ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗೆ ಕುತ್ತು ತಂದ ಕಾಫಿ ಪಲ್ಪಿಂಗ್

Last Updated 18 ಡಿಸೆಂಬರ್ 2013, 5:14 IST
ಅಕ್ಷರ ಗಾತ್ರ

ಶನಿವಾರಸಂತೆ: ಇದೀಗ ಎಲ್ಲೆಡೆ ಕಾಫಿ ಬೆಳೆಗಾರರು ಕಾಫಿ ಪಲ್ಪಿಂಗ್ (ಕಾಫಿ ಸಿಪ್ಪೆ ಸುಲಿಯುವುದು) ಕಾರ್ಯದಲ್ಲಿ ತೊಡಗಿದ್ದು, ಅದರಿಂದ ಬರುವ ಕಲುಷಿತ ನೀರು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ.

ಕಾಫಿ ಪಲ್ಪಿಂಗ್‌ನಿಂದ ಬರುವ ಈ ನೀರನ್ನು ಕೆಲವು ಬೆಳೆಗಾರರು ಕೆರೆಗೆ ಬಿಡುತ್ತಿರುವುದರಿಂದ ಕೆರೆಗಳು ಕಲ್ಮಶಗೊಳ್ಳುತ್ತಿದ್ದು, ಜಲಚರಗಳು ವಿನಾಶದತ್ತ ಸಾಗುತ್ತಿವೆ. ಈ ನೀರನ್ನು ಜಾನುವಾರುಗಳು ಕುಡಿಯುವುದರಿಂದ ಅವುಗಳಿಗೆ ತೊಂದರೆಯಾಗುತ್ತಿದೆ.

ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ಕೈದು ಕೆರೆಗಳಲ್ಲಿ ಭೀಮನ ಕೆರೆಯೂ ಒಂದು. ಈ ಕೆರೆ ಕಟ್ಟೆಪುರ ಹಾಗೂ ಕಾಫಿಕಣ ಗ್ರಾಮದ ಬಳಿ ಇರುವುದರಿಂದ ಅಲ್ಲಿನ ಕೆಲ ಕಾಫಿ ಬೆಳೆಗಾರರು ಪಲ್ಪಿಂಗ್‌ನಿಂದ ಬರುವ ಕಲುಷಿತ ನೀರನ್ನು ಕೆರೆಗೆ ಬಿಡುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಅನೇಕ ವರ್ಷಗಳ ಹಿಂದೆ ಭೀಮನಕೆರೆ 2 ಎಕರೆಯಷ್ಟು ವಿಸ್ತಾರವಾಗಿ ಹರಡಿಕೊಂಡಿತ್ತು. ಇದೀಗ ಸುತ್ತಮುತ್ತಲ ಕೆಲ ಬೆಳೆಗಾರರು ಕೆರೆ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಒಂದು ಎಕರೆಗೂ ಕಡಿಮೆಯಾಗಿದೆ.

ಮುಂದೊಂದು ದಿನ ಭೀಮನ ಕೆರೆ ಮಾಯವಾಗುವುದರಲ್ಲಿ ಸಂಶಯವಿಲ್ಲ ಎಂಬ ಆತಂಕವನ್ನು ನಾಗರಿಕರು ವ್ಯಕ್ತಪಡಿಸಿದ್ದಾರೆ.
ಕಾಫಿ ಪಲ್ಪಿಂಗ್‌ನಿಂದ ಬರುವ ಕಲುಷಿತ ನೀರಿನಿಂದ ಕೆರೆ ದಿನದಿಂದ ದಿನಕ್ಕೆ ಮಲೀನಗೊಳ್ಳುತ್ತಿದೆ. ಜಾನುವಾರುಗಳಿಗೆ ಕುಡಿಯಲು ಶುದ್ಧ ನೀರೂ ಸಿಗದೆ ಪರದಾಡುವಂತಾಗಿದೆ. ಸಮೀಪದ ಗದ್ದೆಗಳಿಗೂ ಇದೇ ನೀರು ಹರಿದು ಬರುತ್ತಿದೆ. ಕೊಯಿಲಿಗೆ ಬಂದಿರುವ ಭತ್ತದ ಬೆಳೆಗೂ ಹಾನಿ ಉಂಟಾಗುವ ಭೀತಿ ಕೆಲ ರೈತರಲ್ಲಿ ಮೂಡಿದೆ.

ಭೀಮನ ಕೆರೆಯ ಪಕ್ಕದ ಗ್ರಾಮದಲ್ಲಿ ಇರುವ ಮತ್ತೊಂದು ಕೆರೆ ಒಡಲನ್ನು ಭೀಮನಕೆರೆಯ ಕಲುಷಿತ ನೀರು ಚಿಕ್ಕ ಕಾಲುವೆಯ ಮೂಲಕ ಹರಿದು ಬಂದು ಸೇರುತ್ತಿದೆ. ಸ್ಥಳೀಯರು ಸಾಕಿರುವ ಮೀನುಗಳ ಮಾರಣ ಹೋಮವಾಗುತ್ತಿವೆ. ಮೀನು ಸಾಕಾಣಿಕಾ ಇಲಾಖೆಗೆ ದೂರು ನೀಡಿದರೂ ಸ್ಪಂದಿಸುತ್ತಿಲ್ಲ. ಮೌನವಾಗಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಅಂತರ್ಜಲ ಮಟ್ಟವನ್ನು ಕಾಪಾಡಿಕೊಳ್ಳಲು ಪುರಾತನ ಕೆರೆಗಳನ್ನು ಉಳಿಸಿಕೊಳ್ಳಬೇಕು. ಪರಿಸರ ಮಾಲಿನ್ಯವನ್ನು ತಡೆಗಟ್ಟಬೇಕು ಎನ್ನುವ ಪರಿಸರವಾದಿಗಳು, ಸಂಬಂಧಪಟ್ಟ ಅಧಿಕಾರಿಗಳು ವಿನಾಶದಂಚಿಗೆ ಸಾಗುತ್ತಿರುವ ಭೀಮನಕೆರೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT