ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಸರಿನಲ್ಲಿ ತಾಲ್ಲೂಕು ಕ್ರೀಡಾಕೂಟ!

Last Updated 21 ಸೆಪ್ಟೆಂಬರ್ 2013, 9:04 IST
ಅಕ್ಷರ ಗಾತ್ರ

ಶಿಕಾರಿಪುರ: ಕೆಸರುಗದ್ದೆಯಂತಿದ್ದ ತಾಲ್ಲೂಕು ಕ್ರೀಡಾಂಗಣದಲ್ಲಿಯೇ ನಡೆದ ಪ್ರೌಢಶಾಲಾ ವಿಭಾಗದ ತಾಲ್ಲೂಕು ಮಟ್ಟದ ಕ್ರೀಡಾಕೂಟದ ಬಗ್ಗೆ  ಕ್ರೀಡಾ ಪ್ರೇಮಿಗಳು ಹಾಗೂ ಕ್ರೀಡಾಪಟುಗಳು ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಮುಖ್ಯಶಿಕ್ಷಕರ ಸಂಘದ ಆಶ್ರಯದಲ್ಲಿ ಶುಕ್ರವಾರ ಪ್ರೌಢಶಾಲಾ ವಿಭಾಗದ ತಾಲ್ಲೂಕು ಮಟ್ಟದ ಕ್ರೀಡಾಕೂಟ ಮಳೆಯ ಮಧ್ಯೆಯೇ ನಡೆಯಿತು. ಮುಂಜಾನೆಯಿಂದಲೇ ಸುರಿದ ಮಳೆಯಿಂದ ತಾಲ್ಲೂಕು ಕ್ರೀಡಾಂಗಣ ಬಹುತೇಕ ಕೆಸರು ಹಾಗೂ ಮಳೆ ನೀರಿನಿಂದ ಅವೃತವಾಗಿತ್ತು. ನೀರು ಹೋಗಲು ಸೂಕ್ತ ವ್ಯವಸ್ಥೆ ಇಲ್ಲವಾದ್ದರಿಂದ ಕ್ರೀಡಾಂಗಣಲ್ಲಿಯೇ ನೀರುನಿಂತು ಕೆಸರು ಗದ್ದೆಯಂತಾಗಿತ್ತು.

ಬೆಳಿಗ್ಗೆ ಆಯೋಜಕರು ಕ್ರೀಡಾಕೂಟ ನಡೆಸುವ ಬಗ್ಗೆ ಚರ್ಚೆ ನಡೆಸಿದ ನಂತರ ಮಳೆ ಬಿಡುವು ನೀಡಿದ್ದರಿಂದ ಕ್ರೀಡಾಕೂಟ ಆರಂಭಿಸಿದರು.
ಕ್ರೀಡಾಕೂಟ ಆರಂಭವಾದ ನಂತರ ಕ್ರೀಡಾಪಟುಗಳು ಕೆಸರುಗದ್ದೆಯಂತಿದ್ದ ಕ್ರೀಡಾಂಗಣ ದಲ್ಲಿಯೇ ಆಟ ಮುಂದುವರಿಸಿದರು. ಕೆಲವು ಕ್ರೀಡಾ ಪಟುಗಳು ಕ್ರೀಡೆಯಲ್ಲಿ ನಿರತರಾಗಿದ್ದಾಗ ಕಾಲು ಜಾರಿ ಬಿದ್ದ ಸಣ್ಣ ಪುಟ್ಟ ಘಟನೆಗಳು ಕೂಡ ನಡೆದವು.
ಸ್ಪರ್ಧಿಗಳು ಅಜಾಗರೂಕತೆ ತೋರಿದರೂ ಮುಂದಿನ ದಿನಗಳಲ್ಲಿ ಕ್ರೀಡೆಯಲ್ಲಿ ಭಾಗವಹಿಸದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬ ಅಭಿಪ್ರಾಯವನ್ನು ಕ್ರೀಡಾಪ್ರೇಮಿಗಳು ವ್ಯಕ್ತಪಡಿಸಿದರು.

ಮಳೆಗಾಲದಲ್ಲಿ ಮಳೆ ನೀರು ಕ್ರೀಡಾಂಗಣ ಸಂಗ್ರಹವಾಗದಂತೆ ಹಾಗೂ ಸುತ್ತಲೂ ಇರುವ ಅನಾವಶ್ಯಕವಾದ ಗಿಡಗಳನ್ನು ನಾಶ ಮಾಡುವ ಮೂಲಕ ಕ್ರೀಡಾ ಚಟುವಟಿಕೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಗಮನಹರಿಸಬೇಕು ಎಂಬ ಅಭಿಪ್ರಾಯವನ್ನು ಸಾರ್ವಜನಿಕರು ವ್ಯಕ್ತಪಡಿಸಿದರು.

ಒಟ್ಟಿನಲ್ಲಿ ಕೆಸರುಗದ್ದೆಯಂತಿದ್ದ ತಾಲ್ಲೂಕು ಕ್ರೀಡಾಂಗಣದಲ್ಲಿಯೇ ಕ್ರೀಡಾಪಟುಗಳು ಏಳು ಬೀಳು ಎನ್ನದೇ ಕಬಡ್ಡಿ, ಓಟ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನ ತೋರಿದರು. ವಾಲಿಬಾಲ್‌ ಹಾಗೂ ಬಾಲ್‌ಬ್ಯಾಡ್ಮಿಂಟನ್‌ ಪಂದ್ಯಗಳು ಪಟ್ಟಣದ ವಿವಿಧ ಶಾಲೆ ಅವರಣದಲ್ಲಿ ನಡೆದವು. ತಾಲ್ಲೂಕಿನ ಹಿತ್ತಲ ವಲಯ, ಹೊಸೂರು, ಶಿರಾಳಕೊಪ್ಪ, ತಾಳಗುಂದ, ಕಸಬಾ ವಲಯದ ಶಾಲೆಗಳ ಕ್ರೀಡಾಪಟುಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT