ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ತುಂಬಿಸುವ ಕಾಳಜಿ ಏಕಿಲ್ಲ?

Last Updated 3 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಹರಿಯುವ ನೀರನ್ನು ತಡೆದು ಅದನ್ನು ಉಪಯೋಗಿಸಿಕೊಳ್ಳುವ ಕಾಳಜಿ ನಮ್ಮಲ್ಲಿಲ್ಲ. ಇರುವ ನೀರನ್ನು ಮುಂದಿನ ವರ್ಷದವರೆಗೆ ಕಾಯ್ದಿರಿಸುವ ನಾವು ನೆರೆಯವರು (ತಮಿಳುನಾಡು) ಬಂದು ಕೇಳಿದಾಗ ಬಿಡುತ್ತೇವೆ. ಆಮೇಲೆ ನಮಗೆ ನೀರಿಲ್ಲ ಎಂದು ಬೊಬ್ಬೆ ಹಾಕುತ್ತೇವೆ. ಇದರ ಬದಲು ಏನಾದರೂ ಬೇರೆ ಪರಿಹಾರ ಹುಡುಕಬಹುದಲ್ಲ.

ಅಣೆಕಟ್ಟೆಯಲ್ಲಿ ವರ್ಷ ಪೂರ್ತಿ ನೀರನ್ನು ಶೇಖರಿಸಿಟ್ಟುಕೊಳ್ಳುವ ಬದಲು ಅದರ ವ್ಯಾಪ್ತಿ ಮತ್ತು ವ್ಯಾಪ್ತಿಯ ಹೊರತಾದ ಜಿಲ್ಲೆಗಳ  ಎಲ್ಲಾ ಕೆರೆಗಳನ್ನು ಪುನರುಜ್ಜೀವನಗೊಳಿಸಿ ಆ ಕೆರೆಗಳ ಶೇಖರಣೆಯ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಅವುಗಳಿಗೆ ಈ ಅಣೆಕಟ್ಟೆಯಿಂದ  ನೀರು ತುಂಬಿಸಿದರೆ  ನೀರು ಒಂದೇ ಕಡೆ ಶೇಖರಣೆಯಾಗುವ ಬದಲು ಎಲ್ಲಾ ಕೆರೆಗಳಲ್ಲೂ ಶೇಖರಣೆಯಾಗುತ್ತದೆ. ಇದರಿಂದ ಎಲ್ಲಾ ಭಾಗದ ರೈತರಿಗೂ ಅನುಕೂಲ. ಅಣೆಯಲ್ಲಿ ನೀರು ಇದೆ ಎನ್ನುವ ಪ್ರಮೇಯವೇ ಬರುವುದಿಲ್ಲ.  ಇನ್ನೂ ಬೆಂಗಳೂರಿನಂತಹ ಮಹಾನಗರಕ್ಕೆ  ಪೈಪ್ ಮೂಲಕ ವರ್ಷ ಪೂರ್ತಿ ಪೂರೈಕೆ ಮಾಡುವ ಬದಲು ಒಂದೇ ಬಾರಿಗೆ ನಗರದ  ಸುತ್ತ ಇರುವ  ಸಾವಿರಾರು ಕೆರೆಗಳ ಪುನರುಜ್ಜೀವನ ಮಾಡಿ ಅವುಗಳಿಗೆ ನೀರು ತುಂಬಿಸುವ ಕೆಲಸ ಆಗಬೇಕು. ಇವುಗಳಿಂದ ನಗರಕ್ಕೆ ಸುಲಭವಾಗಿ ನೀರು ಪೂರೈಕೆ ಮಾಡಬಹುದಲ್ಲದೆ ಈ ಭಾಗದಲ್ಲಿ  ಅಂತರ್ಜಲ ಹೆಚ್ಚಿ ನೀರಿನ ಹಾಹಾಕಾರವನ್ನು ನೀಗಿಸಬಹುದು. ಆದರೆ ನಾವು ಈ ಕೆರೆಗಳಿಗೆ ಕೊಳಚೆ ನೀರನ್ನು ಬಿಟ್ಟು ಅಂತರ್ಜಲವನ್ನು ಮಲಿನಗೊಳಿಸುತ್ತಿದ್ದೇವೆ.

  ಇನ್ನೊಂದು ಅಂಶವೆಂದರೆ ಮಂಡ್ಯದ ಜನ ಬೆಂಗಳೂರು ನಗರಕ್ಕೆ ಪೂರೈಕೆಯಾಗುತ್ತಿರುವ ನೀರನ್ನು ಸ್ಥಗಿತಗೊಳಿಸಲು ಮುಂದಾಗಿರುವುದು ಎಷ್ಟು ಸಮಂಜಸ? ಇದನ್ನು ಬಿಟ್ಟು ಮೊದಲು ಅಣೆಕಟ್ಟೆಯಲ್ಲಿನ ನೀರನ್ನು ನಮ್ಮ ರಾಜ್ಯದಲ್ಲಿ ನೀರು ಶೇಖರಣೆ (ಕೆರೆ ಕಟ್ಟೆ) ಸ್ಥಳಗಳಿಗೆ ಆದಷ್ಟು ತುಂಬಿಸಲು ಎಲ್ಲರೂ ಒಗ್ಗೂಡಿದರೆ ಇಂತಹ ಹೋರಾಟ ಯಾವುದೂ ಬೇಕಾಗುವುದಿಲ್ಲ.

ಇದಲ್ಲದೆ, ನೀರು ಕೊರತೆ ಇರುವ ನಮ್ಮ ರಾಜ್ಯದ ಇತರೆ ಜಿಲ್ಲೆಗಳ (ಕೋಲಾರ, ಚಿಕ್ಕಬಳ್ಳಾಪುರ, ಬೆಳಗಳೂರು ಗ್ರಾಮಾಂತರ, ರಾಮನಗರ) ಕೆರೆಗಳಿಗೆ ನೀರು ಬಿಡಲು ಸಹಕಾರ ನೀಡಬೇಕು. ಇದರಿಂದ ರಾಜ್ಯದ ಎಲ್ಲಾ ಗ್ರಾಮಗಳಲ್ಲೂ ಹಸಿರುಕ್ಕಿ ಜನ ಸಂತೋಷ ಪಡುತ್ತಾರೆ. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT