ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಜನವಿರೋಧಿ ನೀತಿ: ಸಿಪಿಎಂ ಖಂಡನೆ

Last Updated 2 ಸೆಪ್ಟೆಂಬರ್ 2013, 5:44 IST
ಅಕ್ಷರ ಗಾತ್ರ

ಬಳ್ಳಾರಿ: ಕೇಂದ್ರ ಸರ್ಕಾರದ ನೂತನ ಭೂ ಸ್ವಾಧೀನ ಕಾಯ್ದೆ ಹಾಗೂ ಆಹಾರ, ತೈಲ, ರಸಗೊಬ್ಬರಗಳಿಗೆ ನೀಡಲಾಗುತ್ತಿರುವ ಸಬ್ಸಿಡಿ ಕಡಿತಗೊಳಿಸುವ ನಿರ್ಧಾರ ಅತ್ಯಂತ ಖಂಡನೀಯ ಎಂದು ಸಿಪಿಎಂ ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿ ಎಸ್. ಪ್ರಸನ್ನಕುಮಾರ್ ತಿಳಿಸಿದರು.

ನಗರದಲ್ಲಿ  ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ, ಸಬ್ಸಿಡಿ ಕಡಿತ ನೀತಿ ವಿರೋಧಿಸಿ, ಸಿಪಿಐ, ಸಿಪಿಎಂ ಹಾಗೂ ಎಡಪಕ್ಷಗಳಿಂದ ಅಕ್ಟೋಬರ್ 7ರಂದು ರಾಜ್ಯವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ  ಎಂದು ತಿಳಿಸಿದರು.

ಕೇಂದ್ರ ಸರ್ಕಾರವು ಮಂಡಿಸಿರುವ ಭೂಸ್ವಾಧೀನ ಕಾಯ್ದೆಯು ಕೈಗಾರಿಕೋದ್ಯಮಿಗಳ ಹಿತ ಕಾಯುವಂತಿದೆ. ವಿಶೇಷ ಕೈಗಾರಿಕಾ ವಲಯ, ರೈಲ್ವೆ ಕಾಮಗಾರಿ ಸೇರಿದಂತೆ 17ವಿವಿಧ ಭೂ ಸ್ವಾಧೀನ ಪ್ರಕ್ರಿಯೆಗಳನ್ನು ಇದರಿಂದ ಹೊರಗಿಡಲಾಗಿದೆ. ವಿಶೇಷ ಕೈಗಾರಿಕಾ ವಲಯದ ಅಡಿಯಲ್ಲಿ ಕೆಐಎಡಿಬಿಯಂತಹ ಸಂಸ್ಥೆಗಳ ಮೂಲಕ ರೈತರ ಭೂಮಿ ಸ್ವಾಧೀನ ಪಡಿಸಿಕೊಳ್ಳಬಹುದಾಗಿದ್ದು, ರೈತರು ಹೆಚ್ಚಿನ ಪರಿಹಾರ ಕೇಳುವಂತಿಲ್ಲ ಆದ್ದರಿಂದ ಈ ಕಾಯ್ದೆಯಿಂದ ರೈತರಿಗೆ ನ್ಯಾಯ ದೊರೆಯುವುದಿಲ್ಲ ಎಂದು ದೂರಿದರು.

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಿಂದಾಗಿ ಯಾವುದೇ ಆತಂಕ ಇಲ್ಲ ಎಂದಿರುವ ಹಣಕಾಸು ಸಚಿವರ ಹೇಳಿಕೆ ಮುಜುಗರದ ಸಂಗತಿ ಎಂದ ಅವರು, 400 ಕೋಟಿ ಡಾಲರ್‌ಗಳ ವಿದೇಶಿ ಸಾಲದ ಹೊರೆ ಇದ್ದರೂ ಚಿನ್ನ ಆಮದು ಮಾಡಿಕೊಳ್ಳುತ್ತಿರುವ ಕ್ರಮ ಸರಿಯಲ್ಲ. ಬದಲಾಗಿ ಸರ್ಕಾರವು ಕೋಲಾರದ ಚಿನ್ನದ ಗಣಿಯನ್ನು ಆಸ್ಟ್ರೇಲಿಯಾಗೆ ವರ್ಗಾವಣೆ ಮಾಡುವ ಬದಲು ಪುನರಾರಂಭ ಮಾಡುವ ಮೂಲಕ ದೇಶದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಚಿನ್ನದ ಉತ್ಪಾದನೆ ಮಾಡಲಿ ಎಂದು ಒತ್ತಾಯಿಸಿದರು. ಆರ್.ಎಸ್. ಬಸವರಾಜ್, ಜೆ.ಸತ್ಯಬಾಬು, ರಘುನಾಥ, ಯಲ್ಲಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT