ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಆಕ್ಷೇಪಿಸಿಲ್ಲ: ಪಟ್ನಾಯಕ್

Last Updated 26 ಫೆಬ್ರುವರಿ 2011, 16:10 IST
ಅಕ್ಷರ ಗಾತ್ರ

ಭುವನೇಶ್ವರ (ಪಿಟಿಐ): ನಕ್ಸಲೀಯರ ವಶದಲ್ಲಿದ್ದ ಜಿಲ್ಲಾಧಿಕಾರಿ ಮತ್ತು ಕಿರಿಯ ಎಂಜಿನಿಯರ್ ಬಿಡುಗಡೆಗೆ ಒಡಿಶಾ ಸರ್ಕಾರ ಕೈಗೊಂಡ ಯಾವುದೇ ಕ್ರಮಗಳ ಬಗ್ಗೆ  ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರು ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಶನಿವಾರ ಸ್ಪಷ್ಟಪಡಿಸಿದ್ದಾರೆ.

ಫೆಬ್ರುವರಿ 16ರಂದು ನಡೆದ ಅಪಹರಣದ ಬಳಿಕ ಒಂದು ಬಾರಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೂಡ ತಮ್ಮೊಂದಿಗೆ ಮಾತನಾಡಿ ಅಧಿಕಾರಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.ಅಧಿಕಾರಿಗಳ ಬಿಡುಗಡೆಗೆ ಪ್ರತಿಯಾಗಿ ಜೈಲಿನಲ್ಲಿರುವ ಕುಖ್ಯಾತ ನಕ್ಸಲ್ ನಾಯಕರನ್ನು ಬಿಡುಗಡೆ ಮಾಡುವ ಸಂಧಾನ ಮಾತುಕತೆಗಳನ್ನು ಕೇಂದ್ರ ಸರ್ಕಾರ ಬೆಂಬಲಿಸಿರಲಿಲ್ಲ ಎಂಬ ಹೇಳಿಕೆಗಳಿಗೆ ಅವರು ಈ ಉತ್ತರ ನೀಡಿದ್ದಾರೆ.

ಕಾರ್ಯಾಚರಣೆ ಸದ್ಯ ಇಲ್ಲ: ರಾಜ್ಯದಲ್ಲಿ ನಕ್ಸಲೀಯರ ದಮನ ಕಾರ್ಯಾಚರಣೆ ಸದ್ಯಕ್ಕೆ ಇಲ್ಲ ಎಂದು ನವೀನ್ ಪಟ್ನಾಯಕ್ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.ಅಧಿಕಾರಿಗಳ ಬಿಡುಗಡೆಗೆ ಪ್ರತಿಯಾಗಿ ಸಂಧಾನಕಾರರ  ಮೂಲಕ ನಕ್ಸಲೀಯರಿಗೆ ನೀಡಿರುವ ಭರವಸೆಗಳಿಗೆ ಸರ್ಕಾರ ಬದ್ಧವಾಗಿದೆ. ನಕ್ಸಲೀಯರು ಎಲ್ಲಿಯವರೆಗೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುವುದಿಲ್ಲವೋ ಅಲ್ಲಿಯವರೆಗೂ ಈ ನಿಲುವು ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ತನಿಖೆಗೆ ಬಿಜೆಪಿ ಆಗ್ರಹ: ಅಧಿಕಾರಿಗಳ ಅಪಹರಣ ಮತ್ತು ಬಿಡುಗಡೆ ವಿದ್ಯಮಾನಗಳು ಬಹಳಷ್ಟು ನಿಗೂಢ ಮತ್ತು ಅಸ್ಪಷ್ಟವಾಗಿವೆ. ಅಪಹರಣದ ಜತೆಯಲ್ಲೇ ನಕ್ಸಲ್ ನಿಗ್ರಹ ಕಾರ್ಯಾಚರಣೆಯೂ ಸ್ಥಗಿತವಾಗಿದೆ. ಹಾಗಾಗಿ ಈ ವಿಷಯದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒಡಿಶಾ ಬಿಜೆಪಿ ಆಗ್ರಹಿಸಿದೆ.

ಅಧಿಕಾರಿಗಳಿಗೆ ಸಲಹೆ: ಜಿಲ್ಲಾಧಿಕಾರಿ ಅಪಹರಣ ಪ್ರಕರಣದ ಹಿನ್ನೆಲೆಯಲ್ಲಿ, ಉನ್ನತ ಅಧಿಕಾರಿಗಳು ನಕ್ಸಲ್‌ಪೀಡಿತ ಪ್ರದೇಶಗಳಿಗೆ ಸೂಕ್ತ ಭದ್ರತೆಯೊಂದಿಗೆ ತೆರಳುವಂತೆ ಬಿಎಸ್‌ಎಫ್ ಪ್ರಧಾನ ನಿರ್ದೇಶಕ ರಮಣ್ ಶ್ರೀವಾಸ್ತವ ಛತ್ತೀಸ್‌ಗಡದಲ್ಲಿ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT