ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸ ಬಿಡಿಸಿದ್ದಕ್ಕೆ ಸೇಡು: ಮಾಲೀಕರ ಮಗನ ಕೊಲೆ

Last Updated 19 ಅಕ್ಟೋಬರ್ 2012, 19:50 IST
ಅಕ್ಷರ ಗಾತ್ರ

ಬೆಂಗಳೂರು: ಕೆಲಸದಿಂದ ತೆಗೆದು ಹಾಕಿದ ಕಾರಣಕ್ಕೆ ವ್ಯಕ್ತಿಯೊಬ್ಬ ಮಾಲೀಕರ ಹತ್ತು ವರ್ಷದ ಮಗನನ್ನೇ ಕೊಲೆ ಮಾಡಿರುವ ಘಟನೆ ಮೆಜೆಸ್ಟಿಕ್ ಬಳಿ ನಡೆದಿದೆ. ಶುಕ್ರವಾರ ರಾತ್ರಿ ಶವ ಪತ್ತೆಯಾಗಿದೆ.
ಜೀವನ್‌ಬಿಮಾನಗರ ಬಳಿಯ ಕೋಡಿಹಳ್ಳಿ ನಿವಾಸಿ ಭಾಸ್ಕರ್‌ರೆಡ್ಡಿ ಎಂಬುವರ ಮಗ ಹರ್ಷವರ್ಧನ (10) ಕೊಲೆಯಾದವನು. ಆರೋಪಿ ಶ್ರೀನಿವಾಸ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಬಾಲಕ ಎಚ್‌ಎಎಲ್ ಮೂರನೇ ಹಂತದಲ್ಲಿರುವ ಕೆಂಬ್ರಿಡ್ಜ್ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದ. ಬುಧವಾರ (ಅ.17) ಟ್ಯೂಶನ್‌ಗೆ ಹೋದ ಬಾಲಕ ಮನೆಗೆ ಹಿಂತಿರುಗಿರಲಿಲ್ಲ. ಈ ಸಂಬಂಧ ಮಗ ಕಾಣೆಯಾಗಿರುವ ಬಗ್ಗೆ ಭಾಸ್ಕರ್‌ರೆಡ್ಡಿ ಠಾಣೆಗೆ ದೂರು ನೀಡಿದ್ದರು.
 
ಅಲ್ಲದೇ, ಮಗನನ್ನು ಶ್ರೀನಿವಾಸ್ ಅಪಹರಿಸಿರಬಹುದು ಎಂಬ ಶಂಕೆ ಕೂಡ ವ್ಯಕ್ತಪಡಿಸಿದ್ದರು. ಹೀಗಾಗಿ ಪೊಲೀಸರು ಶ್ರೀನಿವಾಸ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಕೊಲೆಗೆ ಕಾರಣವೇನು?
`ಭಾಸ್ಕರ್ ಅವರು, ಭಾಮೈದ ಕಿರಣ್‌ರೆಡ್ಡಿ ಜತೆ ಮಡಿವಾಳದಲ್ಲಿ ಪೇಯಿಂಗ್ ಗೆಸ್ಟ್ ನಡೆಸುತ್ತಿದ್ದಾರೆ. ಈ ಹಿಂದೆ ಶ್ರೀನಿವಾಸ್ ಅದೇ ಪೇಯಿಂಗ್ ಗೆಸ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ. ಆದರೆ, ಹಣಕಾಸಿನ ವಿಷಯದಲ್ಲಿ ಭಾಸ್ಕರ್ ಮತ್ತು ಶ್ರೀನಿವಾಸ್ ನಡುವೆ ಜಗಳವಾಗಿ ಆತನನ್ನು ಕೆಲಸದಿಂದ ತೆಗದು ಹಾಕಿದ್ದರು. ಅಲ್ಲದೇ, ಕಿರಣ್‌ರೆಡ್ಡಿ ಅವರು ಆರೋಪಿಯಿಂದ ಒಂದೂವರೆ ಲಕ್ಷ ರೂಪಾಯಿ ಸಾಲ ತೆಗೆದುಕೊಂಡಿದ್ದರು. ಅದನ್ನು ಹಿಂತಿರುಗಿಸುವಲ್ಲಿ ವಿಳಂಬ ಮಾಡಿದ್ದರಿಂದ ಈ ಕೃತ್ಯ ಎಸಗಿದ್ದಾನೆ~ ಎಂದು ಪೊಲೀಸರು ತಿಳಿಸಿದರು.

`ಬುಧವಾರ ಹರ್ಷವರ್ಧನನನ್ನು ಅಪಹರಿಸಿ ಮೆಜೆಸ್ಟಿಕ್ ಬಳಿ ಇರುವ ಕೇಶವ ನಿಲಯ ವಸತಿಗೃಹಕ್ಕೆ ಕರೆದುಕೊಂಡು ಹೋಗಿದ್ದೆ. ಅದೇ ದಿನ ರಾತ್ರಿ ಬಾಲಕನನ್ನು ಕಟ್ಟಡದ ಕೊನೆ ಮಹಡಿಗೆ ಕರೆದೊಯ್ದು ಆತನ ಕುತ್ತಿಗೆಗೆ ವೈಯರ್‌ನಿಂದ ಬಿಗಿದೆ. ಬಳಿಕ ಕಂಬಿಯೊಂದಕ್ಕೆ ನೇಣು ಹಾಕಿ ಕೊಲೆ ಮಾಡಿದೆ ಎಂದು ಶ್ರೀನಿವಾಸ್ ಒಪ್ಪಿಕೊಂಡಿದ್ದಾನೆ~ ಎಂದು ಪೊಲೀಸರು ಮಾಹಿತಿ ನೀಡಿದರು. ಜೀವನ್‌ಬಿಮಾ ನಗರ ಠಾಣೆಯಲ್ಲಿ ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT