ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗೆ ನೀರು ತುಂಬಿಸಲು ರೈತರ ಧರಣಿ

Last Updated 22 ಡಿಸೆಂಬರ್ 2012, 9:32 IST
ಅಕ್ಷರ ಗಾತ್ರ

ಹಾವೇರಿ: ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕು. ರೈತರ ಎಲ್ಲ ಸ್ವರೂಪದ ಸಾಲವನ್ನು ಮನ್ನಾ ಮಾಡಬೇಕು. ರಾಣೆಬೆನ್ನೂರ ತಾಲ್ಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಶುಕ್ರವಾರ ಧರಣಿ ಸತ್ಯಾಗ್ರಹ ನಡೆಸಿದರು.

ರಾಜ್ಯ ರೈತ ಸಂಘದ ಹಿರಿಯ ಧುರೀಣ ದಿ. ಎನ್.ಡಿ.ಸುಂದರೇಶ ಅವರ 21ನೇ ಪುಣ್ಯತಿಥಿ ಅಂಗ ವಾಗಿ ವಿವಿಧ ಬೇಡಿಕೆಗಳ ಈಡೇರಿಗಾಗಿ ಹಮ್ಮಿ ಕೊಂಡ ಪ್ರತಿಭಟನೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತ ವಿರೋಧಿ ನೀತಿ ವಿರುದ್ಧ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು ಒಂದು ದಿನ ಸಾಂಕೇತಿಕ ಧರಣಿ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ರಾಜ್ಯದಲ್ಲಿ ಕಳೆದ ಎರಡು ವರ್ಷದಿಂದ ಬರ ಆವರಿಸಿದ್ದು, ಅಲ್ಪ ಸ್ವಲ್ಪ ಬೆಳೆದ ಬೆಳೆಗಳಿಗೂ ಸರಿಯಾದ ಬೆಲೆ ಸಿಗದೇ ರೈತರ ಬದುಕು ತತ್ತರಿಸಿ ಹೋಗಿದೆ. ಎಲ್ಲಾ ಕೆರೆಗಳು ಬತ್ತಿ ಹೋಗಿದ್ದು, ರೈತರು ಬಹಳ ಕಷ್ಟದ ಜೀವನ ಸಾಗಿಸುವಂತಾಗಿದೆ. ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಇಲ್ಲದ ಕಾರಣ ರೈತರ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೆ ರೈತರು ನಷ್ಟ ಅನುಭವಿಸುತ್ತಿದ್ದಾರೆ. ರೈತ ದಿನದಿಂದ ದಿನಕ್ಕೆ ಸಾಲಗಾರನಾಗುತ್ತಿದ್ದಾರೆ. ಕೂಡಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕು. ಜತೆಗೆ ಸಹಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಅದೇ ರೀತಿ ತುಂಗಾ ಮೇಲ್ದಂಡೆ ಕಾಲುವೆಗಳಿಂದ ಹರಿದು ವ್ಯರ್ಥವಾಗಿ ಹಳ್ಳ ಕೊಳ್ಳ ಸೇರುತ್ತಿರುವ ನೀರನ್ನು ಅನಧಿಕೃತವಾಗಿ ರಾಣೆಬೆನ್ನೂರ ತಾಲ್ಲೂಕಿನ 15 ಕೆರೆಗಳನ್ನು ರೈತರು ತುಂಬಿಸಿದ್ದಾರೆ. ರಾಜ್ಯ ಸರ್ಕಾರವೇ ಎಲ್ಲ ಕೆರೆಗಳಿಗೆ ತುಂಬಿಸಲು ಮುಂದಾಗಬೇಕು. ಇಲ್ಲವಾದರೆ, ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸುರೇಶಪ್ಪ ಗರಡಿಮನಿ, ಚಂದ್ರಣ್ಣ ಬೇಡರ, ಹರಿಹರಗೌಡ ಪಾಟೀಲ, ಶಿವಾನಂದ ಲಿಂಗದಳ್ಳಿ, ಶಿವರಾಜ ಅರಳಿ, ಪ್ರಕಾಶ ಪೊಲೀಸ್‌ಗೌಡ್ರ, ಬಸವರಾಜ ಕುಳೇರ, ಎಚ್.ಎಸ್.ಪಾಟೀಲ, ಶಿವಪ್ಪ ಜಾಲಪ್ಪನವರ, ಗೋವಿಂದರೆಡ್ಡ ಜಿ.ಆರ್. ನಟರಾಜ ಬೆನಕನಗೊಂಡ, ಎಸ್.ಡಿ.ಮಲ್ಲಾಡದ ಸೇರಿದಂತೆ ಅನೇಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT