ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಸಿಸಿಐಯಿಂದ ಸರ್ಕಾರಕ್ಕೆ ಆರು ಬೇಡಿಕೆ

Last Updated 13 ಅಕ್ಟೋಬರ್ 2011, 4:30 IST
ಅಕ್ಷರ ಗಾತ್ರ

ಮಂಗಳೂರು: ಬೈಕಂಪಾಡಿಯಲ್ಲಿ ಅಗ್ನಿಶಾಮಕ ಕೇಂದ್ರ, ಕುಳಾಯಿಯಲ್ಲಿ ಮೀನುಗಾರಿಕಾ ಬಂದರು ಸೇರಿದಂತೆ ಜಿಲ್ಲೆಗೆ ಅತೀ ಅಗತ್ಯವಾದ ಆರು ಕಾರ್ಯಗಳನ್ನು ಸಂಬಂಧಿತ ಇಲಾಖೆ ಹಾಗೂ ಜನಪ್ರತಿನಿಧಿಗಳು ಕೂಡಲೇ ಕೈಗೆತ್ತಿಕೊಳ್ಳಬೇಕು ಎಂದು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ (ಕೆಸಿಸಿಐ) ಅಧ್ಯಕ್ಷೆ ಲತಾ ಕಿಣಿ ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಅಗ್ನಿಶಾಮಕ ಕೇಂದ್ರ ಇಲ್ಲ. ಸಾವಿರಾರು ಮಂದಿ ಕೈಗಾರಿಕಾ ಪ್ರದೇಶದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಬಂದರಿನಿಂದ ಪೈಪ್‌ಲೈನ್ ಮೂಲಕ ಎಂಆರ್‌ಪಿಎಲ್ ತೈಲ ಪೂರೈಕೆ ಆಗುತ್ತಿದೆ. ಹೆದ್ದಾರಿ ಸಮೀಪದಲ್ಲೇ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿಶಾಮಕ ಕೇಂದ್ರ ಸ್ಥಾಪಿಸಬೇಕು ಎಂದರು.

ಮೀನುಗಾರಿಕಾ ಬಂದರು: ಕರಾವಳಿ ಪ್ರದೇಶದಲ್ಲಿ ಸಣ್ಣ ಮೀನುಗಾರಿಕಾ ಬಂದರು ಸ್ಥಾಪನೆಗೆ ರಾಜ್ಯ ಸರ್ಕಾರ 2011-12ನೇ ಮುಂಗಡಪತ್ರದಲ್ಲಿ ರೂ 100 ಕೋಟಿ ಘೋಷಿಸಿದೆ. ಕುಳಾಯಿಯಲ್ಲಿ ಮೀನುಗಾರಿಕಾ ಬಂದರು ಸ್ಥಾಪನೆ ಹಲವು ಸಮಯದ ಬೇಡಿಕೆ. ಇತ್ತೀಚೆಗೆ ದೋಣಿ ದುರಂತದಲ್ಲಿ ಮೀನುಗಾರರು ಜೀವ ಕಳೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಬಂದರು ಸ್ಥಾಪನೆಗೆ ಮೊದಲ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ವಿಮಾನ ನಿಲ್ದಾಣ: ಅಂತರರಾಷ್ಟ್ರೀಯ ವಿಮಾನಗಳ ಸಂಚಾರವಿದ್ದರೂ ಬಜ್ಪೆಯಲ್ಲಿನ ಮಂಗಳೂರು ವಿಮಾನ ನಿಲ್ದಾಣಕ್ಕೆ ಅಂತರರಾಷ್ಟ್ರೀಯ ಮಾನ್ಯತೆ ಸಿಕ್ಕಿಲ್ಲ. ಈಗ ಹೊಸ ಟರ್ಮಿನಲ್ ರಚನೆಯಾಗಿದೆ. ತಕ್ಷಣವೇ ಅಂತರರಾಷ್ಟ್ರೀಯ ಸ್ಥಾನಮಾನ ನೀಡಬೇಕು. ಹಳೆ ವಿಮಾನ ನಿಲ್ದಾಣದಲ್ಲಿ ಕಾರ್ಗೊ ನಿರ್ವಹಣೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಪಾದಚಾರಿ ಮಾರ್ಗ: ನಗರದಲ್ಲಿ ರಸ್ತೆ ಅಭಿವೃದ್ಧಿಗೆ ಸಾಕಷ್ಟು ಹಣ ಬಳಕೆ ಮಾಡಿದ್ದರೂ ಪಾದಚಾರಿ ಮಾರ್ಗದ ಬಗ್ಗೆ ಗಮನ ಹರಿಸಿಲ್ಲ. ಪಾದಚಾರಿಗಳಿಗೆ ತಿರುಗಾಡುವುದು ತ್ರಾಸದಾಯಕವಾಗಿದೆ. ಈ ನಿಟ್ಟಿನಲ್ಲಿ ಪಾಲಿಕೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ರಾಷ್ಟ್ರೀಯ ಹೆದ್ದಾರಿ: ಮಳೆಯಿಂದ ಜಿಲ್ಲೆಯ ರಸ್ತೆಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದೆ. ರಸ್ತೆ ದುರಸ್ತಿ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಶಿರಾಡಿ ಹೆದ್ದಾರಿ ಕಾಮಗಾರಿ, ಬೈಕಂಪಾಡಿಯಲ್ಲಿ ಸೇತುವೆ ದುರಸ್ತಿಗೆ  ಕ್ರಮ ಕೈಗೊಳ್ಳಬೇಕು ಎಂದರು.

ಮಂಗಳೂರು ಜಂಕ್ಷನ್ (ಕಂಕನಾಡಿ) ರೈಲ್ವೆ ನಿಲ್ದಾಣದಲ್ಲೂ ಮುಂಗಡ ಪಾವತಿ ಆಟೋ ಕೇಂದ್ರ ಸ್ಥಾಪನೆಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಉಪಾಧ್ಯಕ್ಷ ಮೊಹಮ್ಮದ್ ಅಮೀನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT