ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರದ ವಿರುದ್ಧ ಟೀಕೆ

ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕಾರಿಣಿ
Last Updated 5 ಡಿಸೆಂಬರ್ 2013, 7:52 IST
ಅಕ್ಷರ ಗಾತ್ರ

ಚಾಮರಾಜನಗರ: ‘ದೇಶದ ಏಕತೆ ಹಾಗೂ ಭದ್ರತೆ ಕಾಪಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ’ ಎಂದು ರಾಷ್ಟ್ರೀಯ ಬಿಜೆಪಿ ಮಹಿಳಾ ಮೋರ್ಚಾದ  ಕಾರ್ಯದರ್ಶಿ ಜ್ಯೋತಿ ಪುತ್ತೂರಾಯ್ ಟೀಕಿಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಉದ್ಘಾಟಿಸಿ ಅವರು ಮಾತನಾಡಿದರು.

ಯುಪಿಎ ಸರ್ಕಾರದ ಹಗರಣಗಳ ಬಗ್ಗೆ ಜನರಿಗೆ ತಿಳಿದಿದೆ. ಸರ್ಕಾರ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಮಧ್ಯಮ ಹಾಗೂ ಬಡವರ ವಿರೋಧಿಯಾಗಿದೆ. ಈ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸ ಬೇಕು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ಶ್ರಮಿಸಬೇಕು ಎಂದು ಹೇಳಿದರು.

ಪಾಕಿಸ್ತಾನ ಹಾಗೂ ಚೀನಾದ ಗಡಿಯಲ್ಲಿ ಭಾರತೀಯ ಸೈನಿಕರ  ಮರಣಹೋಮ ನಡೆಯುತ್ತಿದೆ. ಈ ಬಗ್ಗೆ ಯುಪಿಎ ಸರ್ಕಾರ ಚಕಾರವೆತ್ತಿಲ್ಲ. ದೇಶದ ಆಂತರಿಕ ಭದ್ರತೆಗೆ ಸವಾಲಾಗಿರುವ ಭಯೋತ್ಪಾದನೆ, ನಕ್ಸಲ್ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ ಎಂದು ದೂರಿದರು.

ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ದೇಶದ ಗಮನ ಸೆಳೆಯಿತು. ಗ್ರಾಮೀಣ ಪ್ರದೇಶದಲ್ಲೂ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ ಹೆಚ್ಚಾಗುತ್ತಿವೆ. ಇದನ್ನು ತಡೆಗ ಟ್ಟುವಲ್ಲಿ ವಿಫಲವಾಗಿರುವ ಸರ್ಕಾರಕ್ಕೆ ಜನರು ತಕ್ಕಪಾಠ ಕಲಿಸಬೇಕಿದೆ ಎಂದ ಅವರು, ಅಭಿವೃದ್ಧಿ ಪರವಾಗಿ ಚಿಂತನೆ ಮಾಡುವ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡುವ ಸಮಯ ಬಂದಿದೆ. ಈ ಹಿನ್ನೆಲೆಯಲ್ಲಿ ಮೋರ್ಚಾದ ಕಾರ್ಯಕರ್ತರು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಶ್ಯಾಮಲಾ ಎಸ್. ಕುಂದರ್, ಪಕ್ಷದ ಜಿಲ್ಲಾ ಅಧ್ಯಕ್ಷ ಕೆ.ಎಸ್. ನಾಗರಾಜಪ್ಪ ಮಾತನಾಡಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಗೀತಾ ಶಶಿಕುಮಾರ್, ವಿದ್ಯಾ ಅರಸು, ಭಾರತಿ ವೆಂಕಟೇಶ್, ಮಹಿಳಾ ಮೋರ್ಚಾದ ಜಿಲ್ಲಾ ಅಧ್ಯಕ್ಷೆ ಜಯಶೀಲಾ ರಾಜ ಶೇಖರ್, ಶಿವಮ್ಮ, ಸುಧಾಮಲ್ಲಣ್ಣ, ಆರ್. ಸುಂದರ್, ಎಸ್. ಬಾಲ ಸುಬ್ರಮಣ್ಯ, ರ. ನಾರಾಯಣಗೌಡ, ಮಂಗಳಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT