ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲವರ ವ್ಯಕ್ತಿಗತ ತೆವಲು ಮುಳುವಾಯಿತು

Last Updated 12 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಸಚಿವರು ಮತ್ತು ಶಾಸಕರ ವೈಯಕ್ತಿಕ ಕಾರ್ಯಸೂಚಿಗಳನ್ನು ತೃಪ್ತಿಪಡಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಅದೇ ನನಗೆ ಮುಳುವಾಯಿತು...~ವರ್ಷ ಪೂರೈಸುವ ಮೊದಲೇ ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿದ ಡಿ.ವಿ.ಸದಾನಂದ ಗೌಡ ಅವರ ಆತ್ಮಾವಲೋಕನದ ಮಾತು ಇದು.

`ಪಕ್ಷದ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವರಿಷ್ಠರು ಹೇಳಿದರು. ಅದಕ್ಕೆ ಕಿಂಚಿತ್ತೂ ಪ್ರತಿರೋಧ ಒಡ್ಡದೆ ರಾಜೀನಾಮೆ ನೀಡಿದ್ದೇನೆ. ಆದರೆ, ಈ ಸ್ಥಿತಿ ಏಕೆ ಬಂತು ಎಂದು ಒಮ್ಮೆ ಹಿಂದಿರುಗಿ ನೋಡಿದರೆ, ಅನೇಕ ವಿಚಾರಗಳು ಕಣ್ಣು ಮುಂದೆ ಹಾದುಹೋಗುತ್ತವೆ...~ ಎಂದು ಒಂದು ಕ್ಷಣ ಮೌನವಾದರು.

ತಮ್ಮ ಸರ್ಕಾರಿ ನಿವಾಸ `ಅನುಗ್ರಹ~ದಲ್ಲಿ `ಪ್ರಜಾವಾಣಿ~ಗೆ ಸಂದರ್ಶನ ನೀಡಿದ ಗೌಡರ ಮುಖದಲ್ಲಿ ಅಧಿಕಾರ ಕೈಜಾರಿದ ಚಿಂತೆ ಇರಲಿಲ್ಲ. ಆದರೆ, ಮನೆಯಲ್ಲಿದ್ದ ಬೆಂಬಲಿಗರ ಮುಖದಲ್ಲಿ ದುಃಖ ಮಡುಗಟ್ಟಿತ್ತು. ದೂರದ ಹಾವೇರಿಯಿಂದ ಬಂದಿದ್ದ ಕಾರ್ಯಕರ್ತರೊಬ್ಬರು `ಮಾಡದ ತಪ್ಪಿಗೆ ಬಲಿಯಾದಿರಿ~ ಎಂದು ಕಣ್ಣೀರಿಟ್ಟರು.

ಗೌಡರು ಕ್ಷಣ ಕಾಲ ಮೆತ್ತಗಾದರು. ತಕ್ಷಣವೇ ಎಚ್ಚೆತ್ತುಕೊಂಡು `ಛೇ.. ಛೇ.. ಈ ರೀತಿ ಮಾಡುವುದೇ? ನಾನಿನ್ನೂ ಗಟ್ಟಿಯಾಗಿ ಇದ್ದೇನೆ. ಯೋಚನೆ ಮಾಡಬೇಡಿ. ನೀವು ಮಾಡುವ ಎಲ್ಲ ಒಳ್ಳೆಯ ಕೆಲಸಗಳಿಗೂ ನಾನು ಜತೆ ಇರುತ್ತೇನೆ. ಈ ರೀತಿ ಅಳುವುದೇ~ ಎಂದು ಸಮಾಧಾನಪಡಿಸಿದರು. ರಾಜಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಆಗಷ್ಟೇ ಗೌಡರು ಮನೆಗೆ ಬಂದಿದ್ದರು.

ಸಚಿವ ಸ್ಥಾನ ಕೈತಪ್ಪಿದಕ್ಕೆ ಪ್ರತಿಭಟನೆ ನಡೆಸಿದ ಬಳಿಕ `ಅನುಗ್ರಹ~ಕ್ಕೆ ಬಂದಿದ್ದ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರಿಗೂ ಗೌಡರು ಬೆನ್ನುತಟ್ಟಿ ಧೈರ್ಯ ತುಂಬಿದರು. `ನಾನಿದ್ದೇನೆ, ಭಯಪಡಬೇಡ. ನಿಗಮ-ಮಂಡಳಿಯ ಅಧ್ಯಕ್ಷ ಸ್ಥಾನ ಕೊಡಿಸಲು ಪ್ರಯತ್ನಿಸುತ್ತೇನೆ~ ಎಂದರು. ಕೊಳ್ಳೇಗಾಲದ ನಂಜುಂಡಸ್ವಾಮಿ ಅವರು, `ಸರ್, ನಮ್ಮನ್ನು ಕೈಬಿಟ್ಟರಲ್ಲ... ನಾನು ಕ್ಷೇತ್ರಕ್ಕೇ ಹೋಗುವಂತಿಲ್ಲ~ ಎಂದು ಗದ್ಗದಿತರಾದರು. `

`ಕಳಂಕರಹಿತರು ನನ್ನವರು~
ಬೆಂಗಳೂರು: `ಸದಾನಂದ ಗೌಡರು ತಮ್ಮ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ಮುಕ್ತ ಹಾಗೂ ಪಾರದರ್ಶಕ ಆಡಳಿತ ನೀಡಿದ್ದಾರೆ. ಅವರು ಕಳಂಕರಹಿತರು. ಇದು ನನಗೆ ಹೆಮ್ಮೆ.~



-ತಮ್ಮ ಪತಿಯನ್ನು ರಾಜಕೀಯ ಕಾರಣಗಳಿಗಾಗಿ ಅಧಿಕಾರದಿಂದ ಕೆಳಗಿಳಿಸಿದ್ದರ ಬಗ್ಗೆ ಅವರಿಗೆ ಸ್ವಲ್ಪಮಟ್ಟಿಗೆ ಬೇಸರ ಇದೆ. ಆದರೆ, ಇದಕ್ಕೆ ದುಃಖಪಡಬೇಕಾಗಿಲ್ಲ ಎಂದು ತಮ್ಮ ಬಂಧು-ಬಳಗಕ್ಕೆ ಅವರೇ ಧೈರ್ಯ ತುಂಬಿದರು.

ಸದಾನಂದ ಗೌಡರು ಗುರುವಾರ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ರಾಜಭವನಕ್ಕೆ ತೆರಳಿದ್ದರು.

ಅವರ ಪತ್ನಿ ಡಾಟಿ ಅವರು ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ಮನೆಯಲ್ಲಿ ಕುಳಿತು ಟಿ.ವಿ. ಮೂಲಕ ನೋಡಿ ಖುಷಿಪಟ್ಟರು.

ಬಳಿಕ `ಪ್ರಜಾವಾಣಿ~ ಜತೆ ತಮ್ಮ ಮನದಾಳದ ಮಾತು ಹಂಚಿಕೊಂಡರು.

* ಗೌಡರ ಅಧಿಕಾರ ಅವಧಿ 11 ತಿಂಗಳಿಗೇ ಕೊನೆಗೊಳ್ಳುತ್ತದೆ ಎಂಬ ನಿರೀಕ್ಷೆ ಇತ್ತೇ?
ಬಂಡಾಯ ಎದ್ದಾಗಲೆಲ್ಲ ಪರಿಸ್ಥಿತಿ ಕಷ್ಟ ಅನಿಸುತ್ತಿತ್ತು. ವರಿಷ್ಠರೇ ಹೇಳಿದ್ದರಿಂದ ಅವಧಿ ಪೂರ್ಣಗೊಳಿಸುವ ವಿಶ್ವಾಸ ಇತ್ತು. ಆದರೆ, ಈ ರೀತಿ ಆಗಿದ್ದು ಸ್ವಲ್ಪ ಬೇಸರ ತಂದಿದೆ.

* ಶೆಟ್ಟರ್ ಸರ್ಕಾರದ ಬಗ್ಗೆ...
ಅವರು ಉಳಿದ 10 ತಿಂಗಳ ಅವಧಿ ಪೂರ್ಣಗೊಳಿಸಬೇಕು, ಜನ ಮೆಚ್ಚುವ ಆಡಳಿತ ನೀಡಬೇಕು ಎಂಬುದು ನನ್ನ ಬಯಕೆ.

* ಈಗ ನೀವು ಮಾಜಿ ಮುಖ್ಯಮಂತ್ರಿಯ ಪತ್ನಿ. ಏನನ್ನಿಸುತ್ತದೆ?
ಮುಖ್ಯಮಂತ್ರಿಯ ಪತ್ನಿ ಆಗಿದ್ದಾಗಲೂ ನಾನು ಸರಳ ಜೀವನ ನಡೆಸಿದ್ದೇನೆ. ಈಗಲೂ ಸರಳವಾಗಿರುತ್ತೇನೆ. ನನಗೇನೂ ವಿಶೇಷ ಅನಿಸುವುದಿಲ್ಲ.

* ಆಡಳಿತದಲ್ಲಿ ನಿಮ್ಮ ಹಸ್ತಕ್ಷೇಪ ಇತ್ತೇ?
ನಾನಾಗಲಿ, ನನ್ನ ಮಗನಾಗಲಿ ಎಂದೂ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಇಂಥದ್ದು ಮಾಡಿ ಕೊಡಿ ಎಂದು ಯಾವತ್ತೂ ಕೇಳಿಲ್ಲ. ಅವರು ಕೂಡ, ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.

ಪತಿ- ಪತ್ನಿ ಸಂಬಂಧ ಬಿಟ್ಟರೆ ಸರ್ಕಾರಕ್ಕೆ ಸಂಬಂಧಿಸಿದ ಯಾವುದನ್ನೂ ಅವರು ಹೇಳುತ್ತಿರಲಿಲ್ಲ, ಕೇಳುತ್ತಿರಲಿಲ್ಲ. ನಾವು ಕೂಡ ಆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ.

* ಗೌಡರ ದಿನಚರಿ ಹೇಗಿತ್ತು?
ಹಲವು ಬಾರಿ ಬೆಳಗಿನ ಜಾವ 2-3 ಗಂಟೆಗೆ ಮಲಗಿದ ನಿದರ್ಶನಗಳಿವೆ. ಕಡತಗಳನ್ನು ಮಧ್ಯರಾತ್ರಿಯವರೆಗೂ ನೋಡಿ ಸಹಿ ಹಾಕುತ್ತಿದ್ದರು.

ಊಟ ಮಾಡುತ್ತಲೇ ಕಡತಗಳನ್ನು ನೋಡುತ್ತಿದ್ದರು. ತಡ ರಾತ್ರಿ ಮಲಗಿದರೂ ಬೆಳಿಗ್ಗೆ 5.30ಕ್ಕೆ ಎದ್ದು ದೈನಂದಿನ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದರು.

* ಪತಿಯ ಸಾಧನೆ ಬಗ್ಗೆ ಏನು ಹೇಳುತ್ತೀರಿ?
ಹೆಮ್ಮೆ ಅನಿಸುತ್ತದೆ. ಕಳಂಕರಹಿತ ಆಡಳಿತ ನೀಡಿದ್ದಾರೆ. ಜನ ಮೆಚ್ಚುವ ಹಾಗೆ ನಡೆದುಕೊಂಡಿದ್ದಾರೆ.

`ಸಕಾಲ~ದಂಥ ಜನೋಪಯೋಗಿ ಯೋಜನೆ ತಂದಿದ್ದಾರೆ, ಒಂದು ಲಕ್ಷ ಕೋಟಿ ರೂಪಾಯಿಯ ಬಜೆಟ್ ಮಂಡಿಸಿದ್ದಾರೆ. ಅದರ ಅನುಷ್ಠಾನಕ್ಕೂ ಕ್ರಮ ತೆಗೆದುಕೊಂಡಿದ್ದಾರೆ.

* ಅವರು ಅಧಿಕಾರ ಕಳೆದುಕೊಂಡಿದ್ದಕ್ಕೆ ದುಃಖ ಆಗಿದೆಯೇ?
ಗೌಡರು ಮುಖ್ಯಮಂತ್ರಿ ಆದಾಗ ಖುಷಿಪಟ್ಟಿದ್ದೆವು. ಅಧಿಕಾರ ಹೋಗಿದ್ದಕ್ಕೆ ಅಂತಹ ಬೇಸರ ಏನೂ ಆಗಿಲ್ಲ.

* ನಿಮ್ಮವರು ಮುಂದೇನಾಗಬೇಕು ಅಂತ ಬಯಸುತ್ತೀರಿ?
ಅವರ ರಾಜಕೀಯ ಜೀವನ ಎಂದೂ ಮಂಕಾಗಬಾರದು. ಸ್ಥಾನಮಾನ ಸಿಗಬೇಕು. ಇನ್ನೂ ಉತ್ತಮ ರೀತಿಯಲ್ಲಿ ಸಮಾಜ ಸೇವೆ ಮಾಡುವ ಅವಕಾಶ ಸಿಗಲಿ.

* ಮುಖ್ಯಮಂತ್ರಿ ಪತ್ನಿಯಾಗಿ ನಿಮ್ಮೂರಿಗೆ ಏನು ಕೆಲಸ ಮಾಡಿಸಿದಿರಿ?

ಇಡೀ ಕೊಡಗು ನನ್ನೂರು. ಅಲ್ಲಿನ ರಸ್ತೆ ಸೇರಿದಂತೆ ಇತರ ಮೂಲಸೌಲಭ್ಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕೊಡಿಸುವ ಪ್ರಯತ್ನ ಮಾಡಿದ್ದೇನೆ. ಇದು ನನಗೆ ಖುಷಿ ಕೊಟ್ಟಿದೆ.

ಡೋಂಟ್ ವರಿ. ಒಳ್ಳೆಯ ದಿನಗಳಿವೆ~ ಎಂದರು. ಬೆಂಬಲಿಗ ಶಾಸಕರನ್ನು ಹೀಗೆ ಸಮಾಧಾನಪಡಿಸುತ್ತಲೇ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಅದರ ಆಯ್ದ ಭಾಗ ಇಲ್ಲಿದೆ.

* ಮುಖ್ಯಮಂತ್ರಿ ಪಟ್ಟ ಕಳೆದುಕೊಂಡಿದ್ದಕ್ಕೆ ಬೇಸರ ಇದೆಯೇ?

ಖಂಡಿತ ಇಲ್ಲ. ಅಧಿಕಾರ ಸ್ವೀಕರಿಸಿದಾಗ ಅವಧಿ ಪೂರೈಸುವ ವಿಶ್ವಾಸ ಇತ್ತು. ಆದರೆ, ಅವಧಿ ತುಸು ಬೇಗನೆ ಮುಗಿದಿದೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಎರಡು ತಿಂಗಳಲ್ಲೇ ಅತಂತ್ರ ಸ್ಥಿತಿ ಎದುರಾಗಿತ್ತು. ಆ ಹಿನ್ನೆಲೆಯಲ್ಲಿ ನೋಡಿದರೆ, ನಂತರದ ಒಂಬತ್ತು ತಿಂಗಳು ಪೂರೈಸಿದ್ದು ಒಂದು ರೀತಿಯಲ್ಲಿ ಅದ್ಭುತವೇ ಸರಿ!

* ಈ ಪರಿಸ್ಥಿತಿ ಎದುರಾಗಲು ಕಾರಣ ಏನು? ನೀವು ಎಡವಿದ್ದು ಎಲ್ಲಿ?
ನಾನು ಎಲ್ಲಿಯೂ ಎಡವಿಲ್ಲ. ನನ್ನನ್ನು ನೂಕಿದರು...

* ಹಾಗಂದರೆ...?
ಕೆಲವರಿಗೆ ಅವರದೇ ಆದ ಕಾರ್ಯಸೂಚಿ ಇರುತ್ತದೆ. ಅವುಗಳಿಗೆ ನಾನು ಸ್ಪಂದಿಸಲಿಲ್ಲ ಎಂಬ ಆರೋಪ ಇದೆ. ನನ್ನ ಕಾರ್ಯಸೂಚಿಗಳು ಕೇವಲ ಎರಡು. ಪಕ್ಷ ಸಂಘಟನೆ ಮತ್ತು ಆಡಳಿತ ಯಂತ್ರವನ್ನು ಮುನ್ನಡೆಸುವುದು. ಇವೆರಡನ್ನೂ ಸಮರ್ಥವಾಗಿ ಮಾಡುವ ಪ್ರಯತ್ನ ಮಾಡಿದೆ. ಆದರೆ, ವೈಯಕ್ತಿಕ ಅಜೆಂಡಾ ಇದ್ದವರ ಮುಂದೆ ಇದು ನಡೆಯಲಿಲ್ಲ. ರಾಜ್ಯಪಾಲ ಎಚ್.ಆರ್. ಭಾರದ್ವಾಜ್, ಪ್ರತಿಪಕ್ಷಗಳ ನಾಯಕರೂ ನನ್ನ ಬಗ್ಗೆ ಮೆಚ್ಚುಗೆಯ ಮಾತನಾಡಿದರು. ಇವೂ ನನಗೆ ಮುಳುವಾದುವು!

* ಒಳ್ಳೆಯ ಆಡಳಿತ ನೀಡಿದ್ದೀರಿ ಎಂದು ವರಿಷ್ಠರೇ ಮೆಚ್ಚುಗೆ ಸೂಚಿಸಿದ್ದಾರೆ. ಆದರೂ ಬೇಡವಾಗಿದ್ದು ಏಕೆ?

ಪಕ್ಷದ ನಿಲುವೇ ನನ್ನ ನಿಲುವು. ಆದರೂ, ಪಕ್ಷದ ನಿಲುವನ್ನು ನಿಯಂತ್ರಿಸುವ ಶಕ್ತಿಗಳು ಬೇರೆಯೇ ಇರುತ್ತವೆ. ಹೈಜಾಕ್ ಮಾಡುವ, ಬ್ಲ್ಯಾಕ್‌ಮೇಲ್ ತಂತ್ರ ಅನುಸರಿಸುವ ಶಕ್ತಿಗಳನ್ನು ಎಲ್ಲಿಯವರೆಗೆ ಮಟ್ಟ ಹಾಕುವುದಿಲ್ಲವೊ, ಅಲ್ಲಿಯವರೆಗೆ ಪಕ್ಷ ಉದ್ಧಾರ ಆಗುವುದಿಲ್ಲ.

* ನೀವು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿದರೆ ಚುನಾವಣೆ ಎದುರಿಸಲು ಕಷ್ಟವಾಗಬಹುದು ಎಂಬ ಅಭಿಪ್ರಾಯ ಪಕ್ಷದ ವರಿಷ್ಠರಲ್ಲಿದೆ ಎಂಬ ಮಾತುಗಳಿವೆ...

ಪಕ್ಷದ ಆತಂರಿಕ ವಿಚಾರಗಳನ್ನು ಬಹಿರಂಗವಾಗಿ ವಿಶ್ಲೇಷಣೆ ಮಾಡಲಾರೆ. ಅದರಿಂದ ಸಂಘಟನೆಗೆ ಹಾನಿಯಾಗುತ್ತದೆ. ವರಿಷ್ಠರ ತೀರ್ಮಾನವನ್ನೂ ಪ್ರಶ್ನೆ ಮಾಡುವುದಿಲ್ಲ.

* ಗುಂಪುಗಾರಿಕೆ, ಜಾತಿ ರಾಜಕಾರಣ ಮಾಡುವುದಿಲ್ಲ ಎಂದು ಹೇಳುತ್ತಲೇ ನೀವೂ ಅದರ ಬಲೆಗೆ ಬಿದ್ದಿರಿ ಎಂಬ ಆರೋಪ ಇದೆಯಲ್ಲ...?

ಖಂಡಿತ ಹಾಗೆ ಮಾಡಿಲ್ಲ. ಆದರೂ ನನ್ನಿಂದ ಎರಡು ತಪ್ಪಾಗಿವೆ. ನನಗೆ ಶಾಸಕರ ಬೆಂಬಲ ಇಲ್ಲ ಎಂದು ಕೆಲವರು ಗುಲ್ಲೆಬ್ಬಿಸಿದ್ದನ್ನು ವರಿಷ್ಠರೂ ನಂಬಿದರು. ಹೀಗಾಗಿ ಅನಿವಾರ್ಯವಾಗಿ ಶಕ್ತಿ ಪ್ರದರ್ಶಿಸಬೇಕಾಯಿತು.

ರಾಜೀನಾಮೆ ನಿರ್ಧಾರದ ನಂತರ ಶಾಸಕರ ಸಭೆ ನಡೆಸಿದೆ. ಅದಕ್ಕೆ ಸ್ವಇಚ್ಛೆಯಿಂದ 56 ಮಂದಿ ಬಂದರು. ಇದು ವರಿಷ್ಠರಿಗೆ ಗೊತ್ತಾಗಲಿ ಎಂದು ಮಾಡಿದ್ದು.

ಎರಡನೆಯ ತಪ್ಪು, ಜಾತಿಗೆ ಸಂಬಂಧಿಸಿದ್ದು. ನಾನೆಂದೂ ಜಾತಿವಾದಿಯಾಗಿ ವರ್ತಿಸಿಲ್ಲ. ನನ್ನ ಸಮುದಾಯದ ಜತೆ ಗುರುತಿಸಿಕೊಂಡರೂ ಅದನ್ನು ರಾಜಕಾರಣದ ಜತೆ ಬೆರೆಸಿ ನೋಡಿದವನಲ್ಲ.

ಜಾತಿಯವರನ್ನು ಪಕ್ಷಕ್ಕೆ ತರಬೇಕೆಂದು ಹೋರಾಟ ಮಾಡಿದವನು ನಾನು. ಪಕ್ಷವನ್ನೇ ಜಾತಿಯಲ್ಲಿ ಲೀನ ಮಾಡುವ ಪ್ರಯತ್ನ ಮಾಡಲಿಲ್ಲ.

ವರಿಷ್ಠರು ನನ್ನ ರಾಜೀನಾಮೆ ಕೇಳಿದ ತಕ್ಷಣ ಒಕ್ಕಲಿಗ ಸಮುದಾಯ ನನ್ನ ಪರ ಪ್ರತಿಭಟನೆ ನಡೆಸಿತು. ಇದಕ್ಕೆ ಪರೋಕ್ಷವಾಗಿ ನಾನೇ ಕಾರಣ ಎಂದೂ ಕೆಲವರು ವಿಶ್ಲೇಷಿಸಿದರು.

ಪ್ರಾಮಾಣಿಕವಾಗಿ ಹೇಳುತ್ತೇನೆ, ಇಂಥದ್ದನ್ನು ನಾನು ಒಪ್ಪುವುದಿಲ್ಲ. ಪ್ರೋತ್ಸಾಹಿಸುವುದೂ ಇಲ್ಲ. ನಾನು ಕಾರಣನಲ್ಲದಿದ್ದರೂ ಇಡೀ ಘಟನೆಯ ಜತೆ ನನ್ನ ಹೆಸರನ್ನೂ ತಳಕು ಹಾಕಲಾಯಿತು. ಇದು ಕೂಡ ನನ್ನ ಅಧಿಕಾರಾವಧಿಯ ಕೊನೆಯ ನಾಲ್ಕು ದಿನಗಳಲ್ಲಿ ನಡೆದಿದ್ದು. ಹೀಗಾಗಿ ನೋವು ಕಾಡುತ್ತಿದೆ.

* ಯಡಿಯೂರಪ್ಪ ಬಗ್ಗೆ...
ಅವರು ನನ್ನನ್ನು ಮುಖ್ಯಮಂತ್ರಿ ಮಾಡಿದವರು. ಆ ಬಗ್ಗೆ ಗೌರವ ಇದೆ. ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಕೆಲವರು ಮೂರು ಬಾರಿ ಪ್ರಯತ್ನ ಮಾಡಿದಾಗ, ಅದನ್ನು ವಿರೋಧಿಸಿ ಸರ್ಕಾರ ಉಳಿಯುವಂತೆ ಮಾಡಿದ್ದು ನಾನು ಎಂಬುದನ್ನು ಮರೆಯಬಾರದು. ಕಾಲಾನಂತರ ಅವೆಲ್ಲವೂ ನೆನಪಿರುವುದಿಲ್ಲ.

* ಜಗದೀಶ ಶೆಟ್ಟರ್ ಸಂಪುಟದ ಕುರಿತು...
ಒಂದು ರೀತಿ ಖುಷಿಯಾಯಿತು. ನಾನು ಮುಖ್ಯಮಂತ್ರಿ ಆದಾಗ ಏಕಾಂಗಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದೆ. ಆಗ ಪರಿಸ್ಥಿತಿ ಬೇರೆಯೇ ಇತ್ತು. ಆದರೆ, ಇವತ್ತು ಪೂರ್ಣ ಪ್ರಮಾಣದ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಿದ್ದು ಸಂತಸ ತಂದಿದೆ. ಎಲ್ಲರೂ ಶ್ರದ್ಧೆಯಿಂದ ಕೆಲಸ ಮಾಡಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲಿ ಎನ್ನುವುದೇ ನನ್ನ ಬಯಕೆ.

* ಜೆಡಿಎಸ್ ಜತೆಗೆ ನಿಮ್ಮ ಸಂಬಂಧ...?

ಅದು ಕೂಡ ಒಂದು ವಿರೋಧ ಪಕ್ಷ. ನಾನೆಂದೂ ಆ ಪಕ್ಷದ ಮುಖಂಡರ ಜತೆ ಮಾತನಾಡಿಲ್ಲ; ಸಲಹೆಯನ್ನೂ ಪಡೆದಿಲ್ಲ. ಆದರೂ ಈ ಕುರಿತು ಸುಳ್ಳು ಸುದ್ದಿ ಹಬ್ಬಿಸಲಾಯಿತು. ಜೆಡಿಎಸ್ ಸಲಹೆ ಪಡೆದು ಆಡಳಿತ ನಡೆಸಿದ್ದೇನೆ ಎಂಬ ಆರೋಪವನ್ನು ಸಾಬೀತುಪಡಿಸಿದರೆ ರಾಜಕೀಯದಿಂದ ನಿವೃತ್ತಿ ಪಡೆಯುವುದಾಗಿ ಘೋಷಿಸಿದೆ. ಯಾರೂ ಅದನ್ನು ಸಾಬೀತು ಮಾಡಿಲ್ಲ. ಅದಿರಲಿ, ನಾನು ಅವರ ಸಲಹೆಯಂತೆ ಆಡಳಿತ ನಡೆಸಿಲ್ಲ ಎಂಬುದನ್ನು ಹನುಮಂತನ ಹಾಗೆ ಎದೆ ಬಗೆದು ತೋರಿಸಲು ಸಾಧ್ಯವೇ?!

* 11 ತಿಂಗಳ ಆಡಳಿತ ತೃಪ್ತಿ ತಂದಿದೆಯೇ?

ಖಂಡಿತ ತಂದಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಎರಡು ದಿನಗಳ ಹಿಂದೆ ಭೇಟಿಯಾಗಿ ನನ್ನ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಐದು ವರ್ಷಗಳಲ್ಲಿ ಆಗದ ಕೆಲಸ 11 ತಿಂಗಳಲ್ಲಿ ಆಗಿದೆ ಎಂದು ಮೆಚ್ಚುಗೆ ಸೂಚಿಸಿದರು. ಉತ್ತಮ ಆಡಳಿತ ನೀಡಿದ್ದಕ್ಕೆ 37 ಅಂಶಗಳನ್ನು ಪಟ್ಟಿ ಮಾಡಿಕೊಟ್ಟರು. ನಮ್ಮ ನಾಯಕ ಎಲ್.ಕೆ. ಅಡ್ವಾಣಿ ಕೂಡ ಒಳ್ಳೆಯ ಮಾತು ಹೇಳಿದ್ದಾರೆ. ನನ್ನ ಆಡಳಿತದ ಬಗ್ಗೆ ಹೆಮ್ಮೆ ಇದೆ.

* ಸರ್ಕಾರದ ಸಾಧನೆಗಳು...?
ಅದು ದೊಡ್ಡ ಪಟ್ಟಿಯೇ ಇದೆ. ಆದರೆ, ಮಾಧ್ಯಮಗಳಲ್ಲಿ ಪ್ರಚಾರ ಸಿಕ್ಕಿದ್ದು ಕಡಿಮೆ. ಪಕ್ಷದಲ್ಲಿನ ಗೊಂದಲವೇ ಪ್ರತಿನಿತ್ಯ ಹೈಲೈಟ್ ಆಗುತ್ತಿತ್ತು. ಅಭಿವೃದ್ಧಿ ವಿಷಯಗಳಿಗಿಂತ ಹೆಚ್ಚು ರಾಜಕಾರಣ, ಭಿನ್ನಮತದ ಸುದ್ದಿಗಳೇ ಪತ್ರಿಕೆಗಳಲ್ಲಿ ರಾರಾಜಿಸಿದವು.

* ಮುಂದೇನು ಮಾಡುತ್ತೀರಿ?

ಪಕ್ಷ ವಹಿಸುವ ಜವಾಬ್ದಾರಿ ನಿರ್ವಹಿಸುತ್ತೇನೆ. ಒಂದೆರಡು ದಿನದಲ್ಲಿ ಪುತ್ತೂರಿಗೆ ಹೋಗಿ ಬರುತ್ತೇನೆ. ಮುಖ್ಯಮಂತ್ರಿ ಆಗಲು ಸಿಕ್ಕ ಅವಕಾಶವನ್ನು ಸಮರ್ಥವಾಗಿ ನಿಭಾಯಿಸಲು ಶಕ್ತಿ ಕೊಟ್ಟ ಮನೆ ದೇವರಿಗೆ ಧನ್ಯವಾದ ಅರ್ಪಿಸುತ್ತೇನೆ. ಹಾಗೆಯೇ ನನ್ನ ತಾಯಿಯನ್ನು ನೋಡಿ ಬರುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT