ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಮಣ್ಣು ಅಕ್ರಮ ಸಾಗಾಟ

Last Updated 21 ಮಾರ್ಚ್ 2011, 8:35 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಕೆರೆಯಲ್ಲಿನ ಫಲವತ್ತಾದ ಮಣ್ಣನ್ನು ಜೆಸಿಬಿ ಯಂತ್ರಗಳ ಮೂಲಕ ಅಕ್ರಮವಾಗಿ ತೆಗೆದು ಕೆರೆಯ ತುಂಬೆಲ್ಲಾ ದೊಡ್ಡದೊಡ್ಡ ಹಳ್ಳಗಳನ್ನು ಮಾಡಲಾಗುತ್ತಿದೆ. ಇಷ್ಟಾದರೂ ಕಂದಾಯ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆ ಕಣ್ಮುಚ್ಚಿ ಕುಳಿತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಒಂದು ತಿಂಗಳಿನಿಂದ ಈ ದಂಧೆ ನಡೆಯುತ್ತಿದ್ದು, ಟ್ರ್ಯಾಕ್ಟರ್‌ಗಳ ಮೂಲಕ ಮಣ್ಣನ್ನು ಸಾಗಿಸಿ ನಿಗದಿತ ದರದಲ್ಲಿ ರೈತರಿಗೆ ಮಾರುತ್ತಿದ್ದಾರೆ. ಕೆರೆಯ ಮಣ್ಣು ಫಲವತ್ತತೆಯ ದೃಷ್ಟಿಯಿಂದ ಉತ್ಕ್ರಷ್ಟವಾಗಿರುವುದರಿಂದ ಬೆಲೆ ಬಾಳುವ ಮಣ್ಣಾಗಿದೆ. ಇಲ್ಲಿನ ಕೆಲವರು ಇದನ್ನು ಸಾಗಿಸುವುದನ್ನೇ ಕಸುಬಾಗಿ ಮಾಡಿಕೊಂಡಿದ್ದಾರೆ ಎಂಬುದು ಹಲವು ಗ್ರಾಮಸ್ಥರ ದೂರಾಗಿದೆ.

ಸಣ್ಣ ನೀರಾವರಿ ಇಲಾಖೆಯವರಿಂದ ಪಕ್ಕದ ಹೊಮ್ಮ ಗ್ರಾಮದಿಂದ ಸುವರ್ಣಾವತಿ ನೀರು ಪೂರೈಕೆ ಆಗುವುದರಿಂದ ಇದಕ್ಕೆ ತೊಂದರೆಯಾಗಿದೆ. ಅಲ್ಲದೆ ಇದಕ್ಕೆ ನಿರ್ಮಾಣವಾಗಿರುವ ನಾಲೆಯು ಹೂಳಿನಿಂದ ತುಂಬಿಕೊಂಡಿದ್ದು ಈ ಕೆರೆ ಭರ್ತಿಯಾಗಿಲ್ಲ. ಕೆರೆಯ ಮಣ್ಣನ್ನು ತೆಗೆದಿರುವುದರಿಂದ ಅಲ್ಲಲ್ಲಿ ದೊಡ್ಡ ದೊಡ್ಡ ಹಳ್ಳಗಳು ಏರ್ಪಟ್ಟವೆ. ಹಾಗಾಗಿ ಬಂದ ಅಲ್ಪ ಸ್ವಲ್ಪ ನೀರೂ ಕೂಡ ಇಲ್ಲೇ ನಿಂತು ಇಂಗುವುರಿಂದ ಅಕ್ಕಪಕ್ಕದ ರೈತರಿಗೆ ತೊಂದರೆಯಾಗಿದೆ.

ಕೆಲವರು ಕೆರೆಯ ಮಣ್ಣನ್ನು ಒಂದೆಡೆ ಸಂಗ್ರಹಿಸಿ ಕೊಟ್ಟಿಗೆ ಗೊಬ್ಬರದಂತೆ ಮಾಡಿ ಇದನ್ನು ಪಕ್ಕದ ಕೇರಳ, ತಮಿಳುನಾಡು ರಾಜ್ಯಗಳಿಗೂ ಮಾರಾಟ ಮಾಡುವ ಅಕ್ರಮ ವ್ಯಾಪಾರ ನಡೆಯುತ್ತಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆಯವರು ಕಾನೂನು ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ.

ಸ್ಥಗಿತಗೊಂಡ ಮಣ್ಣು ತೆಗೆಯುವ ಕೆಲಸ: ಭಾನುವಾರ ರಜಾದಿನವಾದ್ದರಿಂದ ಹತ್ತಾರು ಟ್ರ್ಯಾಕ್ಟರ್ ಮಣ್ಣನ್ನು ಸಾಗಾಟ ಮಾಡಲಾಗುತ್ತಿತ್ತು. ಈ ವಿಷಯ ತಿಳಿದ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ರಮೇಶ್ ಇಲ್ಲಿಗೆ ಹಠಾತ್ತನೆ ಭೇಟಿ ನೀಡಿದ ಸಂದರ್ಭದಲ್ಲಿ ಮಣ್ಣು ತೆಗೆಯುವ ಕಾರ್ಯ ಸ್ಥಗಿತಗೊಳಿಸಲಾಗಿದೆ.

‘ಇಲಾಖೆಯ ಅನುಮತಿ ಪಡೆಯದೇ ಇವರು ಅಕ್ರಮವಾಗಿ ಮಣ್ಣನ್ನು ತುಂಬುತ್ತಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳ ಅನುಮತಿ ಪಡೆದು ಟ್ರ್ಯಾಕ್ಟರ್ ಹಾಗೂ ಜೆಸಿಬಿ ಯಂತ್ರಗಳ ಮೇಲೆ ಪ್ರಕರಣ ದಾಖಲು ಮಾಡಲಾಗುವುದು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ನಂತರ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿ ರಾಜಶೇಖರ್ ಹಾಗೂ ಪಿಎಸ್‌ಐ ಮಹದೇವನಾಯಕ ಭೇಟಿನೀಡಿ ಪರಿಶೀಲಿಸಿ ಇದರ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

‘ಕೆರೆಗೆ ನೀರು ತುಂಬಿಸುವ ಸುವರ್ಣಾವತಿ ನಾಲೆಯಲ್ಲಿ ಹೂಳು ತುಂಬಿದೆ. ಈ ಬಗ್ಗೆ ಇಲಾಖೆಗೆ ಹಲವು ಬಾರಿ ದೂರು ನೀಡಲಾಗಿದೆ. ಆದರೆ ಅರ್ಧಕ್ಕೆ ಕೆಲಸ ಸ್ಥಗಿತಗೊ ಳಿಸಿರುವುದಿರಿಂದ ರೈತರಿಗೆ ತುಂಬಾ ತೊಂದರೆಯಾಗಿದೆ. ಇದರ ನಡುವೆ ಕೆರೆಯಲ್ಲಿ ಅಕ್ರಮ ಮಣ್ಣು ಸಾಗಾಟ ಮಾಡುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ.’ ತಾಲ್ಲೂಕು ಭಗೀರಥ ಯುವಕ ಸಂಘದ ಅಧ್ಯಕ್ಷ ವೈ.ಕೆ.ಮೋಳೆ ರಾಜು, ಕೆಂಪರಾಜು ಎಚ್ಚರಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT