ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗೆ ಕಲುಷಿತ ನೀರು: ಕ್ಯಾತ್ಸಂದ್ರ ಬಂದ್

Last Updated 21 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ತುಮಕೂರು:  ಗುಂಡ್ಲಮ್ಮನ ಕೆರೆ ಸ್ವಚ್ಛತೆಗೆ ಆಗ್ರಹಿಸಿ ಮಂಗಳವಾರ ವಿವಿಧ ಸಂಘಟನೆಗಳು ಕರೆನೀಡಿದ್ದ ಕ್ಯಾತ್ಸಂದ್ರ ಬಂದ್ ಯಶಸ್ವಿಯಾಯಿತು.

ವಹಿವಾಟು ಬಂದ್ ಆಗಿತ್ತು. ಔಷಧಿ ಅಂಗಡಿ, ಆಸ್ಪತ್ರೆ ಸೇರಿದಂತೆ ಅಗತ್ಯ ಸೇವೆ ಹೊರತುಪಡಿಸಿ ಉಳಿದಂತೆ ಎಲ್ಲ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು.

ಕ್ಯಾಂತ್ಸಂದ್ರದಲ್ಲಿ ಮಂಗಳವಾರ ನಡೆಯುತ್ತಿದ್ದ ಸಂತೆ ಸಹ ಬಂದ್ ಆಗಿತ್ತು. ಸಂತೆಗೆ ಹಣ್ಣು, ತರಕಾರಿ, ವಿವಿಧ ಸಾಮಗ್ರಿ, ಕುರಿಗಳನ್ನು ಮಾರಾಟಕ್ಕೆ ತಂದಿದ್ದ ನೂರಾರು ಮಂದಿ ವಾಪಸಾದರು. ಇಡೀ ಬಡಾವಣೆ ಬಿಕೋ ಎನ್ನುತ್ತಿತ್ತು. ಶಾಲಾ- ಕಾಲೇಜು, ಬ್ಯಾಂಕ್, ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸಿದವು.

ಪ್ರತಿಭಟನಾಕಾರರು ಬಿ.ಎಚ್.ರಸ್ತೆ ವಾಹನ ಸಂಚಾರ ತಡೆಯಲು ಮುಂದಾದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅಲ್ಲಿಂದ ತೆರವುಗೊಳಿಸಿ, ರಸ್ತೆ ಬದಿಯಲ್ಲಿ ಪ್ರತಿಭಟನೆ ನಡೆಸಲು ಅವಕಾಶ ಕಲ್ಪಿಸಿಕೊಟ್ಟರು.

ಕ್ಯಾತ್ಸಂದ್ರ ಗುಂಡ್ಲಮ್ಮನ ಕೆರೆಗೆ ಕಲುಷಿತ ನೀರು ಬಿಡಲಾಗಿದ್ದು, ಕಳೆದ ಒಂದು ವಾರದಿಂದ ದುರ್ವಾಸನೆ ತುಂಬಿತ್ತು. ಹಲವು ಬಾರಿ ನಗರಸಭೆ ಮುಖ್ಯಸ್ಥರು, ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಿಸಿದವರಿಗೆ ಮನವಿ ಸಲ್ಲಿಸಿದರೂ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿ ಕಂಗೆಟ್ಟ ನಿವಾಸಿಗಳು ಬಂದ್‌ಗೆ ಕರೆ ನೀಡಿದ್ದರು.

ಕ್ಯಾತ್ಸಂದ್ರ ನಾಗರಿಕ ಸಮಿತಿಯ, ಭಗತ್‌ಸೇನೆಯ, ಶ್ರೀನಿಧಿ ಯುವಕ ಸ್ವಸಹಾಯ ಸಂಘ, ಅನ್ನಪೂರ್ಣೇಶ್ವರಿ ಯುವಕ ಸಂಘ, ವಾಯುಪುತ್ರ ಸ್ವಸಹಾಯ ಸಂಘ, ಆದಿಶಕ್ತಿ ಗುಂಡ್ಲಮ್ಮದೇವಿ ಭಕ್ತರ ಸೇವಾ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಬಂದ್‌ಗೆ ಬೆಂಬಲ ಸೂಚಿಸಿದ್ದರು. ಮುಖಂಡರಾದ ರವಿ, ಕುಮಾರಸ್ವಾಮಿ, ಕೇಶವಮೂರ್ತಿ, ಜಯಂತ್‌ಕುಮಾರ್, ಕೃಷ್ಣಶ್ಯಾನಭೋಗ್ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಅಧ್ಯಕ್ಷೆ ಭೇಟಿ: ನಗರಸಭೆ ಅಧ್ಯಕ್ಷೆ ದೇವಿಕಾ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ ಚರ್ಚಿಸಿದರು.
 ಸ್ವಚ್ಛತೆಗೆ ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ಸೋಮವಾರ ಇಡೀ ದಿನ ಸ್ವಚ್ಛತೆ ಮಾಡಲಾಗಿದೆ. ಎಲ್ಲೆಡೆ ಬ್ಲೀಚಿಂಗ್ ಪೌಡರ್ ಸಿಂಪಡಿಸಲಾಗುತ್ತಿದೆ. ಕೆರೆಯ ನೀರನ್ನು ಯಂತ್ರಗಳ ಸಹಾಯದಿಂದ ಶುದ್ಧೀಕರಿಸಲಾಗುತ್ತಿದೆ. ಈಗಾಗಲೇ ದುರ್ವಾಸನೆ ಕಡಿಮೆ ಆಗಿದ್ದು, ಒಂದೆರಡು ದಿನದಲ್ಲಿ ಸ್ಥಗಿತಗೊಳ್ಳಲಿದೆ. ಇಲ್ಲಿನ ಕೊಳಚೆ ನೀರಿಗೆ ಭೀಮಸಂದ್ರ ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ ಒಳಚರಂಡಿ ಮೂಲಕ ಸಂಪರ್ಕ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಕಳೆದ ಒಂದು ವಾರದಿಂದ ಸಮಸ್ಯೆಯಾದರೂ ಕ್ರಮಕೈಗೊಳ್ಳಲಿಲ್ಲ ಏಕೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ನಿಯಮದ ಪ್ರಕಾರ ಇದು ನಗರಸಭೆ ವ್ಯಾಪ್ತಿಗೆ ಬರುವುದಿಲ್ಲ. ಜಿಲ್ಲಾ ಪಂಚಾಯಿತಿ ಸಮಸ್ಯೆಯನ್ನು ಬಗೆಹರಿಸಬೇಕು. ಆದರೆ ಮಾನವೀಯತೆ ದೃಷ್ಟಿಯಿಂದ ಸಮಸ್ಯೆ ಬಗೆಹರಿಸಲು ಮುಂದಾಗಿರುವುದಾಗಿ ಸ್ಪಷ್ಟಪಡಿಸಿದರು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT