ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಅಭಿವೃದ್ಧಿಗೆ ಕೈ ಜೋಡಿಸಿದ ರೈತರು

Last Updated 23 ಸೆಪ್ಟೆಂಬರ್ 2011, 5:05 IST
ಅಕ್ಷರ ಗಾತ್ರ

ಗದಗ: ಊರಿನ ಕೆರೆಯ ಅಭಿವೃದ್ಧಿ ಕಾಮಗಾರಿಯನ್ನು ಸರ್ಕಾರ ಕೈಗೊಳ್ಳುತ್ತದೆ ನಮಗೆ ಏಕೆ? ಎನ್ನುವ ಉದಾಸೀನ ಧೋರಣೆ ಹೊಂದಿರುವವರೇ ಹೆಚ್ಚಾಗಿರುವ ಈ ಕಾಲದಲ್ಲೂ ಸರ್ಕಾರದ ಕೆಲಸವನ್ನು ನಮ್ಮ ಕೆಲಸ ಎಂದು ಟೊಂಕಕಟ್ಟಿ  ನಿಂತಿದ್ದಾರೆ ಲಕ್ಕುಂಡಿ ರೈತರು.

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ದಂಡಿನ ದುರ್ಗಾದೇವಿ ಕೆರೆಯ ಹೂಳು ತೆಗೆಯುವ ಕಾಮಗಾರಿಯು ಕಳೆದ ಒಂದು ವಾರದಿಂದ  ಭರದಿಂದ ಸಾಗಿದೆ. ಈ ಕೆರೆಗೆ ಜಿಲ್ಲಾ ಪಂಚಾಯಿತಿ 25 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಜೆಸಿಬಿ, ಹಿಟಾಚಿ ಯಂತ್ರಗಳು ಹೂಳು ತಗೆಯುವ ಕಾರ್ಯದಲ್ಲಿ ನಿರತವಾಗಿವೆ.

ಕೆರೆಯಲ್ಲಿ ಬರುವ ಹೂಳನ್ನು ಹೊರಗೆ ತಗೆದುಕೊಂಡು ಹೋಗಲು ರೈತರೇ ಉಚಿತವಾಗಿ ಟ್ರ್ಯಾಕ್ಟರ್‌ಗಳನ್ನು ನೀಡಿದ್ದಾರೆ. ಸದ್ಯ ದುರ್ಗಾದೇವಿ ಕೆರೆಯಲ್ಲಿ 100ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳು ಓಡಾಡುತ್ತಿವೆ.
 
ಅಂದಾಜು 15 ಎಕರೆ ವಿಸ್ತೀರ್ಣ ಹೊಂದಿರುವ ಕೆರೆಯ ಹೂಳನ್ನು ರೈತರೇ  ಹೊರ ಹಾಕುವ ಕಾರ್ಯ ಮಾಡುತ್ತಿರುವುದರಿಂದ ಸುಮಾರು 8 ರಿಂದ 10 ಲಕ್ಷ ರೂಪಾಯಿ ಉಳಿತಾಯವಾಗಿದೆ. ಈಗ ಉಳಿತಾಯವಾಗುವ ಅನುದಾನದ ಜೊತೆಗೆ ಇನ್ನೊಂದಿಷ್ಟು ಅನುದಾನವನ್ನು ಬಿಡುಗಡೆ ಮಾಡಿದರೇ ಕೆರೆಯನ್ನು ಹೆಚ್ಚಿನ ಅಭಿವೃದ್ಧಿ ಪಡಿಸಬಹುದು ಎನ್ನುವುದು ಇಲ್ಲಿನ ಜನರ ಅಭಿಪ್ರಾಯ.

ಲಕ್ಕುಂಡಿ ಗ್ರಾಮಸ್ಥರು ಸರ್ಕಾರದ ಕೆಲಸದಲ್ಲಿ ಕೈ ಜೋಡಿಸಿರುವುದು ಇದು ಹೊಸದೆನಲ್ಲ. ಲಕ್ಕುಂಡಿಯಲ್ಲಿ 20 ಎಕರೆ ವಿಸ್ತೀರ್ಣ ಹೊಂದಿರುವ ಹಾಲಗುಂಡಿ ಕೆರೆಯನ್ನು ಹತ್ತು ವರ್ಷಗಳ ಹಿಂದೆ ಅಭಿವೃದ್ಧಿಪಡಿಸಿರುವುದು ಇತಿಹಾಸ. ಅದರಂತೆ ಈ ಕೆರೆಯು ಸುಂದರವಾಗಿ ಕಾಣಬೇಕೆನ್ನುವುದು ಗ್ರಾಮಸ್ಥರ ಬಯಕೆಯಾಗಿದೆ. ಅದಕ್ಕಾಗಿಯೇ ಹಗಲಿರುಳು ಶ್ರಮಿಸುತ್ತಿದ್ದಾರೆ.                                    

ಕುಡಿಯುವ ನೀರಿಗಾಗಿ: ದಂಡಿನ ದುರ್ಗಾದೇವಿ ಕೆರೆಯನ್ನು ಎರಡು ಭಾಗಗಳಾಗಿ ವಿಗಂಡಿಸಿ, ಒಂದು ಭಾಗದಲ್ಲಿ ಗ್ರಾಮಕ್ಕೆ ಕುಡಿಯುವ ನೀರನ್ನು ಪೂರೈಸಲು ಗ್ರಾಮಪಂಚಾಯ್ತಿ ಯೋಜನೆ ರೂಪಿಸಿದೆ. ಇದರಿಂದ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಬಹುದಾಗಿದೆ.

ಆದರೂ ಮುಂದಿನ ದಿನದಲ್ಲಿ ತುಂಗಾಭದ್ರ ನದಿ ಅಥವಾ ಮುಲ್ಲಾನ ಹಳ್ಳದ ನೀರನ್ನು ಕೆರೆಗೆ ಸಂಗ್ರಹ ಮಾಡಬೇಕು. ಇದಕ್ಕೆ ನಮ್ಮೆಲ್ಲರ ಸಹಕಾರ ಇದೆ ಎಂದು ಗ್ರಾಮಸ್ಥರು ಒಕ್ಕೊರಲಿನಿಂದ ಹೇಳುತ್ತಾರೆ.

ಹಲವಾರು ವರ್ಷಗಳಿಂದ ಗ್ರಾಮದಲ್ಲಿ ಪ್ಲೋರೈಡ್‌ಯುಕ್ತ ನೀರನ್ನು ಕುಡಿಯುವುದರಿಂದ ವಿವಿಧ ರೋಗಬಾಧೆಗಳು ಕಾಣಿಸಿಕೊಳ್ಳತ್ತಿವೆ. ಈಗ ಕೆರೆಯನ್ನು ಅಭಿವೃದ್ಧಿಪಡಿಸಿ ನೀರನ್ನು ಸಂಗ್ರಹ ಮಾಡಿ, ಜನರಿಗೆ ಕುಡಿಯಲು ಪೂರೈಕೆ ಮಾಡುವಂತಹ ಗುರಿಯನ್ನು ಹೊಂದಿರುವ ಗ್ರಾಮ ಪಂಚಾಯತಿ ಕಾರ್ಯವನ್ನು ಗ್ರಾಮಸ್ಥರು ಶ್ಲಾಘಿ ಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT