ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸಾಹಿತ್ಯ ಅಕಾಡೆಮಿ ವಿನೂತನ ಕಾರ್ಯಕ್ರಮ 15 ರಂದು

Last Updated 14 ಅಕ್ಟೋಬರ್ 2011, 8:05 IST
ಅಕ್ಷರ ಗಾತ್ರ

ಧಾರವಾಡ: `ಕೇಂದ್ರ ಸಾಹಿತ್ಯ ಅಕಾಡೆಮಿ ಅ. 15 ಹಾಗೂ 16 ರಂದು ಇಲ್ಲಿನ ಕನ್ನಡ ಕುಲಪುರೋಹಿತ ಆಲೂರ ವೆಂಕಟರಾವ್ ಸಾಂಸ್ಕೃತಿಕ ಸಭಾಭವನದಲ್ಲಿ ವಿನೂತನ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ~ ಎಂದು ಅಕಾಡೆಮಿ ಸದಸ್ಯ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 15 ರಂದು ಸಂಜೆ 6ಕ್ಕೆ ಕನ್ನಡದ ಖ್ಯಾತ ಲೇಖಕಿ ಸಾರಾ ಅಬೂಬಕರ್ ಅವರು ತಮ್ಮ ಜೀವನ ಹಾಗೂ ಸಾಹಿತ್ಯ ಕುರಿತ ವಿಚಾರಗಳನ್ನು ಸಾಹಿತ್ಯಾಸಕ್ತರೊಂದಿಗೆ ಹಂಚಿಕೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಅವರನ್ನು ಕುರಿತ 16 ಪುಟಗಳ ಕಿರು ಪುಸ್ತಕ ಬಿಡುಗಡೆ ಆಗಲಿದೆ ಎಂದರು.

16 ರಂದು ಬೆಳಿಗ್ಗೆ 10.30ಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಪುತ್ರ ಹಾಗೂ ನಿವೃತ್ತ ಪ್ರಾಧ್ಯಾಪಕ ನಿ.ಉಮಾಕಾಂತ ಅವರು ವ್ಯಕ್ತಿ ಮತ್ತು ಸಾಹಿತ್ಯ ವಿಷಯದ ಮೇಲೆ ಬೆಂದ್ರೆಯವರ ಕುರಿತಾಗಿ ಮಾತನಾಡಲಿದ್ದಾರೆ. ಸಾಹಿತ್ಯ ರಚಿಸಿದ ವ್ಯಕ್ತಿಯಿಂದ ಸಾಹಿತ್ಯ ಕುರಿತು ಮಾತನಾಡಿಸುವ ಕಾರ್ಯಕ್ರಮ ಇದೇ ಪ್ರಥಮ.

ಉಮಾಕಾಂತ ಅವರು ಬೇಂದ್ರೆಯವರ ಗಣಿತ ವಿಷಯದ ಕುರಿತು ಅಧ್ಯಯನ ಮಾತ್ರವಲ್ಲದೇ, ಕನ್ನಡ, ತೆಲುಗು, ಮಲಿಯಾಳಂ, ಹಿಂದಿ ಲಿಪಿ ಸಹ ಅಧ್ಯಯನ ಮಾಡಿದ್ದಾರೆ ಎಂದು ತಿಳಿಸಿದರು.

ವಿಮರ್ಶಕರೊಂದಿಗೆ ಒಂದು ಸಂಜೆ: ಅಂದು ಸಂಜೆ 6ಕ್ಕೆ ವಿಮರ್ಶಕರೊಂದಿಗೆ ಒಂದು ಸಂಜೆ ಕಾರ್ಯಕ್ರಮ ನಡೆಯಲಿದೆ. ಖ್ಯಾತ ವಿಮರ್ಶಕ ಡಾ. ಜಿ.ಎಸ್.ಆಮೂರ ಮಾತನಾಡುವರು. ಹೆಸರಾಂತ ವಿಮರ್ಶಕರು ಭಾಗವಹಿಸುವರು. ಎರಡು ದಿನದ ಈ ಕಾರ್ಯಕ್ರಮದಲ್ಲಿ ರವೀಂದ್ರನಾಥ ಟ್ಯಾಗೋರ್ ನೆನಪಿಗಾಗಿ ಪುಸ್ತಕ ಪ್ರದರ್ಶನ ಹಾಗೂ ರಿಯಾಯಿತಿ ದರದಲ್ಲಿ ಮಾರಾಟ ವ್ಯವಸ್ಥೆ ಏರ್ಪಡಿಸಲಾಗಿದೆ ಎಂದರು.

ವಿಶ್ರಾಂತ ಕುಲಪತಿ ಡಾ. ಎಂ.ಎಂ.ಕಲಬುರ್ಗಿ ಅವರಿಗೆ ನೃಪತುಂಗ ಪ್ರಶಸ್ತಿ ಬಂದಿರುವುದಕ್ಕೆ ಇದೇ ಸಂದರ್ಭದಲ್ಲಿ ಪಟ್ಟಣಶೆಟ್ಟಿ ಅಭಿನಂದನೆ ಸಲ್ಲಿಸಿದರು. ಡಾ. ಸುಕನ್ಯಾ ಮಾರುತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಡಿ.ಹಿರೇಗೌಡರ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT