ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಸರು ಗದ್ದೆಯಾದ ರಸ್ತೆ: ಸಂಚಾರಕ್ಕೆ ತೊಂದರೆ

Last Updated 19 ಜುಲೈ 2012, 9:05 IST
ಅಕ್ಷರ ಗಾತ್ರ

ಜಾಲಹಳ್ಳಿ: ಪಟ್ಟಣದ ಮೂಲಕ ಹಾದು ಹೋಗುವ ದೇವದುರ್ಗ-ತಿಂಥಿಣಿ ಸೇತುವೆಯ ಮುಖ್ಯ ರಸ್ತೆ ತೀರ ಹದಗೆಟ್ಟಿದ್ದು ಪ್ರಯಾಣಿಕರು ತೊಂದರೆ ಪಡುವಂತಾಗಿದೆ.

ಕಳೆದ ಅನೇಕ ದಿನಗಳಿಂದ  ರಸ್ತೆ ತೀವ್ರ ಹದಗೆಟ್ಟಿದ್ದು ರಸ್ತೆಯ ಮಧ್ಯೆ ಅನೇಕ ಕಡೆ ತಗ್ಗು ಗುಂಡಿಗಳು ಹೆಚ್ಚಾಗಿದ್ದು ಈಚೆಗೆ ಸುರಿದ ಸ್ವಲ್ಪ ಮಳೆಯಿಂದಾಗಿ ರಸ್ತೆ ಮತ್ತಷ್ಟು ಹದಗೆಡಲು ಕಾರಣವಾಗಿದೆ. ಸಣ್ಣ ಪ್ರಮಾಣದ ತಗ್ಗುಗಳಿರುವ ಸಮಯದಲ್ಲಿ ರಸ್ತೆಯ ದುರಸ್ತಿ ಕಾರ್ಯ ಕೈಗೊಳ್ಳದಿರುವುದರಿಂದ ಅವು ಈಗ ದೊಡ್ಡ ಪ್ರಮಾಣದ ತಗ್ಗುಗಳಾಗಿದ್ದು ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಪಟ್ಟಣದ ವ್ಯಾಪ್ತಿಯಲ್ಲಂತೂ ರಸ್ತೆಯ ಮೇಲೆ ಕೆಲವು ಕಡೆ ಚರಂಡಿ ನೀರು ಹರಿದು ರಸ್ತೆ ಸಂಪೂರ್ಣ ಕಿತ್ತು ಹೋಗಿದ್ದು ರಸ್ತೆಯ ಮೇಲೆಲ್ಲಾ ನೀರು ಆವರಿಸಿ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ.

ಅಲ್ಲದೇ ಪಟ್ಟಣದ ವಾಲ್ಮೀಕಿ ಹಾಗೂ ಬಸವೇಶ್ವರ ವೃತ್ತಗಳಲ್ಲಿ ಕೂಡ ರಸ್ತೆ ತೀವ್ರ ಹದಗೆಟ್ಟಿದ್ದು ದ್ವೀಚಕ್ರ ವಾಹನ ಸವಾರರು ಜೀವ ಭಯದಲ್ಲಿ ಸಂಚರಿಸುವಂತಾಗಿದೆ. ಈ ರೀತಿ ಮುಖ್ಯ ರಸ್ತೆಗಳೇ ದುರಸ್ತಿ ಕಾಣದೇ ಇರುವುದರಿಂದ ಇನ್ನೂ ಗ್ರಾಮೀಣ ಪ್ರದೇಶದ ರಸ್ತೆಗಳ ಗೋಳು ಕೇಳುವವರಿಲ್ಲದಂತಾಗಿದೆ.

ಚಿಂಚೋಡಿ ಹಾಗೂ ಬುಂಕಲದೊಡ್ಡಿ ಗ್ರಾಮಗಳ ಮಧ್ಯೆ ಕೂಡ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ತಿಂಥಿಣಿ ಸೇತುವೆಯಿಂದ ಕಲ್ಮಲವರೆಗಿನ ರಸ್ತೆಯನ್ನು ರಾಜ್ಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲಾಗಿದ್ದು ಕೆಲವೇ ದಿನಗಳಲ್ಲಿ ಕೆಲಸ ಪ್ರಾರಂಭವಾಗಲಿದೆ ಅದಕ್ಕಾಗಿ ದುರಸ್ತಿ ಕಾರ್ಯ ಕೈಗೊಳ್ಳುತ್ತಿಲ್ಲ ಎಂದು ಕೆಲವು ಅಧಿಕಾರಿಗಳು ಕಳೆದ ಎರಡು ವರ್ಷಗಳಿಂದ ಹೇಳುತ್ತಲೇ ಬಂದಿದ್ದಾರೆ.

ಆದರೆ ಇಲ್ಲಿಯವರೆಗೆ ಹೊಸ ರಸ್ತೆಯ ಕೆಲಸ ಕೂಡ ಪ್ರಾರಂಭವಾಗಿಲ್ಲ. ಹಳೆ ರಸ್ತೆಯ ದುರಸ್ತಿ ಕೂಡ ನಡೆಯುತ್ತಿಲ್ಲ. ಇದರಿಂದಾಗಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಸಂಭಂದಿಸಿದ ಅಧಿಕಾರಿಗಳು ಗಮನಹರಿಸಿ ಹದಗೆಟ್ಟಿರುವ ರಸ್ತೆಯ ದುರಸ್ತಿ ಕಾರ್ಯ ಮಾಡಬೇಕೆಂದು ನಾಗರೀಕರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT