ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಳಸೇತುವೆ ಇಲ್ಲದ ಹೆದ್ದಾರಿ ಕೈಲಾಸಕ್ಕೆ ದಾರಿ..!

Last Updated 16 ಅಕ್ಟೋಬರ್ 2012, 7:55 IST
ಅಕ್ಷರ ಗಾತ್ರ

ಹಾವೇರಿ:  ನಾಲ್ಕು ವರ್ಷಗಳಲ್ಲಿ ಐವರು ವಿದ್ಯಾರ್ಥಿಗಳು, ಐವರು ಮಹಿಳೆಯರು ಸೇರಿದಂತೆ 21 ಜನರು ದುರ್ಮರಣ, ಹತ್ತು ಜನರು ಶಾಶ್ವತ ಅಂಗವೈಕಲ್ಯತೆ, ಐವ ತ್ತುಕ್ಕೂ ಹೆಚ್ಚು ಕುರಿ, ಎಮ್ಮೆ, ಎತ್ತುಗಳ ಅಕಾಲಿಕ ಸಾವು ಹಾಗೂ ಅಷ್ಟೇ ಪ್ರಮಾಣದ ಜಾನುವಾರುಗಳು ಅಂಗಾಂಗ ಕಳೆದುಕೊಂಡು ಕಸಾಯಿ ಖಾನೆ  ಪಾಲಾಗಿವೆ...!

ಇಷ್ಟೊಂದು ಪ್ರಾಣ ಪಕ್ಷಿಗಳು ಹಾರಿ ಹೋಗಿರುವ, ಕೈ, ಕಾಲು ಅಷ್ಟೇ ಅಲ್ಲ ಸ್ಮರಣಶಕ್ತಿಯನ್ನು ಕಳೆದುಕೊಂಡ ಘಟನಾವಳಿಗಳು ಸದಾ ಕಣ್ಣು ಮುಂದೆ ಹಾಯ್ದು ಹೋಗುವುದರಿಂದ ಬೆಳಿಗ್ಗೆ ಮನೆಯಿಂದ ಹೊರಟರೆ ಸಂಜೆ ಜೀವ ಸಹಿತ ಮನೆ ತಲುಪುವ ನಂಬಿಕೆ ಅವರಲ್ಲಿ ಇಲ್ಲದಾಗಿದೆ. 

ಇದು ಜಿಲ್ಲಾ ಕೇಂದ್ರ ಹಾವೇರಿಯಿಂದ ಕೇವಲ ನಾಲ್ಕು ಕಿಲೋ ಮೀಟರ್ ಅಂತರದಲ್ಲಿರುವ ನೆಲೋಗಲ್ ಗ್ರಾಮ ದಲ್ಲಿ ಅಷ್ಟೊಂದು ಜನ, ಜಾನುವಾರುಗಳ ಪ್ರಾಣ ಹಾನಿ ಹಾಗೂ ಗ್ರಾಮಸ್ಥರಲ್ಲಿ ಮನೆ ಮಾಡಿರುವ ಭಯವಿದು.

ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ಶನಿವಾರ ಸಂಜೆ ಬಹಿರ್ದೆಸೆಗೆ ಹೋಗಿದ್ದ ಎಂಟು ವರ್ಷದ ಬಾಲಕನಿಗೆ ಓಮಿನಿ ಕಾರು ಡಿಕ್ಕಿ ಹೊಡೆದು ಆತ ಸ್ಥಳ ದಲ್ಲಿಯೇ ಮೃತಪಟ್ಟಿದ್ದನು. ಆ ಘಟನೆ ಕಳೆದ ನಾಲ್ಕು ವರ್ಷಗಳಲ್ಲಿ ಆಗಿರುವ ಅಪಘಾತಗಳ ಸರಣಿ ಹಾಗೂ ಅದರಲ್ಲಿ ಮೃತಪಟ್ಟವರ ಬಗ್ಗೆ ಗ್ರಾಮಸ್ಥರ ಸ್ಮೃತಿ ಪಟಲದಲ್ಲಿ ಮತ್ತೊಮ್ಮೆ ಸುಳಿದು ಹೋಗಿದೆಯಲ್ಲದೇ, ಮತ್ತಷ್ಟು ಭಯ ಆವರಿಸುವಂತೆ ಮಾಡಿದೆ.

ಅಭಿವೃದ್ಧಿ ಹಾಗೂ ಸುಗಮ ಸಂಚಾರ ಕ್ಕಾಗಿ ಬಂದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ-4 ಊರ ಮುಂದೆ ಹಾಯ್ದು ಹೋಗುತ್ತದೆ ಎಂದಾಗ ಗ್ರಾಮದ ಜನರು ಸಂತಸಪಟ್ಟಿದ್ದರಲ್ಲದೇ, ಅದಕ್ಕಾಗಿ ಸುಮಾರು 60 ಎಕರೆ ಜಮೀನು ಸಹ ನೀಡಿದ್ದರು. ಆದರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಸ್ತೆ ಯೋಜನೆ ರೂಪಿ ಸುವಾಗ ರಸ್ತೆ ಪಕ್ಕದಲ್ಲಿರುವ ನೆಲೋಗಲ್ ಗ್ರಾಮವನ್ನು ಮರೆತು, ಅದಕ್ಕೊಂದು ಸೂಕ್ತ ಮಾರ್ಗ ನಿರ್ಮಿಸ ದಿರುವುದೇ ಇಷ್ಟೊಂದು ಪ್ರಾಣಹಾನಿಗೆ ಕಾರಣವಾಗಿದೆ.

ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲು ಜಮೀನು ನೀಡಿದ ಜನರು ಇಂದು ನಡೆದು ಊರು ತಲುಪಲು ಬೇಕಾದ ದಾರಿಗಾಗಿ ಹೋರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹೆದ್ದಾರಿ ಪಕ್ಕ ದಲ್ಲಿ ಸರ್ವಿಸ್ ರಸ್ತೆ ಇಲ್ಲದ್ದರಿಂದ ಜಮೀನುಗಳಿಗೆ ಚಕ್ಕಡಿ, ಟ್ರ್ಯಾಕ್ಟರ್, ಜಾನುವಾರು ತೆಗೆದುಕೊಂಡು ಹೋಗಲು, ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ತೆರಳಲು ಅಷ್ಟೇ ಏಕೆ, ಮಹಿಳೆಯರು ಬಹಿರ್ದೆಸೆಗೆ ಹೋಗಲು ಇದೇ ಹೆದ್ದಾರಿ ಮೇಲೆ ಹಾಯ್ದು ಹೋಗುವ ಅನಿವಾರ್ಯತೆಯಿದೆ.

ಪ್ರತಿನಿತ್ಯ ಗ್ರಾಮದ ಜನರು ಪ್ರತಿ ಯೊಂದು ಕೆಲಸಕ್ಕೂ ತೆರಳಬೇಕಾದರೂ ಕೈಯಲ್ಲಿ ಜೀವ ಹಿಡಿದುಕೊಂಡು ಹೆದ್ದಾರಿ ದಾಟಬೇಕು. ಇವರು ಜಾಗರೂಕ ರಾಗಿದ್ದರೂ ಚಾಲಕರು ನಿರ್ಲಕ್ಷ್ಯ ವಹಿಸಿ ದರೆ ಸಾಕು ರಸ್ತೆ ದಾಟುವವರ ಪ್ರಾಣ ಪಕ್ಷಿ ಹಾರಿ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಗ್ರಾಮ ತಲುಪಲು ಯಾವುದೇ ಸುರಕ್ಷಿತ ರಸ್ತೆಯಾಗಲಿ, ಕೆಳಸೇತುವೆಯಾಗಲಿ ಇಲ್ಲದಿರುವುದೇ ನಾಲ್ಕು ವರ್ಷಗಳಲ್ಲಿ ಇಷ್ಟೊಂದು ಅನಾ ಹುತಕ್ಕೆ ಕಾರಣವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಪ್ರಯೋಜನಕ್ಕೆ ಬಾರದ ಕೆಳಸೇತುವೆ: ಗ್ರಾಮದ ಅನತಿ ದೂರದಲ್ಲಿ ಹೆದ್ದಾರಿಗೆ ಕೆಳಸೆತುವೆಯನ್ನು ನಿರ್ಮಿಸಲಾಗಿದೆ. ಅದಕ್ಕೆ ಪೂರಕವಾಗಿ ಸರ್ವಿಸ್ ರಸ್ತೆ ಇಲ್ಲದ್ದರಿಂದ ಆ ಸೇತುವೆಗೆ ದಾರಿಯೇ ಇಲ್ಲ. ಸದಾ ನೀರು ತುಂಬಿಕೊಂಡು ಹೊಂಡದಂತೆ ಗೋಚರವಾಗುತ್ತದೆ. ಅದು ಅಲ್ಲದೇ ಸೇತುವೆ ಕೇವಲ ಎಂಟು ಅಡಿ ಎತ್ತರ ಇದೆ.

ಅದರಲ್ಲಿ ಚಕ್ಕಡಿ, ಟ್ರ್ಯಾಕ್ಟರ್‌ಗಳು ಹಾಯ್ದು ಹೋಗಲು ಸಾಧ್ಯವಿಲ್ಲ. ಅದಕ್ಕಾಗಿ ಕೂಡಲೇ ಗ್ರಾಮದ ಎದುರಿನಲ್ಲಿಯೇ ಎತ್ತರವಾದ ಕೆಳಸೇತುವೆ ನಿರ್ಮಿಸಬೇಕೆಂಬ ಒತ್ತಾಯ ಗ್ರಾಮಸ್ಥರದ್ದು.

ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ವಾದಾಗಿನಿಂದ ಕೆಳ ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ಗ್ರಾಮಸ್ಥರು ಸುಮಾರು ಐದಾರು ಬಾರಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಆದರೆ, ಇಲ್ಲಿವರೆಗೆ ನಿರ್ಮಿಸಿ ಕೊಡುವ ಭರವಸೆ ಬಿಟ್ಟು ಬೇರೇನೂ ಸಿಕ್ಕಿಲ್ಲ. ನೆಲೋಗಲ್ ಸಮಸ್ಯೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಜನಪ್ರತಿನಿಧಿಗಳು ಇರುವುದರಿಂದ ಗ್ರಾಮಸ್ಥರ ಕೂಗು ಕೇವಲ ಅರಣ್ಯರೋಧನವಾಗಿದೆ.

ಗ್ರಾಮಕ್ಕೆ ಇರುವ ಒಂದೇ ಸುರಕ್ಷಿತ ರಸ್ತೆಯಾದ ರೇಲ್ವೆ ಗೇಟ್ ರಸ್ತೆಯನ್ನು ಕೂಡಾ ಜಿಲ್ಲಾಧಿಕಾರಿಗಳು ಕಳೆದ ವರ್ಷವೇ ಮುಚ್ಚಲು ಆದೇಶ ಹೊರಡಿ ಸಿದ್ದಾರೆ. ಅದು ಯಾವಾಗ ಮುಚ್ಚಲಿ ದೆಯೋ ಎನ್ನುವ ಭಯ ಕಾಡುತ್ತಿದೆ. ಸರ್ವಿಸ್ ರಸ್ತೆಯಾಗುವವರೆಗೆ ಯಾವು ದೇ ಕಾರಣಕ್ಕೂ ಈ ರಸ್ತೆ ಮುಚ್ಚಬಾ ರದು ಎಂದು ಗ್ರಾಮದ ಮಂಜು ನಾಥ ಸ್ವಾಮಿ ಹಿರೇಮಠ ಒತ್ತಾಯಿಸಿದ್ದಾರೆ.

ಕೊನೆಯ ಗಡುವು: ಶನಿವಾರ ನಾಲ್ಕು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ನಂತರ ಭಾನುವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿ ಕಾರದ ಅಧಿಕಾರಿಗಳು, ಉಪವಿಭಾಗಾಧಿ ಕಾರಿಗಳು, ಪೊಲೀಸ್ ಅಧಿಕಾರಿಗಳು ಗ್ರಾಮದ ಮುಖಂಡರ ಜತೆ ಸಭೆ ನಡೆಸಿದ್ದಾರಲ್ಲದೇ, ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ಶೀಘ್ರವೇ ಕೆಳಸೇತುವೆ ನಿರ್ಮಾಣ ಮಾಡಿಸುವ ಭರವಸೆ ನೀಡಿದ್ದಾರೆ. 

ಈ ಸಂದರ್ಭದಲ್ಲಿ ಗ್ರಾಮ ಸ್ಥರು ನಿಮ್ಮ ಮಾತಿಗೆ ಬೆಲೆ ಕೊಡುವುದು ಇದೇ ಕೊನೆ. ನೀವು ನೀಡಿರುವ ಭರವಸೆ ಯಂತೆ ಕೆಳಸೇತುವೆ ನಿರ್ಮಾಣ ಮಾಡ ದಿದ್ದರೇ, ಗ್ರಾಮಸ್ಥರೆಲ್ಲರೂ ಸೇರಿಕೊಂಡು ರಾಷ್ಟ್ರೀಯ ಹೆದ್ದಾರಿಯನ್ನು ಅಗೆದು ದಾರಿಮಾಡಿಕೊಳ್ಳುತ್ತೇವೆ ಎಂದು ಗ್ರಾಮದ ಚಂದ್ರಗೌಡ ಹೊಸಗೌಡ, ಎಂ.ಎಚ್.ಹೆಬ್ಬಾಳ, ನಾಗಪ್ಪ ಶೆಟ್ಟೆಮ್ಮ ನವರ, ಭರಮಪ್ಪ ಕೂಡಲ ಅನೇಕರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT