ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗೆ ಕಲುಷಿತ ನೀರು: ಆತಂಕ

Last Updated 7 ಸೆಪ್ಟೆಂಬರ್ 2013, 5:09 IST
ಅಕ್ಷರ ಗಾತ್ರ

ಬೀದರ್: ಕಾರ್ಖಾನೆಗಳು ಹೊರಬಿಡುವ ಕಲ್ಮಷಯುಕ್ತ, ರಾಸಾಯನಿಕ ಅಂಶಗಳಿರುವ ನೀರು ಕೆರೆಗೆ ಸೇರುವ ಪರಿಣಾಮ ನೀರು ಮಲೀನಗೊಂಡಿದ್ದು, ಬೆಳೆ ಮತ್ತು ಕುಡಿಯುವ ನೀರಿನ ಮೇಲೂ ಪರಿಣಾಮ ಬೀರಿದೆ ಎಂದು ನಗರ ಹೊರವಲಯದ ನಿಜಾಮಪುರ ಮತ್ತು ಆಸುಪಾಸಿನ ಗ್ರಾಮಗಳ ನಿವಾಸಿಗಳು ದೂರಿದ್ದಾರೆ.

`ಕೊಳಾರ (ಕೆ) ಕೈಗಾರಿಕಾ ಪ್ರದೇಶದಲ್ಲಿ ಇರುವ ಕೆಲ ಕೈಗಾರಿಕೆಗಳು ತ್ಯಾಜ್ಯ ಮತ್ತು ಕಲ್ಮಶಯುಕ್ತ ನೀರನ್ನು ಹೊರಬಿಡುತ್ತವೆ. ಇದು, ನಿಜಾಮಪುರ ಕೆರೆ ಸೇರುತ್ತಿದೆ. ಇದರ ಪರಿಣಾಮ ಕೃಷಿಯ ಮೇಲೂ ಆಗುತ್ತಿದೆ' ಎಂದು ಸ್ಥಳೀಯರಾದ ಅಮೃತರಾವ್ ಪಾಟೀಲ, ಆನಂದ ಆತಂಕ ವ್ಯಕ್ತಪಡಿಸಿದ್ದಾರೆ.

ನಿವಾಸಿಗಳ, ಕೃಷಿಕರ ಮಾತಿಗೆ, ಆತಂಕಕ್ಕೆ ಕವಡೆ ಕಿಮ್ಮತ್ತು ಇಲ್ಲವಾಗಿದೆ. ಅನೇಕ ಬಾರಿ ಪ್ರತಿಭಟನೆ ನಡೆಸಿದರೂ ಯಾವುದೇ ಪರಿಹಾರ ದೊರೆತಿಲ್ಲ. ಚುನಾವಣೆ ಸಂದರ್ಭದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದವರು ಈಗ ನಮ್ಮ ಅಳಲು ಕೇಳುತ್ತಿಲ್ಲ ಎಂದ ಬೇಸರ ವ್ಯಕ್ತಪಡಿಸಿದ್ದಾರೆ.

ಗ್ರಾಮಸ್ಥರ ಪ್ರಕಾರ, ಹೀಗೆ ಕಲ್ಮಷ ಯುಕ್ತ ನೀರು ಬಿಡುವ ಕ್ರಮ ವರ್ಷಗಳಿಂದ ಜಾರಿಯಲ್ಲಿದೆ. ಮಳೆ ಬಂದಾಗ , ಆ ನೀರಿನೊಂದಿಗೆ ಸೇರಿಹೋಗಲಿ ಎಂದು ಹೆಚ್ಚಿನ ಪ್ರಮಾಣದಲ್ಲಿ ಬಿಡುತ್ತಾರೆ. ಇದರ ಪರಿಣಾಮ, ಕೆರೆಯಂಚಿನ ಭೂಮಿಯೂ ಕಪ್ಪು ಬಣ್ಣಕ್ಕೆ ತಿರುಗಿದೆ.

ಎರಡು ದಿನದ ಹಿಂದೆ ಹೀಗೆ ಕಾರ್ಖಾನೆಯೊಂದರಿಂದ ಟ್ಯಾಂಕರ್‌ನಲ್ಲಿ ತಂದು ಕೆರೆಗೆ ಕಲ್ಮಶಯುಕ್ತ ನೀರು ಹರಿಸುವಾಗ ಸ್ಥಳೀಯ ನಿವಾಸಿಗಳು ಅಡ್ಡಗಟ್ಟಿದ್ದು, ಘೇರಾವ್ ಹಾಕಿದ್ದಾರೆ. ಇನ್ನಾದರೂ ಜನಪ್ರತಿನಿಧಿಗಳು, ಜಿಲ್ಲಾಡಳಿತ ಈ ಬಗೆಗೆ ಗಮನಹರಿಸಿ ಪರಿಹಾರ ಕಲ್ಪಿಸಬೇಕು. ಕಾಲಾನಂತರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುವುದನ್ನು ತಪ್ಪಿಸಬೇಕು ಎಂದು ಪಾಟೀಲ ಅವರು ಒತ್ತಾಯಿಸಿದರು.

ಕೈಗಾರಿಕಾ ಪ್ರದೇಶದಲ್ಲಿ ಸಂಸ್ಕರಣ ಘಟಕ ಸ್ಥಾಪನೆಯೇ ಇದಕ್ಕೆ ಪರಿಹಾರ. ಈ ಹಿಂದೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಬಂದು ಸಂಸ್ಕರಣ ಘಟಕ ಸ್ಥಾಪನೆ ಅಗತ್ಯ ಕುರಿತು ಸಕಾರಾತ್ಮಕವಾಗಿ ಅಭಿಪ್ರಾಯ ಪಟ್ಟಿದ್ದಾರೆ. ಈ ಸಾಧ್ಯತೆಯನ್ನು ಪರಿಶೀಲಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT