ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕೆರೆ ಅಭಿವೃದ್ಧಿ ಪ್ರಾಧಿಕಾರ ರಚನೆ ಶೀಘ್ರ'

Last Updated 2 ಜೂನ್ 2013, 19:59 IST
ಅಕ್ಷರ ಗಾತ್ರ

ಹಾವೇರಿ:  `ಕೆರೆಗಳ ಸಮಗ್ರ ಅಭಿವೃದ್ಧಿಗಾಗಿ ರಾಜ್ಯದಲ್ಲಿ ಶೀಘ್ರವೇ ಕೆರೆ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲು ಗಂಭೀರ ಚಿಂತನೆ ನಡೆಸಲಾಗಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆಯಲ್ಲಿ ಭಾನುವಾರ ಮಾಳಿಂಗರಾಯ ವಿದ್ಯಾರ್ಥಿನಿಲಯದ ಉದ್ಘಾಟನೆ ಹಾಗೂ ದಾಸೋಹ ಭವನದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೂ ಮುನ್ನ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
`ಕೆರೆಗಳ ಸಂರಕ್ಷಣೆ ಹಾಗೂ ಅದಕ್ಕಾಗಿ ಪ್ರಾಧಿಕಾರ ರಚಿಸುವುದು ಪಕ್ಷದ ಪ್ರಣಾಳಿಕೆಯಲ್ಲಿದೆ. ಅದನ್ನು ಆದಷ್ಟು ಬೇಗ ಅನುಷ್ಠಾನಕ್ಕೆ ತರಲಾಗುವುದು' ಎಂದರು.

`ಕೆರೆಗಳ ಸಂಪೂರ್ಣ ಹಾಳಾಗಿ ನೀರು ನಿಲ್ಲದ ಸ್ಥಿತಿ ಒಂದೆಡೆಯಾದರೆ, ಕೆಲವಡೆ ಅವುಗಳನ್ನು ಒತ್ತುವರಿ ಮಾಡಿಕೊಂಡು ಅವುಗಳ ಅಸ್ತಿತ್ವವೇ ಇಲ್ಲದಂತೆ ಮಾಡಲಾಗಿದೆ. ಇವೆಲ್ಲವುಗಳಿಗೆ ಪರಿಹಾರ ರೂಪವಾಗಿ ಪ್ರಾಧಿಕಾರ ರಚನೆ ಮಾಡಲಾಗುವುದು' ಎಂದರು.

`ಕೆರೆಗಳಿಗೆ ನೀರು ಹರಿದು ಬರುವ ಪ್ರದೇಶವನ್ನು ಸುವ್ಯವಸ್ಥಿತವಾಗಿ ನಿರ್ಮಿಸುವುದು, ಕೆರೆಯಲ್ಲಿ ತುಂಬಿರುವ ಹೂಳು ತೆಗೆಯುವುದು, ಕೆರೆಗಳಿಗೆ ನೀರು ತುಂಬಿಸುವ, ಅಲ್ಲಿಂದ ಬೇರೆಡೆ ನೀರು ಸಾಗಿಸುವ ಕಾಲುವೆಗಳ ದುರಸ್ತಿ ಹಾಗೂ ಅವುಗಳ ಒತ್ತುವರಿಯನ್ನು ತೆರವುಗೊಳಿಸುವುದು ಸೇರಿದಂತೆ ಕೆರೆಗಳ ಸಂಪೂರ್ಣ ನಿರ್ವಹಣೆಯನ್ನು ಈ ಪ್ರಾಧಿಕಾರದ ಮೂಲಕವೇ ಮಾಡಲಾಗುತ್ತದೆ' ಎಂದು ಹೇಳಿದರು.

ಮರು ಪರಿಶೀಲನೆ: `ಹಿಂದಿನ ಸರ್ಕಾರ ಬೀಜ, ಗೊಬ್ಬರ ಕೇಳಿದ ರೈತರ ಮೇಲೆ ಗೋಲಿಬಾರ್ ನಡೆಸಿ ಇಬ್ಬರು ರೈತರನ್ನು ಬಲಿ ತೆಗೆದುಕೊಂಡಿತ್ತು. ಈ ಪ್ರಕರಣದ ಕುರಿತು ತನಿಖೆಗೆ ರಚಿಸಲಾದ ನ್ಯಾ. ಜಗನ್ನಾಥಶೆಟ್ಟಿ ಆಯೋಗವು ಯಾವ ರೀತಿಯ ವರದಿ ನೀಡಿದೆ ಎಂಬುದು ಎಲ್ಲರಿಗೂ ಗೊತ್ತು. ಈ ತನಿಖಾ ವರದಿಯನ್ನು ಮರುಪರಿಶೀಲನೆ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ'  ಎಂದು ಅವರು ತಿಳಿಸಿದರು.

ತೆರಿಗೆ ವ್ಯಾಪ್ತಿಗೆ ಇನ್ನಷ್ಟು ವಸ್ತುಗಳು
`ತೆರಿಗೆ ಸೋರಿಕೆ ತಡೆಯುವುದರ ಜತೆಗೆ ಕೆಲ ವಸ್ತುಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಚಿಂತನೆ ನಡೆದಿದೆ' ಎಂದು ಸಿದ್ದರಾಮಯ್ಯ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರ ರಾಜ್ಯದ ಆರ್ಥಿಕ ಶಿಸ್ತನ್ನು ಸಂಪೂರ್ಣ ಹಾಳು ಮಾಡಿದೆ.  ರಾಜ್ಯದಲ್ಲಿ ಆರ್ಥಿಕ ಶಿಸ್ತು ಮರುಸ್ಥಾಪನೆ ಮಾಡುವ ಉದ್ದೇಶದಿಂದ ಇಂತಹ ಕೆಲವು ಕಠಿಣ ಕ್ರಮ ಅನಿವಾರ್ಯವಾಗಲಿವೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT