ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸ ಇಲ್ಲ; ಇದು ದುಃಖದ ವಿಷಯ!

Last Updated 28 ಜುಲೈ 2013, 11:03 IST
ಅಕ್ಷರ ಗಾತ್ರ

ಹಳೇಬೀಡು: ಇದೊಂದು ಕೂಲಿಗಳ ಮಾರುಕಟ್ಟೆ ಎನ್ನಬಹುದು. ಬುತ್ತಿ ಕಟ್ಟಿಕೊಂಡು ಬರುವ ಮಹಿಳೆಯರು ರಸ್ತೆ ಬದಿಯಲ್ಲಿ ನಿಂತು ಯಾರಾದರೂ ನಮ್ಮನ್ನು ಕೂಲಿ ಕೆಲಸಕ್ಕೆ ಕರೆಯಬಹುದು ಎಂದು ಕಾಯುತ್ತ ಕುಳಿತಿರುತ್ತಾರೆ. ಜಮೀನುಗಳಲ್ಲಿ ಕೆಲಸ ಇದ್ದವರು ಇಲ್ಲಿಗೆ ಬಂದು ಅಗತ್ಯವಿರುವಷ್ಟು ಜನರನ್ನು ಕರೆದುಕೊಂಡು ಹೋಗುತ್ತಾರೆ. ಕೆಲವೊಮ್ಮೆ ಕೂಲಿ ಸಿಗುತ್ತದೆ. ಮಳೆ ಕೈಕೊಟ್ಟರೆ ಮಾತನಾಡಿಸುವವರು ಇಲ್ಲದೆ ಖಾಲಿ ಕೈಯಲ್ಲಿ ಮನೆಗೆ ಮರಳಬೇಕು.

ಇದು ಹಳೇಬೀಡಿನ ಬೇಲೂರು ರಸ್ತೆಯ ದೊಡ್ಡ ಬೀದಿ ತಿರುವಿನಲ್ಲಿ ಪ್ರತಿದಿನ ಕಂಡುಬರುವ ದೃಶ್ಯ.
ನರಸೀಪುರ ಬೋವಿ ಕಾಲೋನಿಯ ಸುಮಾರು 40 ರಿಂದ 50 ಮಹಿಳೆಯರು ಇಲ್ಲಿ ಕೂಲಿ ಕೆಲಸಕ್ಕಾಗಿ ಕಾಯುತ್ತಾರೆ. ಕೆಲವೊಮ್ಮೆ ರೈತರು ಮೊದಲೇ ಇವರನ್ನು ಕೆಲಸಕ್ಕಾಗಿ ಕರೆಯುವುದುಂಟು. ಅಂಥ ದಿನಗಳಲ್ಲಿ ಇಲ್ಲಿ ಹುಡುಕಿದರೂ ಒಬ್ಬರೂ ಸಿಗುವುದಿಲ್ಲ.
ಮಳೆಗಾಲದ ವೈಪರಿತ್ಯ ಹಾಗೂ ಅಂತರ್ಜಲ ಕುಸಿಯುತ್ತಿರುವುದರಿಂದ ಕನಿಷ್ಠ ಎಂದರೂ ತಿಂಗಳಲ್ಲಿ 10ರಿಂದ12 ದಿನ ಎಲ್ಲರೂ ಕೆಲಸವಿಲ್ಲದೆ ಕಳೆಯಬೇಕು. ಇದೇ ರೀತಿ ಮುಂದುವರೆದರೆ ಸ್ಥಳೀಯವಾಗಿ ಕೂಲಿ ಸಿಗದೆ ಗುಳೆಹೋಗ ಬೇಕಾಗುತ್ತದೆ ಎಂಬುದು ಕೂಲಿ ಮಹಿಳೆ ಸಾವಿತ್ರಮ್ಮ ಆರ್ತನಾದ.

ಹಳೇಬೀಡಿನಿಂದ 3 ಕಿ.ಮೀ. ದೂರದ ನರಸೀಪುರ ಗ್ರಾಮದ ಭೋವಿ ಕಾಲೋನಿಯಲ್ಲಿ 150 ಕುಟುಂಬಗಳು ವಾಸವಾಗಿವೆ. ಇಲ್ಲಿ ಬಹುತೇಕ ಮಂದಿಯ ಉದ್ಯೋಗ ಕೂಲಿ. ಕೆಲವರು ದೂರದ ಮಲೆನಾಡಿನ ಕಾಫಿ ತೋಟಗಳಿಗೆ ಹೋಗಿ ದುಡಿಯುತ್ತಾರೆ. ಮನೆ ಮಂದಿಯೆಲ್ಲ ಬಾಗಿಲಿಗೆ ಬೀಗ ಹಾಕಿ, ಗಂಟು ಮೂಟೆ ಕಟ್ಟಿಕೊಂಡು ಹತ್ತಾರು ದಿನ ತೋಟದಲ್ಲಿಯೇ ವಾಸ್ತವ್ಯ ಮಾಡಿ ದುಡಿಯುತ್ತಾರೆ.

ಇವರಿಗೆಲ್ಲ ಅಷ್ಟಿಷ್ಟು ಕೃಷಿ ಭೂಮಿ ಇದ್ದರೂ ಅದು ಮಳೆ ಆಶ್ರಿತ ಭೂಮಿ. ಜಮೀನು ಫಲವತ್ತತೆ ಇಲ್ಲದೆ ಕಲ್ಲು ಭೂಮಿಯಾಗಿರುವುದರಿಂದ ಮಳೆ ಬಂದರೂ ಸಮೃದ್ಧ ಫಸಲು ದೊರಕುವುದಿಲ್ಲ. ಹೀಗಾಗಿ ಕೂಲಿ ಕೆಲಸ ಅನಿವಾರ್ಯ. ಎಲ್ಲಾದರೂ ಕೆಲಸ ಮಾಡುತ್ತೇವೆ ಎನ್ನುವವರಿಗೆ ಈಗ ಮಲೆನಾಡಿನಲ್ಲಿ ಅತಿ ವೃಷ್ಟಿಯಿಂದಾಗಿ ಮಳೆಯಿಂದ ಕೆಲಸವಿಲ್ಲದಂತಾಗಿದ್ದರೆ. ತಮ್ಮೂರಿನಲ್ಲಿ ಮಳೆಯ ಕೊರತೆಯಿಂದ ಕೆಲಸ ಇಲ್ಲದಂತಾಗಿದೆ.

ಕಳೆದ ವರ್ಷದವರೆಗೂ ಕೃಷಿ ಕಾರ್ಮಿಕರಿಗೆ ಭಾರೀ ಬೇಡಿಕೆ ಇತ್ತು. ಮನೆಬಾಗಿಲಿಗೆ ಹೋಗಿ ಕಾರ್ಮಿಕರನ್ನು ಕರೆ ತರಬೇಕಾಗಿತ್ತು. ಮಳೆಗಾಲದ ವೈಪರೀತ್ಯದಿಂದ ಎಲ್ಲ ರೈತರು ಬೆಳೆ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಕೂಲಿ ಕೆಲಸದ ಬೇಡಿಕೆ ಕಡಿಮೆಯಾಗುತ್ತಿದೆ ಎಂಬ ಮಾತು ರೈತರಿಂದಲೇ ಕೇಳಿ ಬರುತ್ತಿದೆ.

ಇಷ್ಟಾದರೂ ಕೂಲಿ ಕಾರ್ಮಿಕರ ಸಮಸ್ಯೆ ಬಗೆಹರಿದಿಲ್ಲ. ಸಾಕಷ್ಟು ದೊಡ್ಡ ರೈತರು ಇಂದಿಗೂ ಕೆಲಸಕ್ಕೆ ಕೂಲಿಗಳು ಸಿಗದೆ ಪರದಾಡುತ್ತಿದ್ದಾರೆ. ಅನೇಕ ರೈತರು ಕೃಷಿಯಿಂದ ದೂರ ಸರಿಯುವ ನಿರ್ಧಾರಕ್ಕೂ ಬಂದಿದ್ದಾರೆ. ಹಾಗಾದರೆ ವರ್ಷದಲ್ಲಿ ಕೆಲವು ತಿಂಗಳು ಕಾರ್ಮಿಕರಿಗೆ ಏಕೆ ಕೆಲಸ ಸಿಗುತ್ತಿಲ್ಲ? ರೈತರು ಕೂಲಿಗರ ಕೊರತೆ ಎದಿರಿಸುತ್ತಿರುವುದು ಏಕೆ? ಎಂಬ ಪ್ರಶ್ನೆಗಳಿಗೆ ಉತ್ತರ ದೊರಕುತ್ತಿಲ್ಲ

`ನಾವು ಕಷ್ಟಪಟ್ಟು ದುಡಿಯುತ್ತೇವೆ. ಊರಿನ ಹತ್ತಿರ ಕೆಲಸ ಸಿಕ್ಕರೆ ಹೆಣ್ಣಾಳಿಗೆ ದಿನಕ್ಕೆ ರೂ. 150ಪಡೆಯುತ್ತೇವೆ. ಸ್ವಲ್ಪ ದೂರವಾದರೆ ರೂ. 200 ತೆಗೆದುಕೊಳ್ಳುತ್ತೇವೆ. ಗಂಡಸರು ಸ್ಥಳದಲ್ಲಿ ರೂ. 300 ದಿನಗೂಲಿ ಪಡೆಯುತ್ತಾರೆ. ಕೆಲಸದ ಸ್ಥಳದ ಹತ್ತಾರು ಕಿ.ಮಿ.ಗಿಂತ ದೂರವಾದರೆ ಗುತ್ತಿಗೆ ಮಾಡಿಕೊಂಡು ಕೆಲಸ ಮಾಡುತ್ತಾರೆ. ನಮಗೆ ಬೇರೆನೂ ಬೇಡ ಪ್ರತಿದಿನ ಕೆಲಸ ಸಿಕ್ಕಿದರೆ ಮತ್ತೊಬ್ಬರಿಗೆ ತೊಂದರೆ ಕೊಡದೆ ಬದುಕುತ್ತೇವೆ' ಎನ್ನುತ್ತಾರೆ ಎನ್ನುತ್ತಾರೆ ಚಿನ್ನಮ್ಮ.

ಕೆಲಸ ಇಲ್ಲದಿದ್ದರೂ ಕೂಲಿ ದರ  ಕಡಿಮೆಯಾಗಿಲ್ಲ. ಬಾವಿಗಳಲ್ಲಿ ನೀರಿಲ್ಲದೆ ಸಂಪೂರ್ಣ ಬೆಳೆ ಮಾಡಲು ಸಾಧ್ಯವಾಗುತ್ತಿಲ್ಲ. ಜಮೀನಿನಲ್ಲಿ ಕೆಲಸ ಇದ್ದರೂ ದುಬಾರಿ ಕೂಲಿಗೆ ಕೆಲಸ ಮಾಡಿಸುವುದು ನಷ್ಟವಾಗುತ್ತದೆ ಎಂಬುದು ರೈತ ತೆಂಗಿನಮರದ ಮನೆ ಮಹೇಶ ಅವರ ಅಭಿಪ್ರಾಯ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT