ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ-ಮೋರೆಗೆ ಬೇಕಿದೆ ಕಾಯಕಲ್ಪ

Last Updated 20 ಅಕ್ಟೋಬರ್ 2011, 9:10 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಪಟ್ಟಣ ಪ್ರವೇಶಿಸುತ್ತಿದ್ದಂತೆಯೆ ಸ್ವಾಗತಿಸುವುದು ಒಂದೆಡೆ ಕೊಳಚೆ ನೀರು ನಿಂತಿರುವ ದೊಡ್ಡ ಮೋರಿಯಾದರೆ, ಮತ್ತೊಂದೆಡೆ ಕೊಳಚೆ ನೀರಿನಲ್ಲಿಯೇ ಬೆಳೆದು ನಿಂತಿರುವ ಕಳ್ಳಿ ಹಾಗೂ ಕಳೆಗಿಡಗಳ ಸಮುಚ್ಚಯ.

ಒಂದು ಕಾಲದಲ್ಲಿ ಗೌಡನ ಕೆರೆ ತುಂಬಿದಾಗ ನೀರು ಹರಿಯಲು ಮಾಡಿದ್ದ ಮೋರಿ ಈಗ ಕೇವಲ ಕಲುಷಿತ ಪ್ರದೇಶವಾಗಿ ಮಾರ್ಪಟ್ಟಿದೆ. ಗೌಡನ ಕೆರೆಯೂ ಕಳೆಗಿಡಗಳಿಂದ ಆವೃತವಾಗಿ ಒಳಗಿನ ನೀರು ಕೇವಲ ಸೊಳ್ಳೆಗಳ ತಾಣವಾಗಿ ಮಾತ್ರವಿದ್ದು, ಅಲ್ಲಿಂದ ಹೊರಟ ಮೋರಿಯೂ ಅದೇ ಪರಿಸ್ಥಿತಿಯಲ್ಲಿದೆ.

ನೀರು ಹರಿಯುವಲ್ಲಿ ತ್ಯಾಜ್ಯ ತುಂಬಿಕೊಂಡಿರುವುದರಿಂದಾಗಿ ನೀರು ಹರಿಯದೇ ಅಲ್ಲಲ್ಲೇ ನಿಂತಿರುತ್ತದೆ. ಬಸ್ ನಿಲ್ದಾಣದ ಸಮೀಪವೇ ಇರುವ ಇಲ್ಲಿನ ಪ್ರದೇಶದಲ್ಲಿ ಅತಿ ಹೆಚ್ಚು ಜನಸಂಚಾರ, ಹಣ್ಣುಗಳ ಅಂಗಡಿ ಹಾಗೂ ಹೋಟೆಲುಗಳಿವೆ. ಈ ಪ್ರದೇಶದಲ್ಲಿ ಉತ್ಪತ್ತಿಯಾಗುವ ಸಮಸ್ತ ತ್ಯಾಜ್ಯ ಸುರಿಯುವ ತಾಣವಾಗಿ ಈ ಮೋರಿ ಬಳಕೆಯಾಗುತ್ತಿದೆ.

`ಗೌಡನ ಕೆರೆಯನ್ನು ನೀರಾವರಿ ಇಲಾಖೆ ಅಧಿಕಾರಿಗಳು ಸ್ವಚ್ಛಗೊಳಿಸದೆ ಈ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣರಾಗಿದ್ದಾರೆ. ಈ ಮೋರಿಯ ಬದಲು ನೀರು ಹೊರಕ್ಕೆ ಹರಿಯಲು ದಪ್ಪ ಪೈಪ್‌ಲೈನ್ ನಿರ್ಮಿಸಿ, ಉಳಿದ ಪ್ರದೇಶವನ್ನು ಒಂದು ಉದ್ಯಾನ ರೂಪಿಸಿದರೆ ಊರಿಗೇ ಒಂದು ಕಳೆ ಬರುತ್ತದೆ.

ವಾಯುಸಂಚಾರ ಮಾಡುವರಿಗೆ, ವೃದ್ಧರಿಗೆ, ಮಕ್ಕಳಿಗೆ ಅನುಕೂಲವೂ ಆಗುತ್ತದೆ. ಆದರೆ ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿಯಿಲ್ಲ. ನಮ್ಮ ಊರಿಗೆ ಆಗಮಿಸುವ ಹೊಸಬರು ಇದು ಯಾವ ಊರು ಎಂದು ಕೇಳುತ್ತಾರೆ.

ಪಟ್ಟಣಕ್ಕೆ ಸ್ವಾಗತಿಸುವ ಕಮಾನೊಂದನ್ನು ಕೂಡ ನಿರ್ಮಿಸಿಲ್ಲ. ಊರಿಗೆ ಆಗಮಿಸಿದಾಗ ಸ್ವಚ್ಛವಾದ ವಾತಾವರಣ ನಮ್ಮನ್ನು ಸ್ವಾಗತಿಸಬೇಕು. ಸದಾ ಕಲುಷಿತ ವಾತಾವರಣದಿಂದ ಸಾಂಕ್ರಾಮಿಕ ರೋಗ ಹೆಚ್ಚುತ್ತವೆ~ ಎನ್ನುತ್ತಾರೆ ಬಸ್‌ನಿಲ್ದಾಣದ ಬಳಿ ಅಂಗಡಿ ಹೊಂದಿರುವ ವಿ.ಮಂಜುನಾಥ್.

`ಗೌಡನ ಕೆರೆಯಿಂದ ಕೋಡಿ ನೀರು ಹರಿಯಲು ಮಾಡಿರುವ ಈ ಮೋರಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುತ್ತದೆ.

ಪುರಸಭೆಯಿಂದ ಇದನ್ನು ಏನೂ ಮಾಡಲು ಅಧಿಕಾರವಿಲ್ಲ. ಆದರೂ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಹಲವು ತಿಂಗಳ ಹಿಂದೆ ಮೋರಿಯ ಸ್ವಲ್ಪ ಭಾಗವನ್ನು ಪುರಸಭೆಯಿಂದ ಸ್ವಚ್ಛಗೊಳಿಸಿದ್ದೆವು.

ಊರಿನೊಳಗೆ ನಾವೇನು ಸ್ವಚ್ಛತೆ ಕಾರ್ಯ ಕೈಗೊಂಡರೂ ಪುರ ಪ್ರವೇಶದಲ್ಲಿರುವ ಈ ಅನೈರ್ಮಲ್ಯತೆ ಎಲ್ಲರಿಗೂ ಕೆಟ್ಟ ಸಂದೇಶ ನೀಡುತ್ತದೆ. ಶಾಸಕರು ಮನಸು ಮಾಡಿದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಈ ಪ್ರದೇಶವನ್ನು ಉತ್ತಮಗೊಳಿಸಬಹುದು~ ಎಂದು ಪುರಸಭೆಯ ಮುಖ್ಯಾಧಿಕಾರಿ ಚನ್ನೇಗೌಡ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT