ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬಸ್ ನಿಲ್ದಾಣ: ಆಸನ, ನೀರಿಗೆ ಬರ...

ನಗರ ಸಂಚಾರ
Last Updated 8 ಜುಲೈ 2013, 10:08 IST
ಅಕ್ಷರ ಗಾತ್ರ

ರಾಯಚೂರು: ಐದು ವರ್ಷಗಳ ಹಿಂದೆ ಆರಂಭಗೊಂಡ ಇಲ್ಲಿನ ಕೇಂದ್ರ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಆರಂಭದಿಂದಲೂ ಕುಂಟುತ್ತಲೇ ಸಾಗಿದ ಕಾಮಗಾರಿ ಐದು ವರ್ಷ ಕಳೆದರೂ ಆಗದೇ ಇರುವುದು ಪ್ರಯಾಣಿಕರಿಗೆ ರೋಸಿಹೋಗುವಂತೆ ಮಾಡಿದೆ.

ಹೊಸ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಹಳೆಯ ಬಸ್ ನಿಲ್ದಾಣ ಒಡೆದು ಹಾಕಲಾಯಿತು. ಹೊಸ ಬಸ್ ನಿಲ್ದಾಣ ಬೇಗ ಕಾಮಗಾರಿ ಆರಂಭವಾಗಲಿಲ್ಲ. ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದ ಹಿಂದಿನ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಆರ್ ಅಶೋಕ ಅವರು ಒಂದು ವರ್ಷ ಅವಧಿಯಲ್ಲಿ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ಪೂರ್ಣವಾಗಬೇಕು. ಯಾವುದೇ ಕಾರಣಕ್ಕೂ ಕಾಮಗಾರಿ ಅವಧಿಗೆ ವಿಸ್ತರಣೆಗೆ ಅವಕಾಶವಿಲ್ಲ ಎಂದು ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಿ ಹೋಗಿದ್ದರು.

ಅವರ ಎಚ್ಚರಿಕೆ ಮಾತಿನಿಂದ ಕಾಮಗಾರಿ ಚುರುಕುಗೊಳ್ಳುವ ಬದಲು ಮತ್ತಷ್ಟು ವಿಳಂಬವಾಯಿತು. ಕಾಮಗಾರಿ ಆರಂಭಗೊಂಡರೂ ಕುಂಟುತ್ತ ಸಾಗಿತು. ನಿರ್ಮಾಣ ಹಂತದಲ್ಲಿ ಛಾವಣಿ ಕುಸಿದು ಕಟ್ಟಡ ನಿರ್ಮಾಣ ಕಾರ್ಮಿಕರು ಗಾಯಗೊಂಡಿದ್ದರು. ಬಸ್ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರ ಮೊದಲು ದೊರಕಿಸಿದ್ದ ಮೊತ್ತ 5.8 ಕೋಟಿ. ವರ್ಷಗಳು ಉರುಳಿದಂತೆ ಕಟ್ಟಡ ನಿರ್ಮಾಣಕ್ಕೆ ಬಳಸುವ ವಸ್ತುಗಳ ಬೆಲೆ ಹೆಚ್ಚಳವಾಗಿದ್ದರಿಂದ ಮತ್ತಷ್ಟು ಹಣಕ್ಕೆ ಬೇಡಿಕೆ ಇಡಲಾಯಿತು. ಸರ್ಕಾರ ಹಣ ದೊರಕಿಸಿದ್ದು ಒಟ್ಟು 7 ಕೋಟಿ ಮೊತ್ತದಲ್ಲಿ ಬಸ್ ನಿಲ್ದಾಣ ನಿರ್ಮಾಣ ಆಗುತ್ತಿದೆ.

ಅರೆಬರೆ ಬಸ್ ನಿಲ್ದಾಣ: ಬಸ್ ನಿಲ್ದಾಣದಲ್ಲಿ ಬಸ್ ನಿಲುಗಡೆಗೆ ಕಾಂಕ್ರೀಟ್ ಪ್ಲಾಟ್‌ಫಾರ್ಮ್, ಪ್ರಯಾಣಿಕರಿಗೆ ನಿಲ್ದಾಣದ ಮೇಲೆ ಛಾವಣಿ ಹಾಕಲಾಗಿದೆ. ಇಷ್ಟು ಬಿಟ್ಟರೇ ಬೇರೆ ಕೆಲಸ ಬಸ್ ನಿಲ್ದಾಣದಲ್ಲಿ ಕಾಣುತ್ತಿಲ್ಲ.

ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಿಲ್ಲ. ಬಸ್‌ಗಾಗಿ ಪ್ರಯಾಣಿಕರು ನಿಂತುಕೊಂಡೇ ಗಂಟೆಗಟ್ಟಲೆ ಕಾಯ್ದು ಸುಸ್ತಾಗಿ ನೆಲದ ಮೇಲೆ ಕುಳಿತುಕೊಳ್ಳುತ್ತಾರೆ. ವೃದ್ದರು ಕುಳಿತುಕೊಳ್ಳಲೂ ಆಗದೇ ನೆಲದ ಮೇಲೆ ಮಲಗುತ್ತಿದ್ದಾರೆ. ರಾತ್ರಿ ಹೊತ್ತು ಬಸ್‌ಗಾಗಿ ಕಾಯುವ ಜನಕ್ಕೆ ಸಾಕಷ್ಟು ತೊಂದರೆ ಪಡುತ್ತಿದ್ದಾರೆ.

ನಿತ್ಯ ಸಾವಿರಾರು ಪ್ರಯಾಣಿಕರು ಈ ಬಸ್ ನಿಲ್ದಾಣದಲ್ಲಿ ಇಳಿಯುತ್ತಾರೆ. ಇಲ್ಲಿಂದ ಬೇರೆ ಕಡೆ ತೆರಳುತ್ತಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ಕುಡಿವ ನೀರಿನ ವ್ಯವಸ್ಥೆ ಮಾಡಿಲ್ಲ. ಲೈಟ್ ಅಳವಡಿಸಿಲ್ಲ. ರಾತ್ರಿ ಹೊತ್ತು ಇಡೀ ಬಸ್ ನಿಲ್ದಾಣ ಭಯ ಹುಟ್ಟಿಸುವಂತಿದೆ. ಕಳ್ಳರು, ಪುಂಡಪೋಕರಿಗಳ ಭಯ ಪ್ರಯಾಣಿಕರಿಗೆ ಕಾಡುವಂತಿದೆ ಎಂದು ಪ್ರಯಾಣಿಕ ವೆಂಕಟೇಶ ಆತಂಕ ವ್ಯಕ್ತಪಡಿಸಿದರು.
ತುರ್ತಾಗಿ ಕನಿಷ್ಠ ಆಸನ ವ್ಯವಸ್ಥೆ, ಕುಡಿವ ನೀರಿನ ಅರವಟಿಗೆ ನಿರ್ಮಿಸಿದರೆ ಜನಕ್ಕೆ ಅನುಕೂಲ ಆಗುತ್ತದೆ ಎಂದು  ಹೇಳಿದರು.

`ಕಾಮಗಾರಿ ನಡೆದಿದೆ: ಶೀಘ್ರವೇ ವ್ಯವಸ್ಥೆ'
ಒಟ್ಟು  7 ಕೋಟಿ ಮೊತ್ತದಲ್ಲಿ ಬಸ್ ನಿಲ್ದಾಣ ಕಾಮಗಾರಿ ಕೈಗೊಂಡಿದ್ದು, ಕಾಮಗಾರಿ ಬಹುತೇಕ ಪೂರ್ಣವಾಗಿದೆ. ಬಸ್ ನಿಲ್ದಾಣದೊಳಗಡೆ ಶೌಚಾಲಯ ನಿರ್ಮಾಣ ಕೆಲಸ ನಡೆದಿದೆ  ಎಂದು ಈಶಾನ್ಯ ಸಾರಿಗೆ ಸಂಸ್ಥೆಯ ರಾಯಚೂರು ವಿಭಾಗದ ವಿಭಾಗೀಯ ಅಧಿಕಾರಿ ವೆಂಕಟೇಶ್ವರರೆಡ್ಡಿ ಪ್ರಜಾವಾಣಿಗೆ ತಿಳಿಸಿದರು.

ಪ್ರಯಾಣಿಕರಿಗೆ ನಿಲ್ದಾಣದ ಆವರಣದಲ್ಲಿ ಬೇರೆ ಕಡೆ ಶೌಚಾಲಯ ವ್ಯವಸ್ಥೆ ಇದೆ. ಕುಡಿವ ನೀರು ವ್ಯವಸ್ಥೆ, ಆಸನ, ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ನಡೆಯುತ್ತಿದೆ. ನಗರಸಭೆ ನೀರು ಪೂರೈಸುವ ಮುಖ್ಯ ಕೊಳವೆಯಿಂದ ಪೈಪ್ ಅಳವಡಿಸಿ ಬಸ್ ನಿಲ್ದಾಣಕ್ಕೆ ನೀರು ಪೂರೈಕೆ ವ್ಯವಸ್ಥೆ ಮಾಡಲು ನಗರಸಭೆಗೆ ಪತ್ರ ಬರೆದು ಕೋರಲಾಗಿದೆ. ಇನ್ನೊಂದು ತಿಂಗಳಲ್ಲಿ ಈ ಎಲ್ಲ ಕೆಲಸ ಪೂರ್ಣವಾಗಲಿದೆ. ಬಳಿಕ ಉದ್ಘಾಟನೆ ಮಾಡಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT