ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಒತ್ತುವರಿ ತೆರವಿಗೆ ಸಿದ್ದರಾಮಯ್ಯ ಭರವಸೆ

Last Updated 17 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನೆಲಮಂಗಲ: ಕೆರೆ ಅಭಿವೃದ್ಧಿ ಪ್ರಾಧಿಕಾ­ರದ ಮೂಲಕ ರಾಜ್ಯದ ಎಲ್ಲ ಕೆರೆಗಳಿಗೆ ಮರುಜೀವ ನೀಡಲಾಗುವುದು. ಕೆರೆ, ನದಿ ಪಾತ್ರಗಳ ಮತ್ತು ರಾಜಕಾಲುವೆಗಳ ಸಮೀಕ್ಷೆ ನಡೆಸಿ ಒತ್ತುವರಿಯನ್ನು ತೆರವುಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಕೆರೆ ಕೋಡಿ ಒಡೆದು ಸಂಭವಿಸಿರುವ ಹಾನಿಯನ್ನು ಅವರು ಮಂಗಳವಾರ ಪರಿಶೀಲಿಸಿದರು. ಅತಿವೃಷ್ಟಿಯಿಂದ ಆಗಿರುವ ಬೆಳೆ ಮತ್ತು ಮನೆಗಳ ಹಾನಿಗೆ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು. ಹಾನಿಯ ವರದಿ ನೀಡಬೇಕು ಎಂದು ಸ್ಥಳದಲ್ಲಿದ್ದ ಅಧಿಕಾ­ರಿಗಳಿಗೆ ಆದೇಶಿಸಿದರು. ಪಟ್ಟಣದ ಚರಂಡಿ ನೀರು ಕೆರೆಗಳಿಗೆ ಸೇರದಂತೆ ತಡೆಯಲು ಚರಂಡಿ ಮತ್ತು ಮಳೆ ನೀರು ಪ್ರತ್ಯೇಕವಾಗಿ ಹರಿಯುವಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕೆರೆಯ ಕೋಡಿ ಪಕ್ಕದ ಕೂಲಿಪುರ ನಿವಾಸಿ ಭಾಗ್ಯ ಮತ್ತು ಗ್ರಾ.ಪಂ ಸದಸ್ಯ ರವಿ ಗ್ರಾಮಕ್ಕೆ ಸೂಕ್ತ ರಸ್ತೆಯಿಲ್ಲದೆ, ಮಳೆಗಾಲದಲ್ಲಿ ನಮ್ಮ ಮಕ್ಕಳು ಶಾಲಾ ಕಾಲೇಜಿಗೆ ಹೋಗಲು ಆಗುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಮನೆಗಳಿಗೆ ನುಗ್ಗಿದ ನೀರಿನಿಂದ ಮನೆಯ ವಿದ್ಯುತ್‌ ಉಪಕರಣಗಳು ಹಾಳಾಗಿವೆ ಎಂದು ಭೈರವೇಶ್ವರ ಬಡಾವಾಣೆ ಯುವಕ ಗಿರೀಶ್‌, ನಿವೃತ್ತ ಪೊಲೀಸ್‌ ಅಧಿಕಾರಿ ರಾಜಪ್ಪ ಎಂದು ಹೇಳಿದರು. 

ಮುಖ್ಯಮಂತ್ರಿಗಳೊಂದಿಗೆ ಮಾಜಿ ಸಚಿವರಾದ ಆಂಜನಾಮೂರ್ತಿ, ಎಚ್‌.­ಎಂ.­ರೇವಣ್ಣ ಪರಿಷತ್‌ ಸದಸ್ಯ ಈ.­ಕೃಷ್ಣಪ್ಪ, ತಾ.ಪಂ ಕಾರ್ಯ ನಿರ್ವಹ­ಣಾಧಿಕಾರಿ ನಾರಾಯಣ­ಸ್ವಾಮಿ, ತಹಸೀ­ಲ್ದಾರ್‌ ರಾಜೇಂದ್ರ ಹಾಜರಿದ್ದರು.

ದುರಸ್ತಿ: ಕೆರೆಯ ಕೋಡಿಯ ದುರಸ್ತಿ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಳಲಾಗಿದೆ. ಉಳಿದಿರುವ ಕೆರೆ ನೀರು ಹೊರಗೆ ಹೋಗದಂತೆ ಮರಳಿನ ಮೂಟೆಗಳನ್ನು ಹಾಕಲಾಗಿದೆ.

ಶಾಶ್ವತ ಕಟ್ಟೆಯ ನಿರ್ಮಾಣ ಪ್ರಗತಿಯಲ್ಲಿದೆ. ಕೆರೆಯ ಸಮೀಪದ ರಾಜ ಕಾಲುವೆಯಲ್ಲಿ ನೀರು ಕಟ್ಟದಂತೆ ತುರ್ತು ಕ್ರಮಗಳನ್ನು  ಕೈಗೊಳ್ಳಲಾಗುತ್ತಿದೆ. ಸ್ಥಳೀಯ ಪುರಸಭೆ ಸದಸ್ಯ ಎನ್‌.ಪಿ.ಹೇಮಂತ್‌ ಕುಮಾರ್‌ ಮತ್ತಿತರು ನೀರು ನುಗ್ಗಿದ ಮನೆ ಮಂದಿಗೆ ಊಟೋಪಚಾರದ ವ್ಯವಸ್ಥೆ ಮಾಡು­ತ್ತಲಿದ್ದಾರೆ. ಪುರಸಭೆ ಕಂದಾಯ, ಆರೋಗ್ಯ ಇಲಾಖೆಗಳ ಅಧಿಕಾರಿಗಳು ಕಳೆದ ಎರಡು ದಿನದಿಂದ ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT