ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರ ಪತನಕ್ಕೆ ಕ್ಷಣಗಣನೆ

Last Updated 26 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ದೇಶದಲ್ಲಿ ಕಾಂಗ್ರೆಸ್ಸೇತರ ಪಕ್ಷಗಳು ಒಗ್ಗೂಡುವ ಲಕ್ಷಣ ಕಾಣುತ್ತಿದ್ದು, ಕೇಂದ್ರ ಸರ್ಕಾರದ ಪತನಕ್ಕೆ ಕ್ಷಣಗಣನೆ ಆರಂಭವಾಗಿದೆ~ ಎಂದು ಸಂಸದ ಅನಂತಕುಮಾರ್ ಹೇಳಿದರು.

`ಜನಮನ~ ಸಂಸ್ಥೆಯು ಜಯನಗರದಲ್ಲಿರುವ ಎನ್‌ಎಂಕೆಆರ್‌ವಿ ಮಹಿಳಾ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

`ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರ ಜನ ಚೇತನ ಯಾತ್ರೆಗೆ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ಕೇವಲ ಆರಂಭ ಮಾತ್ರ. ದುರಾಡಳಿತ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ತಾವು ಸದಾ ಸಿದ್ಧ ಎಂಬ ಸಂದೇಶವನ್ನು ಅಡ್ವಾಣಿ ನೀಡಿದ್ದಾರೆ~ ಎಂದರು.

`ಉತ್ತಮ ಆಡಳಿತ ಹಾಗೂ ಭ್ರಷ್ಟಾಚಾರ ಒಟ್ಟಿಗೆ ಇರಲು ಸಾಧ್ಯವಿಲ್ಲ. ವಂಶಾಡಳಿತ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಕೂಡ ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಅಡ್ವಾಣಿ ಸಾರಿದ್ದಾರೆ. ಅವರ ಈ ಯಾತ್ರೆ ಎರಡನೇ ಸಂಪೂರ್ಣ ಕ್ರಾಂತಿಗೆ ನಾಂದಿಯಾಗಿದೆ~ ಎಂದು ಬಣ್ಣಿಸಿದರು.

`ಯುಪಿಎ ಸರ್ಕಾರವೆಂದರೆ ಹಗರಣಗಳ ಸರ್ಕಾರ ಎಂಬಂತಾಗಿದೆ. ಸರಣಿ ಹಗರಣ, ಭ್ರಷ್ಟಾಚಾರ, ಬೆಲೆ ಏರಿಕೆ, ವಿದೇಶಗಳಲ್ಲಿರುವ ಕಪ್ಪು ಹಣವನ್ನು ರಾಷ್ಟ್ರಕ್ಕೆ ತರುವಲ್ಲಿ ವಿಫಲವಾಗಿರುವುದು... ಇವೆಲ್ಲದರ ಪರಿಣಾಮವಾಗಿ ಸೃಷ್ಟಿಯಾಗಿರುವ ಆತಂಕವಾದದಿಂದ ಜನತೆ ತೊಂದರೆ ಅನುಭವಿಸುವಂತಾಗಿದೆ. ಇದರ ವಿರುದ್ಧ ಹೋರಾಟವನ್ನು ತೀವ್ರಗೊಳಿಸಲಾಗುವುದು~ ಎಂದರು.

`ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ ನೀಡಿರುವ ಕೇಂದ್ರ ಸರ್ಕಾರದ ನಿರ್ಧಾರ ಖಂಡನೀಯ. ದೇಶದಲ್ಲಿ ಸುಮಾರು 8 ಕೋಟಿ ವ್ಯಾಪಾರಿಗಳಿದ್ದು, ಈ ಕ್ಷೇತ್ರವನ್ನು 25 ಕೋಟಿಗೂ ಹೆಚ್ಚು ಜನ ಅವಲಂಬಿಸಿದ್ದಾರೆ. ಕೇಂದ್ರದ ಏಕಪಕ್ಷೀಯ ನಿರ್ಧಾರದಿಂದ ಈ ಜನತೆ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಇದರ ವಿರುದ್ಧ ಉಗ್ರ ಹೋರಾಡಲಾಗುವುದು~ ಎಂದರು.

ಜನಚೇತನ ಯಾತ್ರೆ ಸಂಚಾಲರಾಗಿದ್ದ ಅನಂತ ಕುಮಾರ್ ಅನುಭವ ಹಂಚಿಕೊಂಡರು. ಯಾತ್ರೆಯಲ್ಲಿ ಪಾಲ್ಗೊಂಡಿದ್ದ ರಾಘವೇಂದ್ರ, ಜಗದೀಶ್ ಹಿರೇಮನಿ, ಮುನಿರಾಜು, ತೇಜಸ್ವಿ, ಮಧುಕೇಶ್ವರ ದೇಸಾಯಿ ಅವರನ್ನು ಅಭಿನಂದಿಸಲಾಯಿತು.

ಶಾಸಕರಾದ ಡಾ. ಸಿ.  ಎನ್.ಅಶ್ವತ್ಥನಾರಾಯಣ, ಎಲ್.ಎ. ರವಿಸುಬ್ರಹ್ಮಣ್ಯ, ಅಶ್ವತ್ಥನಾರಾಯಣ, ಉಪಮೇಯರ್ ಎಸ್.ಹರೀಶ್, ಬಿಜೆಪಿ ನಗರ ಘಟಕ ಅಧ್ಯಕ್ಷ ಸುಬ್ಬನರಸಿಂಹ, ಜನಮನ ಸಂಸ್ಥೆಯ ಅಧ್ಯಕ್ಷ ಚೇತನ್, ಪ್ರಧಾನ ಕಾರ್ಯದರ್ಶಿ ಎ.ಎಚ್. ಆನಂದ್ ಇನ್ನಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT