ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರದ ಪಾತ್ರವಿಲ್ಲ: ರಾಜನಾಥ್‌

ಪ್ರಧಾನಿ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಕೇರಳ ಮುಖ್ಯಮಂತ್ರಿ ಚಾಂಡಿಗೆ ಸೂಚನೆ
Last Updated 14 ಡಿಸೆಂಬರ್ 2015, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಸಮಾರಂಭದಲ್ಲಿ ಕೇರಳ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಅವರಿಗೆ ‘ನಿಷೇಧ’ ಹೇರಿರುವ ಘಟನೆ ಲೋಕಸಭೆಯಲ್ಲಿ ಸೋಮವಾರ ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರ ನಡುವೆ ಭಾರಿ ವಾಗ್ವಾದಕ್ಕೆ ಕಾರಣವಾಯಿತು.

ಪ್ರಧಾನ ಮಂತ್ರಿಯ ಸಾಂವಿಧಾನಿಕ ಸ್ಥಾನವನ್ನು ‘ರಾಜಕೀಯ ಸೇಡು’ ತೀರಿಸಿಕೊಳ್ಳಲು ಬಳಸಲಾಗುತ್ತಿದೆ ಎಂದು  ಕಾಂಗ್ರೆಸ್‌ ಆರೋಪಿಸಿದೆ. ಆದರೆ  ಈ ಆರೋಪವನ್ನು ಸರ್ಕಾರ ಅಲ್ಲಗಳೆದಿದೆ. ‘ಇದು ಆಧಾರರಹಿತ ಆರೋಪ’ ಎಂದು ಗೃಹ ಸಚಿವ ರಾಜನಾಥ್‌ ಸಿಂಗ್‌ ಲೋಕಸಭೆಯಲ್ಲಿ ತಿಳಿಸಿದರು. ‘ಅತಿಥಿಗಳ ಪಟ್ಟಿಯಿಂದ ಚಾಂಡಿ ಹೆಸರನ್ನು ಕೈಬಿಡುವ ನಿರ್ಧಾರವನ್ನು ಸಂಘಟಕರಾದ ಶ್ರೀ ನಾರಾಯಣ ಧರ್ಮಪರಿಪಾಲನಾ ಯೋಗಂ (ಎಸ್‌ಎನ್‌ಡಿಪಿ) ಕೈಗೊಂಡಿದೆ. ಸರ್ಕಾರದ ಯಾವುದೇ ಪಾತ್ರ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಈಳವ ಸಮುದಾಯದ ಎಸ್‌ಎನ್‌ಡಿಪಿ ಸಂಸ್ಥೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಾರದು ಎಂದು ಚಾಂಡಿ ಅವರಿಗೆ ಸೂಚಿಸಲಾಗಿತ್ತು. ಇದು ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ ಸದಸ್ಯರು ಗದ್ದಲ ಎಬ್ಬಿಸಿದ ಕಾರಣ ಸ್ಪೀಕರ್‌ ಕಲಾಪವನ್ನು ಕೆಲ ಸಮಯ ಮುಂದೂಡಿದರು. ಕಾಂಗ್ರೆಸ್‌ ಸದಸ್ಯರು ಬಳಿಕ ಕಲಾಪ ಬಹಿಷ್ಕರಿಸಿ ಸದನದಿಂದ ಹೊರನಡೆದರು.

ಕಾಂಗ್ರೆಸ್‌ನ ಕೆ.ಸಿ. ವೇಣುಗೋಪಾಲ್‌ ಅವರು ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದರು. ‘ಈ ವಿವಾದ ಕೇರಳದ ಜನರ ಮತ್ತು ಇಡೀ ದೇಶದ ಜನರ ಭಾವನೆಗೆ ಧಕ್ಕೆ ಉಂಟುಮಾಡಿದೆ. ಕೇಂದ್ರ ಸರ್ಕಾರದ ಹುನ್ನಾರದಿಂದ ಚಾಂಡಿ ಅವರನ್ನು ಕಾರ್ಯಕ್ರಮದಿಂದ ದೂರ ಇಡಲಾಗಿದೆ. ಕೇರಳದ ಜನರಿಗೆ ಆಘಾತವಾಗಿದೆ’ ಎಂದು ಅವರು ಹೇಳಿದರು.

‘ಪ್ರಧಾನ ಮಂತ್ರಿ ಕಚೇರಿ ಅಥವಾ ಪ್ರಧಾನಿಯವರ ಕೈವಾಡ ಇದರ ಹಿಂದೆ ಇದೆ. ಮುಖ್ಯಮಂತ್ರಿಗೆ ಅವಮಾನ ಮಾಡಿರುವುದು ಇಡೀ ಕೇರಳಕ್ಕೆ ಅವಮಾನ ಮಾಡಿದಂತೆ. ಬಿಜೆಪಿ ರಾಜಕೀಯ ಸೇಡು ತೀರಿಸಿಕೊಳ್ಳುತ್ತಿದೆ’ ಎಂದು ಆರೋಪಿಸಿದರು. ಕೇರಳ ಸರ್ಕಾರದ ಶಿಷ್ಟಾಚಾರ ವಿಭಾಗ ಪ್ರಧಾನ ಮಂತ್ರಿ ಕಚೇರಿಗೆ ಕಳುಹಿಸಿದ ಕಾರ್ಯಕ್ರಮದ ಪಟ್ಟಿಯಲ್ಲಿ ಚಾಂಡಿ ಹೆಸರು ಇತ್ತು ಎಂಬುದನ್ನು ವೇಣುಗೋಪಾಲ್‌ ತೋರಿಸಿದರು.

ಕಾಂಗ್ರೆಸ್‌ನ ಆರೋಪವನ್ನು ತಳ್ಳಿಹಾಕಿದ ರಾಜನಾಥ್‌ ಸಿಂಗ್‌, ‘ಎಸ್‌ಎನ್‌ಡಿಪಿ ಆರಂಭದಲ್ಲಿ ಚಾಂಡಿ ಅವರನ್ನು ಆಹ್ವಾನಿಸಿದ್ದು ನಿಜ. ಆ ಬಳಿಕ ಕಾರ್ಯಕ್ರಮ ಪಟ್ಟಿಯಿಂದ ಅವರ ಹೆಸರನ್ನು ಕೈಬಿಡಲು ನಿರ್ಧರಿಸಿತು’ ಎಂದರು. ‘ಯಾರನ್ನು ಆಹ್ವಾನಿಸಬೇಕು, ಆಹ್ವಾನಿಸಬಾರದು ಎಂಬುದು ಎಸ್‌ಎನ್‌ಡಿಪಿಯ ನಿರ್ಧಾರ. ಸಂಸ್ಥೆಯಲ್ಲಿನ ಆಂತರಿಕ ವಿವಾದದಿಂದ ಚಾಂಡಿ ಹೆಸರನ್ನು ಕೈಬಿಡುವ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ಸಂಸದೀಯ ವ್ಯವಹಾರಗಳ ರಾಜ್ಯ ಖಾತೆ ಸಚಿವ ರಾಜೀವ್‌ ಪ್ರತಾಪ್‌ ರೂಡಿ ಅವರೂ ವೇಣುಗೋಪಾಲ್‌ ಮಾಡಿದ ಆರೋಪವನ್ನು ಅಲ್ಲಗಳೆದರು. ‘ಪ್ರಧಾನಿ ಈ ಸಮಾರಂಭಕ್ಕೆ ಹೋಗಬಾರದು’ ಎಂದು ಟಿಎಂಸಿಯ ಸೌಗತ ರಾಯ್‌ ಆಗ್ರಹಿಸಿದರು. ಎನ್‌ಸಿಪಿ ಮತ್ತು ಆರ್‌ಜೆಡಿ ಸದಸ್ಯರೂ ಕಲಾಪ ಬಹಿಷ್ಕರಿಸಿದರು.
*
‘ಕೇರಳದ ಜನರಿಗೆ ಅವಮಾನ’
ತಿರುವನಂತಪುರ (ಪಿಟಿಐ):
‘ಮಾಜಿ ಮುಖ್ಯಮಂತ್ರಿ ಆರ್‌. ಶಂಕರ್‌ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡದೇ ಇರುವುದು ಕೇರಳದ ಜನರಿಗೆ ಮಾಡಿದ ಅವಮಾನ’ ಎಂದು ಉಮ್ಮನ್‌ ಚಾಂಡಿ ಹೇಳಿದ್ದಾರೆ.

‘ಪ್ರಧಾನಿ ಹುದ್ದೆ ಏರಿದ ಬಳಿಕ ನರೇಂದ್ರ ಮೋದಿ ಇದೇ ಮೊದಲ ಬಾರಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಆರ್‌. ಶಂಕರ್‌ ಅವರು ಮಾಜಿ ಮುಖ್ಯಮಂತ್ರಿ ಮಾತ್ರವಲ್ಲದೆ, ಕಾಂಗ್ರೆಸ್‌ನ ನಾಯಕರೂ ಆಗಿದ್ದರು. ಶಿಷ್ಟಾಚಾರದ ಪ್ರಕಾರ ಕೇರಳ ಮುಖ್ಯಮಂತ್ರಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೇಬೇಕಿತ್ತು’ ಎಂದು ಅವರು ತಮ್ಮ ‘ಫೇಸ್‌ಬುಕ್‌’ ಪುಟದಲ್ಲಿ ಬರೆದುಕೊಂಡಿದ್ದಾರೆ.
*
ಏನಿದು ವಿವಾದ?
ಕೇರಳದ ಮಾಜಿ ಮುಖ್ಯಮಂತ್ರಿ ಆರ್‌. ಶಂಕರ್‌ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮ ಕೊಲ್ಲಂನಲ್ಲಿ ಮಂಗಳವಾರ ನಡೆಯಲಿದ್ದು, ಪ್ರಧಾನಿ ಮೋದಿ ಅವರು ಪಾಲ್ಗೊಳ್ಳುತ್ತಿದ್ದಾರೆ. ಪೂರ್ವನಿಗದಿಯಂತೆ ಉಮ್ಮನ್‌ ಚಾಂಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅವರ ಹೆಸರನ್ನು ಕೈಬಿಡಲಾ ಗಿತ್ತಲ್ಲದೆ, ಕಾರ್ಯಕ್ರಮದಿಂದ ದೂರ ಉಳಿಯುವಂತೆ ಸಂಘಟಕರು ಸೂಚಿಸಿದ್ದರು.

‘ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕೆ ಕೆಲವರ ವಿರೋಧವಿದೆ. ಆದ್ದರಿಂದ ನೀವು ದೂರ ಉಳಿಯಬೇಕು’ ಎಂದು ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ವೆಳ್ಳಾಪಳ್ಳಿ ನಟೇಶನ್‌ ಅವರು ಮುಖ್ಯಮಂತ್ರಿಗೆ ದೂರವಾಣಿ ಕರೆ ಮಾಡಿ ಕೋರಿದ್ದರು. ‘ಸಂಘಟಕರ ಕೋರಿಕೆಯಂತೆ ಸಮಾರಂಭದಲ್ಲಿ ಭಾಗವಹಿಸದಿರಲು  ನಿರ್ಧರಿಸಿದ್ದೇನೆ. ಇದರಿಂದ ನನಗೆ ಅತೀವ ನೋವುಂಟಾಗಿದೆ’ ಎಂದು ಚಾಂಡಿ ಶನಿವಾರ ಮಾಧ್ಯಮದವರಿಗೆ ತಿಳಿಸಿದ್ದರು.

‘ಮುಖ್ಯಮಂತ್ರಿ ಅವರನ್ನು ಆಹ್ವಾನಿಸದೇ ಇರುವುದರ ಸಂಪೂರ್ಣ ಜವಾಬ್ದಾರಿಯನ್ನು ನಾನು ಹೊತ್ತುಕೊಳ್ಳುವೆ. ಚಾಂಡಿ ಅವರನ್ನು ತಡೆಯುವಂತೆ ಬಿಜೆಪಿ ಅಥವಾ ಇತರ ಯಾರಿಂದಲೂ ನನಗೆ ಒತ್ತಡ ಬಂದಿರಲಿಲ್ಲ’ ಎಂದು ನಟೇಶನ್‌ ಸೋಮವಾರ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT