ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತರಾಟೆ

Last Updated 22 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ:  ಹುಲಿ ಅಭಯಾರಣ್ಯಗಳಲ್ಲಿ ಪ್ರವಾಸಿ ಚಟುವಟಿಕೆಗಳನ್ನು ನಿಷೇಧಿಸಿ ಈ ಹಿಂದೆ ಹೊರಡಿಸಿದ್ದ ತನ್ನ ಮಧ್ಯಂತರ ಆದೇಶವನ್ನು ಸುಪ್ರೀಂಕೋರ್ಟ್ ಬುಧವಾರ ಒಂದು ವಾರ ವಿಸ್ತರಿಸಿದೆ.

ದೇಶದ ಅಭಯಾರಣ್ಯಗಳಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದ್ದರೂ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿ, ಮುಂದಿನ ವಿಚಾರಣೆಯನ್ನು ಈ ತಿಂಗಳ 29ಕ್ಕೆ ಮುಂದೂಡಿದೆ.

ಪ್ರವಾಸಿ ಚಟುವಟಿಕೆಗಳನ್ನು ನಿಷೇಧಿಸಿರುವುದರಿಂದ ಸ್ಥಳೀಯರ ಜೀವನೋಪಾಯಕ್ಕೆ ತೊಂದರೆಯಾಗಿದೆ. ರಾಷ್ಟ್ರೀಯ ಪರಂಪರೆಯ ಪ್ರತೀಕವಾಗಿರುವ ಹುಲಿ ನೋಡಬಯಸುವ ಪ್ರವಾಸಿಗರು ಇದರಿಂದ ವಂಚಿತರಾಗಿದ್ದಾರೆ. ಆದಕಾರಣ ಹುಲಿ ಸಂರಕ್ಷಣೆಗೆ ಸಂಬಂಧಿಸಿದ ಮಾರ್ಗದರ್ಶಿ ಸೂತ್ರಗಳನ್ನು ಪರಾಮರ್ಶಿಸಬೇಕು ಎಂದು ಕೇಂದ್ರ  ಸರ್ಕಾರ ಮಂಗಳವಾರ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿಕೊಂಡಿತ್ತು. ಹುಲಿ ಅಭಯಾರಣ್ಯಗಳಲ್ಲಿ ಪ್ರವಾಸಿ ಚಟುವಟಿಕೆಗಳನ್ನು ನಿಷೇಧಿಸಿ ಜುಲೈ 24ರಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು.

`ಹುಲಿ ಸಂರಕ್ಷಣೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರಮಾಣ ಮಾಡಿರುವುದೇಕೆ. ಕೋರ್ಟ್‌ಗೆ ಅರ್ಜಿ ಸಲ್ಲಿಸುವುದನ್ನು ಬಿಟ್ಟರೆ ಮತ್ತಿನ್ನೇನೂ ಮಾಡಿಲ್ಲ. ಪ್ರವಾಸಿ ಚಟುವಟಿಕೆಗಳನ್ನು ನಿಷೇಧಿಸಬೇಕೆಂದು ಈ ಹಿಂದೆ ಶಿಫಾರಸು ಮಾಡಿದ್ದೇಕೆ~ ಎಂದು ಕೇಂದ್ರ ಸರ್ಕಾರವನ್ನು ನ್ಯಾಯಮೂರ್ತಿಗಳಾದ ಎ.ಕೆ. ಪಟ್ನಾಯಕ್ ಮತ್ತು ಸ್ವತಂತ್ರಕುಮಾರ ಪ್ರಶ್ನಿಸಿದರು.

`ಹುಲಿಗಳ ರಕ್ಷಣೆಗೆ ಏನು ಮಾಡಲಾಗಿದೆ. 13 ಸಾವಿರ ಇದ್ದ ಹುಲಿಗಳ ಸಂಖ್ಯೆ 1,200ಕ್ಕೆ ಕುಸಿದಿದೆ. ಹುಲಿಗಳ ಸಂರಕ್ಷಣೆಗಿಂತ ವಾಣಿಜ್ಯ ಚಟುವಟಿಕೆಗಳ ಬಗ್ಗೆ ಸರ್ಕಾರ ಹೆಚ್ಚು ಚಿಂತಾಕ್ರಾಂತರಾದಂತೆ ಕಂಡು ಬರುತ್ತಿದೆ~ ಎಂದೂ ಅವರು ತರಾಟೆಗೆ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT