ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಸಂಬಂಧ ಬಿರುಕು, ಬದುಕು ಬರಿದು...

Last Updated 13 ಜುಲೈ 2013, 10:38 IST
ಅಕ್ಷರ ಗಾತ್ರ

ತಿಪಟೂರು: ತಾಲ್ಲೂಕಿನಲ್ಲಿ ಕಾವೇರಿ ಮತ್ತು ಕೃಷ್ಣ ಕಣಿವೆ ವ್ಯಾಪ್ತಿಗೆ ಬರುವ 169 ಕೆರೆಗಳಿವೆ. ಬಯಲು ಪ್ರದೇಶದಲ್ಲಿ ಇವು ಒಂದು ಕಾಲಕ್ಕೆ ಪ್ರಮುಖ ಜಲತಾಣಗಳಾಗಿದ್ದವು. ಅಚ್ಚುಕಟ್ಟು ವ್ಯಾಪ್ತಿಯ ನೀರಾವರಿ ಬೆಳೆಗಳಿಗೆ ಜಲಾಶ್ರಯ ನೀಡಿದ್ದಷ್ಟೇ ಅಲ್ಲದೆ ಅಂತರ್ಜಲ ಕಾಯ್ದುಕೊಂಡಿದ್ದವು. ಈಗ ಹೇಮಾವತಿ ನೀರು ಹರಿಯುವ ಕೆಲ ಕೆರೆಗಳನ್ನು ಹೊರತುಪಡಿಸಿದರೆ ಉಳಿದ ಕೆರೆಗಳು ಬತ್ತಿ ಎಷ್ಟೋ ವರ್ಷಗಳಾಗಿವೆ.

ನೀರಿಲ್ಲದೆ ಬತ್ತುವುದು ಒಂದೆಡೆಯಾದರೆ, ಭೂ ಸ್ವಾಹಿಗಳ ಒತ್ತುವರಿಗೆ ಕೆರೆ ಅಂಗಳಗಳು ಕಿರಿದಾಗಿವೆ. ಬಹುತೇಕ ಎಲ್ಲಾ ಕೆರೆಗಳಲ್ಲಿ ಹೂಳು ತೆಗೆಯುವ ನೆಪದಲ್ಲಿ ಹಲವರು ಜೇಬಿಗೆ ದುಡ್ಡು ತುಂಬಿಕೊಂಡಿರುವುದೇ ಹೆಚ್ಚು.

ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಸೇರಿದ ಒಟ್ಟು 23 ಕೆರೆಗಳಲ್ಲಿ ಒತ್ತುವರಿ ತೆರವುಗೊಳಿಸಲಾಗಿದೆ. ಇವುಗಳಲ್ಲಿ ಮಸವನಘಟ್ಟ ಕೆರೆಯ 44 ಎಕರೆ, ಕಿಬ್ಬನಹಳ್ಳಿಯ ಕೆರೆಯ 28, ತಡಸೂರು ಕೆರೆಯ 15, ಜಾಬಘಟ್ಟದ 13, ಕೆರೆಗೋಡಿ ದೊಡ್ಡಕೆರೆಯ 12, ಹಾಲ್ಕುರಿಕೆ ಮತ್ತು ಗುರುಗದಹಳ್ಳಿಯ ತಲಾ 11, ಬಿಳಿಗೆರೆ ಕೆರೆಯ 9 ಎಕರೆ ಪ್ರಮುಖವಾದವು.

ಕೆರೆ ಪುನರುಜ್ಜೀವನ ಯೋಜನೆಯಡಿ ಒತ್ತುವರಿ ತೆರವು ಮಾಡಿ ಸುತ್ತ ಟ್ರೆಂಚ್ ತೋಡಲಾಗಿದೆ. 23 ಕೆರೆಗಳಿಂದ ಒಟ್ಟು 183 ಎಕರೆ ಒತ್ತುವರಿ ತೆರವು ಮಾಡಲಾಗಿದೆ ಎಂಬುದು ಇಲಾಖೆ ಮಾಹಿತಿ. ಇನ್ನು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಒಟ್ಟು 123 ಕೆರೆಗಳ ಪೈಕಿ ಎರಡು ವರ್ಷಗಳಿಂದ ಕೇವಲ 15 ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ.

ತೆರವು ವಿಷಯದಲ್ಲಿ ಇಲಾಖೆ ಕೆಲ ಅಂಕಿಅಂಶ ಇಟ್ಟುಕೊಂಡಿದ್ದರೂ ವಾಸ್ತವದ ಪರಿಸ್ಥಿತಿ ಭಿನ್ನವಾಗಿದೆ. ಏಕೆಂದರೆ ಆಯಾ ಕೆರೆಯ ವಿಸ್ತೀರ್ಣದ ಬಗ್ಗೆ ಇಲಾಖೆಗಳಲ್ಲೇ ಸ್ಪಷ್ಟ ದಾಖಲೆಗಳಿಲ್ಲ ಎಂಬ ಆಕ್ಷೇಪಗಳಿವೆ. ತೆರವು ವಿಚಾರದಲ್ಲೂ ವ್ಯಾಪ್ತಿ ಗೊಂದಲಗಳು ಇಲಾಖೆಯನ್ನು ಕಾಡುತ್ತಿರುವುದು ನಿಜ. ಈಚೆಗಂತೂ ಕೆರೆಗಳು ತುಂಬದೆ ತನ್ನ ವ್ಯಾಪ್ತಿಯನ್ನು ನೀರು ನಿಂತು ಸ್ಪಷ್ಟಪಡಿಸಿಕೊಳ್ಳುವುದು ತಪ್ಪಿ ಹೋಗಿದೆ. ಕೆರೆ ವಿಸ್ತೀರ್ಣವನ್ನು ಸ್ಪಷ್ಟಪಡಿಸಲು ವೈಜ್ಞಾನಿಕ ಮಾನದಂಡಕ್ಕಾಗಿ ಇಲಾಖೆಗಳೂ ಒದ್ದಾಡುತ್ತಿರುವ ಸಂಶಯವಿದೆ. ಹಾಗಾಗಿ ಸ್ಯಾಟಲೈಟ್ ಆಧರಿತ ಹೊಸ ಮಾದರಿಯಲ್ಲಿ ಕೆರೆ ಜಾಗವನ್ನು ಗುರುತಿಸುವ ಪ್ರಸ್ತಾವವೂ ಸರ್ಕಾರದ ಮುಂದಿದೆ. ಆದರೆ ಒತ್ತುವರಿ ತೆರವು ವಿಚಾರದಲ್ಲಿ ಅಂತಹ ಸಂದಿಗ್ಧಕ್ಕಿಂತ ಇಚ್ಛಾಶಕ್ತಿಯ ಕೊರತೆ ಕಾಣುತ್ತಿದೆ.

ರಾಜಕೀಯ: ಈಗ ಇಲಾಖೆ ಹೇಳುವ `ತೆರವುಗೊಳಿಸಲಾಗಿದೆ' ಎಂಬ ಅಂಕಿಅಂಶ ಕೇವಲ ಕಡತಗಳಲ್ಲಿ ಮಾತ್ರ ಉಳಿದಿದೆ. ಇಂತಿಷ್ಟು ಕೆರೆ ಜಾಗವೆಂದು ಅಂದಾಜಿನ ಮೇಲೆ ಗುರುತು ಹಾಕಿ ಬಂದಿದ್ದನ್ನೇ `ತೆರವು' ಎಂದು ಬಿಂಬಿಸಲಾಗುತ್ತಿದೆ. ವಾಸ್ತವದಲ್ಲಿ ಅಂತಹ ಜಾಗಗಳು ಒತ್ತುವರಿದಾರರ ಸ್ವತ್ತಾಗಿಯೇ ಉಳಿದಿವೆ. ಇನ್ನು ಕೆರೆ ಸುತ್ತ ಒತ್ತುವರಿಗೆ ಆಸ್ಪದವಾಗದಂತೆ ಟ್ರಂಚ್ ತೆಗೆದಿರುವುದಾಗಿ ಇಲಾಖೆಗಳು ಹೇಳುತ್ತವೆ. ಕೆರೆ ಅಂಗಳದಲ್ಲಿ ತೋಟ, ಗದ್ದೆ ಮಾಡಿದ್ದವರು ಅನುಭವಿಸುತ್ತಲೇ ಇದ್ದಾರೆ.

ರಾಜಕೀಯ ಪ್ರವೇಶದಿಂದ ಹಲವೆಡೆ ಟ್ರಂಚ್ ಹೊಡೆಯುವ ಕೆಲಸವೂ ಪರಿಪೂರ್ಣವಾಗಿಲ್ಲ. ಜನಪ್ರತಿನಿಧಿಗಳು ಮಧ್ಯೆ ಪ್ರವೇಶಿಸಿ ತಮಗೆ ಬೇಕಾದವರ ಒತ್ತುವರಿಯನ್ನು ಉಳಿಸಲು ಪರೋಕ್ಷವಾಗಿ ನೆರವಾಗಿದ್ದಾರೆ ಎಂಬ ಆರೋಪ ಹಿಂದಿನಿಂದ ಕೇಳಿ ಬಂದಿದೆ. ರಾಜಕೀಯ ಮರ್ಜಿಯಲ್ಲಿ ಕೆಲಸ ಮಾಡಬೇಕಾದ ನೆಪದಲ್ಲಿ ಅಧಿಕಾರಿಗಳು ಸಹ ನಿಷ್ಠುರ ಕ್ರಮ ಕೈಗೊಳ್ಳದೆ ಕೈಚೆಲ್ಲಿರುವ ಉದಾಹರಣೆಯೂ ಉಂಟು.

ದುಡ್ಡು ಕಟ್ಟಿ ಹೊಡೆದರು: ಇನ್ನು ಹೂಳು ತೆಗೆಯುವ ಕಾಮಗಾರಿಗಳೆಲ್ಲಾ ಬಹುತೇಕ ಗುತ್ತೆಗೆದಾರರು, ಅಧಿಕಾರಿಗಳ ಹಿತಕ್ಕೆ ಬಳಕೆಯಾಗಿವೆಯೇ ಹೊರತು ಉದ್ದೇಶ ಈಡೇರಿಲ್ಲ. ತಾಲ್ಲೂಕಿನ ಸೂಗೂರು ಕೆರೆಯ ಹೂಳು ತೆಗೆಯಲು ಕಳೆದ ವರ್ಷ ಸುಮಾರು ರೂ. 8 ಲಕ್ಷಕ್ಕೂ ಹೆಚ್ಚು ಅನುದಾನ ದೊರೆತಿತ್ತು. ಆ ವರ್ಷ ಹೇಮಾವತಿ ನೀರು ನಿಲ್ಲಿಸಿ ಹೂಳು ತೆಗೆಯಲು ಅವಕಾಶ ಕೊಟ್ಟಿದ್ದೇ ತಡ ರೈತರೇ ನಾ ಮುಂದು, ತಾ ಮುಂದು ಎಂಬಂತೆ ಹೂಳು ಬಾಚಿ ಹೊಲ ತೋಟಗಳಿಗೆ ಹೊಡೆದರು. ಹೂಳು ತೆಗೆಯಲು ಗುತ್ತಿಗೆ ಪಡೆದಿದ್ದ ವ್ಯಕ್ತಿ, ತಾನೇ ತೆಗೆಸಿದ್ದು ಎಂಬಂತೆ ಬಿಲ್ ಪಡೆಯಲು ಸಿದ್ಧತೆ ನಡೆಸಿದ್ದರು.

ರೈತರು ಈ ಬಗ್ಗೆ ಮಾಧ್ಯಮಗಳಲ್ಲಿ ಬಹಿರಂಗ ಪಡಿಸಿದ್ದರಿಂದ ಆ ಹುನ್ನಾರಕ್ಕೆ ಕಲ್ಲು ಬಿತ್ತು.
ತಿಪಟೂರು ಕೆರೆಯಲ್ಲಿ ಹೂಳು ಎತ್ತಲು ಅವಕಾಶ ಸಿಕ್ಕಿದ್ದೇ ತಡ ರೈತರು ಮುಗಿ ಬಿದ್ದರು. ಅಷ್ಟೇ ಅಲ್ಲ, ಉತ್ಕೃಷ್ಟವಾಗಿದ್ದ ಗೋಡು ಹೊಡೆದುಕೊಳ್ಳಲು ಟ್ರ್ಯಾಕ್ಟರ್‌ಗೆ ರೂ. 25 ಹಣವನ್ನು ಸರ್ಕಾರಕ್ಕೆ ಕಟ್ಟಿದ್ದರು. ಸರ್ಕಾರಕ್ಕೆ ಹಣ ಕಟ್ಟಿ ಸ್ವತಃ ಹೂಳು ತೆಗೆದುಕೊಳ್ಳುವ ರೈತರು ಇದ್ದಾಗಲೂ ಹೂಳು ತೆಗೆಯುವ ಯೋಜನೆಗಳಲ್ಲಿ ಕೋಟ್ಯಾಂತರ ರೂಪಾಯಿ ಹಣ ಗುಳುಂ ಆಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಗ್ರಾ.ಪಂ.ಗೆ ಲಾಭ ಬಂದಿತ್ತು: ತಾಲ್ಲೂಕಿನ ಕೆಲವೆಡೆ ಇಟ್ಟಿಗೆ ಕಾರ್ಖಾನೆಯವರು ಕೆರೆಕಟ್ಟೆಗಳ ಹೂಳು ಎತ್ತಿ ಬಳಸಿಕೊಂಡರು. ಇಟ್ಟಿಗೆ ಕಾರ್ಖಾನೆಗೆ ಸರ್ಕಾರಿ ಮಣ್ಣನ್ನು ಪುಕ್ಕಟ್ಟೆಯಾಗಿ ಕೊಡಬಾರದೆಂಬ ಕಾರಣಕ್ಕೆ ಒಂದಿಷ್ಟು ತಿಂಗಳು ಹಣ ಕಟ್ಟಿ ಹೊಡೆದುಕೊಳ್ಳುವ ವ್ಯವಸ್ಥೆಯೂ ಜಾರಿಯಲ್ಲಿತ್ತು. ಇದರಿಂದ ಕೆಲ ಗ್ರಾಮ ಪಂಚಾಯಿತಿಗಳಿಗೆ ಆದಾಯವೂ ಬಂದಿತ್ತು. ಹೂಳು ಸುಲಭ ತೆರವಿಗೆ ಸಂಬಂಧಿಸಿ ಇಷ್ಟೆಲ್ಲ ಅವಕಾಶಗಳಿದ್ದರೂ ಸರಿಯಾಗಿ ಬಳಸಿಕೊಳ್ಳದಿರುವುದು ವಿಪರ್ಯಾಸ.

ಉದ್ಯೋಗ ಖಾತ್ರಿ ಯೋಜನೆ ಜಾರಿಯಾದ ಆರಂಭದಲ್ಲಿ ಕೆರೆ ಸ್ವಚ್ಛತೆಗೆ ಆದ್ಯತೆ ನೀಡಲಾಗಿತ್ತು. ಕೆರೆ ಅಂಗಳದ ಗಿಡಗಂಟೆ ತೆರವಿಗೆ ಉದ್ಯೋಗ ಖಾತ್ರಿ ಮೂಲಕ ಲಕ್ಷಾಂತರ ರೂಪಾಯಿ ಹಣ ಖರ್ಚಾಯಿತು. ಆದರೆ ಕೆರೆ ಅಂಗಳದ ಪರಿಸ್ಥಿತಿ ಮಾತ್ರ ಹಾಗೆಯೇ ಉಳಿದಿದೆ. ಸಾವಯವ ಕೃಷಿ ಬಗ್ಗೆ ಮಾತನಾಡುವ ಸರ್ಕಾರ, ರೈತರು ಹೂಳನ್ನು ಸರಿಯಾಗಿ ಬಳಸಿಕೊಳ್ಳುವ ಅವಕಾಶ ವಿಸ್ತರಿಸದೆ ಎತ್ತಿ ಹೊರ ಹಾಕಿದ್ದಕ್ಕೆಂದು ಗುತ್ತೆಗೆದಾರರಿಗೆ ಕೋಟ್ಯಾಂತರ ರೂಪಾಯಿ ಪಾವತಿಸಿರುವುದು ವೈರುಧ್ಯವೇ ಸರಿ.

ಕೃಷಿ ಮತ್ತು ಕೆರೆಗಳಿಗೆ ಗಾಢ ಸಂಬಂಧವಿದ್ದ ಕಾಲದಲ್ಲಿ ರೈತರೇ ಕೆರೆಗಳನ್ನು ಸಂರಕ್ಷಿಸಿಕೊಳ್ಳುತ್ತಿದ್ದರು. ಈಗ ಸಂಬಂಧವೇ ಕಡಿದು ಹೋಗಿದೆ. ಕೆರೆ ವಿಷಯದಲ್ಲಿ ಯಾರು ಯಾರೋ ಹಣ ಮಾಡಿಕೊಳ್ಳಲು ಅವಕಾಶ ಸಿಕ್ಕ ಕಾರಣ ರೈತರೂ ಸಹ ಕೆರೆಗಳ ಬಗ್ಗೆ ನಿರ್ಲಕ್ಷ್ಯ ತಾಳಿದ್ದಾರೆ. ಕೆರೆ ಸಂರಕ್ಷಣೆ ವಿಷಯದಲ್ಲಿ ರೈತರ ಸಹಭಾಗಿತ್ವವನ್ನು ಸಮರ್ಪಕವಾಗಿ ಬಳಸಿಕೊಳ್ಳದಿರುವುದು ಹಲವಾರು ಲೋಪಗಳಿಗೆ ಕಾರಣ. ತಾಲ್ಲೂಕಿನ ಕೆರೆ ಅಂಗಳಗಳಲ್ಲಿ ಮರಳು ಎತ್ತುವ ಅವಕಾಶ ಹೆಚ್ಚಾಗಿಲ್ಲ. ಚೌಲಿಹಳ್ಳಿ, ಹಾಲ್ಕುರಿಕೆ ವ್ಯಾಪ್ತಿಯಲ್ಲಿ ಮಾತ್ರ ಮರಳು ಎತ್ತುವುದು ಕಂಡು ಬಂದಿದೆ.

ಕೆರೆಗೊಂದು ಹೆಸರು, ಹೆಸರಿಗೊಂದು ಕಥೆ
ಕೆರೆ-ಕಟ್ಟೆಯ ವಿಸ್ತಾರ ನೋಡಿ ಊರಿನ ವೈಭೋಗ ಅಳೆಯುವ ಕಾಲವೊಂದಿತ್ತು. ಆಯಾ ಊರಿನ ಉಗ್ರಾಣದಂತಿದ್ದ ಜಲತಾಣಗಳು ಅಲ್ಲಿನ ಆರ್ಥಿಕತೆ ಮತ್ತು ಸಾಮಾಜಿಕತೆ ನಿರ್ಧರಿಸುತ್ತಿದ್ದವು. ಜಲನಿಧಿಯ ಕೆರೆಕಟ್ಟೆಗಳಿಗೆ ಇಟ್ಟಿರುವ ಹೆಸರೇ ಋಣಭಾರ ಅಥವಾ ದೈವತ್ವವನ್ನು ಸಂಕೇತಿಸುತ್ತಾ ಬಂದಿದೆ.

ತಿಪಟೂರು ತಾಲ್ಲೂಕಿನಲ್ಲಿ ಊರಿನ ಹೆಸರನ್ನು ಹೊರತುಪಡಿಸಿ ತನ್ನದೇ ಹೆಸರು ಹೊಂದಿರುವ ಕೆರೆಗಳು ಹತ್ತಾರಿವೆ. ಕೆರೆಯಿಂದಲೇ ಊರಿಗೆ ದೊಡ್ಡ ಹೆಸರು ಬಂದ ನೊಣವಿನಕೆರೆಯಂಥ ನಿದರ್ಶನಗಳಿವೆ. ಕೆರೆ ಕಟ್ಟಿಸಿದ್ದಕ್ಕೋ, ಪ್ರೇರಣೆ ನೀಡಿದ್ದಕ್ಕೋ ವ್ಯಕ್ತಿಗಳ ಹೆಸರನ್ನು ಇಡಲಾಗಿದೆ. ನಮ್ಮ ಜನಪದದಲ್ಲಿ ಕೆರೆಗೆ ಸಂಬಂಧಿಸಿ ಹೆಣ್ಣಿನ ಕಥೆಗಳೂ ಇರುವಂತೆ ಮಹಿಳೆಯರ ಹೆಸರುಗಳೂ ಇವೆ.

ತಾಲ್ಲೂಕಿನ ಸಾರ್ಥವಳ್ಳಿಯ ಲೋಕಮ್ಮನಕಟ್ಟೆ, ಗೌಡನಕಟ್ಟೆಯ ದ್ಯಾವಮ್ಮನಕಟ್ಟೆ, ಈರಲಗೆರೆಯ ಸೌಗಂಧಿ ಕಟ್ಟೆ, ಬಳವನೇರಳು ಕಂಚಿಕೆರೆ ಪ್ರಮುಖವಾದವು. ಇನ್ನು ಗುಂಗುರಮಳೆಯ ಕೆಂಪಣ್ಣನಕಟ್ಟೆ, ಇದೇ ಊರಿನ ಬಂಜಾರನಕಟ್ಟೆ, ಮುದ್ದನಹಳ್ಳಿಯ ಅಯ್ಯನಕಟ್ಟೆ, ಮಾಚಘಟ್ಟದ ಚನ್ನಪ್ಪನಕಟ್ಟೆ, ಗೌಡನಕಟ್ಟೆಯ ಕಾಳೇಗೌಡನಕೆರೆ, ಮಾದಿಹಳ್ಳಿಯ ಬೋರೇಗೌಡನಕಟ್ಟೆ, ಅರಳುಗುಪ್ಪೆಯ ಕಾಂತಯ್ಯನಕೆರೆ, ಹಣ್ನದ ಬೋರನಕಟ್ಟೆ, ಈರಲಗೆರೆಯ ಬೋರೇಗೌಡನಕೆರೆ, ಹಾಲ್ಕುರಿಕೆ ಮರಿಗಿಂಚನಕಟ್ಟೆ, ಸಿದ್ದಪ್ಪನಕಟ್ಟೆ, ಗೌಡನಕಟ್ಟೆ ಗ್ರಾಮದ ಮರಿಸಿದ್ದನಕೆರೆ, ಮಲ್ಲಿದೇವಿಹಳ್ಳಿ ನಂಜುಂಡಪ್ಪನಕಟ್ಟೆ, ಮುದ್ದೇನಹಳ್ಳಿ ಕರಿಯಣ್ಣನಕಟ್ಟೆ, ಹುಲಿಹಳ್ಳಿ ದೊಡ್ಡನಕಟ್ಟೆ, ಸಾಗಯ್ಯನಕಟ್ಟೆ, ವಿಠಲಾಪುರ ಗವಿಯಪ್ಪನಕಟ್ಟೆ, ಬೊಮ್ಮಲಾಪುರ ಚಿಕ್ಕಮಲ್ಲನಕೆರೆ, ಗುಡಿಗೊಂಡಹಳ್ಳಿ ಚಿಕ್ಕನಕಟ್ಟೆ, ಹೊನ್ನವಳ್ಳಿ ಬಡಗೀಕೆರೆ, ಚೌಡೇನಹಳ್ಳಿ ಕೆರೆಗೆ ಶೆಟ್ಟರಕಟ್ಟೆ ಹೆಸರಿದೆ. ದೇವರ ಹೆಸರಿಟ್ಟಿರುವುದರಲ್ಲಿ ದೊಡ್ಡಿಕಟ್ಟೆಯ ಪಟ್ಟದದೇವರಕೆರೆ, ಸೂರಗೊಂಡನಹಳ್ಳಿಯ ಬೀರೇದೇವರ ಕೆರೆ ಪ್ರಮುಖ.

ಹಾಲ್ಕುರಿಕೆಯಲ್ಲಿ ಕೆರೆಗೆ `ಕುಡಿನೀರುಕಟ್ಟೆ' ಎಂಬ ಹೆಸರಿರುವುದು ವಿಶೇಷ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT