ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಹೂಳೆತ್ತಲು ಆಗ್ರಹಿಸಿ ಪ್ರತಿಭಟನೆ

Last Updated 13 ಫೆಬ್ರುವರಿ 2013, 7:11 IST
ಅಕ್ಷರ ಗಾತ್ರ

ಯಾದಗಿರಿ: ತಾಲ್ಲೂಕಿಗೆ ಬಹುತೇಕ ಪ್ರದೇಶ ನೀರಾವರಿ ಸೌಲಭ್ಯಕ್ಕೆ ಒಳಪಟ್ಟಿಲ್ಲ. ಶಹಾಪುರ ತಾಲ್ಲೂಕಿನ ಕೊನೆಯ ಭಾಗದ ಗ್ರಾಮಗಳು ನೀರಾವರಿ ಸೌಲಭ್ಯದಿಂದ ವಂಚಿತವಾಗಿದ್ದು, ರೈತರಿಗೆ ಕೆರೆಗಳೇ ನೀರಿನ ಮೂಲವಾಗಿರುವುದರಿಂದ ಕೆರೆಗಳ ಹೂಳು ತೆಗೆಸಿ, ಹೆಚ್ಚಿನ ಪ್ರಮಾಣದ ನೀರು ಸಂಗ್ರಹಣೆಗೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿ ಬಿಎಸ್ಸಾರ್ ಕಾಂಗ್ರೆಸ್ ವತಿಯಿಂದ ಮಂಗಳವಾರ ಇಲ್ಲಿಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಜಿಲ್ಲೆಯ ಬಹುತೇಕ ಕೆರೆಗಳಲ್ಲಿ ಅಧಿಕ ಪ್ರಮಾಣದ ಹೂಳು ತುಂಬಿರುವುದರಿಂದ ನಿಗದಿತ ಪ್ರಮಾಣದ ನೀರು ಸಂಗ್ರಹಣೆಯಾಗದೇ ಕೆರೆಗಳನ್ನು ನಂಬಿ ಕೃಷಿ ಮಾಡುತ್ತಿರುವ ರೈತರ ಪರಿಸ್ಥಿತಿ ಶೋಚನೀಯವಾಗಿದೆ.

ನಾಯ್ಕಲ್ ದೊಡ್ಡ ಕೆರೆ ಮತ್ತು ಸಣ್ಣ ಕೆರೆ, ಖಾನಾಪೂರ ಕೆರೆ, ಗುಂಡಳ್ಳಿ ಕೆರೆ, ಹಾಗೂ ಚಟ್ನಳ್ಳಿ ಮಿಂಚಿನ ಕೆರೆಗಳಲ್ಲಿ ಸಂಪೂರ್ಣ ಹೂಳು ತುಂಬಿದ್ದು, ಸುಮಾರು ಅರ್ಧಕ್ಕಿಂತಲೂ ಕಡಿಮೆ ನೀರು ಸಂಗ್ರಹವಾಗುತ್ತಿದೆ. ಕೆರೆಯಂಚಿನ ಭಾಗಕ್ಕೆ ನೀರು ತಲುಪದೇ ರೈತರು ಕಂಗಾಲಾಗಿದ್ದು, ಮೊದಲೇ ಇಲ್ಲಿ ಮಳೆಯ ಕೊರತೆ ಇರುವುದರಿಂದ ಕೆರೆಯ ನೀರನ್ನೇ ನಂಬಿ ಬತ್ತ, ಹತ್ತಿ, ಶೆಂಗಾ, ಬೆಳೆಯುವ ರೈತರಿಗೆ ದಿಕ್ಕು ತೋಚದಂತಾಗಿದೆ ಎಂದು ತಿಳಿಸಿದರು.

ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆರೆಗಳ ಹೂಳು ತೆಗೆಯುವ ಯೋಜನೆ ಹಾಕಿಕೊಂಡು ಹೂಳು ತೆಗೆಯದೇ ಹಣವನ್ನು ದುರ್ಬಳಕೆ ಮಾಡಿಕೊಂಡ ಬಗ್ಗೆ ವ್ಯಾಪಕ ದೂರುಗಳು ವ್ಯಕ್ತವಾಗಿವೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಕೆರೆಗಳಲ್ಲಿ ಶೇಖರವಾದ ಹೂಳಿನ ಬಗ್ಗೆ ಸಮಗ್ರವಾದ ಸಮಿಕ್ಷೆ ನಡೆಸಿ ಶೀಘ್ರವೇ ಹೂಳು ತೆಗೆಯುವ ಕಾರ್ಯ ಕೈಗೊಳ್ಳಬೇಕು. ಉದ್ಯೋಗ ಖಾತರಿ ಯೋಜನೆಯಡಿ ಹಲವು ಗ್ರಾಮ ಪಂಚಾಯಿತಿಯಲ್ಲಿ ವ್ಯಾಪಕ ಭ್ರಷ್ಟಾಚಾರದ ಪ್ರಕರಣಗಳಾದ ಬಗ್ಗೆ ಅನುಮಾನಗಳಿದ್ದು, ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬೇಸಿಗೆ ದಿನಗಳು ಮುಂದಿರುವಾಗಲೇ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದ್ದು, ಅನಿಯಮಿತ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಕೇವಲ 3-4 ಗಂಟೆ ಮೂರು ಫೇಸ್ ವಿದ್ಯುತ್ ನೀಡುತ್ತಿದ್ದು, ಅದು ನಿಗದಿತ ಸಮಯಕ್ಕೆ ಪೂರೈಕೆಯಾಗದೇ ಮೊದಲೆ ಬರಗಾಲದಿಂದ ತತ್ತರಿಸಿರುವ ರೈತರಿಗೆ ವಿದ್ಯುತ್ ಕಡಿತದಿಂದ ಬರ ಸಿಡಿಲು ಬಡೆದಂತಾಗಿದೆ. ಈ ಕುರಿತು ಅಧಿಕಾರಿಗಳ ಸಭೆ  ನಡೆಸಿ ನಿಗದಿತ ಸಮಯದಲ್ಲಿ ರೈತರಿಗೆ 8 ತಾಸು ನಿರಂತರ ವಿದ್ಯುತ್ ಪೂರೈಸುವ ವ್ಯವಸ್ಥೆ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ರೈತರ ಜೊತೆಗೂಡಿ ಉಗ್ರ ಪ್ರತಿಭಟನೆ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ಚೆಕ್‌ಡ್ಯಾಂ ನಿರ್ಮಾಣ, ಯು.ಕೆ.ಪಿ. ಕ್ಯಾನಲ್ ನೀರು ಕೆರೆಗಳಿಗೆ ಸರಬರಾಜು, ಭೀಮ-ಕೃಷ್ಣ ಏತ ನೀರಾವರಿ ಯೋಜನೆ, ಹಳ್ಳಿಗಳಲ್ಲಿ ಸರಿಯಾದ ರೀತಿಯಲ್ಲಿ ವಿದ್ಯುತ್ ಸಂಪರ್ಕ, ಕೆರೆಗಳ ದಂಡೆಯ ಮೇಲೆ ಗಿಡ ನೆಟ್ಟು, ಪ್ರಾಣಿ, ಪಕ್ಷಿಗಳ ಸಂರಕ್ಷಣೆ ಸೇರಿದಂತೆ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿದರು.

ಮೌಲಾಲಿ ಅನಪೂರ, ಅಶೋಕ ಮುದ್ನಾಳ, ದೀಪಕ ಪೊದ್ದಾರ್, ದುರ್ಗಯ್ಯ ತಾಂಡೂರಕರ, ಚೌಡಯ್ಯ ಬಾವೂರ, ಶರಣಪ್ಪ ಜಾಕನಳ್ಳಿ, ವಿಶ್ವನಾಥ ಶಬಾದಿ, ಮಲ್ಲು ಎಸ್.ಆರ್.ಎಸ್, ಸುಭಾಷ ಹೆಡಗಿಮದ್ರಿ, ಸಾಬರೆಡ್ಡಿ ಇಬ್ರಾಹಿಂಪೂರ, ಶರಣಪ್ಪ ನಾಗ್ಲಾಪೂರ, ದೇವು ಬಡಿಗೇರ್, ಭೀಮರಾಯ ಠಾಣಗುಂದಿ, ವಾದಿರಾಜ ಕುಲಕರ್ಣಿ, ರಾಕೇಶ ಯಲಸತ್ತಿ, ಜಾವೀದ್, ಹಣಮಂತ ತೇಕರಾಳ,  ಶಂಕರಲಿಂಗ  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT