ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರೀಯ ಆಯುಕ್ತರ ಅಂಗಳಕ್ಕೆ ದೂರು

Last Updated 9 ಫೆಬ್ರುವರಿ 2011, 12:15 IST
ಅಕ್ಷರ ಗಾತ್ರ

ಲಿಂಗಸುಗೂರ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮೂಲ ಉದ್ದೇಶಗಳನ್ನು ಗಾಳಿಗೆ ತೂರಿ ಮನಸೋ ಇಚ್ಛೆ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ರಾಜಕೀಯ ಪುಡಾರಿಗಳ ಕಪಿ ಮುಷ್ಠಿಗೆ ಸಿಲುಕಿದ ಯೋಜನೆ ಹಣ ದುರ್ಬಳಕೆ ಮಾಡಿಕೊಳ್ಳುತ್ತಿರುವ ಆರೋಪಗಳು ನವದೆಹಲಿ ಆಯುಕ್ತರ ಕಚೇರಿಗೆ ತಲುಪಿರುವುದು ರಾಜ್ಯದ ಅನುಷ್ಠಾನಾಧಿಕಾರಿಗಳ ನಿರ್ಲಕ್ಷ್ಯವನ್ನು ಸಾಬೀತುಪಡಿಸುತ್ತದೆ ಎಂದು ಹೇಳಲಾಗುತ್ತಿದೆ.

ತಾಲ್ಲೂಕಿನ 35 ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ ಖಾತರಿ  ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿ ಕೂಲಿಕಾರರು, ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಕೆಲ ಪ್ರಗತಿಪರ ಸಂಘಟನೆಗಳು ಹಿರಿಯ ಅಧಿಕಾರಿಗಳಿಗೆ ನಿತ್ಯ ದೂರು ನೀಡುವುದು ಸಂಪ್ರದಾಯವಾಗಿ ಮಾರ್ಪಟ್ಟಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಯಾವೊಂದು ದೂರಿಗೂ ಕ್ರಮ ಕೈಕೊಂಡ ಉದಾಹರಣೆಗಳಿಲ್ಲ. ಹಿರಿಯ ಅಧಿಕಾರಿಗಳೆ ಶಾಮೀಲಾಗಿರುವ ಕುರಿತು ಹೋರಾಟಗಳು ನಡೆದಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ನೊಂದವರು, ಚುನಾಯಿತ ಪ್ರತಿನಿಧಿಗಳು, ಸಂಘ ಸಂಸ್ಥೆಗಳು ನೀಡಿದ ದೂರು ಒಂದಡೆ ಇರಲಿ, ಸ್ವತಃ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಆಂಜನೇಯ ಉದ್ಯೋಗ ಖಾತರಿ  ಯೋಜನೆ ಅಡಿ ಜಿಪಂ ಎಂಜಿನಿಯರಿಂಗ್ ಉಪ ವಿಭಾಗದ ಎಂಜಿನಿಯರ್ ಕೋಟ್ಯಂತರ ಹಣ ದುರ್ಬಳಕೆ ಮಾಡಿಕೊಂಡ ಬಗ್ಗೆ ಲಿಖಿತ ದೂರು ನೀಡಿದ್ದಾರೆ. ಅಧಿಕಾರಿಯೋರ್ವರ ದೂರಿಗೆ ಸ್ಪಂದಿಸದ ಹಿರಿಯ ಅಧಿಕಾರಿಗಳು ಜನಸಾಮಾನ್ಯರ ದೂರಿಗೆ ಸ್ಪಂದಿಸುವರೆ ಎಂಬುದು ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ.

ಕಳೆದ ಐದು ವರ್ಷಗಳ ಅವಧಿಯಲ್ಲಿ ಕೂಲಿಕಾರರಿಗೆ ಕೂಲಿ ನೀಡದೆ, ಉದ್ಯೋಗ ಖಾತರಿ ನೀತಿ ನಿಯಮಗಳನ್ನು ಗಾಳಿಗೆ ತೂರಿ ಹಲವು ಕೋಟಿ ಹಣವನ್ನು ಪಾವತಿಸಿಕೊಂಡಿರುವ ದೂರುಗಳು ಜಿಪಂ ಮುಖ್ಯ ಕಾರ್ಯನಿರ್ವಾಹಕ ಕಚೇರಿಗೆ ತಲುಪಿವೆ. ಇದ್ಯಾವುದಕ್ಕೂ ಮಣೆ ಹಾಕದ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಕೇಂದ್ರ ಸರ್ಕಾರದ ಹಣ ಖರ್ಚು ಹಾಕಲು ವಾಮ ಮಾರ್ಗಗಳನ್ನು ಅನುಸರಿಸುತ್ತಿರುವ ಬಗ್ಗೆ ಚುನಾಯಿತ ಪ್ರತಿನಿಧಿಗಳೆ ನವದೆಹಲಿ ಆಯುಕ್ತರ ಕಚೇರಿಗೆ ಅರ್ಜಿ ಕಳುಹಿಸಿರುವುದು ಚರ್ಚೆಯ ವಿಷಯವಾಗಿದೆ.

ತಾಲ್ಲೂಕಿನ ಸಂತೆಕೆಲ್ಲೂರು ಗ್ರಾಮ ಪಂಚಾಯಿತಿಯಲ್ಲಿ ಕಳೆದ ಆರು ತಿಂಗಳಲ್ಲಿ ಅಂದಾಜು ಕೋಟ್ಯಂತರ ಹಣ ಕೆಲಸ ಮಾಡದೆ, ಕೂಲಿಕಾರರಿಗೆ ಕೆಲಸ ನೀಡದೆ ಬೋಗಸ್ ಬಿಲ್ ಪಾವತಿಸಿಕೊಂಡಿರುವ ಬಗ್ಗೆ ದಾಖಲೆ ಸಮೇತ ಗ್ರಾಪಂ ಸದಸ್ಯ ಸೋಮಶೇಖರ ಗಡಾದ ಕೇಂದ್ರ ಆಯುಕ್ತರಿಗೆ ದೂರು ನೀಡಿದ್ದಾರೆ. ಕಳೆದ ಆರು ತಿಂಗಳಲ್ಲಿ ತಾಪಂ, ಜಿಪಂ, ರಾಜ್ಯದ ಯೋಜನಾ ನಿರ್ದೇಶಕರು, ಸಚಿವರಿಗೆ ಪ್ರತ್ಯೇಕವಾಗಿ 50ಕ್ಕೂ ಹೆಚ್ಚು ದೂರುಗಳನ್ನು ನೀಡಿದ್ದರು ಯಾವೊಬ್ಬ ಅಧಿಕಾರಿ ಪರಿಶೀಲನೆಗೆ ಮುಂದಾಗದಿರುವ ಬಗ್ಗೆ ಖೇದ ವ್ಯಕ್ತಪಡಿಸಿದ್ದಾರೆ.

ಅರಣ್ಯೀಕರಣ, ತೋಟಗಾರಿಕೆ, ಜಲಾನಯನ, ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಕೋಟ್ಯಂತರ ಹಣ ಖರ್ಚು ಹಾಕಲಾಗಿದೆ. ವಾಸ್ತವವಾಗಿ ಕ್ರಿಯಾಯೋಜನೆಯಲ್ಲಿ ತೋರಿಸಿದ ಕೆಲಸದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರೆ ಯಾವುದೇ ಅಭಿವೃದ್ಧಿಯ ಕುರುಹುಗಳು ಕಾಣುವುದಿಲ್ಲ. ಯಾರ್ಯಾರದ್ದೊ ಹೆಸರಿನಲ್ಲಿ ಹಣ ದುರ್ಬಳಕೆ ಮಾಡಿಕೊಂಡಿರುವ ಚೆಕ್ ನಂಬರ, ಎನ್‌ಎಂಆರ್,  ಫೋಕ್‌ಲೈನ್ ಬಳಕೆಯ 4 ಪುಟಗಳ ಸಮಗ್ರ ಮಾಹಿತಿ ಆಧರಿಸಿದ ದೂರು ನೀಡಿರುವುದನ್ನು ಸೋಮಶೇಖರ ದೃಢಪಡಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT