ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಯ ದಡದಲ್ಲೊಂದು ಶಾಲೆ ಆರಂಭಿಸಿ...

Last Updated 9 ಡಿಸೆಂಬರ್ 2013, 10:29 IST
ಅಕ್ಷರ ಗಾತ್ರ

ಯಾದಗಿರಿ: ಸುತ್ತಲೂ ಕೆರೆಯ ನೀರಿದೆ. ಅಲ್ಲೊಂದು ಶಾಲೆ ಇದೆ. ಮಕ್ಕಳು ಆಟ ಆಡುವುದನ್ನು ನೋಡಲಿಕ್ಕೆ ಒಬ್ಬ ಶಿಕ್ಷಕಿಯ ಉಸ್ತುವಾರಿ ಬೇಕೇ ಬೇಕು.   –ಇದು ಇಲ್ಲಿಯ ದುರ್ಗಾನಗರದಲ್ಲಿರುವ ಕಿರಿಯ ಪ್ರಾಥಮಿಕ ಶಾಲೆಯ ಚಿತ್ರಣ.

ಮೀನುಗಾರ ಕುಟುಂಬಗಳೇ ಹೆಚ್ಚಾಗಿ ವಾಸಿಸುವ ಈ ಪ್ರದೇಶದಲ್ಲಿ ನಿತ್ಯ ಸುಮಾರು 60 ಮಕ್ಕಳು ಈ ಶಾಲೆಗೆ ಬರುತ್ತಾರೆ. ಒಂದರಿಂದ ಐದನೇ ತರಗತಿಯವರೆಗೆ ಇರುವ ಶಾಲೆಯಲ್ಲಿ ಒಬ್ಬರೇ ಶಿಕ್ಷಕಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಗರ ಪ್ರದೇಶದ ಈ ಶಾಲೆಯ ಸುತ್ತಲೂ ದೊಡ್ಡಕೆರೆ ಇದೆ.

ಆದರೆ ಶಾಲೆಯ ಮಕ್ಕಳು ಕೆರೆಗೆ ಹೋಗದಂತೆ ತಡೆಯಲು ಕಾಂಪೌಂಡ್‌ ಗೋಡೆ ಇಲ್ಲದಿರುವುದು ಆತಂಕಕ್ಕೆ ಕಾರಣ­ವಾಗಿದೆ. ನಿತ್ಯ ಬೆಳಿಗ್ಗೆ ಶಾಲೆ ಆರಂಭ­ವಾಗುತ್ತಿದ್ದಂತೆಯೇ ಇಲ್ಲಿರುವ ಶಿಕ್ಷಕಿ ಒಳಗಿನಿಂದ ಬಾಗಿಲಿಗೆ ಬೀಗ ಹಾಕುತ್ತಾರೆ. ಇದರರ್ಥ ಮಕ್ಕಳನ್ನು ಕಟ್ಟಿ ಹಾಕುವುದಕ್ಕೆ ಅಂದಲ್ಲ. ಬದಲಾಗಿ ತಿಳಿಯದೇ ಮಕ್ಕಳು ಹೊರಗೆ ಹೋಗಿ, ಕೆರೆಯ ನೀರಿನಲ್ಲಿ ಅನಾಹುತ ಆಗಬಾರದು ಎಂಬ ಉದ್ದೇಶ ಇಂತಹ ಕ್ರಮ ಅನಿವಾರ್ಯ­ವಾಗಿದೆ.

ಕೆರೆಯ ದಡದಲ್ಲಿರುವ ಶಾಲೆಗೆ ಕಾಂಪೌಂಡ್‌ ಗೋಡೆ ನಿರ್ಮಿಸಲು ₨80 ಸಾವಿರ ಅನುದಾನ ಬಿಡುಗಡೆ ಆಗಿದೆ. ಆದರೆ ಕಾಂಪೌಂಡ್‌ ಗೋಡೆ ನಿರ್ಮಾಣ ಮಾತ್ರ ಆಗಿಲ್ಲ. ಕೆರೆಯ ದಡದಲ್ಲಿ ಇರುವುದರಿಂದ ಈ ಪ್ರದೇಶದಲ್ಲಿ ಮೀನು­ಗಾರರೇ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಹೀಗಾಗಿ ಅವರ ಮಕ್ಕಳಿಗೆ ಅನುಕೂಲವಾಗಲು ಈ ಪ್ರದೇಶದಲ್ಲಿ ಕಿರಿಯ ಪ್ರಾಥಮಿಕ ಶಾಲೆಯನ್ನು ಆರಂಭಿಸಲಾಗಿದೆ. ಆದರೆ ಇದೀಗ ಈ ಶಾಲೆಯ ಮಕ್ಕಳು ಹೊರಗೆ ಹೋಗಿ ಆಟ ಆಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಅದಾಗ್ಯೂ ಆಟ ಆಡಲು ಹೋಗಬೇಕಾದರೆ ಶಾಲೆಯ ಏಕೈಕ ಶಿಕ್ಷಕಿ ಹೊರಗೇ ನಿಲ್ಲಬೇಕು.

ಮಕ್ಕಳನ್ನು ಆಟ ಆಡಿಸಲು ನಿಂತರೆ, ಉಳಿದ ನಾಲ್ಕು ತರಗತಿಗಳ ಮಕ್ಕಳೂ ಶಾಲೆಯಿಂದ ಹೊರಗೆ ಬರುವಂತಾಗಿದೆ. 60 ಮಕ್ಕಳಿಗೂ ಒಬ್ಬರೇ ಶಿಕ್ಷಕಿ ಪಾಠ ಮಾಡುತ್ತಿದ್ದು, ಎಲ್ಲ ವಿದ್ಯಾರ್ಥಿಗಳ ಜವಾಬ್ದಾರಿಯೂ ಈ ಶಿಕ್ಷಕಿಯ ಮೇಲೆಯೇ ಇದೆ. ಇನ್ನು ಮಕ್ಕಳಿಗೆ ಶಿಕ್ಷಣ ಸಿಗಬೇಕು ಎನ್ನುವ ಉದ್ದೇಶದಿಂದ ಸರ್ಕಾರವೇನೋ ಶಾಲೆಯನ್ನು ಆರಂಭಿಸಿದೆ.

ಆದರೆ ಶಾಲೆಗೆ ಕಳುಹಿಸಲು ಪಾಲಕರು ಹಿಂದೇಟು ಹಾಕುವಂತಾಗಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಿ, ಪಾಲಕರು ಮೀನು ಹಿಡಿಯುವುದು, ಕೂಲಿ ಕೆಲಸಕ್ಕೆ ಹೋಗುತ್ತಾರೆ. ತಾವು ಹೊರಗೆ ಹೋದಾಗ ಏನಾದರೂ ಅನಾಹುತವಾದೀತು ಎನ್ನುವ ಆತಂಕ ಇಲ್ಲಿನ ಪಾಲಕರನ್ನು ಕಾಡುತ್ತಿದೆ.

‘ನಮ್ಮ ಮಕ್ಕಳನ್ನ ಈ ಸಾಲಿಗೆ ಹಾಕೇವ್ರಿ. ಆದ್ರ ನಾವ ಹೊರಗ ಹೋದಾಗ ನಮ್ಮ ಮನಸ್ಸೆಲ್ಲ ಇಲ್ಲೆ ಇರತೈತಿ. ಬಗಲಾಗ ಕೆರಿ ಐತಿ. ಏನಾದ್ರು ಹೆಚ್ಚು ಕಡಿಮಿ ಆದ್ರ ಏನ್‌ ಗತಿರಿ. ಟೀಚರ್‌ ಚೆನ್ನಾಗಿ ನೋಡಿಕೋತಾರ ಅನ್ನೋ ಭರೋಸಾದ ಮ್ಯಾಲ ಕೆಲಸಕ್ಕ ಹೋಗೋದ ನೋಡ್ರಿ’ ಎನ್ನುತ್ತಾರೆ ಇಲ್ಲಿಯ ನಿವಾಸಿ ಶಿವರಾಜ.

ಇರುವ ಶಾಲೆಗೆ ಕಾಂಪೌಂಡ್‌ ನಿರ್ಮಾಣ ಮಾಡಿ, ಮಕ್ಕಳಿಗೆ ಸುರಕ್ಷತೆ ಒದಗಿಸಬೇಕು. ಇನ್ನೂ ಇಬ್ಬರು ಶಿಕ್ಷಕರನ್ನಾದರೂ ನೇಮಕ ಮಾಡಬೇಕು ಎನ್ನುವುದು ಪಾಲಕರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT