ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಒಡ್ಡು ಒಡೆದು ಅಪಾರ ಹಾನಿ

Last Updated 3 ಆಗಸ್ಟ್ 2011, 5:05 IST
ಅಕ್ಷರ ಗಾತ್ರ

ಯಲ್ಲಾಪುರ: ಸುರಿದ ಭಾರಿ ಮಳೆಯಿಂದಾಗಿ ತಾಲ್ಲೂಕಿನ ಕಂಪ್ಲಿ ಪಂಚಾಯತ್ ವ್ಯಾಪ್ತಿಯ ಕೆರೆ ಹೊಸಳ್ಳಿ ಕೆರೆಯ ಒಡ್ಡು ಒಡೆದು ಲಕ್ಷಾಂತರ ರೂಪಾಯಿಗೂ ಹೆಚ್ಚು ಹಾನಿಯಾದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.

ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ  ಸುಮಾರು 32 ಎಕರೆ ವಿಸ್ತೀರ್ಣವುಳ್ಳ ಬೃಹದಾಕಾರದ ಕೆರೆ ಒಡೆದ ಪರಿಣಾಮವಾಗಿ ಸುಮಾರು 15 ಎಕರೆ ಅಡಿಕೆ ತೋಟ, 25 ಎಕರೆ ಬತ್ತದ ಗದ್ದೆ, ಕಬ್ಬು ಪ್ರದೇಶಕ್ಕೆ ನೀರು ನುಗ್ಗಿ ಹಾನಿಯಾಗಿರುವುದಲ್ಲದೇ, ಗ್ರಾಮ ಅರಣ್ಯ ಸಮಿತಿಯವರು ಈ ಕೆರೆಯಲ್ಲಿ ಬಿಟ್ಟಿದ್ದ 75 ಲಕ್ಷ ಮೀನು ಮರಿಗಳು  ನೀರಿನಲ್ಲಿ ಕೊಚ್ಚಿ ಹೋಗಿರುವ ಕಾರಣ ಸುಮಾರು 5 ಲಕ್ಷ ರೂ  ಆದಾಯದ ನಿರೀಕ್ಷೆಯಲ್ಲಿದ್ದ ಅರಣ್ಯ ಸಮಿತಿಯು ನಷ್ಟ ಅನುಭವಿಸುವಂತಾಗಿದೆ.

ಈ ಕೆರೆಯಿಂದ ನೂರಾರು ಎಕರೆ ತೋಟ ಗದ್ದೆಗಳಿಗೆ ನೀರು ದೊರೆಯುತ್ತಿತ್ತು. ಅಲ್ಲದೇ, ಸೋಮನಳ್ಳಿ, ಅನೇಜಡ್ಡಿ, ಕಂಚನಳ್ಳಿ, ಮುಂಡಿಗೇಜಡ್ಡಿ, ಬಾಮಣಕೊಪ್ಪ, ಮುಂತಾದ ಗ್ರಾಮಗಳಿಗೆ ಈ ಕೆರೆಯ ನೀರು ಉಪಯುಕ್ತವಾಗಿತ್ತು.

ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ದತ್ತಾತ್ರೆಯ ಗೋಪಾಲ ಭಾಗವತ್, ಶೇಷಗಿರಿ ಕೃಷ್ಣ ಭಟ್ಟ, ಸಂತೋಷ ಶೆಟ್ಟಿ, ಭಾಗೀರಥಿ ಗಣಪತಿ ಭಟ್ಟ ಇವರ ತೋಟ ಗದ್ದೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ.ಬೆಳಿಗ್ಗೆ 6.30ರ ಸುಮಾರಿಗೆ ಬಿರುಗಾಳಿ ಬೀಸಿದ ಸಪ್ಪಳ ಕೇಳಿದಂತಾಗಿ ನೋಡಲಾಗಿ ಕೆರೆಯ ಒಡ್ಡು ಒಡೆದು ನೀರು ತೋಟ ಗದ್ದೆಗಳಿಗೆ ನುಗ್ಗುತ್ತಿರುವ ದೃಶ್ಯ ಕಂಡು ಬಂದಿತೆಂದು ಪಕ್ಕದಲ್ಲೇ ಮನೆ ಇರುವ ಡಿ.ಜಿ.ಭಾಗವತ್ ಮಾಧ್ಯಮಗಳಿಗೆ ತಿಳಿಸಿದರು.

ಅರಣ್ಯ ಇಲಾಖೆಯ ವನಪಾಲಕ ಮಂಜುನಾಥ ಆಗೇರ್, ಅರಣ್ಯ ರಕ್ಷಕ ಜಗದೀಶ ಪಾಲನಕರ್, ಕಂದಾಯ ಇಲಾಖೆಯ ಗ್ರಾಮಸಹಾಯಕ ಸುಭಾಸ ಅಂಬಿಗ, ಪಿ.ಡಿ.ಓ. ಯೋಗಿತಾ ಹೆಗಡೆ, ಜಿ.ಪಂ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನೇಸರಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಿ.ಪಂ. ಸದಸ್ಯ ರಾಘವೇಂದ್ರ ಭಟ್ಟ, ಕಂಪ್ಲಿ ಗ್ರಾ. ಪಂ. ಅಧ್ಯಕ್ಷ ಪವನಕುಮಾರ ಕೇಸರಕರ್, ಹಾಸಣಗಿ ಗ್ರಾ.ಪಂ. ಅಧ್ಯಕ್ಷ ರಾಮ ಹೆಗಡೆ, ಕಾಂಗ್ರೆಸ ಮುಖಂಡ ಶಿವರಾಮ ಹೆಬ್ಬಾರ್, ಡಿ.ಸಿ.ಸಿ. ಅಧ್ಯಕ್ಷ ಬೀಮಣ್ಣ ನಾಯ್ಕ, ಎಸ್.ಕೆ.ಭಾಗವರ್, ಆರ್. ಜಿ.ಹೆಗಡೆ ಬೆದೆಹಕ್ಲು, ಸದಾಶಿವ ಪೊಕಳೆ, ವಿ.ಎಸ್.ಭಟ್ಟ ಮೊದಲಾದವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಶಿವರಾಮ ಹೆಬ್ಬಾರ್ ಮಾತನಾಡಿ, ಒಡೆದ ಕೆರೆಯ ಒಡ್ಡನ್ನು ಕೂಡಲೇ ದುರಸ್ತಿ ಮಾಡಬೇಕು. ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ನೂರಾರು ಎಕರೆ ಜಮೀನಿಗೆ ನೀರುಣಿಸುತ್ತಿರುವ ಕೆರೆಯ ಹೂಳನ್ನು ಮೇಲೆತ್ತಿ ದುರಸ್ತಿಗಾಗಿ ಉಸ್ತುವಾರಿ ಸಚಿವರು, ಶಾಸಕರು, ಅಧಿಕಾರಿಗಳು  ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT