ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರಕ್ಕೆ ಸರ್ವಪಕ್ಷ ನಿಯೋಗ

ಕಾವೇರಿ: ನ್ಯಾಯಮಂಡಳಿ ಐತೀರ್ಪು ಪ್ರಕಟಣೆ
Last Updated 12 ಡಿಸೆಂಬರ್ 2012, 11:13 IST
ಅಕ್ಷರ ಗಾತ್ರ

ಸುವರ್ಣ ವಿಧಾನಸೌಧ (ಬೆಳಗಾವಿ): ಕಾವೇರಿ ನ್ಯಾಯಮಂಡಳಿಯ ಐತೀರ್ಪನ್ನು ಅಧಿಸೂಚನೆಯಲ್ಲಿ ಪ್ರಕಟಿಸದಂತೆ ಪ್ರಧಾನಿ ಮೇಲೆ ಒತ್ತಡ ಹೇರಲು ಶೀಘ್ರದಲ್ಲೇ ದೆಹಲಿಗೆ ಸರ್ವಪಕ್ಷಗಳ ನಿಯೋಗ ಕರೆದೊಯ್ಯಲಾಗುವುದು ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿಧಾನಸಭೆಯಲ್ಲಿ ಪ್ರಕಟಿಸಿದರು.

ಮಂಗಳವಾರ ಸದನದ ಕಲಾಪ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಹಲವು ಅರ್ಜಿಗಳು ಇನ್ನೂ ಇತ್ಯರ್ಥಕ್ಕೆ ಬಾಕಿ ಇವೆ. ಈ ಸಂದರ್ಭದಲ್ಲಿ ನ್ಯಾಯಮಂಡಳಿಯ ಐತೀರ್ಪನ್ನು ಅಧಿಸೂಚನೆಯಲ್ಲಿ ಪ್ರಕಟಿಸಿದರೆ ರಾಜ್ಯಕ್ಕೆ ಹಿನ್ನಡೆ ಆಗುತ್ತದೆ. ಈ ಪ್ರಕ್ರಿಯೆ ನಡೆಯದಂತೆ ಕೇಂದ್ರದ ಮೇಲೆ ಒತ್ತಡ ತರುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.

ಆಗ ಹೇಳಿಕೆ ನೀಡಿದ ಶೆಟ್ಟರ್, `ನ್ಯಾಯಮಂಡಳಿಯ ಐತೀರ್ಪಿನ ಅಧಿಸೂಚನೆ ಹೊರಡಿಸುವ ಮುನ್ನ ರಾಜ್ಯ ಸರ್ಕಾರದ ಜೊತೆ ಸಮಾಲೋಚಿಸುವಂತೆ ಪ್ರಧಾನಿಗೆ ಪತ್ರ ಬರೆಯಲಾಗುವುದು. ಎರಡು-ಮೂರು ದಿನದಲ್ಲಿ ವಿಧಾನಮಂಡಲದ ಉಭಯ ಸದನಗಳ ಎಲ್ಲ ಪಕ್ಷಗಳ ನಾಯಕರ ಸಭೆ ಕರೆದು ಈ ಕುರಿತು ಚರ್ಚೆ ನಡೆಸುತ್ತೇನೆ. ನಂತರ ಎಲ್ಲ ಪಕ್ಷಗಳ ನಾಯಕರ ನಿಯೋಗವನ್ನು ದೆಹಲಿಗೆ ಕರೆದೊಯ್ದು ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಅಧಿಸೂಚನೆ ಪ್ರಕಟಿಸದಂತೆ ಮನವಿ ಸಲ್ಲಿಸಲಾಗುವುದು' ಎಂದು ತಿಳಿಸಿದರು.

ವಿಷಯ ಪ್ರಸ್ತಾಪಿಸಿ ಮಾತನಾಡಿದ ಸಿದ್ದರಾಮಯ್ಯ, `ಕಾವೇರಿ ನದಿ ನೀರು ಬಿಡುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯವರು ಸದನದಲ್ಲಿ ಹೇಳಿಕೆ ನೀಡಿದ ನಂತರ ಹಲವು ಬೆಳವಣಿಗೆಗಳು ನಡೆದಿವೆ. ಕಾವೇರಿ ಉಸ್ತುವಾರಿ ಸಮಿತಿ (ಸಿಎಂಸಿ) ಸಭೆ ನಡೆದಿದೆ. ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆಯೂ ನಡೆದಿದೆ. ಈ ಅವಧಿಯಲ್ಲಿ ಏನು ನಡೆದಿದೆ ಎಂಬುದನ್ನು ಸರ್ಕಾರ ಸದನಕ್ಕೆ ತಿಳಿಸಬೇಕು' ಎಂದು ಹೇಳಿದರು.

ಆಗ ಉತ್ತರ ನೀಡಿದ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, `ಡಿಸೆಂಬರ್ ತಿಂಗಳಿನಲ್ಲಿ 12 ಟಿಎಂಸಿ ಅಡಿ ನೀರು ಬಿಡುವಂತೆ ಕಾವೇರಿ ಉಸ್ತುವಾರಿ ಸಮಿತಿ ನೀಡಿರುವ ಆದೇಶವನ್ನು ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಈ ತಿಂಗಳಲ್ಲಿ ಕನಿಷ್ಠ 30 ಟಿಎಂಸಿ ಅಡಿ ನೀರು ಬಿಡಲು ಆದೇಶಿಸುವಂತೆ ಕೋರಿದೆ. ರಾಜ್ಯ ಕೂಡ ಸಿಎಂಸಿ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಆದ್ದರಿಂದ ಈ ಕುರಿತು ಯಾವುದೇ ಆದೇಶ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ' ಎಂದು ತಿಳಿಸಿದರು.

`ಸಿಎಂಸಿ ಆದೇಶ ರದ್ದು ಮಾಡುವಂತೆ ಕಾವೇರಿ ನದಿ ಪ್ರಾಧಿಕಾರಕ್ಕೆ ಮನವಿ ಮಾಡಲಾಗಿದೆ. ರಾಜ್ಯದ ಸಿವಿಲ್ ಅರ್ಜಿಗಳು, ಮಧ್ಯಂತರ ಅರ್ಜಿಗಳು ಬಾಕಿ ಇರುವ ಸಂದರ್ಭದಲ್ಲಿ ನ್ಯಾಯಮಂಡಳಿಯ ಐತೀರ್ಪನ್ನು ಅಧಿಸೂಚನೆಯಲ್ಲಿ ಪ್ರಕಟಿಸದಂತೆ ಕೋರಲಾಗಿದೆ' ಎಂದರು. ಬಳಿಕ ಮುಖ್ಯಮಂತ್ರಿಯವರು ಸರ್ವಪಕ್ಷ ನಿಯೋಗ ಕರೆದೊಯ್ಯುವ ನಿರ್ಧಾರ ಪ್ರಕಟಿಸಿದರು.

ಈ ಮಧ್ಯೆಯೇ ಎದ್ದುನಿಂತ ಜೆಡಿಎಸ್‌ನ ಎಚ್.ಸಿ. ಬಾಲಕೃಷ್ಣ, `ಪ್ರಧಾನಿಯವರ ಅಧ್ಯಕ್ಷತೆಯ ಕಾವೇರಿ ನದಿ ಪ್ರಾಧಿಕಾರದ ಮೇಲೆ ಒತ್ತಡ ತರಲು ಕಾಂಗ್ರೆಸ್ ನಾಯಕರು ಮುಂದಾಗಬೇಕು. ಸಿದ್ದರಾಮಯ್ಯ ಅವರು ಈ ದಿಸೆಯಲ್ಲಿ ಪ್ರಯತ್ನ ನಡೆಸಬೇಕು' ಎಂದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, `ಇಲ್ಲಿ ರಾಜಕೀಯ ಮಾಡಬೇಡಿ. ಕಾವೇರಿ ನದಿ ಪ್ರಾಧಿಕಾರ ಒಂದು ಅರೆ ನ್ಯಾಯಾಂಗ ಸಮಿತಿ. ಅಲ್ಲಿ ಒತ್ತಡ ತರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ' ಎಂದು ತಿರುಗೇಟು ನೀಡಿದರು.

371 ಕಲಂ ತಿದ್ದುಪಡಿಗೆ ರಾಜ್ಯ ಸಮ್ಮತಿ: ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಸಂವಿಧಾನದ 371ನೇ ಕಲಂಗೆ ತಿದ್ದುಪಡಿ ತರುವ ಮಸೂದೆ ಹಿಂದಕ್ಕೆ ಪಡೆಯಬೇಕೆಂಬ ಶಿಫಾರಸನ್ನು ವಾಪಸ್ ಪಡೆಯುವಂತೆ ಕೋರಿ, ಗೃಹ ಇಲಾಖೆಗೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆಯಲಾಗಿದೆ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದರು.

ಸಂಸತ್ತಿನ ಸ್ಥಾಯಿ ಸಮಿತಿ ಮಾಡಿರುವ ಶಿಫಾರಸು ಹಿಂದಕ್ಕೆ ಪಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಂಗಳವಾರ ವಿಧಾನಸಭೆಯಲ್ಲಿ ಒತ್ತಾಯಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಅವರು, `ಸೋಮವಾರ ಬೆಳಿಗ್ಗೆ ದೂರವಾಣಿ ಮೂಲಕ ವೆಂಕಯ್ಯ ನಾಯ್ಡು ಅವರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದ್ದೇನೆ. ಶಿಫಾರಸು ಹಿಂದಕ್ಕೆ ಪಡೆಯುವಂತೆ ಕೋರಿ ಪತ್ರವನ್ನೂ ಬರೆದಿದ್ದೇನೆ' ಎಂದರು.

ಪ್ರಸ್ತುತ ರೂಪದಲ್ಲೇ ಮಸೂದೆ ಸಲಹೆ (ನವದೆಹಲಿ ವರದಿ:) ಹೈದರಾಬಾದ್- ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಈಗಿರುವ ಸ್ವರೂಪದಲ್ಲಿ ಸ್ವೀಕರಿಸುವಂತೆ ಸರ್ಕಾರಕ್ಕೆ ಸಲಹೆ ನೀಡಲು ಸಂಸದೀಯ ಸ್ಥಾಯಿ ಸಮಿತಿ ನಿರ್ಧರಿಸಿದೆ.

ಎಂ.ವೆಂಕಯ್ಯ ನಾಯ್ಡು ನೇತೃತ್ವದ ಗೃಹ ವ್ಯವಹಾರಗಳ ಕುರಿತ ಸ್ಥಾಯಿ ಸಮಿತಿಯು ಮಂಗಳವಾರ ಸಭೆ ನಡೆಸಿ,  ಸಾರ್ವಜನಿಕರ ಮತ್ತು ರಾಜಕೀಯ ಮುಖಂಡರ ಒತ್ತಡದ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT