಿವನಾರಾಯಣ ಚಂದ್ರಪಾಲ್ ಮತ್ತು ರಾಮನರೇಶ್ ಶರವಣ ಅವರೆಲ್ಲ ನಾಯಕತ್ವದ ತೂಗುಕತ್ತಿಗೆ ತಲೆ ಕೊಟ್ಟವರೇ.

ವೆಸ್ಟ್‌ಇಂಡೀಸ್ ತಂಡದಲ್ಲಿ ಪ್ರತಿಭೆಗೇನೂ ಕೊರತೆ ಇಲ್ಲದಿದ್ದರೂ ಸಾಂಘಿಕ ಪ್ರಯತ್ನ ಒಂದೊಂದು ದಿನ ಒಂದೊಂದು ರೀತಿಯಲ್ಲಿ ಇರುತ್ತದೆ. 1996 ರಲ್ಲಿ ದುರ್ಬಲ ಕೆನ್ಯಾ ವಿರುದ್ಧ ಸೋತಿದ್ದು ಇದಕ್ಕೆ ನಿದರ್ಶನ. ಕ್ರಿಸ್ ಗೇಯ್ಲಿ, ಡ್ವೇಯ್ನಿ ಬ್ರಾವೊ, ಕೀರನ್ ಪೊಲಾರ್ಡ್ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಸಾಮರ್ಥ್ಯದ ಬಿರುಸಿನ ಬ್ಯಾಟ್ಸಮನ್ನರು. ಬ್ರಾವೊ ಪರಿಣಾಮಕಾರಿ ಬೌಲರ್ ಕೂಡ. ಇವರಂತೆಯೇ ಗೇಯ್ಲಾ ಮತ್ತು ಪೊಲಾರ್ಡ್ ಕೂಡ ಬೌಲ್ ಮಾಡಬಲ್ಲರು. ಮಧ್ಯಮ ವೇಗದ ಬೌಲರ್ ಡರೆನ್ ಸ್ಯಾಮಿ 2007 ರಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ಚೊಚ್ಚಲು ಅಂತರರಾಷ್ಟ್ರೀಯ ಪಂದ್ಯದಲ್ಲಿಯೇ ಏಳು ವಿಕೆಟ್ ಗಳಿಸಿದವರು. ಕೇಮರ್ ರೋಚ್ ಮತ್ತು ಆ್ಯಂಡ್ರಿ ರಸೆಲ್ ತಂಡದ ವೇಗದ ಬೌಲರುಗಳು. ಸ್ಪಿನ್ ವಿಭಾಗವನ್ನು ಸುಲೈಮಾನ್ ಬೆನ್ ಮತ್ತು ಗೇಯ್ಲಿ ನಿಭಾಯಿಸುತ್ತಾರೆ. ಬ್ರಾವೊ ಹಾಗೂ ಪೊಲಾರ್ಡ್ ಐಪಿಎಲ್ ಪಂದ್ಯಗಳಲ್ಲಿ ಮಿಂಚಿದವರು. ಭಾರತದ ಪಿಚ್‌ಗಳ ಅನುಭವ ಅವರಿಗಿದೆ.

ದಕ್ಷಿಣ ಆಫ್ರಿಕದಲ್ಲಿಯ ವರ್ಣಭೇದ ನೀತಿಯಿಂದಾಗಿ ಆ ಕ್ರಿಕೆಟ್ ತಂಡಕ್ಕೆ ಮೊದಲ ನಾಲ್ಕು ವಿಶ್ವ ಕಪ್‌ಗಳಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. 1992ರಲ್ಲಿ ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್ ಜಂಟಿಯಾಗಿ ನಡೆಸಿದ ವಿಶ್ವ ಕಪ್‌ನಲ್ಲಿ ದಕ್ಷಿಣ ಆಫ್ರಿಕ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲು ಅನುಭವಿಸಿತ್ತು.

ಲೀಗ್‌ನ ಎಂಟು ಪಂದ್ಯಗಳಲ್ಲಿ ಐದರಲ್ಲಿ ಗೆದ್ದು ಮೂರರಲ್ಲಿ ಸೋತಿದ್ದ ದಕ್ಷಿಣ ಆಫ್ರಿಕ ವಿಶ್ವ ಕ್ರಿಕೆಟ್‌ಗೆ ವಿಶ್ವಾಸದಿಂದಲೇ ಹೆಜ್ಜೆ ಇಟ್ಟಿತ್ತು. ಆದರೆ ಉತ್ತಮ ಆಟಗಾರರಿದ್ದೂ ತಂಡ ಮುಂದಿನ ನಾಲ್ಕೂ ವಿಶ್ವ ಕಪ್‌ಗಳಲ್ಲೂ ಫೈನಲ್ ತಲುಪಲಿಲ್ಲ. 1999 ರ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕ ನಿರ್ಣಾಯಕ ಹಂತದಲ್ಲಿ ಮುಗ್ಗರಿಸಿತು. ಆಸ್ಟ್ರೇಲಿಯ ವಿರುದ್ಧ ಗೆಲ್ಲುವ ಅವಕಾಶಗಳನ್ನು ಹೊಂದಿದ್ದ ದಕ್ಷಿಣ ಆಫ್ರಿಕ ಗಡಿಬಿಡಿ ತೋರಿತು. ಅನುಭವಿ ಆಸ್ಟ್ರೇಲಿಯ ಚಾಣಾಕ್ಷತನದಿಂದ ಆಡಿತು. ಆ ಪಂದ್ಯ ‘ಟೈ’ ಆಯಿತು. ಸೂಪರ್ ಸಿಕ್ಸ್‌ನಲ್ಲಿ ದಕ್ಷಿಣ ಆಫ್ರಿಕದ ಮೇಲಿನ ಸ್ಥಾನದಲ್ಲಿದ್ದ ಆಸ್ಟ್ರೇಲಿಯ ಫೈನಲ್‌ಗೆ ಮುನ್ನಡೆಯಿತು. 2007 ರ ಸೆಮಿಫೈನಲ್‌ನಲ್ಲೂ ಆಸ್ಟ್ರೇಲಿಯದೆದುರು ದಕ್ಷಿಣ ಆಫ್ರಿಕ ಶರಣಾಗಿತ್ತು.

ನಾಯಕ ಗ್ರೇಮ್ ಸ್ಮಿತ್ ಈ ಸಲ ಹಿಂದಿನಂತೆ ಮುಗ್ಗರಿಸುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜ್ಯಾಕ್ ಕಾಲಿಸ್ ತಂಡದ ಅಗ್ರಮಾನ್ಯ ಆಲ್‌ರೌಂಡರ್. ಹಾಶಿಮ್ ಆಮ್ಲಾ, ಎ.ಬಿ. ಡಿವಿಲಿಯರ್ಸ್, ಜೆ.ಪಿ. ಡುಮಿನಿ ಉತ್ತಮ ಬ್ಯಾಟ್ಸಮನ್ನರು. ಡೇಲ್ ಸ್ಟೇಯ್ನಾ ಮತ್ತು ಮೋರ್ನ್ ಮಾರ್ಕೆಲ್ ಪ್ರಮುಖ ವೇಗದ ಬೌಲರುಗಳು. ಅನುಭವಿ ಆಫ್ ಸ್ಪಿನ್ನರ್ ಜೋಹಾನ್ ಬೋಥಾಗೆ ಹೊಸ ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್ ಜೊತೆಯಾಗಲಿದ್ದಾರೆ. ಕಳೆದ ವರ್ಷವಷ್ಟೇ ದಕ್ಷಿಣ ಆಫ್ರಿಕ ಪರ ಆಡಲು ಅರ್ಹತೆ ಗಳಿಸಿದ, ಪಾಕಿಸ್ತಾನ ಮೂಲದ ಇಮ್ರಾನ್ ತಾಹಿರ್ ತಂಡದ ಅನಿರೀಕ್ಷಿತ ಅಸ್ತ್ರವಾಗಲಿದ್ದಾರೆ ಎಂದು ಸ್ಮಿತ್ ಹೇಳಿದ್ದಾರೆ.

ವಿಶ್ವ ಕಪ್‌ನಲ್ಲಿ ಎರಡೂ ತಂಡಗಳು ನಾಲ್ಕು ಸಲ ಎದುರಾಳಿಗಳಾಗಿದ್ದು ಎರಡೂ ತಂಡಗಳು ತಲಾ ಎರಡು ಸಲ ಗೆದ್ದಿವೆ. ದಕ್ಷಿಣ ಆಫ್ರಿಕ ಇದುವರೆಗೆ   ವೆಸ್ಟ್‌ಇಂಡೀಸ್ ವಿರುದ್ಧ 50 ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 37 ಪಂದ್ಯಗಳಲ್ಲಿ ಜಯ ಗಳಿಸಿದೆ. ವೆಸ್ಟ್‌ಇಂಡೀಸ್ 12 ಪಂದ್ಯಗಳನ್ನು ಗೆದ್ದಿದ್ದು ಒಂದರಲ್ಲಿ ಫಲಿತಾಂಶ ಬರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT